| ಶ್ರೀಕಾಂತ್ ಶೇಷಾದ್ರಿ ಬೆಂಗಳೂರುವಿವಾಹ ನೋಂದಣಿ ಮಾಡುವ ಜವಾಬ್ದಾರಿಯನ್ನು ಪಂಚಾಯಿತಿ ಹಂತಕ್ಕೆ ವಿಕೇಂದ್ರೀಕರಿಸುವ ಚರ್ಚೆ ಸರ್ಕಾರದ ಹಂತದಲ್ಲಿ ಪುನಃ ಶುರುವಾಗಿದೆ. ಶೀಘ್ರವೇ ಈ ಕುರಿತಂತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ತೀರ್ವನಿಸಿದೆ.
ನಿವೃತ್ತ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ತನ್ನ ಎರಡನೇ ಹಾಗೂ ಮೂರನೇ ವರದಿಯಲ್ಲಿ ವಿವಾಹ ನೋಂದಣಿ ವಿಚಾರವಾಗಿ ಶಿಫಾರಸು ಮಾಡಿತ್ತು. ವರದಿ ಸ್ವೀಕರಿಸಿದ್ದ ಹಿಂದಿನ ಸರ್ಕಾರ ಆದೇಶ ಮಾಡಿತ್ತು. ಆದರೆ, ಅನುಷ್ಠಾನಕ್ಕೆ ಮುತುವರ್ಜಿ ತೋರಿಸಿರಲಿಲ್ಲ. ಇದೀಗ ಆಯೋಗವು ಈಗಿನ ಸರ್ಕಾರವನ್ನು ಈ ವಿಷಯದಲ್ಲಿ ಜಾಗೃತಗೊಳಿಸಿದ್ದು, ಸರ್ಕಾರ ಕೂಡ ಆಸಕ್ತಿ ತೋರಿಸಿದೆ.
ಮುಸ್ಲಿಂ ಹಾಗೂ ಕ್ರೖೆಸ್ತ ಸಮುದಾಯಗಳಲ್ಲಿ ವಿವಾಹ ನೋಂದಣಿ ಆಗಿಬಿಡುತ್ತವೆ. ಆದರೆ, ಹಿಂದುಗಳ ವಿವಾಹ ನೋಂದಣಿ ಶೇ.80 ಆಗುವುದೇ ಇಲ್ಲ. ಗ್ರಾಮೀಣ ಭಾಗದಲ್ಲಂತೂ ನೋಂದಣಿ ಮಾತೇ ಇಲ್ಲ. ಹೀಗಾಗಿ ಗ್ರಾಮ ಪಂಚಾಯತ್​ಗೆ ನೋಂದಣಿ ಅಧಿಕಾರ ನೀಡಿದರೆ ವ್ಯವಸ್ಥೆ ಸರಿಯಾಗಲಿದೆ ಎಂಬ ಕಾರಣಕ್ಕೆ ಆಯೋಗ ಶಿಫಾರಸು ಮಾಡಿತ್ತು.
‘ಆಡಳಿತ ಸುಧಾರಣೆ ಆಯೋಗವು ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಶಿಫಾರಸು ನೀಡಿದ್ದು, ಅದನ್ನು ಪರಿಶೀಲಿಸಲಾಗುತ್ತದೆ. ಯಾವುದನ್ನು ತಕ್ಷಣಕ್ಕೆ ಅನುಷ್ಠಾನ ಮಾಡಬಹುದು, ಯಾವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ, ಮತ್ತೆ ದೀರ್ಘಾವಧಿಯಾಗಿ ಕಾಲಾವಕಾಶ ಬೇಕಾಗುವುದನ್ನು ಪ್ರತ್ಯೇಕಿಸಿ ಜಾರಿ ಮಾಡಲು ಬಯಸಲಾಗಿದೆ. ಶಿಫಾರಸುಗಳ ಅನುಷ್ಠಾನದ ಸಾಧಕ ಬಾಧಕದ ಬಗ್ಗೆ ವರದಿ ಕೊಡಲು ಸಮಿತಿ ರಚಿಸಿ ವರದಿ ಪಡೆದುಕೊಳ್ಳಲಾಗುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.
ಪ್ರಮಾಣಪತ್ರದ ಮಹತ್ವ:ಮದುವೆ ಪ್ರಮಾಣಪತ್ರ ಮದುವೆಯಾಗಿರುವ ಬಗ್ಗೆ ಸಾಕ್ಷ್ಯಾಧಾರ ಮೌಲ್ಯವನ್ನು ಹೊಂದಿದ ಸರ್ಕಾರಿ ದಾಖಲೆಯಾಗಿರುತ್ತದೆ. ಈ ಪ್ರಮಾಣಪತ್ರವು ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿದೇಶಗಳಿಗೆ ತೆರಳುವ ಸಂದರ್ಭದಲ್ಲಿ ವೀಸಾ ಪಡೆಯಲು ಮದುವೆ ನೋಂದಣಿ ಪ್ರಮಾಣಪತ್ರ ಸಹಾಯಕವಾಗುತ್ತದೆ. ಬ್ಯಾಂಕ್ ಠೇವಣಿ ಅಥವಾ ವಿಮಾ ಪಾಲಿಸಿಯಲ್ಲಿ ನಾಮ ನಿರ್ದೇಶನ ಮಾಡಿರದೆ ಪತಿ ಅಥವಾ ಪತ್ನಿ ಮರಣ ಹೊಂದಿದರೆ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯ ಹಣ ಪಡೆಯಲು ಮದುವೆ ನೋಂದಣಿ ಪ್ರಮಾಣಪತ್ರ ಸಹಾಯಕವಾಗಲಿದೆ.
ನೋಂದಣಿ ಪ್ರಕ್ರಿಯೆ:ಹಿಂದು ವಿವಾಹ ಕಾಯ್ದೆ, 1955, ವಿಶೇಷ ವಿವಾಹ ಕಾಯ್ದೆ, 1954, ಪಾರ್ಸಿ ವಿವಾಹ ಮತ್ತು ವಿಚ್ಚೇದನ ಕಾಯ್ದೆ, 1936ರಡಿ ಸಬ್-ರಿಜಿಸ್ಟಾರ್ ಮತ್ತು ಜಿಲ್ಲಾ ರಿಜಿಸ್ಟಾರ್ ಕಚೇರಿಗಳಲ್ಲಿ ಮದುವೆಯನ್ನು ನೊಂದಾಯಿಸಲಾಗುತ್ತದೆ. ಉಪ ನೋಂದಣಾಧಿಕಾರಿಗಳೇ ಮದುವೆ ಅಧಿಕಾರಿಯಾಗಿರುತ್ತಾರೆ.
ಸರ್ಕಾರ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಕರ್ನಾಟಕ ವಿವಾಹ ಕಾಯ್ದೆ 1976ರ ಸೆಕ್ಷನ್1ರ ಉಪ ಕಲಂ 4ರಡಿ ಪಿಡಿಒಗಳನ್ನೂ ವಿವಾಹ ನೋಂದಣಿ ಪ್ರಾಧಿಕಾರಿಯನ್ನಾಗಿ ಪರಿಗಣಿಸಿ ಆದೇಶ ಹೊರಡಿಸಿತು. ಆದರೆ, ಅಗತ್ಯ ತಂತ್ರಜ್ಞಾನ ರೂಪಿಸುವುದು ಮತ್ತು ಪಿಡಿಒಗಳಿಗೆ ತರಬೇತಿ ನೀಡುವ ಪ್ರಯತ್ನ ನಡೆಸಲಿಲ್ಲ.
ಹೆಚ್ಚಿನ ಹೊಣೆ:ಗ್ರಾಮ ಪಂಚಾಯತ್​ಗಳನ್ನು ಹಿಂದು ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಪ್ರಾಧಿಕಾರಗಳನ್ನಾಗಿ ಅಧಿಸೂಚಿಸಬೇಕು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳ ಅರ್ಜಿ ಪಡೆದು ಶಿಫಾರಸು ಮಾಡುವ ಅಧಿಕಾರ ನೀಡಬಹುದು ಎಂದು ಆಯೋಗ ಶಿಫಾರಸು ಮಾಡಿತ್ತು. ಈ ಹಿಂದಿನ ಸರ್ಕಾರ ಪಿಡಿಒಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿತು. ಆದರೆ ಅನುಷ್ಠಾನ ಸಾಧ್ಯವಿಲ್ಲ. ಈ ಅಡೆತಡೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ.
ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಎಚ್​ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುತ್ತಿವೆ. ಗ್ರಾಮ ಪಂಚಾಯತ್​ಗಳ ಬದಲಾಗಿ ಆ ಪ್ರಾಧಿಕಾರಗಳು ತೆರಿಗೆ ಸಂಗ್ರಹ ಮಾಡುತ್ತಿದ್ದು ಇದರಿಂದ ಗ್ರಾ.ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತವಾಗುತ್ತಿವೆ. ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾ.ಪಂಗಳು ಮಾಡುವಂತಾಗಬೇಕು ಎಂಬ ನಿಟ್ಟಿನಲ್ಲಿಯೂ ಚಿಂತನ ಮಂಥನ ನಡೆದಿದ್ದು, ಕೆಲವು ತಿಂಗಳ ಬಳಿಕ ಇದಕ್ಕೊಂದು ಸ್ಪಷ್ಟ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ಇದೆ.
ಆಡಳಿತ ಸುಧಾರಣಾ ಆಯೋಗ ನೀಡಿರುವ ವರದಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ. ಅನೇಕ ಸುಧಾರಣೆಗೆ ಆಯೋಗ ಶಿಫಾರಸು ಮಾಡಿದೆ. ಹಂತಹಂತವಾಗಿ ಅನುಷ್ಠಾನ ಮಾಡುತ್ತೇವೆ.
| ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಬಿಬಿಎಂಪಿಯಲ್ಲಿ ಅನಧಿಕೃತ, ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡುಪಟ್ಟು ದಂಡವನ್ನು ಸಂಗ್ರಹಿಸುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಗ್ರಾಮ ಪಂಚಾಯತ್​ಗಳು ಅಕ್ರಮ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡು ಪಟ್ಟು ದಂಡವನ್ನು ವಿಧಿಸಲು ಅನುಕೂಲವಾಗುವಂತೆ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993, ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಬಜೆಟ್ ಮತ್ತು ಲೆಕ್ಕ ಪತ್ರ ನಿಯಮಗಳು) 2006 ಗೆ ತಿದ್ದುಪಡಿ ಮಾಡುವಂತೆ ಆಡಳಿತ ಸುಧಾರಣೆ ಆಯೋಗ ಶಿಫಾರಸು ಮಾಡಿದ್ದು, ಸರ್ಕಾರ ಪರಿಶೀಲನೆ ನಡೆಸಿದೆ.
ಅಗತ್ಯ ಸೇವೆಗಳನ್ನು ಜನರಿಗೆ ಸಲೀಸಾಗಿ ದೊರಕಿಸಬೇಕೆಂಬ ನಿಟ್ಟಿನಲ್ಲಿ ಕಾಲಕಾಲಕ್ಕೆ ಸರ್ಕಾರಗಳಿಂದ ಪ್ರಯತ್ನ ನಡೆಯುತ್ತಿದೆ. ಇದೀಗ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಆಧಾರ್ ನವೀಕರಣ, ಗ್ಯಾಸ್ ಬುಕಿಂಗ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಬಸ್ ಮತ್ತು ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಇತರ ಬಿ2ಸಿ ಸೇವೆಗಳಂತಹ ಸೇವೆಗಳನ್ನು ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ನೀಡಬಹುದೆಂಬ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಆಡಳಿತ ಸುಧಾರಣೆ ಆಯೋಗದ ವರದಿಯ ಮೂಲಕ ಶಿಫಾರಸಾದ ಅಂಶವನ್ನು ಜಾರಿ ಮಾಡುವ ಕುರಿತು ಸಾಧಕ ಬಾಧಕಗಳ ಬಗ್ಗೆ ವರದಿ ಪಡೆದುಕೊಳ್ಳುವ ಪ್ರಯತ್ನದಲ್ಲಿದೆ. ಈಗಾಗಲೆ ಬಾಪೂಜಿ ಸೇವಾ ಕೇಂದ್ರದಲ್ಲಿ ಆಸ್ತಿ ತೆರಿಗೆ ಪಾವತಿ, ಕಟ್ಟಡ ಲೈಸೆನ್ಸ್, ಹೊಸ ನೀರು ಸಂಪರ್ಕ, ವ್ಯಾಪಾರ ಪರವಾನಗಿ, ವಿವಿಧ ನಿರಾಕ್ಷೇಪಣಾ ಪತ್ರಗಳು, ನರೇಗಾ, ಜನನ- ಮರಣ ಪ್ರಮಾಣಪತ್ರ ಪ್ರತಿ ಪಡೆಯುವ ಅವಕಾಶವಿದೆ. ಅದರಲ್ಲಿ ಬಸ್ ಟಿಕೆಟ್, ರೈಲ್ವೆ ಟಿಕೆಟ್ ಸಿಗುವಂತೆ ಮಾಡಿದರೆ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
