|ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಶ್ರೀರಾಮನ ನಾಮಮಹಾತ್ಮೆ ವಿಶಿಷ್ಟವಾದುದು. ಶ್ರೀರಾಮ ರಹಸ್ಯದ ಕೊನೆಯ ಪಾದದಲ್ಲಿ ‘ರಾಮ’ ಎಂಬ ಎರಡಕ್ಷರದ ಅರ್ಥ ಹೀಗಿದೆ- ನಾರಾಯಣಾಷ್ಟಕ್ಷರದಲ್ಲಿದ್ದ ‘ರಾ’, ಶಿವಪಂಚಾಕ್ಷರಿಯಲ್ಲಿದ್ದ ‘ಮ’ ಸೇರಿ ‘ರಾಮ’ ಎಂಬ ನಾಮವಾಗಿದೆ.
ಬಹಳ ಜನರು ನಾಮಕ್ಕೂ ರೂಪಕ್ಕೂ ಏನು ವ್ಯತ್ಯಾಸ ಎಂದು ಕೇಳುತ್ತಾರೆ. ಅದಕ್ಕೆ ಉತ್ತರ ರೂಪ ಕಣ್ಣಿಗೆ ಕಾಣುತ್ತದೆ. ಮನಸ್ಸು ಅದರಲ್ಲಿ ಲೀನವಾಗಿ ಬಿಡುವುದಿಲ್ಲ, ಬದಲಾಗಿ ತರ್ಕಕ್ಕೆ ನಿಲ್ಲುತ್ತದೆ. ವೇದಗಳ ಅರಿವು ಕೂಡ ಹಾಗೆ ಜ್ಞಾನದ ಮೂಲಕ ತರ್ಕಕ್ಕೆ ನಿಲ್ಲುತ್ತವೆ. ಆದರೆ ನಾಮ ಹಾಗಲ್ಲ, ನೇರವಾಗಿ ಮನಸ್ಸಿನೊಳಗೆ ಹೋಗುತ್ತದೆ. ಜತೆಗೆ ಸಕಲರಿಗೂ ನಿಲುಕುತ್ತದೆ. ಇದರ ಉಪದೇಶವನ್ನು ಸಾಧಕರಿಂದ ಪಡೆಯಬೇಕು. ನಾಮದಲ್ಲಿಯೇ ನಿಲ್ಲುವುದು ಸಾಧ್ಯವಾದರೆ ಚಿತ್ತ ನಿರ್ಮಲವಾಗುತ್ತಾ ಬರುತ್ತದೆ. ಇದನ್ನು ಎಷ್ಟು ಸಲ ಜಪಿಸಬೇಕು, ಹೇಗೆ ಮಂಗಳವನ್ನು ಮಾಡಬೇಕು ಎಂಬ ಕ್ರಮವಿಲ್ಲ. ಪ್ರತಿಯೊಬ್ಬರು ಸಾಧ್ಯವಾದಷ್ಟು ರಾಮನಾಮವನ್ನು ಜಪಿಸಬೇಕು. ಅದು ಕಂಠದಲ್ಲಿ ನಿಲ್ಲದೆ ಮನಸ್ಸಿನೊಳಗೆ ಇಳಿಯಬೇಕು. ದೇಹದ ಕಣಕಣಗಳಲ್ಲೂ ಮಿಡಿಯಬೇಕು. ಆಗ ನಾಮಸಂಕೀರ್ತನೆ ಸಾರ್ಥಕವಾಗುತ್ತದೆ. ಇದಕ್ಕೆ ಸರಿಯಾದ ವ್ಯಕ್ತಿ ಆಂಜನೇಯ. ಈತನಿಗೆ ರಾಮನಾಮ ಬಿಟ್ಟು ಏನೂ ತಿಳಿದಿರಲಿಲ್ಲ. ಈತ ನಿರಂತರ ರಾಮ ಜಪದಲ್ಲಿಯೇ ಜೀವನ ಕಳೆದ. ರೂಪ ಮೊದಲೋ ನಾಮವೇ ಮೊದಲೋ ಎಂಬ ತರ್ಕವನ್ನು ಮಾಡುವವರಿದ್ದಾರೆ. ನಮ್ಮ ಮಟ್ಟಿಗೆ ನಾಮವೇ ಮೊದಲು. ಇಡೀ ಜಗತ್ತು ಹುಟ್ಟಿದ್ದು ನಾಮದಿಂದ. ಅದು ‘ಓಂ’ಕಾರ. ರಾಮನಾಮವೂ ಅದರಿಂದಲೇ ರೂಪ ತಳೆದಿದೆ. ರೂಪಕ್ಕೆ ಭೇದವಿಲ್ಲ. ನಾಮಕ್ಕೆ ಬೇಧವಿಲ್ಲ. ಅದು ಎಲ್ಲ ಧರ್ಮದವರಿಗೂ ಎಲ್ಲ ಭಾಗದವರಿಗೂ ಲಭಿಸುವ ತವನಿಧಿ. ನಾಮಕ್ಕೆ ಋಷಿ ಛಂದಸ್ಸನ್ನು ಏಕೆ ಹೇಳುವುದಿಲ್ಲ ಎಂದು ಕೆಲವರು ಕೇಳುತ್ತಾರೆ, ನಾಮವು ಮಾನವ ರೂಪಿತ ಅಲ್ಲ, ತರ್ಕಕ್ಕೆ ನಿಲುಕುವಂತಹದಲ್ಲ, ಅದನ್ನು ಅನುಭವದಿಂದಲೇ ಕಂಡುಕೊಳ್ಳಬೇಕಾದದ್ದು.
‘ರಾಮು – ಕ್ರೀಡಾಯಾಂ’ ಎಂಬ ಧಾತುವಿನಿಂದ ‘ರಾಮ’ ಶಬ್ದ ನಿಷ್ಪನ್ನವಾಗಿದೆ. ‘ರಮಂತೇ ಯೋಗಿನಃ ಅಸ್ಮಿನ್ ಇತಿ ರಾಮ’ ಎಂದರೆ ಯೋಗಿಗಳು ರಾಮನಾಮ ಧ್ಯಾನದಲ್ಲಿ ಮಗ್ನರಾಗಿ ಸಮಾಧಿಸ್ಥಿತರಾಗಿ ಕ್ರೀಡಿಸುತ್ತಾರೆ ಎಂದು ‘ರಾಮೋ ರಮಯತಾಂ ವರಃ’ ಎಂಬಂತೆ ಆನಂದ ನೀಡುವ ನಾಮಗಳಲ್ಲಿ ರಾಮನಾಮವೇ ಶ್ರೇಷ್ಠವಾಗಿದೆ.
ಒಮ್ಮೆ ಪಾರ್ವತಿ ದೇವಿಯು ಶ್ರೀರಾಮನಾಮದ ಸ್ವಾರಸ್ಯವನ್ನು ತಿಳಿಸಲು ಶಿವನಲ್ಲಿ ಈ ರೀತಿ ಕೇಳುತ್ತಾಳೆ. ‘ಶೇನೋ ಪಾಯೇನ ಲಘನಾ’, ‘ವಿಷ್ಣೋರ್ನಾಮ ಸಹಸ್ರಕಮ್ ಎಂದು ‘ಪಠತ್ಯೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಚಾಮ್ಯಹಂ ಪ್ರಭೋ’ ಎಂದು ಹೇಳುತ್ತಾಳೆ. ಅದಕ್ಕೆ ಶಿವನು ‘ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ’ ಎಂದು ಹೇಳುತ್ತಾನೆ. ಅಂದರೆ ಶ್ರೀರಾಮ ರಾಮ ರಾಮ ಎಂದು ಜಪಿಸಿದರೂ ಶ್ರೀವಿಷ್ಣು ಸಹಸ್ರನಾಮ ಪಠನೆ ಮಾಡಿದ ಫಲ ದೊರೆಯುತ್ತದೆ ಎಂದು ಇದರ ಒಳ ಅರ್ಥವಾಗಿದೆ.
ಶ್ರೀರಾಮನಾಮವೇ ಜಗತ್ ಪ್ರಥಮ ಮಂಗಲವೆಂಬುದು ಕಾಳಿದಾಸನ ಆಶಯವಾಗಿದೆ. ಶ್ರೀಮದ್ ವಾಲ್ಮೀಕಿ ಮುನಿಗಳು ಶ್ರೀರಾಮನ ಆಯನವನ್ನು ಅನುಸರಿಸಿ ಬರೆದ ರಾಮಾಯಣ ಗ್ರಂಥವು ಜಗತ್ತಿನ ಪ್ರಥಮ ಕಾವ್ಯವಾಗಿ ಪ್ರಸಿದ್ಧಿಯಾಗಿದೆ ಮತ್ತು ಶ್ರೀರಾಮನಾಮವೇ ಆದಿ ಕಾವ್ಯಕ್ಕೆ ನಾಂದಿಯಾಯಿತು. ಶ್ರೀ ಶಂಕರಾಚಾರ್ಯರು ಶ್ರೀರಾಮನ ಸ್ತೋತ್ರಗಳಲ್ಲಿ ಶ್ರೀರಾಮನಾಮದ ಮಹಿಮೆಯನ್ನು ಬಹುವಿಧವಾಗಿ ಹೊಗಳಿದ್ದಾರೆ. ಕಾಶಿಯಲ್ಲಿರುವುದು ಅಂತ್ಯಕಾಲದಲ್ಲಿ ಚಿಂತೆಗೊಳಗಾಗಿದ್ದಾಗ ಶಿವನು ಯಾವ ರಾಮ ರಾಮ ರಾಮ ಎಂದು ಬೋಧಿಸುವ ಆ ಏಕಮಾತ್ರ ಶ್ರೇಷ್ಠತಾರಕ ಬ್ರಹ್ಮರೂಪವನ್ನು ನಾನು ಭಜಿಸುತ್ತೇನೆ. ಮಾನವನು ಅವಸಾನದ ಸಮಯದಲ್ಲಿ ಕಾಶಿಯಲ್ಲಿ ಶಿವನಿಂದ ರಾಮನಾಮ ಉಪದೇಶವನ್ನು ಹೊಂದಿದರೆ ಅವನು ಮುಕ್ತನಾಗುತ್ತಾನೆಂದು ಹೇಳಿದ್ದಾರೆ.
ಅನುಕರಣೀಯ ವ್ಯಕ್ತಿ:ಶ್ರೀರಾಮ ಮರ್ಯಾದಾ ಪುರುಷೋತ್ತಮ. ಅವನ ಜೀವನ ಎಂದರೆ ಸದ್ಗುಣಗಳ ಮೊತ್ತ. ಅವನು ಅಯೋಧ್ಯಾರಾಮ, ಕೋದಂಡರಾಮ, ದಶರಥರಾಮ, ರಾಜಾರಾಮ ಎಲ್ಲವೂ ಅವನೇ. ಅವನ ಆಡಳಿತ ಹೇಗಿರಬೇಕು ಎಂದು ತೋರಿಸಿಕೊಟ್ಟು ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಮಾದರಿಯಾಗಿದೆ. ಹೀಗಾಗಿ, ಅವನು ಅಂದು ಮಾತ್ರವಲ್ಲ ಇಂದೂ ಮುಂದೆಯೂ ಅನುಕರಣೀಯ ವ್ಯಕ್ತಿ ಶ್ರೀರಾಮ. ಇಂಥ ವ್ಯಕ್ತಿ ಶ್ರೀರಾಮನ ಕುರಿತು ಹೇಳುವುದೆಂದರೆ ಸುಲಭದ ಮಾತಲ್ಲ. ಅರ್ಥ ಮಾಡಿಕೊಂಡಷ್ಟೂ ಬಹಳ ಇದೆ. ‘ರಾಮ’ ಎಂದರೆ ರಾಷ್ಟ್ರ, ಬದುಕು, ಆದರ್ಶ ಅಪ್ಪಟ ಮನುಷ್ಯ. ಮುಖ್ಯವಾಗಿ ಮನುಷ್ಯನೊಬ್ಬ ತಾನು ಬದುಕುವ ರೀತಿಯಿಂದಲೇ ದೇವರಾಗಲು ಸಾಧ್ಯ ಎಂದು ತೋರಿಸಿಕೊಟ್ಟವನು.
ರಾಮರಾಜ್ಯ: ಶ್ರೀರಾಮನೆಂದರೆ ರಾಷ್ಟ್ರ, ಅವನ ಆಡಳಿತ ಕಲ್ಪನೆಯೇ ನಾವಿಂದು ಕನಸು ಕಾಣಲೂ ಸಾಧ್ಯವಿರದ ರಾಮರಾಜ್ಯ. ರಾಮನೆಂದರೆ ವ್ಯವಸ್ಥೆ. ಒಂದು ಸಮಾಜದ ಬದುಕು ಹೇಗಿರಬೇಕು, ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆಯನ್ನು ಆಡಳಿತವೊಂದು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಮಾದರಿ. ರಾಮನೆಂದರೆ ಬದುಕು, ಭಾವನೆ ಹಾಗೂ ಕರ್ತವ್ಯದ ಸಂಘರ್ಷಗಳ ಮತ್ತು ಸದಾ ಪ್ರಕಾಶಿಸುವ ಬೆಳಕು. ಯಾವುದೇ ಸಂದರ್ಭದಲ್ಲಿ ಪ್ರಜೆಗಳ ಹಿತವನ್ನು ಬಯಸುವ ಆಡಳಿತಗಾರ ಹಾಗೂ ಹೀಗಿರಬೇಕು ಎನ್ನುವುದಕ್ಕೆ ಆತನೇ ಉದಾಹರಣೆ.
ಶ್ರೀರಾಮ – ಲಕ್ಷ್ಮಣ:ರಾಮನಾಮವನ್ನು ಹೇಗಿರಬೇಕು ಎನ್ನುವುದಕ್ಕೆ ಕಾಲನ ಪ್ರಕರಣದಲ್ಲಿ ರಾಮ ತಳೆದ ಕಠಿಣ ನಿರ್ಧಾರವನ್ನು ನಾವು ಕಾಣಬಹುದು. ಲಕ್ಷ್ಮಣ ಎಂದರೆ ಶ್ರೀರಾಮನಿಗೆ ಸಹೋದರ ಮಾತ್ರವಲ್ಲ, ನೆರಳು, ಶ್ರೀರಾಮನ ಬದುಕಿನ ತುಂಬಾ ಲಕ್ಷ್ಮಣ ಇದ್ದಾನೆ. ರಾಮನಿಗೆ ಆತ ಎಂದಿಗೂ ಅಗೌರವ ತೋರಲಿಲ್ಲ. ಈಗಲೂ ಸಹೋದರ ಸಂಬಂಧಕ್ಕೆ ಇವರೇ ಉದಾಹರಣೆ. ಈ ಕಾರಣಕ್ಕೆ ಹೇಳುವುದು ಅಣ್ಣ ತಮ್ಮ ಎಂದರೆ ರಾಮ-ಲಕ್ಷ್ಮಣರ ಹಾಗೆ ಇರಬೇಕು ಎಂದು.
ಶ್ರೀ ವಾಲ್ಮೀಕಿ ಮಹರ್ಷಿಗಳು 24 ಸಾವಿರ ಶ್ಲೋಕಗಳಿಂದ ಕೂಡಿದ ‘ರಾಮಾಯಣ’ವನ್ನು ರಚಿಸಿರುವರು. ರಾಮಾಯಣ ಗ್ರಂಥವನ್ನು ಓದಿದವರಿಗೂ ಅದನ್ನು ಕೇಳಿದವರಿಗೂ ಶ್ರೀರಾಮನ ಮಹಾ ಅನುಗ್ರಹವಾಗುವುದು. ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎನ್ನುತ್ತಾರೆ- ‘ಮರ್ಯಾದೆ’ ಎಂದರೆ ಎಲ್ಲೆ, ಸೀಮೆ, ಹದ್ದು ಎಂದರ್ಥ. ಯಾವ ಸಂದರ್ಭದಲ್ಲೂ ಎಲ್ಲೆಯನ್ನು ಮೀರದ ಆಚರಣೆ ಅವನದು. ಆದ್ದರಿಂದ ಸಾಮಾನ್ಯರೂ ಸಹ ರಾಮನ ಅಂತರಂಗದಲ್ಲಿ ಮಿಂಚುತ್ತಾರೆ.
ಪ್ರತಿವರ್ಷ ರಾಮನವಮಿ ಬಂದರೆ ಸಾಕು ಸಂಗೀತಕ್ಕೊಂದು ಮೆರುಗು ಬರುತ್ತದೆ. ಶ್ರೀರಾಮನವಮಿ ಸಂಗೀತೋತ್ಸವದ ಪರಂಪರೆ ಹಿಂದಿನಿಂದಲೂ ಅಂದರೆ ರಾಜರುಗಳ ಕಾಲದಿಂದಲೂ ನಡೆದುಬಂದಿದೆ. ವಾರ, ತಿಂಗಳು, ರಾಮನ ಹೆಸರಿನಲ್ಲಿ ಸಂಗೀತ ಸೇವೆ, ಪಾನಕ, ಕೋಸಂಬರಿ, ಶ್ರೀರಾಮತಾರಕ ಹೋಮ, ಜಪ- ಹೀಗೆ ಶ್ರೀರಾಮನ ಹೆಸರಿನಲ್ಲಿ ನಡೆಯುತ್ತದೆ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸ ಬರಹಗಾರರು)
ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 2 =
Remember me
