ಬೆಂಗಳೂರು:ಕರ್ನಾಟಕ ಸಹಿತ ದೇಶದ ಹಲವೆಡೆ 18 ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವುದು ರಾಜ್ಯದಲ್ಲಿ ಉಗ್ರಾತಂಕ ಇನ್ನಷ್ಟು ಹೆಚ್ಚಿಸಿದೆ. ಸಿಸಿಬಿ ಪೊಲೀಸರು ಬೆಂಗಳೂರಿನ ಸುದ್ದಗುಂಟೆ ಪಾಳ್ಯದಲ್ಲಿ ದಾಖಲಿಸಿರುವ ಎಫ್​ಐಆರ್​ನಲ್ಲಿ ಹೆಸರಿಸಿರುವ ಇನ್ನು ಹಲವು ಶಂಕಿತ ಉಗ್ರರ ಸುಳಿವು ಸಿಗದಿರುವುದು ತನಿಖಾ ತಂಡಗಳಿಗೆ ತಲೆನೋವಾಗಿದೆ.
ಕಳೆದ 20 ದಿನಗಳಿಂದ ಬೆಂಗಳೂರು ಸಿಸಿಬಿ, ದೆಹಲಿ ಹಾಗೂ ಚೆನ್ನೈ ಕ್ಯೂ ಬ್ರ್ಯಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿ 18 ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬೆಂಗಳೂರು, ಚಾಮರಾಜನಗರ, ಕೋಲಾರ, ರಾಮನಗರ, ಶಿವಮೊಗ್ಗ ಇನ್ನಿತರ ಜಿಲ್ಲೆಗಳ ಯುವಕರು ಶಂಕಿತ ಉಗ್ರರ ಜತೆ ಸಂಪರ್ಕ ಹೊಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸಿಸಿಬಿ ಪೊಲೀಸರು ಒಟ್ಟು 17 ಶಂಕಿತರ ಹೆಸರನ್ನು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ 11 ಯುವಕರು ರಾಜ್ಯದವರಾದರೆ ಉಳಿದ ವರು ತಮಿಳುನಾಡಿನ ಶಂಕಿತರು. ರಾಜ್ಯದ 11 ಶಂಕಿತರ ಪೈಕಿ ಮೂವರು ಮಾತ್ರ ಬಂಧಿತರಾಗಿದ್ದು, ಉಳಿದವರ ಸುಳಿವಿಲ್ಲ. ನಾಪತ್ತೆಯಾಗಿರುವ ಶಂಕಿತ ಉಗ್ರರು ದುಷ್ಕೃತ್ಯ ಎಸಗಲು ಸಂಚು ರೂಪಿಸಿರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ತಲೆಮರೆಸಿಕೊಂಡಿರುವವರ ಬಂಧನ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಜತೆಗೆ ಶಂಕಿತರು ಮತ್ತಷ್ಟು ಯುವಕರನ್ನು ಉಗ್ರವಾದದತ್ತ ಪ್ರಚೋದಿಸಿರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಗುರುಪ್ಪನಪಾಳ್ಯದ ಮೆಹಬೂಬ್ ಪಾಷಾ, ಮಹಮದ್ ಹನೀಶ್, ಮಹ್ಮದ್ ಮನ್ಸೂರ್, ಇಮ್ರಾನ್ ಖಾನ್, ಜಬೀವುಲ್ಲಾ, ಹುಸೇನ್, ಶಿವಮೊಗ್ಗದ ತೀರ್ಥಹಳ್ಳಿಯ ಮುಜಾವಿರ್ ಹುಸೇನ್, ಅಬ್ದುಲ್ ಮತೀನ್ ಅಹಮದ್, ಮೈಸೂರಿನ ಚನ್ನಪಟ್ಟಣದ ಅನೀಸ್, ಕೋಲಾರದ ಸಲೀಂ ಖಾನ್ ಹಾಗೂ ರಾಮನಗರದ ಅಜಾಜ್ ಪಾಷಾ ಹೆಸರುಗಳನ್ನು ಸಿಸಿಬಿ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ರುದ್ರೇಶ್ ಹಂತಕನಿಗೂ ಐಸಿಸ್ ನಂಟು?: 2016ರ ಆಕ್ಟೋಬರ್​ನಲ್ಲಿ ಆರ್​ಎಸ್​ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೌಸ್ ಬಾಯ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಗೌಸ್ ಬಾಯ್ ಎಸ್​ಡಿಪಿಐ ಮತ್ತು ಪಿಎಫ್​ಐ ಸಂಘಟನೆಯ ಸದಸ್ಯ ಎಂಬುದು ಎನ್​ಐಎ ತನಿಖೆಯಿಂದ ದೃಢಪಟ್ಟಿದೆ. ಇದುವರೆಗೂ ಆತನ ಸುಳಿವು ಸಿಕ್ಕಿಲ್ಲ. ಐಸಿಸ್​ನ ಶಂಕಿತ ಉಗ್ರ ಬಂಧಿತ ಮೆಹಬೂಬ್ ಪಾಷ ಜತೆ ಗೌಸ್ ನಂಟು ಹೊಂದಿದ್ದ ಎಂಬುದರ ಬಗ್ಗೆ ಸಿಸಿಬಿ ಎಟಿಸಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಗ್ಳೂರಲ್ಲಿ ಚರ್ಚೆ
ಮೆಹಬೂಬ್ ಪಾಷ ಐಸಿಸ್ ಉಗ್ರ ಸಂಘಟನೆ ಜತೆ ನೇರ ಸಂಪರ್ಕ ಇಟ್ಟುಕೊಂಡಿದ್ದ. ಗುರುಪ್ಪನ ಪಾಳ್ಯದಲ್ಲಿರುವ ಆತನ ಬಾಡಿಗೆ ಮನೆಯಲ್ಲಿ ಹಲವು ಬಾರಿ ಸಭೆ ನಡೆಸಿದ್ದ. ಸಂಬಂಧಿಕರು, ಸ್ನೇಹಿತರು, ಅವರ ಪರಿಚಿತರನ್ನು ಉಗ್ರ ಕೃತ್ಯಕ್ಕೆ ಸಹಕರಿಸಲು ಪ್ರಚೋದಿಸುತ್ತಿದ್ದ. ಮೆಹಬೂಬ್ ಪಾಷ ಐಸಿಸ್ ಜತೆ ನಿರಂತರ ಸಂಪರ್ಕದಲ್ಲಿರುವ ಬಗ್ಗೆ ತನಿಖಾ ತಂಡಗಳಿಗೆ ಹಲವು ಸಾಕ್ಷ್ಯ ಲಭ್ಯವಾಗಿವೆ.
ಟಾರ್ಗೆಟ್ ಹಿಂದು ಮುಖಂಡರು!
ಕರ್ನಾಟಕ ಸೇರಿ ಬೇರೆ ರಾಜ್ಯಗಳಲ್ಲಿ ಸೆರೆಸಿಕ್ಕಿರುವ ಶಂಕಿತ ಉಗ್ರರು ಹಾಗೂ ಆರ್​ಎಸ್​ಎಸ್ ಕಾರ್ಯಕರ್ತ ವರುಣ್ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಬೆಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿರುವ ಎಸ್​ಡಿಪಿಐನ 6 ಸದಸ್ಯರೂ ಹಿಂದು ಮುಖಂಡರನ್ನೇ ಟಾರ್ಗೆಟ್ ಮಾಡಿದ್ದಾರೆ. ಜಿಹಾದಿ ಗ್ಯಾಂಗ್​ನ ಉಗ್ರರು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಹಿಂದುಪರ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಲು ಟಾರ್ಗೆಟ್ ಮಾಡಿಕೊಂಡಿದ್ದರು.
ರಾಜ್ಯದೆಲ್ಲೆಡೆ ಕಟ್ಟೆಚ್ಚರ
ಮಂಗಳೂರಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಡಿಜಿಪಿ ನೀಲಮಣಿ ಎನ್.ರಾಜು ಅವರು ಸೋಮವಾರ ಸಂಜೆ ವೇಳೆ ಎಲ್ಲ ವಿಭಾಗದ ಎಡಿಜಿಪಿ ಜತೆ ಸಭೆ ನಡೆಸಿದ್ದಾರೆ. ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳುವಂತೆ ಎಲ್ಲ ವಲಯದ ಐಜಿಪಿ, ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಪ್ರವಾಸಿ ತಾಣಗಳು, ಜಲಾಶಯಗಳು ಹಾಗೂ ಗಡಿಭಾಗದ ಪ್ರದೇಶಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ರಾಜ್ಯದ ಒಳಬರುವ ಹಾಗೂ ಹೊರಹೋಗುವ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಎರಡು ಬ್ಯಾಗ್ ಇತ್ತು
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಅಪರಿಚಿತ ವ್ಯಕ್ತಿ ಬಳಿ ಎರಡು ಬ್ಯಾಗ್ ಇತ್ತೆಂಬ ಅಂಶ ಬಯಲಾಗಿದೆ. ಮಂಗಳೂರಿನಿಂದ ಖಾಸಗಿ ಸರ್ವೀಸ್ ಬಸ್ಸೊಂದರಲ್ಲಿ ಕೆಂಜಾರಿಗೆ ಬಂದು, ಅಲ್ಲಿನ ಸೆಲೂನ್​ನಲ್ಲಿ ಒಂದು ಬ್ಯಾಗ್ ಇಟ್ಟಿದ್ದ ಆತ, ಇನ್ನೊಂದು ಬ್ಯಾಗನ್ನು ರಿಕ್ಷಾದಲ್ಲಿ ಬಂದು ವಿಮಾನ ನಿಲ್ದಾಣದಲ್ಲಿ ಇಟ್ಟು ವಾಪಸ್ ಬಂದಿದ್ದ. ಸೆಲೂನ್​ನಲ್ಲಿ ಇಟ್ಟಿದ್ದ ಬ್ಯಾಗನ್ನು ವಾಪಸ್ ತೆಗೆದುಕೊಂಡು ಹೋಗಿದ್ದ ಎಂಬ ಮಾಹಿತಿ ಇದೆ. ಸೆಲೂನ್ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಅಪರಿಚಿತನಲ್ಲಿದ್ದ ಇನ್ನೊಂದು ಬ್ಯಾಗ್​ನಲ್ಲಿ ಏನಿತ್ತು ಎಂಬ ಮಾಹಿತಿ ಲಭಿಸಿಲ್ಲ.
ಸ್ಪೋಟಕ ಹೇಗಿತ್ತು ?
ಮಂಗಳೂರಿನ ಏರ್​ಪೋರ್ಟ್​ನಲ್ಲಿ ಇದೇ ಮೊದಲ ಬಾರಿಗೆ ಸಜೀವ ಬಾಂಬ್ ಪತ್ತೆಯಾಗಿದೆ. ಬೂದು ಬಣ್ಣದ ಬ್ಯಾಗ್​ನ ಒಳಗೆ ಕಬ್ಬಿಣದ ಪೆಟ್ಟಿಗೆಯೊಂದಿತ್ತು. ಸಾಧಾರಣ ಕಾಣಿಕೆ ಡಬ್ಬಿಯಂತೆಯೇ ಇತ್ತು. ಅದರಲ್ಲಿ ಪಟಾಕಿಗಳಲ್ಲಿ ಬಳಸುವಂತಹ ಮಿನುಗುವ ಬಿಳಿ ಬಣ್ಣದ ಪುಡಿ ಇತ್ತು, ಜತೆಗೆ ಟೈಮರ್​ವೊಂದನ್ನೂ ಜೋಡಿಸಿಡಲಾಗಿತ್ತು. ಆದರೆ ಅದು ಕಾರ್ಯವೆಸಗುತ್ತಿರಲಿಲ್ಲ, ಅದು ಉದ್ದೇಶಪೂರ್ವಕವೇ ಅಥವಾ ಟೈಮರ್ ಕೆಟ್ಟುಹೋಗಿತ್ತೇ ಎನ್ನುವುದು ಗೊತ್ತಾಗಿಲ್ಲ. ವೈರುಗಳನ್ನೂ ಜೋಡಿಸಿಡಲಾಗಿತ್ತು. ಟೈಮರ್ ನಿಂತ ಸ್ಥಿತಿಯಲ್ಲಿದ್ದುದರಿಂದ ಬಾಂಬ್ ತಜ್ಞರು ಅದನ್ನು ನಿಷ್ಕ್ರಿಯಗೊಳಿಸುವುದು ಅಪಾಯಕಾರಿ ಎಂದು ಭಾವಿಸಿ ಸ್ಪೋಟಿಸುವುದಕ್ಕೆ ತೀರ್ವನಿಸಿದ್ದಾರೆ. ಸ್ಪೋಟಕ ಯಾವ ಮಾದರಿಯದ್ದು? ಯಾವ ರೀತಿಯ ವಸ್ತು ಇತ್ತು ಎನ್ನುವುದು ಇನ್ನೂ ತಿಳಿದಿಲ್ಲ. ಸ್ಪೋಟದ ಬಳಿಕ ಅದರ ಮಾದರಿಯನ್ನು ಎಫ್​ಎಸ್​ಎಲ್ ತಜ್ಞರು ಸಂಗ್ರಹಿಸಿದ್ದು ಇನ್ನಷ್ಟೇ ಅದರ ವರದಿ ಬರಬೇಕಿದೆ. ಬಾಂಬ್ ಪತ್ತೆ ಕುರಿತಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ
ಜಿಹಾದಿ ಗ್ಯಾಂಗ್ ಬಂಧನ ಪ್ರಕರಣದ ತನಿಖೆಯನ್ನು ಎನ್​ಐಎ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಕರ್ನಾಟಕ, ದೆಹಲಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಉಗ್ರಜಾಲ ಹರಡಿಕೊಂಡಿದ್ದು, ಎಲ್ಲ ರಾಜ್ಯಗಳಲ್ಲಿಯೂ ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ತಮಿಳುನಾಡು ಸರ್ಕಾರ ಸಮಗ್ರ ವರದಿ ಸಲ್ಲಿಸಿದೆ. ಕರ್ನಾಟಕ ಪೊಲೀಸರು ಸಹ ಕೆಲ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕತೆ ಸೃಷ್ಟಿ ಮಾಡಿ ವಾಸ್ತವಾಂಶ ಮರೆಮಾಚಬಾರದು. ಯಾವುದೋ ಒಂದು ವರ್ಗದ ಓಲೈಕೆಗೆ ಅಮಾಯಕರ ಬಲಿ ಕೊಡುವ ಕೆಲಸ ಮಾಡಬಾರದು. ಜನರಲ್ಲಿ ಸಂಘರ್ಷದ ಮನೋಭಾವ ಬೆಳೆಸುವ ರೀತಿಯಲ್ಲಿ ಸರ್ಕಾರವೇ ಕೆಲ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಅನುಮಾನ ಉಂಟಾಗಿದೆ. ಬಾಂಬ್ ಪ್ರಕರಣದ ಸತ್ಯಾಸತ್ಯತೆಯನ್ನು ರಾಜ್ಯದ ಜನತೆ ಮುಂದೆ ಇಡಬೇಕು. ಗೃಹ ಸಚಿವರು ಈ ಬಗ್ಗೆ ಶೀಘ್ರ ತನಿಖೆ ನಡೆಸಿ ವಸ್ತುಸ್ಥಿತಿ ತಿಳಿಸಬೇಕು.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ಬಾಂಬ್ ಇಡುವುದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವುದು ದೇಶದ್ರೋಹದ ಕೆಲಸ. ಭಯೋತ್ಪಾದನೆ ಮೂಡಿಸುವ ಕೆಲಸ. ದೊಡ್ಡ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಬೇಕು ಎಂಬ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಕೃತ್ಯ ಎಸಗಲಾಗಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ದೇಶದ್ರೋಹಿಗಳು ಗಣರಾಜ್ಯೋತ್ಸವದ ಸಂದರ್ಭ ವಿಧ್ವಂಸಕ ಕೃತ್ಯಕ್ಕೆ ಹುನ್ನಾರ ಮಾಡುತ್ತಿದ್ದಾರೆೆ. ಆದರೆ, ಅದನ್ನು ನಾವು ಮಟ್ಟಹಾಕುತ್ತೇವೆ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ
ಚಾಮರಾಜನಗರದಲ್ಲಿ ಹೈ ಅಲರ್ಟ್
ಚಾಮರಾಜನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳ, ತಮಿಳುನಾಡು ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆ ತಾಲೂಕಿನ ಚೆಕ್​ಪೋಸ್ಟ್​ಗಳಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ಇಲಾಖೆ ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಿದೆ. ರಾಜ್ಯಕ್ಕೆ ಪ್ರವೇಶ ಪಡೆಯುವ ಪ್ರತಿಯೊಂದು ವಾಹನಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ. ನಗರದ ರೈಲು ನಿಲ್ದಾಣ, ಜಿಲ್ಲೆಯ ವಿವಿಧ ತಾಲೂಕುಗಳ ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಶಂಕಾಸ್ಪದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್​ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 20 =
Remember me
