|ಮೃತ್ಯುಂಜಯ ಕಪಗಲ್ಬೆಂಗಳೂರು
ರಾಜಕೀಯವಾಗಿ ಪ್ರತಿಷ್ಠೆ, ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಮಲ ಪಡೆ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನೇರ ಸೆಣಸಾಟ ನಿರೀಕ್ಷೆಯಂತೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಎದ್ದುಕಂಡಿತು. ಬಸವಕಲ್ಯಾಣದಲ್ಲಿ ಜಯಭೇರಿಗೆ ಬಂಡಾಯ ಹಾಗೂ ಅನುಕಂಪ ಬಾಧಿಸಲಿಲ್ಲ. ಆದರೆ ವಿರೋಧದ ಅಲೆ ಹಾಗೂ ಆಂತರಿಕ ಮಸಲತ್ತುಗಳಿಂದಾಗಿ ಮಸ್ಕಿಯಲ್ಲಿ ನೆಲಕಚ್ಚಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯವೆಂಬ ಧ್ಯೇಯವನ್ನು ಇತ್ತೀಚಿನ ಚುನಾವಣೆಗಳಲ್ಲಿ ಮರೆತಿದ್ದ ಬಿಜೆಪಿಗೆ ಈ ಬಾರಿಯ ಉಪ ಕದನದ ಫಲಿತಾಂಶ ತಕ್ಕಪಾಠ ಕಲಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಬಾರಿ 4 ಲಕ್ಷ ಮತಗಳ ಅಂತರದಿಂದ ಬೆಳಗಾವಿಯಲ್ಲಿ ಗೆದ್ದುಬೀಗಿತ್ತು. ಈ ಬಾರಿ ಪ್ರಬಲ ಎದುರಾಳಿ ಕಾಂಗ್ರೆಸ್​ನ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ಮಂಗಲ ಅಂಗಡಿ ತಿಣುಕಾಡಿ ಗೆಲ್ಲಬೇಕಾಯಿತು. ಎಂಇಎಸ್ ಅಭ್ಯರ್ಥಿ ಅಖಾಡಕ್ಕೆ ಧುಮುಕಿದ್ದಲ್ಲದೆ, 1 ಲಕ್ಷಕ್ಕೂ ಅಧಿಕ ಮತಗಳನ್ನು ಬಾಚಿಕೊಂಡದ್ದು ಬಿಜೆಪಿ ‘ಭದ್ರಕೋಟೆ’ ಎಂದೇ ಬಿಂಬಿತ ಕ್ಷೇತ್ರದಲ್ಲಿ ಬೆವರಿಳಿಸಬೇಕಾಯಿತು. ಇದು, ಮೇಲ್ನೋಟಕ್ಕೆ ಎದ್ದು ಕಾಣುವ ಅಂಶ. ತಡವಾಗಿ ಅಭ್ಯರ್ಥಿ ಘೋಷಣೆ, ಅನುಕಂಪದ ಬಗ್ಗೆ ಅತಿಯಾದ ಆತ್ಮವಿಶ್ವಾಸ, ಸ್ಥಳೀಯ ಮುಖಂಡರು ಪೂರ್ಣಪ್ರಮಾಣದಲ್ಲಿ ತೊಡಗಿಕೊಳ್ಳದ್ದೂ ಮತ್ತೊಂದು ಕಾರಣ. ಕೇಂದ್ರದ ಮಾಜಿ ಮಂತ್ರಿ ದಿವಂಗತ ಸುರೇಶ್ ಅಂಗಡಿ ಉಪಕಾರ ಸ್ಮರಣೆಗಾಗಿ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟೆವು ಎನ್ನುವ ಧೋರಣೆಯನ್ನು ವರಿಷ್ಠರು ತಳೆದರು. ಅಷ್ಟೇ ಅಲ್ಲ, ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಅರ್ಥದ ರೀತಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದೂ ಬೇರೊಂದು ಸಂದೇಶ ರವಾನಿಸಿತು.
ಮಸ್ಕಿಯಲ್ಲಿ ಮಸಲತ್ತು:ರಾಜಕೀಯ ಕ್ಷಿಪ್ರ ಕ್ರಾಂತಿಯ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್​ನಿಂದ ಬಿಜೆಪಿಗೆ ಮರಳುವುದಕ್ಕೆ ಕ್ಷೇತ್ರದಲ್ಲಿ ಪ್ರಾರಂಭಿಕವಾಗಿ ಅಪಸ್ವರ ಎದ್ದಿತ್ತು. ಸಿಎಂ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿ ಎಲ್ಲವನ್ನೂ ಸರಿಪಡಿಸಿದ್ದರು. ಚುನಾವಣೆ ಕಾಲಕ್ಕೆ ಖುದ್ದು 2 ದಿನ ಬಿಡಾರ ಹೂಡಿ ಮುಖಂಡರ ಮನವೊಲಿಸಿದ್ದರು. ಈ ಕ್ಷೇತ್ರದ ಗೆಲುವು ಎಷ್ಟು ಮುಖ್ಯವೆಂದು ಹೇಳಿ, ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಲು ಹುರುಪು ತುಂಬಿದ್ದರು. ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸಗಳಾಗಿಲ್ಲ, ಪ್ರತಾಪಗೌಡ ಜತೆಗಿರುವವರ ಹಸ್ತಕ್ಷೇಪ ಜಾಸ್ತಿ ಎನ್ನುವ ವಿರೋಧದ ಅಲೆಯನ್ನು ಸರಿದೂಗಿಸಲು ಬಿಎಸ್​ವೈ ಎಲ್ಲ ಪಟ್ಟುಗಳನ್ನು ಪ್ರಯೋಗಿಸಿದ್ದರು. ಅಭ್ಯರ್ಥಿ ಅಪೇಕ್ಷೆಯಂತೆ ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರಗೆ ಉಸ್ತುವಾರಿ ಕೊಟ್ಟ ಬಳಿಕ ಚಿತ್ರಣ ಬದಲಾಯಿತು. ವಿಜಯೇಂದ್ರ ಮತ್ತವರ ತಂಡ ಕ್ಷೇತ್ರದಲ್ಲಿ ಪ್ರತಾಪಗೌಡ ಬಗೆಗಿದ್ದ ಅಸಮಾಧಾನ, ಆಕ್ರೋಶ ತಣಿಸಿ, ವಾತಾವರಣ ‘ಹದ’ಗೊಳಿಸಿತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಕಳೆದ ಬಾರಿ ಕೆಲವು ಮತಗಳ ಅಂತರದಿಂದ ಸೋತ ಅನುಕಂಪ, ಕೈಮುಖಂಡರ ಟೀಮ್ ವರ್ಕ್​ನಿಂದ ಪ್ರಬಲರಾಗುತ್ತಾ ನಡೆದರು. ಇತ್ತ ಬಿಜೆಪಿಯಲ್ಲಿ ಮತದಾನದ ದಿನಗಳು ಸಮೀಪಿಸುತ್ತಿದ್ದಂತೆ ಒಳಸಂಚು ಗರಿಗೆದರಿ, ಕ್ಷೇತ್ರಾದ್ಯಂತ ಆಡಳಿತ ವಿರೋಧಿ ಅಲೆ ಇದೆ ಎಂಬ ವ್ಯವಸ್ಥಿತ ಪ್ರಚಾರ ನಡೆದವು. ಕೆ.ಆರ್.ಪೇಟೆ, ಶಿರಾದಂತೆ ಇಲ್ಲಿಯೂ ಗೆದ್ದರೆ, ಶ್ರೇಯಸ್ಸು ವಿಜಯೇಂದ್ರಗೆ ಸಲ್ಲುತ್ತದೆ ಎಂಬ ಒಂದೇ ಕಾರಣದಿಂದ ಕೆಲವು ಮುಖಂಡರ ಮಸಲತ್ತಿಗೆ ಪ್ರತಾಪಗೌಡ ಬಲಿಯಾದರು ಎನ್ನಲಾಗುತ್ತಿದೆ.
ತಂಡಸ್ಪೂರ್ತಿ, ಬೊಮ್ಮಾಯಿ ಪ್ರಯತ್ನದ ಫಲ:ಕ್ಷೇತ್ರದ ಜನರು ಹಾಗೂ ಪಕ್ಷದ ಕಾರ್ಯಕರ್ತರ ಜತೆಗೆ ನಿಕಟತೆ, ಚುನಾವಣೆ ಉಸ್ತುವಾರಿ ಹೊತ್ತವರ ತಂಡಸ್ಪೂರ್ತಿ ಕೆಲಸ ಹಾಗೂ ವ್ಯವಸ್ಥಿತ ಕಾರ್ಯತಂತ್ರವು ಬಸವಕಲ್ಯಾಣದಲ್ಲಿ ಸಫಲವಾಗಿದೆ. ಸಚಿವ ಬಸವರಾಜ ಬೊಮ್ಮಾಯಿ ಅವರ ಕಾರ್ಯತಂತ್ರದ ಪರಿಣಾಮ ನಿರೀಕ್ಷೆ ಮೀರಿ ಹೆಚ್ಚಿನ ಮತಗಳ ಅಂತರದಿಂದ ಶರಣು ಸಲಗರ ವಿಜಯ ಸಾಧಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಖೂಬಾ ‘ಮುಳುಗು ನೀರು’ ತರಬಲ್ಲರು ಎಂಬ ಲೆಕ್ಕಾಚಾರ ತಲೆ ಕೆಳಗಾಗಿದೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ ಮಾಲಾ ಅನುಕಂಪವೂ ಬಾಧಿಸಿಲ್ಲ. ಸಿಎಂ ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಸಲಗರ ‘ಕ್ಷೇತ್ರದ ಹೊರಗಿನವರು’ ಎನ್ನುವ ಅಪಸ್ವರ ಮೆಟ್ಟಿ ನಿಲ್ಲುವುದಕ್ಕೆ ಆಸರೆಯಾಗಿವೆ.
ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು- ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ. ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ. ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.
|ಬಿ.ವೈ.ವಿಜಯೇಂದ್ರಬಿಜೆಪಿ ರಾಜ್ಯ ಉಪಾಧ್ಯಕ್ಷ
ರಾಜ್ಯಕ್ಕೆ ಬರಲಿದೆ 30 ಟನ್ ಆಕ್ಸಿಜನ್: ಚುನಾವಣೆ ಫಲಿತಾಂಶದ ನಡುವೆಯೂ ಸಿಎಂ-ಸಿಎಸ್ ಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
