|ವಿಲಾಸ ಮೇಲಗಿರಿಬೆಂಗಳೂರು
ಶಿಕ್ಷಣ ಕ್ಷೇತ್ರ ಪವಿತ್ರ. ಇಲ್ಲಿ ಲಂಚಗುಳಿತನ ಇಲ್ಲ ಎಂಬ ಮಾತು ಈಗ ಸುಳ್ಳಾಗಿವೆ. ಪಠ್ಯಪುಸ್ತಕ ಮುದ್ರಣ ಸೇರಿ ಇತ್ತೀಚೆಗೆ ಒಂದಾದ ಮೇಲೊಂದು ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೋಟಿ ಕೋಟಿ ಕುಳಗಳು ಬೆತ್ತಲಾಗುತ್ತಿವೆ. ಇದು ಶಿಕ್ಷಣ ತಜ್ಞರನ್ನು ಕಳವಳಕ್ಕೀಡು ಮಾಡಿದೆ. ಅಷ್ಟೇ ಅಲ್ಲ, ಇಲಾಖೆ ಉನ್ನತಾಧಿಕಾರಿಗಳಿಗೂ ತಲೆನೋವಾಗಿದೆ.
ತಳ ಹಂತದಲ್ಲಿ ನಡೆಯುತ್ತಿದೆ ಎನ್ನಲಾಗುವ ಭ್ರಷ್ಟಾಚಾರಕ್ಕೆ ಕಡಿವಾಣ ಕಷ್ಟವಾಗಿದೆ. ಮೇಲಿನ ಹಂತದಲ್ಲಿ ಮಾಡುವ ಕಾನೂನು ಮತ್ತು ನಿಯಮಗಳು, ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ, ಜ್ಞಾಪನೆಗಳು ‘ಕಾಸು ಕಮಾಯಿ’ಗೆ ರಹದಾರಿ ಮಾಡಿಕೊಡುತ್ತಿವೆ ಎಂಬುದು ಶಿಕ್ಷಕರ ಅಳಲು. ರಾಜ್ಯಮಟ್ಟದ ವರ್ಗಾವಣಾ ಕೌನ್ಸಿಲಿಂಗ್​ನ ಚಲನ-ವಲನ ಆದೇಶದಿಂದ ಹಿಡಿದು ಸಣ್ಣಪುಟ್ಟ ದ್ದಕ್ಕೆಲ್ಲ ಅಧಿಕಾರಿ/ ಸಿಬ್ಬಂದಿ ಕೈಬಿಸಿ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿರುವುದು ಶೈಕ್ಷಣಿಕ ರಂಗದಲ್ಲಿ ಕಪ್ಪುಚುಕ್ಕೆಗೆ ಕಾರಣವಾಗುತ್ತಿದೆ. ಟೈಮ್ ಬಾಂಡ್, ವೈದ್ಯಕೀಯ ವೆಚ್ಚ ಮರುಪಾವತಿ, ಶಿಶುಪಾಲನಾ ರಜೆ ಮಂಜೂರು, ವರ್ಗಾವಣೆ ಚಲನ-ವಲನ ಆದೇಶ, ಡೆಪ್ಯೂಟೇಷನ್, ವೈಯಕ್ತಿಕ ಬಾಕಿ ವೇತನ ಬಿಡುಗಡೆ, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ, ಖಾಸಗಿ ಶಾಲೆಗಳ ವಾರ್ಷಿಕ ಬಜೆಟ್…ಹೀಗೆ ಎಲ್ಲದ್ದಕ್ಕೂ ಲಂಚಾವತಾರ ತಾಂಡವವಾಡುತ್ತಿದೆ. ಕೆಲ ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ಕಚೇರಿಯ ಕೆಳ ಹಂತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕೆಲವು ಕಡೆ ಬಿಇಒ/ಡಿಡಿಪಿಐಗಳು ದಕ್ಷ, ಪ್ರಾಮಾಣಿಕರಾಗಿದ್ದರೂ ಅಲ್ಲಿನ ಅಧಿಕಾರೇತರ ಸಿಬ್ಬಂದಿ ನಿಯಂತ್ರಣ ಕಷ್ಟವಾಗಿದೆ. ಅದರಲ್ಲೂ ಮಹಿಳಾ ಶಿಕ್ಷಕರೇ ಹೆಚ್ಚು ಸುಲಿಗೆಗೆ ಒಳಗಾಗುತ್ತಿದ್ದಾರೆ. ಕಚೇರಿಗೆ ಪದೇಪದೆ ಅಲೆದಾಡ ಲಾರದೆ ಕೇಳಿದಷ್ಟು ಹಣ ಕೊಟ್ಟು ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಸಿಕೊಳ್ಳುವುದು ಇವರಿಗೆ ಅನಿವಾರ್ಯ ಎನಿಸಿದೆ.
ಶಿಶುಪಾಲನೆ ರಜೆಗೆ ಲಂಚದ ಶಿಕ್ಷೆ:ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಶಿಶುಪಾಲನಾ ರಜೆಗೂ ಶಿಕ್ಷಕಿಯರು ಅಧಿಕಾರಿಗಳ ದುಂಬಾಲು ಬೀಳುತ್ತಿದ್ದಾರೆ. ಅದರಲ್ಲೂ ಮಕ್ಕಳ ವಯಸ್ಸು 18 ಹತ್ತಿರದಲ್ಲಿರು ವವರು ವಶೀಲಿ ಬಾಜಿ ಮಾಡಿ ರಜೆ ತೆಗೆದುಕೊಳ್ಳುತ್ತಿದ್ದಾರೆ. ಶಿಶುಪಾಲನಾ ರಜೆ ಕೊಡುವಾಗ ಪರ್ಯಾಯ ವ್ಯವಸ್ಥೆ ಮಾಡಿ ಕೊಡಬೇಕಾಗುತ್ತದೆ. ಅದರೆ, ಅದು ದುರ್ಗಮ ಮತ್ತು ಕುಗ್ರಾಮವಾದರಂತೂ ಶಿಕ್ಷಕರ ಸುಲಿಗೆಯಾಗುತ್ತದೆ ಎಂಬುದು ಶಿಕ್ಷಕರ ನೋವಿನ ನುಡಿ.
ಬಾಡಿಗೆ ಕಟ್ಟಡದಲ್ಲೂ ಗೋಲ್​ಮಾಲ್​:ಅನೇಕ ಕಡೆ ಶಾಲೆಗಳಿಗೆ ಕಟ್ಟಡಗಳಿಲ್ಲ. ಅಂತಹ ಕಡೆ ಕಟ್ಟಡಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲಾಗುತ್ತದೆ. ಬಾಡಿಗೆ ಹಣ ಪಾವತಿ ಮಾಡುವಾಗ ಅನೇಕ ಅಧಿಕಾರಿಗಳು ಕಟ್ಟಡ ಮಾಲೀಕರಿಂದ ‘ಮಾಮೂಲು’ ಪಡೆಯುತ್ತಾರೆ. ಅನೇಕ ಕಡೆ ಕಚೇರಿ ಸಬಲೀಕರಣದ ನೆಪದಲ್ಲಿ ಶಿಕ್ಷಕರಿಂದ ವಂತಿಗೆ ವಸೂಲು ಮಾಡಲಾಗುತ್ತದೆ. ಶಿಕ್ಷಕರು ಮೇಲಧಿಕಾರಿಗಳ ಮುಲಾಜಿಗೆ ಬಿದ್ದು ಕೇಳಿದಷ್ಟು ವಂತಿಗೆ ಕೊಡುತ್ತಾರೆ. ಈ ಹಣದಲ್ಲಿ ಪೀಠೋಪಕರಣ, ಟಿವಿ… ಮತ್ತಿತರ ವಸ್ತು ಖರೀದಿ ಹೆಸರಿನಲ್ಲಿ ಗೋಲ್‍ಮಾಲ್ ನಡೆಯುತ್ತದೆ ಎಂಬ ಆರೋಪಗಳೂ ಇವೆ.
ಒತ್ತಡಕ್ಕೂ ಮಣಿಯಬೇಕು:ಅನೇಕ ಕಡೆ ನಿಯೋಜನೆ ಮೇಲೆ ಶಿಕ್ಷಕರನ್ನು ತೆಗೆದುಕೊಳ್ಳಲು, ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಸಕರು, ಎಸ್​ಡಿಎಂಸಿ ಅಧ್ಯಕ್ಷರು, ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ. ಇದನ್ನೇ ಅಧಿಕಾರಿ/ಸಿಬ್ಬಂದಿ ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬ ದೂರುಗಳಿವೆ.
ಶಿಕ್ಷಕರ ಸಂಘಟನೆಗಳೂ ಸೈ:ಶಿಕ್ಷಕರ ಸಂಘಟನೆಗಳು ಬಲಿಷ್ಠವಾಗಿರುವೆಡೆ ಲಂಚಗುಳಿತನ ಕಡಿಮೆ ಇದೆ. ಇನ್ನು, ಕೆಲವೆಡೆ ಶಿಕ್ಷಕರ ಸಂಘಟನೆಗಳೇ ಅಧಿಕಾರಿ/ಸಿಬ್ಬಂದಿ ಜತೆ ಕೈಜೋಡಿಸಿ ಶಿಕ್ಷಕರನ್ನು ಸುಲಿಗೆ ಮಾಡುತ್ತಿದ್ದಾರೆ. ಮತ್ತೆ ಕೆಲವೆಡೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳೇ ಮಧ್ಯವರ್ತಿಗಳಾಗಿ ಒಳಗೈ ವ್ಯವಹಾರ ಕುದುರಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ.
ಕಚೇರಿ ಹೊರಗಡೆಯೇ ವ್ಯವಹಾರ:ಬಹುತೇಕ ಬಿಇಒ/ಡಿಡಿಪಿಐ ಕಚೇರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೀಗಾಗಿ ಲಂಚ ಪ್ರಕರಣಗಳು ಕಚೇರಿಯಿಂದ ಹೊರಗಡೆಯೇ ನಡೆಯುತ್ತವೆ. ಕೆಲವು ಶಿಕ್ಷಕರು ಪಾಠ ಮಾಡದೇ ಕಚೇರಿಗಳಲ್ಲಿ ಮಧ್ಯವರ್ತಿ ಗಳಾಗಿ ಕೆಲಸ ಮಾಡುತ್ತಾರೆ ಎಂಬ ದೂರುಗಳೂ ಉಂಟು.
ಶುಲ್ಕ ನಿಗದಿಗೆ ಪೈಪೋಟಿ:ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾತಿ ಸಂದರ್ಭದಲ್ಲಿ ಶುಲ್ಕ ನಿಗದಿ ಮಾಡುವ ಅಧಿಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇದೆ. ಹೆಚ್ಚು ಶುಲ್ಕ ನಿಗದಿಪಡಿಸಿಕೊಳ್ಳಲು ಖಾಸಗಿ ಶಾಲೆಗಳು ಪೈಪೋಟಿಗಿಳಿಯುತ್ತವೆ. ಈ ಅವಕಾಶವನ್ನೇ ಅನೇಕ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಾರೆ.
ಬಿಇಒ ಕಚೇರಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೊರ ಬರುತ್ತಿರುವುದು, ಎಸಿಬಿ ಬಲೆಗೆ ಬೀಳುತ್ತಿರುವುದು ಖೇದಕರ ಸಂಗತಿ. ಉನ್ನತಾಧಿಕಾರಿಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಇಡೀ ಶಿಕ್ಷಣ ವ್ಯವಸ್ಥೆ ಕುಸಿದು ಬೀಳುವ ಅಪಾಯವಿದೆ. ಲಂಚ ಪಡೆಯುವಷ್ಟೇ ಕೊಡುವುದೂ ಅಪರಾಧ. ಶಿಕ್ಷಕರು ಇದನ್ನು ಮನಗಾಣಬೇಕು.
|ಅಶೋಕ್ ಸಜ್ಜನಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
