|ಪರಶುರಾಮ ಭಾಸಗಿ ವಿಜಯಪುರ
ಕಣ್ಣಿಗೆ ಕಾಣದ ಬೆಳದಿಂಗಳ ಬಾಲೆಯನ್ನು ನಂಬಿ ಲಕ್ಷ ಲಕ್ಷ ಕಳೆದುಕೊಂಡಿದ್ದ ಯುವಕನ ಇಂಟ್ರೆಸ್ಟಿಂಗ್ ಪ್ರಕರಣ ಭೇದಿಸಿದ ಪೊಲೀಸರಿಗೆ ಇದೀಗ ಅಂಥದ್ದೆ ಮತ್ತೊಂದು ಪ್ರಕರಣ ಎದುರಾಗಿದ್ದು, ಆದರಿಲ್ಲಿ ಮೋಸಕ್ಕೆ ಬಲಿಯಾಗಿರುವುದು ಇಂಜನಿಯರಿಂಗ್ ಪದವಿಧರೆ ಎಂಬುದು ಕುತೂಹಲದ ಸಂಗತಿ!
ಐತಿಹಾಸಿಕ ದರ್ಗಾ ಜೈಲ್ ರಸ್ತೆಯ ಶಕ್ತಿ ನಗರದ ನಿವಾಸಿ ಭಾವನಾ (ಹೆಸರು ಬದಲಿಸಲಾಗಿದೆ) ಮೋಸ ಹೋದ ಯುವತಿ. ಇಂಜಿನಿಯರಿಂಗ್ ಪದವಿ ಮುಗಿಸಿರುವ ಭಾವನಾ ಸದ್ಯ ಮಕ್ಕಳಿಗೆ ಮನೆ ಪಾಠ ಮಾಡಿಕೊಂಡಿದ್ದು ಇನ್ನೂ ಮದುವೆಯಾಗಿಲ್ಲ. ಸಮಸ್ಯೆಗೆ ಇದುವೇ ಕಾರಣವಾಗಿದ್ದು, ಲಕ್ಷ ಲಕ್ಷ ಮೋಸ ಹೋಗಿ ಇದೀಗ ಪ್ರಕರಣ ಸೈಬರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಏನಿದು ಪ್ರಕರಣ?ಭಾವನಾ ಮನೆಯಲ್ಲಿ ಮದುವೆಗಾಗಿ ವರ ಹುಡುಕಾಟದಲ್ಲಿದ್ದಾರೆ. ಮನೆಯವರ ಶ್ರಮ ಕಡಿಮೆ ಮಾಡಲು ಭಾವನಾ ತನ್ನ ವಿವರವನ್ನು ವಧುವರರ ಸಾಮಾಜಿಕ ಜಾಲತಾಣಗಳಾದ ಶಾದಿ ಡಾಟ್ ಕಾಮ್, ಭಾರತ ಮ್ಯಾಟ್ರಿಮೋನಿ, ಜೀವನ ಶಾದಿಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಜಾಲತಾಣಗಳಿಂದ ಮಾಹಿತಿ ಸಂಗ್ರಹಿಸಿದ ವಂಚಕರ ಜಾಲ ಭಾವನಾಳಿಂದ ವ್ಯವಸ್ಥಿತವಾಗಿ ಹಣ ಪೀಕಿದ್ದಾರೆ.
ಹೇಗಿತ್ತು ವಂಚನೆ ಜಾಲ?ಕಳೆದ ಅ. 12ರಂದು ಭಾವನಾ ಮೊಬೈಲ್‌ಗೆ ‘ಹಾಯ್ ಡಿಯರ್’ ಅಂತ ಸಂದೇಶ ಬಂದಿದೆ. ಆಕೆ ಕೂಡ ಮರು ಸಂದೇಶ ಕಳುಹಿಸಿದ್ದು, ಪರಸ್ಪರ ಪರಚಯವಾಗಿದೆ. ಬಯೋಡಾಟಾ ಕಳುವಹಿಸುವಂತೆ ಕೋರಲಾಗಿ ಅತ್ತ ಕಡೆಯಿಂದ ಬಯೋಡಾಟಾ ಪ್ರತಿ ಬಂದಿದ್ದು, ಅದರಲ್ಲಿ ಆರ್ಯಾಶ ಹೆಂಡ್ರಿಕ್, ದೇಶ- ಯುಎಸ್‌ಎ, ಸಿಟಿ- ಮೆಸ್ಸಾಚ್ಯುಸೇಟ್ಸ್ ಅಂತಿದೆ. ಇದನ್ನು ನಂಬಿದ ಭಾವನಾ ಪ್ರತಿ ದಿನ ವ್ಯಾಟ್ಸಪ್ ನಲ್ಲಿ ಚಾಟಿಂಗ್ ಮಾಡುತ್ತಾ ಬಂದಿದ್ದಾರೆ. ಅಲ್ಲದೇ, ತನ್ನ ಕುಟುಂಬಸ್ಥರ ಫೋಟೊಗಳನ್ನು ಸಹ ಕಳುಹಿಸಿದ್ದಾರೆ.
ಭೇಟಿಗೆ ಆಗಮನ:ಹೀಗಿರಲು ಅ. 22ರಂದು ಭಾವನಾಳನ್ನು ಭೇಟಿ ಮಾಡಲು ಭಾರತಕ್ಕೆ ಬರುತ್ತಿರುವುದಾಗಿ ಆರ್ಯಾಶ್ ಟಿಕೆಟ್ ಸಮೇತ ಸಂದೇಶ ಕಳುಹಿಸಿದ್ದಾನೆ. ಅ. 23ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವುದಾಗಿ ಸಂದೇಶ ಕಳುಹಿಸಿದ್ದು ಇದನ್ನು ಭಾವನಾ ನಂಬಿದ್ದಾರೆ. ಕೆಲ ಸಮಯದ ಬಳಿಕ ಮಹಿಳೆಯೊಬ್ಬಳು ಕರೆ ಮಾಡಿ ‘ಮುಂಬೈ ವಿಮಾನ ನಿಲ್ದಾಣದಿಂದ ಮಾತನಾಡುತ್ತಿದ್ದು, ಆರ್ಯಾಶ ಹೆಂಡ್ರಿಕ್ ಸರ್ 50 ಸಾವಿರ ಡಾಲರ್ ತಂದಿದ್ದಾರೆ. ಆದರೆ, ಸರ್ಕಾರದ ನಿಯಮಾವಳಿ ಪ್ರಕಾರ 10 ಸಾವಿರ ಡಾಲರ್ಸ್ ಮಾತ್ರ ತರಬೇಕು. ಹೀಗಾಗಿ ಅವರನ್ನು ಬಿಡಲು ಆಗುವುದಿಲ್ಲ, ಫಾರಿನ್ ರಜಿಸ್ಟ್ರೇಶನ್ ಫೀಸ್ 44,999 ರೂಪಾಯಿ ಇಂಡಿಯನ್ ರೂಪಾಯಿ ಕಟ್ಟಿದರೆ ಮಾತ್ರ ಬಿಡುತ್ತೇವೆ’ ಎಂದು ಇಂಗ್ಲಿಷ್‌ನಲ್ಲಿ ಮಾತನಾಡಿ ಫೋನ್ ಕಡಿತಗೊಳಿಸಿದ್ದಾರೆ. ನಂತರ ಆರ್ಯಾಶ, ಭಾವನಾಗೆ ಮೆಸೇಜ್ ಮಾಡಿ 44,999 ರೂಪಾಯಿ ಫೋನ್‌ಪೇ ಮಾಡಲು ತಿಳಿಸಿ ಇಂಡಿಯನ್ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ. ಆದರೆ ಭಾವನಾ ನಿರಾಕರಿಸಲಾಗಿ ತಾನು ತಂದಿರುವ ಅಷ್ಟೂ ಹಣ ಸೀಜ್ ಮಾಡುತ್ತಾರೆಂದಿದ್ದಾನೆ. ಅದನ್ನು ನಂಬಿದ ಭಾವನಾ ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡಿದ್ದಾರೆ.
ಮತ್ತೆ ಮತ್ತೆ ಹಣಕ್ಕೆ ಬೇಡಿಕೆ:ಮುಂದೆ ಅ. 26ರಂದು ಮತ್ತೆ ಫೋನ್ ಮಾಡಿ ಮನಿ ಲಾಂಡರಿಂಗ್ ಸರ್ಟಿಫಿಕೇಟ್ ಸಲುವಾಗಿ 1,50,250 ರೂಪಾಯಿ ಫೋನ್ ಪೇ ಮಾಡಲು ಹೇಳಿದ್ದು, ಆಗಲೂ ಭಾವನಾ ಹಣ ಹೊಂದಿಸಿ 40 ಸಾವಿರ ರೂಪಾಯಿ ಹಣ ವರ್ಗಾಯಿಸಿದ್ದಾಳೆ. ಅಲ್ಲದೇ, ಭಾವನಾ ತಂಗಿ ಸಹ ತನ್ನ ಖಾತೆಯಿಂದ 50 ಸಾವಿರ ರೂಪಾಯಿ ನೀಡಿದ್ದಾರೆ. ಉಳಿದ 60,250 ರೂ.ಗಳನ್ನು ಎಲ್‌ಬಿಎಸ್ ಮಾರುಕಟ್ಟೆ ಮೇಲಿರುವ ಆಕಾಶ್ ಇಂಟರ್‌ನೆಟ್ ಇವರಲ್ಲಿ ಕೊಟ್ಟು ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ವರ್ಗಾವಣೆ ಮಾಡಿದ್ದಾರೆ.
ಮತ್ತೆ ಅ. 29ರಂದು ಫೋನ್ ಮಾಡಿ ಡಾಲರ್ ಟು ಇಂಡಿಯನ್ ಕರೆನ್ಸಿ ಕನ್ವರ್ಶನ್ ಸಲುವಾಗಿ 3,20,500 ರೂ. ಬೇಕೆಂದು ಸಂದೇಶ ಬಂದಿದ್ದು, ಆಗ ಭಾವನಾ ತಮ್ಮ ಬಳಿ ಹಣ ಇಲ್ಲವೆಂದಿದ್ದಾರೆ. ಆಗ ಹಣ ಹಾಕದಿದ್ದರೆ ಆರ್ಯಾಶ್‌ನನ್ನು ಜೈಲಿಗೆ ಹಾಕಬೇಕಾಗುತ್ತದೆ ಎನ್ನಲಾಗಿ ಎರಡ್ಮೂರು ದಿನ ಕಾಲಾವಕಾಶ ಕೇಳಿದ ಭಾವನಾ ತಮ್ಮ ಚಿನ್ನಾಭರಣ ಮಾರಿ ಹಂತ ಹಂತವಾಗಿ ಒಟ್ಟು 5,15,749 ರೂ. ಹಾಕಿದ್ದಾರೆ.
ಅನುಮಾನ ಶುರು:ಇಷ್ಟೆಲ್ಲಾ ಆದ ಬಳಿಕ ಅನುಮಾನಗೊಂಡ ಭಾವನಾ, ಆರ್ಯಾಶ್‌ನ ಪಾಸ್‌ಪೋರ್ಟ್ ಮತ್ತು ವೀಸಾ ವಾಟ್ಸಪ್ ಮಾಡುವಂತೆ ತಿಳಿಸಿದ್ದಾರೆ. ಆದರೆ, ವೀಸಾ ಮಾತ್ರ ಕಳುಹಿಸಿದ್ದು ಪಾಸ್ ಪೋರ್ಟ್ ಸೀಜ್ ಮಾಡಿದ್ದಾಗಿ ಹೇಳಿದಾಗ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ವೀಸಾ ಪರಿಶೀಲಿಸಲಾಗಿ ಅದರಲ್ಲಿ ಫೋಟೊ ಎಡಿಟ್ ಮಾಡಿದ್ದು ಕಂಡು ಬಂದಿದೆ. ಹೀಗಾಗಿ ತಾನು ಮೋಸ ಹೋಗಿರುವುದು ಖಚಿತವಾಗಿ ಆತನಿಗೆ ಹಣ ಕೇಳಲಾಗಿ ಈವರೆಗೂ ಸಬೂಬು ಹೇಳುತ್ತಾ ಬಂದಿದ್ದಾನೆ. ಹೀಗಾಗಿ ಭಾವನಾ ಸೈಬರ್ ಠಾಣೆಗೆ ದೂರು ನೀಡಿದ್ದು, ಸಿಪಿಐ ರಮೇಶ ಅವಜಿ ತನಿಖೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, “ಸಾಮಾಜಿಕ ಜಾಲತಾಣಗಳಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ನಿರಂತರವಾಗಿ ಇಂಥ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ಜಾಗೃತಿ ಅವಶ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೂಡ ಕಾರ್ಯತತ್ಪರವಾಗಿದೆ. ಸದರಿ ಪ್ರಕರಣದಲ್ಲಿ ಯುವತಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + seven =
Remember me
