ನಿರಂಜನ ದೇವರಮನೆ ಚಿತ್ರದುರ್ಗ:ಭಾರತೀಯರ ಬದುಕಿನಲ್ಲಿ ಹಬ್ಬಗಳು ಮತ್ತು ಜಾತ್ರೆಗಳಿಗೆ ವಿಶೇಷವಾದ ಅರ್ಥವಿದೆ.ಧಾರ್ಮಿಕ ಹಿನ್ನೆಲೆಯಲ್ಲಿ ಮಹತ್ತರವಾದ ಸಂದೇಶಗಳನ್ನು ಸಾರುವ ಉತ್ಸವಗಳು,ಸಾಮಾಜಿಕ ಜೀವನದಲ್ಲಿ ಧರ್ಮದ ಬಗ್ಗೆ ಜಾಗರೂಕನಾಗಿರಲು ಪ್ರೇರಣೆ ನೀಡುತ್ತವೆ.ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಲ್ಲಿ ಇಂತಹ ಮಹೋತ್ಸವಗಳು ಸಹಕಾರಿಯಾಗಿದ್ದು,ಅಂತಹವುಗಳಲ್ಲಿ ಉಜ್ಜಯಿನಿ ಶ್ರೀಮರುಳಸಿದ್ದೇಶ್ವರ ಜಾತ್ರೆಯು ಪ್ರಮುಖವಾದುದು.
ನಿರಂತರ ಸಾಮಾಜೋ–ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುತ್ತಿರುವ ಈ ನಾಡಿನ ಅನೇಕ ಧರ್ಮಪೀಠಗಳು ಹಾಗೂ ದೇವಮಂದಿರಗಳು ಜನತೆ ಪಾಲಿಗೆ ಸದಾ ಜೀವನ್ಮುಕ್ತಿಯ ಪುಣ್ಯತಾಣಗಳಾಗಿ ಕಂಗೊಳಿಸುತ್ತಿವೆ.ಅಂತಹವುಗಳಲ್ಲಿ ಒಂದು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠ.
ಪರಶಿವನ ಪಂಚಮುಖಗಳಿಂದ ಪ್ರಾದುರ್ಭವಿಸಿ ವೀರಶೈವ ಮತವನ್ನು ಸ್ಥಾಪಿಸಿ,ಶಿವಸರ್ವೋತ್ತಮತೆಯನ್ನು ಪ್ರಶಂಸಿಸಿ,ಶಿವಭಕ್ತಿ ಪ್ರಸಾರವನ್ನು ಕೈಗೊಂಡು ತಮ್ಮ ತಪಃಪ್ರಭಾವ ಹಾಗೂ ಕ್ರಿಯಾತ್ಮಕ ಶಕ್ತಿಯಿಂದ ಜಗತ್ತಿನ ಪವಿತ್ರ ಸ್ಥಳಗಳಲ್ಲಿ ಶಿವಲಿಂಗಗಳನ್ನು ಸ್ಥಾಪಿಸಿ.ಶಿವಪೂಜಾ ವೈಭವವನ್ನು ಪ್ರದರ್ಶಿಸಿದ ಶ್ರೀಜಗದ್ಗುರು ಪಂಚಾಚಾರ್ಯರು ಇಡೀ ವಿಶ್ವಕ್ಕೆ ಲೋಕಪೂಜ್ಯರೆನ್ನಿಸಿದ್ದಾರೆ.ಅಂತಹ ಪಂಚಪೀಠಗಳಲ್ಲಿ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠದ ಆದಿ ಆಚಾರ್ಯರಾದ ಶ್ರೀಜಗದ್ಗುರು ಮರುಳಾರಾಧ್ಯರು ಮಾಳವ ದೇಶದ ಕ್ಷಿಪ್ರ ನದಿ ತಟದಲ್ಲಿರುವ ಶ್ರೀಸಿದ್ದೇಶ್ವರ ಲಿಂಗದಿಂದ ಅವತರಿಸಿ ಅಲ್ಲಿಯೇ ಶ್ರೀಪೀಠವನ್ನು ಸ್ಥಾಪಿಸಿ ‘ಶಿವಾದ್ವೈತ ಸಿದ್ಧಾಂತ’ವನ್ನು ಮಾನವ ಕುಲದ ಉದ್ದಾರಕ್ಕಾಗಿ ಸಂಸ್ಥಾಪಿಸಿ ಮಹಾಮಹಿಮರಾಗಿದ್ದಾರೆ.
ಈ ಪರಂಪರೆಯ ಶ್ರೀ ದಾರುಕಾಚಾರ್ಯರು ಹಿಂದುಳಿದ ಜಾತಿಯ ಕೀಲಿಗನಾದ ದಧೀಚಿಗೆ ಶಿವಾದ್ವೆತವನ್ನು ಬೋಧಿಸಿ ಕುಲ–ಹದಿನೆಂಟು ಜಾತಿಯನ್ನು ಉದ್ಧರಿಸಿದ ಸಮಾಜ ಪರಿವರ್ತನ ಮಹಾ ಪ್ರವರ್ತಕರಾಗಿದ್ದಾರೆ.ಕಾಲಾಂತರದಲ್ಲಿ ಕರ್ನಾಟಕದ ಉಜ್ಜಯಿನಿ ಪರಿಸರಕ್ಕೆ ಸ್ಥಳಾಂತರವಾದ ಈ ಪೀಠ ಅಂದಿನ ತನ್ನ ಧರ್ಮ–ಸಂಸ್ಕೃತಿ–ಪರಂಪರೆಯನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ.ಈ ಪೀಠದ ಆಚರಣೆಗಳಲ್ಲಿ ಬಹುಮುಖ್ಯವಾದ ಶ್ರೀ ಮರುಳಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ತೈಲಾಭಿಷೇಕ ಬಹುವಿಶಿಷ್ಟವಾಗಿದ್ದು,ಅವುಗಳು ವೈಭವಪೂರ್ಣವಾಗಿ ಜರುಗುವುದರೊಂದಿಗೆ ರಾಷ್ಟ್ರದ ಭಾವೈಕ್ಯತೆಯ ಬೆಸುಗೆಯಾಗಿ,ಸರ್ವಧರ್ಮ ಸಹಿಷ್ಣುತೆಯ ಸಂಬಂಧಿಯಾಗಿ,ಸಾಮಾಜಿಕ ಸಂವೇದನೆಯ ಸೇತುಬಂಧವಾಗಿ ತನ್ನ ಆಚರಣೆಗಳನ್ನು ಅನಾವರಣಗೊಳಿಸಿದೆ.
ಅಕ್ಷಯ ತದಿಗೆ ಅಮವಾಸ್ಯೆಯಂದು ಆರಂಭವಾಗಿರುವ ಜಾತ್ರೆಯು ಒಂದು ವಾರ ನಡೆಯಲಿದ್ದು,ಶ್ರೀಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ದೇವಾಲಯದ ಶಿಖರಕ್ಕೆ ತೈಲಾಭಿಷೇಕ ವಿಶಿಷ್ಠವಾದದ್ದು.ಪರಂಪರೆಯಂತೆ ಜರೀಮಲೆ ರಾಜವಂಶಸ್ಥರಿಂದ ಶಿಖರಕ್ಕೆ ಪ್ರಥಮವಾಗಿ ತೈಲವನ್ನು ಅಭಿಷೇಕ ಮಾಡಲಾಗುತ್ತದೆ.ನಾಡಿನ ಜನತೆಗೆ ಬಂದೊಂದಗಿದ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಸುಖ–ಶಾಂತಿ ನೆಲೆಸಲಿ ಎಂಬ ಆಶಯ ಹಾಗೂ ಶನಿದೋಷನಿವಾರಣೆಯಾಗಲಿ ಎಂಬ ಹಿನ್ನೆಲೆಯಲ್ಲಿ ತೈಲಾಭಿಷೇಕ ನಡೆಸಲಾಗುತ್ತದೆ.
ವೀರಮಾಹೇಶ್ವರ ಜಂಗಮ ವಟುಗಳಿಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಹಾಗೂ ಧರ್ಮೋದೇಶ,ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವಗಳು ಜಾತ್ರೆಯ ವಿಶೇಷ.ಅಂತಿಮವಾಗಿ ಶ್ರೀಮರುಳಸಿದ್ದೇಶ್ವರ ಸ್ವಾಮಿಗೆ ಆಘ್ರವಣೆ ನೀಡಿ ಕಂಕಣ ವಿಸರ್ಜನೆಯೊಂದಿಗೆ ದೇವಾಲಯ ಶುದ್ದೀಕರಣ ಮಾಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಶ್ರೀಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪೀಠಾಚಾರ್ಯರಾದ ಶ್ರೀಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೀಠ ಪರಂಪರೆಯೊಂದಿಗೆ ಜನಪರ ಕಲ್ಯಾಣವನ್ನು ತಮ್ಮದಾಗಿಸಿಕೊಂಡು ಮಾನವ ಧರ್ಮವನ್ನು ಎತ್ತಿ ಹಿಡಿಯುವ ಕೈಂಕರ್ಯವನ್ನು ನಿರ್ವಹಿಸುತ್ತಿದ್ದಾರೆ.
ಜೊತೆಗೆ ಧರ್ಮ–ಸಂಸ್ಕೃತಿ–ಪರಂಪರೆಯನ್ನು ಆಧುನಿಕತೆಯೊಂದಿಗೆ ಬೆರೆಸಿ ಪೀಠದ ಅಸ್ಮಿತೆಯನ್ನು ಇಡೀ ನಾಡಿಗೆ ಅನಾವರಣಗೊಳಿಸುತ್ತಿರುವುದು ವಿಶೇಷ.ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ,ಪ್ರಜಾಪ್ರಭುತ್ವದ ಭವ್ಯತೆಯನ್ನು ಬೆಳಗಿಸಿ’ ಎಂಬ ಘೋಷವಾಕ್ಯವನ್ನು ಪ್ರಕಟಿಸಿ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಿದ ಪರಿ ಶ್ಲಾಘನೀಯವಾಗಿತ್ತು.
ಈ ನಾಡು ವಿಶ್ವಕಲ್ಯಾಣ ರಾಷ್ಟ್ರವಾಗಲಿ,ಸರ್ವರೂ ಸುಖ–ಸಂತೋಷದಿಂದ ಬಾಳಲಿ,ನಾಡಿನ ಕ್ಷಾಮ–ಡಾಮರಗಳು ದೂರವಾಗಿ ಕ್ಷೇಮ–ಸಂಪತ್ತುಗಳು ಸದಾ ನೆಲೆಸುವಂತಾಗಲಿ,ಭಕ್ತರು ವಾಸಿಸುವ ಊರು–ಕೇರಿಗಳು ಒಂದಾಗಿ ಧರ್ಮ–ಸಂಸ್ಕೃತಿಯ ನೆಲೆಗಳಾಗಲಿ ಎಂಬ ಪ್ರೇರಕ ಧರ್ಮಶಕ್ತಿಯನ್ನು ಈ ಜಾತ್ರಾ ಮಹೋತ್ಸವದ ಮೂಲಕ ಅನುಷ್ಠಾನಗೊಳಿಸಿದ್ದಾರೆ.
ಈ ನಾಡಿನ ರೈತರಿಗೆ ಶ್ರೀಮರುಳಸಿದ್ದೇಶ್ವರನ ಕೃಪೆ ಇದ್ದರೆ,ಮಳೆ–ಬೆಳೆ ಸಮೃದ್ಧವಾಗಿ ಬರುತ್ತದೆ ಎಂಬ ಗಾಢ ನಂಬಿಕೆ ಇರುವುದರಿಂದ ಈ ಜಾತ್ರಾ ಮಹೋತ್ಸವಕ್ಕೆ ಬರುವ ರೈತರು,ಭಕ್ತಾದಿಗಳು ತಮ್ಮ ದಾಸೋಹ ಸೇವೆಯನ್ನು ಅರ್ಪಿಸುತ್ತಾರೆ.
ಹೀಗೆ ಹತ್ತಾರು ದಿನಗಳವರೆಗೆ ಜರುಗುವ ಈ ಜಾತ್ರಾ ಮಹೋತ್ಸವ ನೂರಾರು ಚಿಂತನೆಗಳನ್ನು ಇಟ್ಟುಕೊಂಡು ಸಮಾಜೋ–ಧಾರ್ಮಿಕ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಸಾಮಾಜಿಕ ಸೌಹಾರ್ದತೆಯ ತತ್ವ–ಸಿದ್ಧಾಂತಗಳನ್ನು ಸಾರಿ ಸತ್ವಪೂರ್ಣ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen + six =
Remember me
