|ವಿಲಾಸ ಮೇಲಗಿರಿಬೆಂಗಳೂರು
ಸರ್ಕಾರಿ ಶಾಲೆಗಳಿಗೆ ಈಗ ನಿರ್ವಹಣಾ ಅನುದಾನದ ಕೊರತೆ ಎದುರಾಗಿದೆ. ಸೀಮೆ ಸುಣ್ಣ, ಡಸ್ಟರ್, ಶುದ್ಧ ಕುಡಿಯುವ ನೀರು, ಶೌಚಗೃಹ ಶುಚಿತ್ವ, ವಿದ್ಯುತ್/ದೂರವಾಣಿ ಬಿಲ್ ಪಾವತಿಯಂತಹ ಸಣ್ಣಪುಟ್ಟ ಖರ್ಚುಗಳಿಗೂ ಶಿಕ್ಷಕರು ಪರದಾಡಬೇಕಿದೆ.
ಮುಖ್ಯ ಶಿಕ್ಷಕರು, ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯವರು ಕೈಯಿಂದ ಖರ್ಚು ಮಾಡುವ ಸ್ಥಿತಿ ನಿರ್ವಣವಾಗಿದೆ. ಬಿಸಿ ಊಟದ ತರಕಾರಿ, ಮೊಟ್ಟೆಗೆ ಕೈಯಿಂದ ದುಡ್ಡು ಹಾಕಿ ಕಾಯುತ್ತಿರುವ ಶಿಕ್ಷಕರು ಈಗ ಸಣ್ಣಪುಟ್ಟ ಖರ್ಚುಗಳಿಗೂ ಸರ್ಕಾರ ಕಡೆಗೆ ಕಣ್ಣು ಬಿಟ್ಟು ಕಾಯಬೇಕಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಶಾಲೆಗೆ ನಿಗದಿಯಾಗಿರುವ ನಿರ್ವಹಣಾ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಒಂದೊಂದು ವರ್ಷ ಒಂದೊಂದು ಕಂತು ಮಾತ್ರ ಬಿಡುಗಡೆಯಾಗಿರುವ ಉದಾಹರಣೆಗಳು ಇವೆ. 2022-2023ನೇ ಸಾಲಿನ ಮೊದಲ ಕಂತಿನಲ್ಲಿ ಸರ್ಕಾರ ಶಾಲೆ ಆರಂಭದ ಜೂನ್ ತಿಂಗಳಲ್ಲೇ 19,81,12,500 ರೂ. ಬಿಡುಗಡೆ ಮಾಡಿದೆ. ಆದರೆ, ಈ ಪೈಕಿ ಖರ್ಚಾಗಿದ್ದು ಕೇವಲ 1 ಕೋಟಿ ರೂ. ಮಾತ್ರ!
ನಿಗದಿತ ಅವಧಿಯೊಳಗೆ ಬಿಡುಗಡೆಯಾದ ಹಣವನ್ನು ಖರ್ಚು ಮಾಡಿ ಸೆ.10ರ ಒಳಗೆ ಬಳಕೆ ಪ್ರಮಾಣ ಪತ್ರ ಕೊಡಲು ಶಾಲೆಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಶೇ.99 ಶಾಲೆಗಳಿಗೆ ಅನುದಾನ ಬಳಕೆ ಸಾಧ್ಯವಾಗಿಲ್ಲ. ಹಾಗಾಗಿ ಸರ್ಕಾರ ಶಾಲೆಗಳಿಗೆ ಬಿಡುಗಡೆಯಾಗಿದ್ದ ನಿರ್ವಹಣಾ ಅನುದಾನವನ್ನು ವಾಪಸ್ ಪಡೆದಿದೆ.
ಹಣವಿಲ್ಲದಿದ್ದರೂ ಬಳಕೆ ಇಲ್ಲ:ಶಾಲಾ ಅನುದಾನ ಬಿಡುಗಡೆ ಮಾಡಿರುವ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳೇ ಈಗ ಹಣ ಬಳಕೆಗೆ ಅಡ್ಡಿಯಾಗಿವೆ. ಹಾಗಾಗಿ ಮೊದಲ ಕಂತಿನ 5000 ರೂ.ಗಳನ್ನು ಬಳಸಿಕೊಳ್ಳಲು ಬಹುತೇಕ ಶಾಲೆಗಳಿಗೆ ಸಾಧ್ಯವಾಗಿಲ್ಲ. ಚೆಕ್ಕರ್-ವೆಂಡರ್ ಪದ್ಧತಿ ಜಾರಿಗೆ ತಂದ ಕಾರಣ ಶಾಲಾ ಅನುದಾನ ಬಳಕೆಯಾಗುತ್ತಿಲ್ಲ. ಈ ಮೊದಲು ಶಾಲೆಗಳಲ್ಲಿ ವೆಂಡರ್​ಗಳಿಗೆ ಚೆಕ್ ಮೂಲಕ ಹಣ ನೀಡುವ ಪದ್ಧತಿ ಇತ್ತು. ಆದರೆ, ಈ ಬಾರಿ ಶಾಲಾ ಮುಖ್ಯಸ್ಥರು ಮತ್ತು ವೆಂಡರ್​ಗಳ ಖಾತೆಗಳನ್ನು ತೆರೆದು ಆರ್​ಟಿಜಿಎಸ್/ಎನ್​ಇಎಫ್​ಟಿ ಮೂಲಕ ವರ್ಗಾಯಿಸುವ ನಿಬಂಧನೆ ವಿಧಿಸಲಾಗಿದೆ. ಆದರೆ, ಈ ಖಾತೆಗಳನ್ನು ಹೇಗೆ ತೆರೆಯಬೇಕು? ಆನ್​ಲೈನ್​ನಲ್ಲಿ ಹೇಗೆ ಹಣ ವರ್ಗಾಯಿಸಬೇಕು ಎಂಬುದು ಬಹುತೇಕ ಶಾಲೆಗಳ ಮುಖ್ಯ ಶಿಕ್ಷರಿಗೆ ತಿಳಿದಿಲ್ಲ. ಹಾಗಾಗಿ ಹಣ ಬಳಕೆಯಾಗದೇ ಹಾಗೇ ಉಳಿದಿದೆ.
ಅನುದಾನ ಬಳಕೆಗೆ ತರಬೇತಿ ಇಲ್ಲ:ಯಾವುದೇ ಹೊಸ ಕಾರ್ಯಕ್ರಮ ರೂಪಿಸಿದಾಗಲೂ ಅದರ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಬೇಕು. ತಾಂತ್ರಿಕತೆ ಬಳಸುವಂತಿದ್ದರೆ ಆ ಬಗ್ಗೆ ಸಂಬಂಧಿಸಿದವರಿಗೆ ತರಬೇತಿ ನೀಡಬೇಕು. ಆದರೆ, ಈ ಶಾಲಾ ನಿರ್ವಹಣಾ ಅನುದಾನ ಬಳಕೆ ವಿಚಾರದಲ್ಲಿ ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಿಲ್ಲ. ತರಬೇತಿ ನೀಡದೇ ಇರುವುದೇ ಅನುದಾನ ಬಳಕೆಯಾಗದಿರಲು ಕಾರಣ. ಆದ್ದರಿಂದ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಅನುದಾನ ನಿಗದಿ ಹೇಗೆ?:ರಾಜ್ಯದಲ್ಲಿ ಒಟ್ಟು 47,957 ಶಾಲೆಗಳಿದ್ದು, ಈ ಶಾಲೆಗಳ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಶಾಲಾ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ, ಇತ್ತೀಚಿನ ಯಾವ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಿಗದಿಯಾಗಿರುವ ಹಣ ಬಿಡುಗಡೆಯಾದ ಉದಾಹರಣೆಗಳಿಲ್ಲ.
ಶಾಲೆಗಳಲ್ಲಿ ಆರ್ಥಿಕ ಮುಗ್ಗಟ್ಟು:ಶಾಲೆಗಳು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿವೆ. ಅನೇಕ ಶಾಲೆಗಳಿಗೆ ಕಿಟಕಿ, ಬಾಗಿಲುಗಳು ಸರಿಯಾಗಿಲ್ಲ. ಹೆಂಚು ಬಿದ್ದು ಹೋಗಿವೆ. ಶೌಚಗೃಹ ದುರಸ್ತಿ ಇಲ್ಲ. ಶುದ್ಧ ಕುಡಿಯುವ ನೀರಿಲ್ಲ…ಹೀಗೆ ಇಲ್ಲಗಳ ಸರಮಾಲೆಯೇ ಇಲ್ಲಿವೆ. ಆದರೆ ಸರ್ಕಾರ ಶಾಲೆಗಳ ನಿರ್ವಹಣೆಗೆ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ ಮಾಡುವ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ಕನಿಷ್ಠ ಪಕ್ಷ ಕಿರಿಯ ಪ್ರಾಥಮಿಕ ಶಾಲೆಗಳಿಗೆ 25 ಸಾವಿರ ರೂ., ಹಿರಿಯ ಪ್ರಾಥಮಿಕ ಶಾಲೆಗಳಿಗೆ 50 ಸಾವಿರ ರೂ.ಗಳನ್ನು ಬಜೆಟ್​ನಲ್ಲೇ ಘೋಷಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ, ಪ್ರತಿಕೂಲ ಪರಿಣಾಮಗಳನ್ನು ಪರಿಗಣಿಸಿ ಕಾಲ ಕಾಲಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಆ ಮೂಲಕ ಸರ್ಕಾರಿ ಶಾಲೆಗಳನ್ನು ಸಬಲೀಕರಣಗಳಿಸಬೇಕು ಎಂಬುದು ಶಿಕ್ಷಕರ ಆಗ್ರಹ.
ಶಿಕ್ಷಕರ ಜೇಬಿಗೆ ಭಾರ:ಶಾಲೆಗಳಲ್ಲಿ ವಾರ್ಷಿಕ 15-20 ದಿನಚಾರಣೆ ಆಚರಿಸಲಾಗುತ್ತದೆ. ಈ ದಿನಾಚರಣೆಗಳನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಜತೆಗೆ ವಿವಿಧ ಸಭೆಗಳನ್ನು ಮುಖ್ಯ ಶಿಕ್ಷಕರು ನಡೆಸಬೇಕಾಗುತ್ತದೆ. ಆದರೆ ಇದಕ್ಕೆ ಕನಿಷ್ಟ ಹಣವನ್ನೂ ನೀಡುತ್ತಿಲ್ಲ. ಕಾರಣ ಶಿಕ್ಷಕರು ಹಣ ಹೊಂದಿಸಲು ಪರದಾಡುತ್ತಾರೆ. ಇದು ಅನೇಕ ಸಂದರ್ಭಗಳಲ್ಲಿ ಶಿಕ್ಷಕರ ಜೇಬಿಗೆ ಭಾರವೂ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + eleven =
Remember me
