ಬೆಂಗಳೂರು:ಆಸ್ತಿ ವಿಚಾರಕ್ಕೆ ಮಗ 10 ಲಕ್ಷ ರೂ.ಗೆ ಸುಪಾರಿ ಕೊಟ್ಟು ತಂದೆಯನ್ನೇ ಅಪಹರಿಸಿ ಕೊಲೆ ಮಾಡಿದ್ದಾನೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೂರ್ವ ವಿಭಾಗ ಪೊಲೀಸರು ಪುತ್ರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಸರ್ ಎಂ.ವಿ. ನಗರದ ಪನ್ನೀರ್ ಸೆಲ್ವಂ (52) ಮೃತ. ಇವರ ಪುತ್ರ ಆರೋಪಿ ಪಿ. ರಾಜೇಶ್​ಕುಮಾರ್ (26), ತಮಿಳುನಾಡಿನ ವೇಲೂರು ಜಿಲ್ಲೆಯ ಪಾರ್ಥಿಬನ್ (29), ಶಾಂತಿ ಲೇಔಟ್ ಸ್ಟಾ್ಯನ್ಲಿ (25) ಹಾಗೂ ಎನ್​ಆರ್​ಐ ಲೇಔಟ್ ಆನಂದ (21) ಬಂಧಿತರು. ಮತ್ತೊಬ್ಬ ಆರೋಪಿ ಗಣೇಶ್ ಸೇರಿ ಹಲವು ಮಂದಿ ತಲೆಮರೆಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಪನ್ನೀರ್ ಸೆಲ್ವಂ, ಹಲವು ವರ್ಷಗಳ ಹಿಂದೆ ನಗರಕ್ಕೆ ಕುಟುಂಬ ಸಮೇತ ಬಂದು ರಿಯಲ್​ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. 8 ಕೋಟಿ ರೂ. ಮೌಲ್ಯದ ಆಸ್ತಿಹೊಂದಿದ್ದರು. ಸೆಲ್ವಂ ಪುತ್ರ ರಾಜೇಶ್​ಗೆ ವಿವಾಹ ವಾಗಿದ್ದು, ಒಂದು ಮಗು ಇದೆ. ಕೆಲಸಕ್ಕೆ ಹೋಗದೆ ಓಡಾಡಿಕೊಂಡಿದ್ದ ಈತ, ಖರ್ಚಿಗೆ ತಂದೆ ಬಳಿ ಹಣ ಕೇಳಿದ್ದ. ತಂದೆ ನಿರಾಕರಿಸಿದ್ದರು. ಅನೈತಿಕ ಸಂಬಂಧ ಇಟ್ಟುಕೊಂಡಿರುವ ಮಹಿಳೆಗೆ ತಂದೆ ಹಣ, ಚಿನ್ನಾಭರಣ ನೀಡುತ್ತಿದ್ದಾರೆ ಎಂದು ಜಗಳ ತೆಗೆದಿದ್ದ. ಸೈಟ್ ಖರೀದಿಸಿ ರಾಜೇಶ್ ಸಾಲ ಮಾಡಿ ಕೊಂಡಿದ್ದ. ಸಾಲ ತೀರಿಸಲು ಹಣ ಕೇಳಿದಾಗ ಅದಕ್ಕೂ ನಿರಾಕರಿಸಿದ್ದರು. ತಂದೆಯನ್ನು ಹತ್ಯೆ ಮಾಡಿಸಿದರೆ ಆಸ್ತಿ ತನಗೆ ಸಿಗುತ್ತದೆ ಎಂದು ಭಾವಿಸಿ ಸ್ನೇಹಿತ ಪಾರ್ಥಿಬನ್ ಬಳಿ ವಿಷಯ ಪ್ರಸ್ತಾಪಿಸಿದ್ದ. ಸ್ನೇಹಿತನ ತಂದೆ ಹತ್ಯೆಗೆ ಪಾರ್ಥಿಬನ್ ಸಂಚು ರೂಪಿಸಿದ್ದ.
ಸೆಲ್ವಂರನ್ನು ಅಪಹರಿಸಿ ಹತ್ಯೆ ಮಾಡಲು ಕೆ.ಜಿ. ಹಳ್ಳಿಯ ಟ್ರಾವೆಲ್ಸ್ ನಲ್ಲಿ ಬೊಲೊರೊ ಕಾರನ್ನು ಬಾಡಿಗೆಗೆ ಪಡೆದಿದ್ದರು. ಶುಕ್ರವಾರ ಬೆಳಗ್ಗೆ 6.30ರಲ್ಲಿ ಸೆಲ್ವಂ ಬೈಕ್​ನಲ್ಲಿ ವಿಜಿನಾಪುರದ ಸುಬ್ರಮಣಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಾರಿನಲ್ಲಿ ಅಡ್ಡಗಟ್ಟಿ ಅಪಹರಣ ಮಾಡಿ ಹಲ್ಲೆ ನಡೆಸಿದ್ದರು. ವಿಷಕಾರಿ ಇಂಜೆಕ್ಷನ್ ಅನ್ನು ಸೆಲ್ವಂಗೆ ಗಣೇಶ್ ಚುಚ್ಚಿದ್ದ. ನಂತರ 2 ಗಂಟೆ ಕಾಲ ಕಾರಿನಲ್ಲಿ ಸುತ್ತಾಡಿ, ಸೆಲ್ವಂ ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡು ಕೋಲಾರ ಜಿಲ್ಲೆ ವೇಮ್ಲ್ ಸಮೀಪದ ನೀಲಗಿರಿ ತೋಪಿನಲ್ಲಿ ಎಸೆದಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಇನ್​ಸ್ಪೆಕ್ಟರ್ ಕೆ.ಜಿ. ಸತೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ತಂದೆ ಕೊಂದು ದೂರು ಕೊಟ್ಟ
ಬೆಳಗ್ಗೆ ದೇವಸ್ಥಾನಕ್ಕೆ ಹೋದ ತಂದೆ ಮನೆಗೆ ವಾಪಸ್ ಬಂದಿಲ್ಲ ಎಂದು ರಾಜೇಶ್ ಖುದ್ದು ಠಾಣೆ ಬಂದು ದೂರು ನೀಡಿದ್ದ. ಆದರೆ, ಆತನ ಮುಖದಲ್ಲಿ ಆತಂಕ ಕಂಡುಬಂದಿಲ್ಲ. ಅನುಮಾನಗೊಂಡ ಪೊಲೀಸರು ರಾಜೇಶ್​ನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತ ಮಾಡಿದ್ದ ಸಾಲದ ವಿಚಾರ ಹಾಗೂ ತಂದೆ ಬಳಿ ಆಗಾಗ್ಗೆ ಜಗಳವಾಡುತ್ತಿದ್ದ ವಿಚಾರ ಗೊತ್ತಾಗಿದೆ. ಸೆಲ್ವಂ ಅಪಹರಣವಾದ ದಿನ ರಾಜೇಶ್ ಮೊಬೈಲ್ ಬಳಕೆ ಮಾಡಿರಲಿಲ್ಲ. ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
10 ಲಕ್ಷ ರೂ. ಸುಪಾರಿ
ತಂದೆ ಹತ್ಯೆಗೆ 10 ಲಕ್ಷ ರೂ.ಗೆ ಸುಪಾರಿ ನೀಡಿದ್ದು, ಕೈ ಸಾಲ ತಂದು 3 ಲಕ್ಷ ರೂ. ಮುಂಗಡ ನೀಡಿದ್ದ. ಹಿಂದೆ ಕೊಲೆ ಯತ್ನ ವಿಫಲಗೊಂಡು ಆಸ್ಪತ್ರೆ ಸೇರಿದಾಗ ಪನ್ನೀರ್ ಸೆಲ್ವಂ ಚಿಕಿತ್ಸೆಗೆ ಎರಡೂವರೆ ಲಕ್ಷ ರೂ. ತಗುಲಿತ್ತು. ಈ ಬಾರಿ ಹೇಗಾದರೂ ತಂದೆಯನ್ನು ಹತ್ಯೆ ಮಾಡುವಂತೆ ಪಾರ್ಥಿಬನ್​ಗೆ ಸೂಚಿಸಿದ್ದ. ಪಾರ್ಥಿಬನ್ ಸೇರಿ ಎಲ್ಲ ಆರೋಪಿಗಳು ಕಾರು ಚಾಲಕರಾಗಿದ್ದಾರೆ.
ಮೂರ್ನಾಲ್ಕು ಬಾರಿ ಕೊಲೆಗೆ ಯತ್ನ
ಸೆಲ್ವಂ ಹತ್ಯೆಗೆ ಆರೋಪಿಗಳು 5 ತಿಂಗಳಿಂದ 3-4 ಬಾರಿ ಯತ್ನ ನಡೆಸಿದ್ದಾರೆ. ಮಾ.16ರಂದು ಒಮ್ಮೆ ತಲೆಗೆ ಬಲವಾದ ಪೆಟ್ಟು ಹೊಡೆದು ಪರಾರಿಯಾಗಿದ್ದರು. ಸೆಲ್ವಂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಸೆಲ್ವಂ ತನಿಖೆಗೆ ಸಹಕಾರ ನೀಡಿರಲಿಲ್ಲ. ಸೆಲ್ವಂರನ್ನು ಠಾಣೆಗೆ ಹೋಗದಂತೆ ಪುತ್ರ ತಡೆದಿದ್ದ. ಆಗ ಮಗನ ಮೇಲೆ ಸೆಲ್ವಂಗೆ ಅನುಮಾನ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚೂರಿಯಿಂದ ಹಲ್ಲೆ ನಡೆಸಿ ಕ್ಲೀನರ್ ಹತ್ಯೆ
ಬೆಂಗಳೂರು: ಬಸವನಗುಡಿ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಲಾರಿ ಕ್ಲೀನರ್​ನನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಸಿದ್ದರಾಜು (26) ಮೃತ ವ್ಯಕ್ತಿ. ಲಕ್ಷ್ಮಣ್ ಎಂಬಾತ ಕೃತ್ಯ ಎಸಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಿರುವುದಾಗಿ ಬಸವನಗುಡಿ ಪೊಲೀಸರು ತಿಳಿಸಿದ್ದಾರೆ.
ಸಿದ್ದರಾಜು 4-5 ವರ್ಷಗಳ ಹಿಂದೆ ತನ್ನ ಊರಿನ ಲತಾ ಎಂಬಾಕೆಯನ್ನು ಮದುವೆಯಾಗಿದ್ದು, ನಗರದಲ್ಲಿ ಲಾರಿ ಕ್ಲೀನರ್ ಆಗಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿದ್ದರಾಜುವನ್ನು ತೊರೆದು ಹೂವಿನ ವ್ಯಾಪಾರಿ ಲಕ್ಷ್ಮಣ್ ಎಂಬಾತನನ್ನು ಲತಾ ಮದುವೆಯಾಗಿದ್ದಳು. ಈ ವಿಚಾರ ಸಿದ್ದರಾಜುಗೆ ಗೊತ್ತಾಗಿದ್ದು ಕುಪಿತನಾಗಿದ್ದ. ಲತಾ ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದ. ಇದರಿಂದ ಕೆರಳಿದ ಲಕ್ಷ್ಮಣ್, ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಶುಕ್ರವಾರ ರಾತ್ರಿ 11.30ರಲ್ಲಿ ತನ್ನ ಸ್ನೇಹಿತರ ಜತೆ ಮದ್ಯ ಸೇವಿಸಿದ್ದ ಸಿದ್ದರಾಜು, ಲಾರಿಯತ್ತ ತೆರಳುತ್ತಿದ್ದಾಗ ಅಲ್ಲಿಗೆ ಬಂದ ಲಕ್ಷ್ಮಣ್ ಗಲಾಟೆ ತೆಗೆದು ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
