ಬೆಂಗಳೂರು:ನಾನು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ. ಸರ್ಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಬಂದು ಮಂಡ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ ಎಂಬ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬ ಮನೋಭಾವನೆಯ ವ್ಯಕ್ತಿ ಚಲುವರಾಯಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆರಗೋಡುನಲ್ಲಿ ಜ.26ರಂದು ಗ್ರಾಮಸ್ಥರು ತ್ರಿವರ್ಣ ದ್ವಜ ಹಾರಿಸಿ ಸಂಜೆ ಅದನ್ನು ಇಳಿಸಿದ್ದಾರೆ. ಆ ಗ್ರಾಮದ ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆಲ್ಲ ನಡೆದಿದೆ ಎಂದು ಆರೋಪ ಮಾಡಿದರು.
ಮಂಡ್ಯದ ಘಟನೆಗೂ ನನಗೂ ಏನು ಸಂಬಂಧ ಇದೆ ಎನ್ನುವುದು ಆ ಜಿಲ್ಲೆಯ ಜನರಿಗೆ ಗೊತ್ತಿದೆ. ಸರ್ಕಾರದ ಹುಳುಕು ಮುಚ್ಚಿಟ್ಟಿಕೊಳ್ಳಲು ನನ್ನ ಮೇಲೆ ಅರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕೆರಗೋಡು ಘಟನೆ ಬಗ್ಗೆ ಸರ್ಕಾರವೇ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸುಳ್ಳು ದಾಖಲೆ ಸೃಷ್ಟಿ ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ಒಟ್ಟಿಗೆ ಪ್ರತಿಭಟನೆ ಮಾಡಿವೆ. ಬಿಜೆಪಿ ನಾಯಕರ ಜತೆ ನಾನೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಅಲ್ಲಿ ನಾನು ಏನು ಹೇಳಿದೆ ಎನ್ನುವುದು ಈ ವ್ಯಕ್ತಿಗೆ ಗೊತ್ತಿಲ್ಲವೇ? ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಿ ಎಂದು ಗುಡುಗಿದರು.
ಪಕ್ಷದ ನಾಯಕರು, ಕಾರ್ಯಕರ್ತರ ದುಡಿಮೆಯನ್ನು ನಾನು ಕೇಸರಿ ಶಾಲು ಹಾಕಿಕೊಂಡು ಬಿಜೆಪಿಗೆ ಒಪ್ಪಿಸಿಬಿಟ್ಟಿದ್ದೇನೆ ಎಂದು ಸಚಿವರು ಟೀಕೆ ಮಾಡಿದ್ದಾರೆ. ಕೇಸರಿ ಶಾಲು ಅಷ್ಟೇ ಅಲ್ಲ, ದಲಿತ ಸಮಾವೇಶಗಳಿಗೆ ಹೋದಾಗ ನೀಲಿ ಶಾಲನ್ನು ಹಾಕಿಕೊಂಡಿದ್ದೇನೆ. ರೈತರ ಸಮಾವೇಶಕ್ಕೆ ಹೋದಾಗ ಹಸಿರು ಶಾಲು ಹಾಕಿದ್ದೇನೆ. ನಾನು ಮಂಡ್ಯದಲ್ಲಿ ಕೇಸರಿ ಶಾಲು ಹಾಕಿದ್ದೆ ಸರಿ, ನನ್ನ ಉಡುಪು ಬಿಳಿ, ನಮ್ಮ ಪಕ್ಷದ ಬಣ್ಣ ಹಸಿರು. ಆದರೆ ಕೇಸರಿ ಬಗ್ಗೆ ಮಾತ್ರ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ ಇದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಅಲ್ಕೊಡು ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕರಾದ ಸುರೇಶ್‌ಗೌಡ, ರಾಜಾ ವೆಂಕಟಪ್ಪ ನಾಯಕ, ತಿಮ್ಮರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಣದಲ್ಲಿ ಮುಖ ಮುಚ್ಚಿಕೊಳ್ಳಲು ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. ಅರ್ಜಿಗಳನ್ನು ಕೊಡಿಸಲಾಗಿದೆ. ಇದೆಲ್ಲವೂ ಪೂರ್ವಯೋಜಿತವಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮಾಡಲಾಗಿದೆ ಎಂದು ಕುಮಾರಸ್ವಾಮಿ ಕುಟುಕಿದರು.
ಲಾಠಿಚಾರ್ಜ್ ಮಾಡುವ ಅವಶ್ಯಕತೆ ಇರಲಿಲ್ಲ. ನಾನು ಜಿಲ್ಲಾಧಿಕಾರಿಗಳಿಗೆ ಐದು ಸಲ ಕರೆ ಮಾಡಿದ್ದೇನೆ. ತಕ್ಷಣ ನಿಮ್ಮ ಅಧಿಕಾರಿಗಳಿಗೆ ಬುದ್ದಿ ಹೇಳಿ ಎಂದು ಹೇಳಿದ್ದೇನೆ. ಇದನ್ನು ಸರ್ಕಾರ ಮಾಡಬೇಕಿತ್ತು. ಸರ್ಕಾರದ ಕೆಲಸವನ್ನು ನಾನು ಮಾಡಿದ್ದೇನೆ. ಪ್ರಕರಣದ ತನಿಖೆ ನಡೆಸುವ ಧೈರ್ಯ ಸರ್ಕಾರಕ್ಕೆ ಇದೆಯಾ? ಎಂದು ಕುಮಾರಸ್ವಾಮಿ ಕೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
