ಬೆಂಗಳೂರು: ಮಂಗಳೂರು ಗೋಲಿಬಾರ್ ಘಟನೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ದನ್ನು ಅಸ್ತ್ರವಾಗಿ ಪ್ರಯೋಗಿಸಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದರಿಂದ ಕಾವೇರಿದ ವಾದ ವಿವಾದಗಳಿಗೆ ಸದನ ಸಾಕ್ಷಿಯಾಯಿತು.
ಗಲಭೆ ಪ್ರಕರಣದಲ್ಲಿ 21 ಮಂದಿಗೆ ನೀಡಿರುವ ಜಾಮೀನು ಆದೇಶದಲ್ಲಿ ಬಂಧಿತರು ಗಲಭೆ ನಡೆದ ಸ್ಥಳದಲ್ಲಿರುವ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ. ಅವರ ಬಳಿ ಬಾಟಲಿ ಬಿಟ್ಟರೆ ಮಾರಣಾಂತಿಕ ಹಲ್ಲೆ ನಡಸುವ ಶಸ್ತ್ರಾಸ್ತ್ರ ಕಂಡುಬಂದಿಲ್ಲ ಎಂಬ ಅಂಶವನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪಿಸಿದರು. ಇದು ಕೋರ್ಟ್​ನ ಅಂತಿಮ ಆದೇಶವಲ್ಲ. ಸಾಕ್ಷ್ಯಳು, ಸಿಸಿ ಕ್ಯಾಮರಾ ದೃಶ್ಯಾವಳಿ, ಪ್ರಮಾಣ ಪತ್ರಗಳನ್ನು ಸೂಕ್ತ ಕಾಲದಲ್ಲಿ ಸರ್ಕಾರ ಸಲ್ಲಿಸಲಿದೆ. ಚಾರ್ಜ್​ಶೀಟ್ ಕೂಡ ಸಲ್ಲಿಕೆಯಾಗಿಲ್ಲ. ಈ ಹಂತದಲ್ಲೇ ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಮಾಧುಸ್ವಾಮಿ ಪ್ರತಿಪಾದಿಸಿದ್ದು, ಕೋಲಾಹಲಕ್ಕೆ ಕಾರಣವಾಯಿತು.
ಬಿಜೆಪಿ ಸದಸ್ಯರು ಮಂಗಳೂರು ಘಟನೆ ಬಗ್ಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರದರ್ಶಿಸಿದ್ದಲ್ಲದೆ, 70ಕ್ಕೂ ಹೆಚ್ಚು ಪೊಲೀಸರಿಗೆ ಕಲ್ಲು ತೂರಾಟದಲ್ಲಿ ಗಾಯಗಳಾಗಿದ್ದರೂ ಸುಮ್ಮನೆ ಇರಬೇಕಾಗಿತ್ತಾ? ಅಲ್ಲಿಗೆ ಪೆಟ್ರೋಲ್ ಬಾಂಬ್ ತಂದಿದ್ದವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು. ದ.ಕ.ಜಿಲ್ಲೆ ಶಾಸಕರು, ಕಾಂಗ್ರೆಸ್ ಆರೋಪಕ್ಕೆ ತೀವ್ರ ಪ್ರತಿರೋಧ ಒಡ್ಡಿದರು. ಆಡಳಿತ ಪಕ್ಷದ ಮೇಲೆ ಮುಗಿಬಿದ್ದ ವಿರೋಧ ಪಕ್ಷ, ನ್ಯಾಯಾಲಯ ನಿಮಗೆ ಛೀಮಾರಿ ಹಾಕಿದೆ ಎಂದು ದೂರಿದರು.
ಮಧ್ಯೆ ಪ್ರವೇಶಿಸಿದ ಮಾಧುಸ್ವಾಮಿ, ವಿಚಾರಣಾ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ಉಲ್ಲೇಖ ಮಾಡುವುದು ಕೂಡ ಸದನ ನಿಯಮಾವಳಿ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆ ಮಾಡದಂತಾಗುತ್ತದೆ ಎಂದರು. ಒಂದು ಹಂತದಲ್ಲಿ ಸಿದ್ದರಾಮಯ್ಯ ಮತ್ತು ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಖಾದರ್ ಹೇಳಿಕೆ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ರೀತಿ ರ್ಚಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಮಾಧುಸ್ವಾಮಿ ವಾದಿಸಿದರು. ಆಗ ಮಧ್ಯಪ್ರವೇಶ ಮಾಡಿದ ಆರ್.ವಿ.ದೇಶಪಾಂಡೆ, ಇದೆಲ್ಲವೂ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದರು.
ಸಿಎಎ ವಿರುದ್ಧ ಪ್ರತಿಭಟನೆ ಹತ್ತಿಕ್ಕುವ ರೀತಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಕಾನೂನು ಬದ್ಧವಲ್ಲ. ಇದರಿಂದ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಹೈಕೋರ್ಟ್ ಹೇಳಿದೆ ಎಂದು ಸಿದ್ದರಾಮಯ್ಯ ಸದನದ ಗಮನಕ್ಕೆ ತಂದರು. ಹಾಗಾದರೆ ಮುನ್ನೆಚ್ಚರಿಕೆ ಕ್ರಮ ಯಾರು ತೆಗದುಕೊಳ್ಳಬೇಕು. ಸಿಆರ್​ಪಿಸಿಗೆ ತಿದ್ದುಪಡಿ ತರಬೇಕೆ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.
ಬೆಂಕಿ ಹಚ್ಚುತ್ತೇವೆ ಎಂದವರು ಯಾರು?
ಬೆಂಕಿ ಹಚ್ಚುತ್ತೇವೆ ಎಂದವರು ಯಾರು ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿಯ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಸುನೀಲ್​ಕುಮಾರ್ ಸೇರಿ ಆಡಳಿತ ಪಕ್ಷದ ಶಾಸಕರು ಪೆಟ್ರೋಲ್ ಬಾಂಬ್, ಕಲ್ಲು, ಇಟ್ಟಿಗೆ ತಂದವರು ಯಾರು ಹೇಳಿ? ಎಂದು ಆಕ್ರೋಶದಿಂದ ಕೇಳಿದರು. ಇದಕ್ಕೆ ವಿವರಣೆ ನೀಡಿದ ಸಿದ್ದರಾಮಯ್ಯ, ಬೆಂಕಿ ಹಚ್ಚುತ್ತೇನೆ ಎನ್ನುವುದೇ ಬೇರೆ. ಬೆಂಕಿ ಹೊತ್ತಿ ಉರಿಯುತ್ತದೆ ಎಂಬುದು ಬೇರೆ. ಖಾದರ್ ಹೇಳಿಕೆ ಸರಿಯಾಗಿ ಅರ್ಥೈಯಿಸದೆ ತಪು್ಪ ಅಭಿಪ್ರಾಯ ಮೂಡಿಸಲಾಗುತ್ತಿದೆ ಎಂದರು. ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದ ‘ಪೀಪಲ್ಸ್ ಟ್ರಿಬ್ಯುನಲ್’ ಸಮಿತಿಯು ನಿಷೇಧಾಜ್ಞೆ ಜಾರಿಗೊಳಿಸಿದ್ದು ಸರಿಯಲ್ಲ ಎಂದು ವರದಿಯಲ್ಲಿ ಹೇಳಿದೆ ಎಂದರು. ಹಾಗಾದರೆ ಆ ಸಮಿತಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಬಗ್ಗೆ ಏನು ಹೇಳಿದೆ ಎಂಬುದನ್ನೂ ತಿಳಿಸಿ ಎಂದು ಸುನೀಲ್​ಕುಮಾರ್ ಒತ್ತಾಯಿಸಿದ್ದು ಮತ್ತೆ ಗದ್ದಲಕ್ಕೆ ಕಾರಣವಾಯಿತು. ಕೆ.ಜೆ.ಜಾರ್ಜ್, ಅಶ್ರುವಾಯು ಸಿಡಿಸಿದಾಗ ಪೊಲೀಸರು, ಸಾರ್ವಜನಿಕರು ಎಲ್ಲರೂ ಮೂಗು, ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಎಂದಿದ್ದು ಇನ್ನಷ್ಟು ಗದ್ದಲಕ್ಕೆ ಕಾರಣವಾಯಿತು.
ಸದನ ಸಮಿತಿ ರಚನೆಗೆ ಎಚ್​ಡಿಕೆ ಆಗ್ರಹ
ಮಂಗಳೂರಿನಲ್ಲಿ ಗೋಲಿಬಾರ್ ಘಟನೆ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗಲಭೆ ನಡೆಸಲು ಕೇರಳದಿಂದ 2-3 ದಿನದ ಹಿಂದೆಯೇ ಕೆಲವರು ಬಂದು ಪೂರ್ವ ತಯಾರಿ ಮಾಡಿಸಿದ್ದರು ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಪ್ರತಿಭಟನೆ ನಡೆಸಲು ಪೊಲೀಸರು ಏಕೆ ಅನುಮತಿ ನೀಡಿದರು? ಗಲಭೆ ಎಬ್ಬಿಸಲು ಬಂದಿದ್ದ ಕೇರಳದ ಎಷ್ಟು ಜನರನ್ನು ಬಂಧಿಸಲಾಗಿದೆ? ಎಂದು ತರಾಟೆಗೆ ತೆಗೆದುಕೊಂಡರು. ಹಾಜಿ ರಸ್ತೆಯಲ್ಲಿ ಅಪಾರ್ಟ್​ವೆುಂಟ್ ನಿರ್ಮಾಣ ನಡೆಯುತ್ತಿತ್ತು. ಅದರ ತ್ಯಾಜ್ಯ ಸಾಗಿಸುತ್ತಿದ್ದ ಚಾಲಕ ಗಲಾಟೆ ಶುರುವಾದ ಕಾರಣ ವಾಹನವನ್ನು ಅಲ್ಲೇ ನಿಲ್ಲಿಸಿ ತೆರಳಿದ್ದ ಹೊರತು ಕಲ್ಲು ತೂರಾಟಕ್ಕೆ ಪೂರೈಕೆ ಮಾಡಲು ಆ ವಾಹನ ತಂದಿರಲಿಲ್ಲ. ಕಲ್ಲು ತೂರಾಟಕ್ಕೆ ತಂದಿದ್ದರೆ, ಇದುವರೆಗೆ ಆ ವಾಹನವನ್ನು ಏಕೆ ಮುಟ್ಟುಗೋಲು ಹಾಕಿಕೊಂಡಿಲ್ಲ? ಚಾಲಕನನ್ನು ಏಕೆ ಬಂಧಿಸಿಲ್ಲ ಎಂದು ಕೇಳಿದರು.
ಕಾನೂನು ಇಲಾಖೆ ವೈಫಲ್ಯ
ಸಣ್ಣ ಪುಟ್ಟ ಪ್ರಕರಣದಲ್ಲೂ ಜಾಮೀನು ಕೊಡಬಾರದು ಎಂದು ವಾದಿಸುವ ಸರ್ಕಾರ ಮಂಗಳೂರು ಘಟನೆಯಲ್ಲಿ ಯಾಕೆ ಸರಿಯಾಗಿ ವಾದ ಮಂಡಿಸಲಿಲ್ಲ? ಇದು ಕಾನೂನು ಇಲಾಖೆ ವೈಫಲ್ಯವಲ್ಲದೆ ಮತ್ತಿನ್ನೇನು? ವಕೀಲರು ಏನು ಮಾಡುತ್ತಿದ್ದರು. ಇಂತಹವರನ್ನು ಯಾಕೆ ಇಟ್ಟುಕೊಂಡಿದ್ದೀರಿ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಪಟಾಕಿಯಲ್ಲಿನ ಮಿನುಗುವ ಪೌಡರೇ ಮಿಣಿ ಮಿಣಿ!!
ಮಿಣಿ ಮಿಣಿ ಪೌಡರ್ ಬಳಕೆ ಕುರಿತು ಕೋರ್ಟ್ ನಿಂದ ತಡೆಯಾಜ್ಞೆ ಇದ್ದ್ದೂ ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಮಿಣಿ ಮಿಣಿ ಪೌಡರ್ ಪದ ಬಳಕೆ ಮಾಡಿ ಅಚ್ಚರಿ ಮೂಡಿಸಿದರು. ಪಟಾಕಿಯಲ್ಲಿನ ಮಿನುಗುವ ಪೌಡರ್ ಅನ್ನು ನಾನು ಮಿಣಿ ಮಿಣಿ ಪೌಡರ್ ಎಂದಿದ್ದೆ. ಅದನ್ನೇ ಏನೋ ಅಪರಾಧ ಮಾಡಿದಂತೆ ದೊಡ್ಡದು ಮಾಡಿದರು. ಪಟಾಕಿಯಲ್ಲಿ ಹಾಕುವ ಮಿನುಗುವ ಪೌಡರೇ ಮಿಣಿ ಮಿಣಿ ಪೌಡರ್ ಎಂದು ಸಮರ್ಥಿಸಿಕೊಂಡರು. ಮಂಗಳೂರು ವಿಮಾನ ನಿಲ್ದಾಣದ ಬಳಿ ಸಿಕ್ಕ ಬಾಂಬ್ ಅನ್ನು ಭಾರಿ ವಾಹನದಲ್ಲಿ ಕೊಂಡೊಯ್ದು ಡೆಫ್ಯೂಸ್ ಮಾಡಿದರು. ಆಗ ಅಲ್ಲಿ ಹಾಕಿದ್ದ ಒಂದು ಮೂಟೆಯಾದರೂ ಅಲ್ಲಾಡಿತೆ? ಸುಮ್ಮನೆ ಹೊಗೆ ಬಂತು ಎಂದು ಲೇವಡಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
