ಬೆಂಗಳೂರು:ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ‘ಬಾಂಬ್ ಸ್ಪೋಟ’ದ ಶಂಕಿತನ ಸುಳಿವು ಪತ್ತೆಯಾಗಿದ್ದು, ಪೊಲೀಸ್ ಪಡೆಗಳು ಆರೋಪಿ ಬಂಧನಕ್ಕೆ ಬೆನ್ನತ್ತಿವೆ. ವ್ಯವಸ್ಥಿತ ಸಂಚು ರೂಪಿಸಿಯೇ ಶಂಕಿತ ಉಗ್ರರು ಬಾಂಬ್ ಸ್ಪೋಟಿಸಿರುವ ವಿಚಾರ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಏತನ್ಮಧ್ಯೆ ಇಂತಹ ಘಟನೆಗಳು ನಡೆದಾಗಷ್ಟೇ ಎಚ್ಚರಿಕೆ ವಹಿಸಿ ನಂತರ ಮೈಮರೆಯದಂತೆ ಪೊಲೀಸರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣದ ಶಂಕಿತನ ಚಲನವಲನ ಒಳಗೊಂಡ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ. ಉಗ್ರ ಚಟುವಟಿಕೆಯಲ್ಲಿ ತರಬೇತಿ ಪಡೆದಿರುವ ಶಂಕಿತ ವ್ಯಕ್ತಿಯೇ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಬೆಂಗಳೂರು ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಹೈ ಅಲರ್ಟ್ ಆಗಿವೆ. ಟೈಮ್ ಬಾಂಬ್ ಸ್ಫೋಟ ಮಾಡಲಾಗಿದೆ. ಇಂಥ ಬಾಂಬ್ ತಯಾರಿಸುವುದು ತರಬೇತಿ ಪಡೆದವರಿಂದ ಮಾತ್ರವೇ ಸಾಧ್ಯ.
ಹೀಗಾಗಿ ಸ್ಪೋಟದ ಹಿಂದೆ ನುರಿತ ಉಗ್ರರ ಕೈವಾಡ ಇದೆ. ಸಾಮಾನ್ಯ ವ್ಯಕ್ತಿಗಳು ಇಂತಹ ಟೈಮ್ ಬಾಂಬ್ ತಯಾರಿ ಸಲು ಸಾಧ್ಯವಿಲ್ಲ. ಆದ್ದರಿಂದ ಸ್ಪೋಟದ ಹಿಂದೆ ದೊಡ್ಡ ಸಂಘಟನೆಗಳೇ ಇರಬೇಕೆಂದು ಕೇಂದ್ರ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಸ್ಪೋಟದ ಸ್ಥಳದಲ್ಲಿ ಸಿಕ್ಕ ತಂತಿ, ಟೈಮರ್, ಡಿಟೋನೇಟರ್, ನಟ್, ಬೋಲ್ಟ್, ಬ್ಯಾಟರಿ, ರಾಸಾಯನಿಕ ವಸ್ತುಗಳನ್ನು ಎಫ್​ಎಸ್​ಎಲ್ ತಜ್ಞರು ವಶಕ್ಕೆಪಡೆದು ಪರಿಶೀಲನೆ ಮುಂದುವರಿಸಿದ್ದಾರೆ.
ರಾಮನ ಹೆಸರೇ ಟಾರ್ಗೆಟ್? :ದಿ ರಾಮೇಶ್ವರಂ ಕೆಫೆಯನ್ನೇ ಸ್ಪೋಟಿಸಲು ರಾಮನ ಹೆಸರು ಮತ್ತು ಸಾಫ್ಟ್​ವೇರ್ ಉದ್ಯೋಗಿಗಳು ಹೆಚ್ಚಾಗಿ ಬರುವುದು ಕಾರಣ ಎಂದು ವಿಶ್ಲೇಷಿಸಲಾಗಿದೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಬಳಿಕ ದೇಶ, ವಿದೇಶದಲ್ಲಿ ರಾಮಭಕ್ತಿಯ ಟ್ರೆಂಡ್ ಹೆಚ್ಚಾಗಿದೆ. ಆದ್ದರಿಂದ ರಾಮನ ಹೆಸರಿನಲ್ಲಿರುವ ಹೆಚ್ಚು ಖ್ಯಾತಿ ಗಳಿಸಿರುವ ಕೆಫೆಗೆ ಬಾಂಬ್ ಇಟ್ಟು ಭಯ ಹುಟ್ಟಿಸುವ ಸಂಚು ಇದಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಶಂಕಿತನ ಪ್ಲ್ಯಾನ್​ ಹೇಗಿತ್ತು?:ವೈಟ್​ಫೀಲ್ಡ್ ಸಮೀಪದ ಕುಂದಲಹಳ್ಳಿಯಲ್ಲಿನ ದಿ ರಾಮೇಶ್ವರಂ ಕೆಫೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಬಿಡುಗಡೆಯಾಗಿದೆ. ಅದನ್ನು ಗಮನಿಸಿದರೆ ಶಂಕಿತ ವಿಚಲಿತನಾಗಿಲ್ಲ. ಕೆಫೆಗೆ ಹೆಚ್ಚಾಗಿ ಸಾಫ್ಟ್​ವೇರ್ ಇಂಜಿನಿಯರ್​ಗಳು ಬರುವ ಕಾರಣಕ್ಕೆ ಶಂಕಿತ ಸಹ, ಟೆಕ್ಕಿಗಳಂತೆಯೇ ಬಟ್ಟೆ, ಶೂ ಧರಿಸಿ ಬಂದಿದ್ದಾನೆ. ತಲೆಗೆ ಬಿಳಿ ಬಣ್ಣದ ಕ್ಯಾಪ್ ಮೇಲೆ 10 ಎಂದು ಸಂಖ್ಯೆ ಇದೆ. ಕನ್ನಡಕ ಮತ್ತು ಮುಖಕ್ಕೆ ಕಪು್ಪ ಬಣ್ಣದ ಮಾಸ್ಕ್ ಧರಿಸಿರುವುದು ಕಂಡುಬಂದಿದೆ. ಆರೋಪಿ ಕೆಫೆಗೆ ಸಾಕಷ್ಟು ಬಾರಿ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿರುವುದು ಗೊತ್ತಾಗುತ್ತದೆ. ವಾಹನದಲ್ಲಿ ಬಂದರೆ ಸಿಸಿ ಕ್ಯಾಮರಾದಲ್ಲಿ ವಾಹನ ಸುಳಿವು ಸಿಗಬಹುದೆಂದು ಮೆಜೆಸ್ಟಿಕ್​ನಿಂದ ಕುಂದಲಹಳ್ಳಿ ನಡುವೆ ಸಂಚರಿಸುವ ಬಿಎಂಟಿಸಿ ಬಸ್​ನಲ್ಲಿ ಬಂದಿದ್ದಾನೆ. ಶುಕ್ರವಾರ ಮಧ್ಯಾಹ್ನ 11.50ರಲ್ಲಿ ಬಸ್ ಇಳಿದು ಬಲ ಹೆಗಲಿಗೆ ಬ್ಯಾಗ್ ನೇತು ಹಾಕಿಕೊಂಡು ಹೋಟೆಲ್ ಕಡೆಗೆ ವೇಗವಾಗಿ ನಡೆದುಕೊಂಡು ಬಂದಿದ್ದಾನೆ. ಇದರಲ್ಲಿ ಒಮ್ಮೆ ಎಡಗೈ ಮೇಲಕ್ಕೆತ್ತಿ ಗಡಿಯಾರದಲ್ಲಿ ಸಮಯ ನೋಡಿಕೊಳ್ಳುತ್ತಾನೆ. ಅಂದರೆ ಬಾಂಬ್​ಗೆ ಟೈಮರ್ ಫಿಕ್ಸ್ ಮಾಡಿದ್ದರಿಂದ ಸಮಯ ಗಮನಿಸಿ ಹೋಟೆಲ್ ಕಡೆಗೆ ಸಾಗಿದ್ದಾನೆ. ಕೆಫೆಗೆ ಹೋಗಿ ಬಿಲ್ಲಿಂಗ್ ಕೌಂಟರ್​ನಲ್ಲಿ ನಗದು ಪಾವತಿ ಮಾಡಿ ರವಾ ಇಡ್ಲಿ ಪಡೆದಿದ್ದಾನೆ. ನಂತರ ಪ್ಲೇಟ್ ಇಡುವ ಮತ್ತು ಕೈ ತೊಳೆಯುವ ನೆಪದಲ್ಲಿ ಹೋಗಿ ಸ್ಪೋಟಕವಿದ್ದ ಬ್ಯಾಗ್ ಇಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪೊಲೀಸರಿಗೆ ಸಿಎಂ ಖಡಕ್ ಸೂಚನೆ
1) ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ.
2) ಸಂಪೂರ್ಣ ಸತ್ಯ ಹೊರ ಬರಲಿ. ತಂತ್ರಜ್ಞಾನವನ್ನು ತನಿಖೆಗೆ ಪರಿಣಾಮಕಾರಿಯಾಗಿ ಬಳಸಿ.
3) ಪೊಲೀಸರು ಇಂಥ ಘಟನೆ ನಡೆದಾಗ ಮಾತ್ರ ಎಚ್ಚರಿಕೆ ವಹಿಸಿ ನಂತರ ಮೈ ಮರೆಯುವುದಾಗಬಾರದು.
4) ಜನನಿಬಿಡ ಸ್ಥಳಗಳನ್ನು ಗುರುತಿಸಿ ಪೊಲೀಸ್ ಗಸ್ತು ಹೆಚ್ಚಿಸಿ. ಜನರಿಗೆ ರಕ್ಷಣೆ ಒದಗಿಸಲು ಆದ್ಯತೆ ಕೊಡಿ.
5) ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವವರನ್ನು ಮಟ್ಟ ಹಾಕಿ.
6) ಸಮಾಜ ದ್ರೋಹಿಗಳ ವಿರುದ್ಧ ಯಾವುದೇ ಸಹಾನುಭೂತಿ ಇಲ್ಲದೆ ಕಾನೂನು ಕ್ರಮ ಜರುಗಿಸಿ.
7) ಇಂಟೆಲಿಜೆನ್ಸ್ ಹೆಚ್ಚು ಜಾಗೃತವಾಗಿರಬೇಕು. ಸಮಯ, ಸಂದರ್ಭಕ್ಕೆ ತಕ್ಕಂತೆ ನಾವೂ ಬದಲಾಗಬೇಕು.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಸಾಮ್ಯತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸ್ಪೋಟದಲ್ಲಿ ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಹೋಟೆಲ್ ಚೆನ್ನಾಗಿ ವ್ಯಾಪಾರ ಆಗುತ್ತಿದ್ದ ಕಾರಣಕ್ಕೂ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಶಂಕಿತ ಬಿಎಂಟಿಸಿ ಬಸ್​ನಲ್ಲಿ ಓಡಾಡಿದ್ದು, 28 ಬಸ್​ಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪಡೆಯಲಾಗಿದೆ. ಸಾಕಷ್ಟು ಕುರುಹುಗಳು ಸಿಕ್ಕಿವೆ.
| ಡಾ. ಜಿ. ಪರಮೇಶ್ವರ್ ಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twelve =
Remember me
