ಬೆಂ.ದಕ್ಷಿಣ ಲೋಕಸಭೆ ಕ್ಷೇತ್ರ ಸದ್ಯ ಬಿಜೆಪಿ ಭದ್ರಕೋಟೆ. ಇಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮುಖ್ಯವಾಗುವುದೇ ಇಲ್ಲ ಎಂಬ ಪರಿಸ್ಥಿತಿ ಇದೆ. ಪ್ರಸ್ತುತ ತೇಜಸ್ವಿಸೂರ್ಯ ಸಂಸದರಾಗಿದ್ದಾರಾದರೂ ಕ್ಷೇತ್ರದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ದಂಡೇ ಇದೆ. ಕಾಂಗ್ರೆಸ್ ಕೂಡ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಪೈಪೋಟಿ ನೀಡಲು ಸಜ್ಜಾಗುತ್ತಿದೆ.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂದು ಎಂಟು ಚುನಾವಣೆ ಕಳೆದುಹೋಗಿದೆ, ಈ ಮೂಲಕ ದೇಶದ ಬಿಜೆಪಿ ಸೇಫ್ ಕ್ಷೇತ್ರಗಳ ಪಟ್ಟಿಯಲ್ಲಿ ಇದೂ ಸೇರಿಕೊಂಡಿದೆ. ಪ್ರಸ್ತುತ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾಗಬಹುದೆಂಬ ಬಲವಾದ ಅಭಿಪ್ರಾಯಗಳು ಬಿಜೆಪಿಯಿಂದ ಕೇಳಿಬರುತ್ತಿದ್ದರೆ, ಕಾಂಗ್ರೆಸ್ ಯಾರನ್ನು ಅಭ್ಯರ್ಥಿ ಹಾಕಬೇಕೆಂಬ ಚಿಂತೆಯಲ್ಲಿದೆ. ಪಕ್ಷದ ಪ್ರತಿಷ್ಠೆ ಉಳಿಸುವುದಕ್ಕೋಸ್ಕರ ಅಭ್ಯರ್ಥಿ ಕಣಕ್ಕಿಳಿಸಬೇಕೇ ಹೊರತು ಅಲ್ಲಿ ಫಸಲು ತೆಗೆಯುವುದು ಅಷ್ಟು ಸಲೀಸಲ್ಲ ಎಂದು ಕೈ ನಾಯಕರೂ ಅರಿತಿದ್ದಾರೆ.
ಕ್ಷೇತ್ರದ ಫಲಿತಾಂಶ ಇತಿಹಾಸ:ಒಂಬತ್ತು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯನ್ನು ಗಮನಿಸುವುದಾದರೆ ಈ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹೀಗಾಗಿ ಬಿಜೆಪಿ ಪಾಳಯ ನಿಶ್ಚಿಂತೆಯಿಂದ ಇದೆ. ಇದೇ ಕಾರಣಕ್ಕೆ ಅಭ್ಯರ್ಥಿ ಬದಲಿಸಿ ಪ್ರಯೋಗಕ್ಕೆ ಒಡ್ಡಲು ಬಯಸಿದೆ. 1977ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸತತ ಮೂರು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದ್ದು, ನಂತರ ಒಂದು ಬಾರಿ ಕಾಂಗ್ರೆಸ್ ಜಯಿಸಿತ್ತು. ನಂತರ ಆ ಕ್ಷೇತ್ರವನ್ನು ಪೂರ್ಣ ತೆಕ್ಕೆಗೆ ತೆಗೆದುಕೊಂಡವರು ಅನಂತ ಕುಮಾರ್. ಪಕ್ಷ ಹಾಗೂ ಪರಿವಾರ ಸಂಘಟನೆ ಕೂಡ ಬಲವಾಗಿದೆ. ಹಾಗೆಯೇ, ವಿ.ಎಸ್.ಕೃಷ್ಣಯ್ಯರ್, ಕೆಂಗಲ್ ಹನುಮಂತರಾಯ, ಗುಂಡೂರಾವ್, ಆರ್ಥಿಕ ತಜ್ಞ ವೆಂಕಟಗಿರಿಗೌಡ ಸ್ಪರ್ಧಿಸಿದ ಕ್ಷೇತ್ರವಿದು ಎಂಬುದು ವಿಶೇಷ. ಪ್ರಸ್ತುತ ತೇಜಸ್ವಿಸೂರ್ಯ ಸಂಸದರಾಗಿದ್ದಾರೆ.
ಯಾರಿಗೆ ಟಿಕೆಟ್?:ಈ ಚುನಾವಣೆ ಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇರುವ ಕಾರಣ ಇಲ್ಲಿ ಬಿಜೆಪಿ ಸದ್ಯಕ್ಕೆ ಪೂರ್ಣ ನಿರಾಳ ಸ್ಥಿತಿಯಲ್ಲೇ ಇದೆ. ಸಂಸದ ತೇಜಸ್ವಿ ಸೂರ್ಯಗೆ ಇನ್ನೂ ಟಿಕೆಟ್ ಖಾತ್ರಿ ಇಲ್ಲ. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹೆಸರು ಚಲಾವಣೆಯಲ್ಲಿದೆ. ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅಲ್ಪಸಂಖ್ಯಾತ ಮತಗಳನ್ನು ನೆಚ್ಚಿಕೊಂಡು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬೇಕೆಂಬ ಸಮೀಕರಣದ ಚರ್ಚೆ ಕಾಂಗ್ರೆಸ್​ನಲ್ಲಿ ನಡೆದಿದೆ. ಈ ಹಿಂದೆ ಅಚ್ಚರಿ ಅಭ್ಯರ್ಥಿ ಹಾಕುವ ಪ್ರಯೋಗಗಳನ್ನು ಮಾಡಿ ಕಾಂಗ್ರೆಸ್ ಸೋತುಹೋಗಿದೆ. ನಂದನ್ ನೀಲೇಕಣಿ, ಬಿ.ಕೆ.ಹರಿಪ್ರಸಾದ್ ಅಂಥವರೂ ಕಣಕ್ಕಿಳಿದು ಮಕಾಡೆ ಮಲಗಿದರು. ಹೀಗಾಗಿ ದಿನೇಶ್ ಗುಂಡೂರಾವ್ ಅವರನ್ನು ಕಣಕ್ಕಿಳಿಸುವ ಆಲೋಚನೆಯನ್ನೂ ಮಾಡಿದೆ. ಕೊನೇ ಕ್ಷಣದಲ್ಲಿ ಸೌಮ್ಯರೆಡ್ಡಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
ಗ್ಯಾರಂಟಿ ಮೋದಿ:ಗ್ಯಾರಂಟಿ ಯೋಜನೆಗಳು ರಾಜ್ಯದ ಚುನಾವಣೆಗೆ ಎಂದರೂ ಯೋಜನೆಯ ಫಲ ಸಿಕ್ಕಿರುವ ಬಡ ಮಧ್ಯಮ ವರ್ಗದ ಮತದಾರರು ಏನು ಮಾಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಲೋಕಸಭೆಗೆ ಮೋದಿ ಗ್ಯಾರಂಟಿ ನಂಬಿಕೆ ಬಿಜೆಪಿಯಲ್ಲಿದೆ.
ಬೆಂಗಳೂರು ದಕ್ಷಿಣ
ಸಮರ್ಥರು ಸಿಗದೆ ಹುಡುಕಾಟದಲ್ಲೇ ಇರುವ ಕಾಂಗ್ರೆಸ್
ವಿಧಾನಸಭಾ ಕ್ಷೇತ್ರದ ಬಲಾಬಲ
ಗೋವಿಂದರಾಜ ನಗರ ಕಾಂಗ್ರೆಸ್
ವಿಜಯನಗರ ಕಾಂಗ್ರೆಸ್
ಬಿಟಿಎಂ ಲೇ ಔಟ್ ಕಾಂಗ್ರೆಸ್
ಚಿಕ್ಕಪೇಟೆ ಬಿಜೆಪಿ
ಬಸವನಗುಡಿ ಬಿಜೆಪಿ
ಪದ್ಮನಾಭನಗರ ಬಿಜೆಪಿ
ಜಯನಗರ ಬಿಜೆಪಿ
ಬೊಮ್ಮನಹಳ್ಳಿ ಬಿಜೆಪಿ
ಮತ ಲೆಕ್ಕಾಚಾರ2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 3,31,192 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಪಡೆದ ಮತಗಳು ಹಿಂದಿನ ಚುನಾವಣೆಗಿಂತ ಶೇ.5.32 ಹೆಚ್ಚಾಗಿತ್ತು. ತೇಜಸ್ವಿಸೂರ್ಯ 7,39,229 ಮತ ಪಡೆದರೆ, ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್ 4,08,037 ಮತ ಪಡೆದಿದ್ದರು. ಕಳೆದ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು. ಈ ಬಾರಿ ಮೈತ್ರಿ ಬದಲಾಗಿದೆ.
ನೇರ ಹಣಾಹಣಿಯೇ?ಕ್ಷೇತ್ರದಲ್ಲಿ ನೇರ ಹಣಾಹಣಿ ಆಗಬೇಕೆಂಬುದು ಕಾಂಗ್ರೆಸ್ ಬಯಕೆ. ಅಂತಹ ವೇದಿಕೆ ಸಜ್ಜು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಅದು ಸಾಧ್ಯವಿಲ್ಲವೆಂಬ ಅತಿಯಾದ ವಿಶ್ವಾಸದಲ್ಲಿ ಬಿಜೆಪಿ ಇದೆ.
ಪಕ್ಷಾಂತರವಿಧಾನಸಭೆ ಚುನಾವಣೆಯಲ್ಲಿ ಸೋತ ವಿ.ಸೋಮಣ್ಣ ಇದೇ ಕ್ಷೇತ್ರ ವ್ಯಾಪ್ತಿಯ ವಿಜಯನಗರ, ಗೋವಿಂದರಾಜನಗರದಲ್ಲಿ ಒಂದಷ್ಟು ಹಿಡಿತ ಹೊಂದಿದ್ದಾರೆ. ಅವರನ್ನು ಕಾಂಗ್ರೆಸ್​ಗೆ ಕರೆತರುವ ಮೂಲಕ ಬಿಜೆಪಿಗೆ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವಂಥ ಏಟುಕೊಡಬೇಕೆಂದು ಕಾಂಗ್ರೆಸ್ ಬಯಸಿತ್ತು. ಆದರೆ, ಪ್ರಯತ್ನ ಫಲಪ್ರದವಾದಂತೆ ಕಾಣಿಸುತ್ತಿಲ್ಲ. ಹಾಗೆಯೇ ಸೋಮಣ್ಣ ತೀರ್ಮಾನ ಕೂಡ ಡೋಲಾಯಮಾನ ಸ್ಥಿತಿಯಲ್ಲೇ ಇದೆ. ಒಂದೊಮ್ಮೆ ಸೋಮಣ್ಣ ಪಕ್ಷಾಂತರ ಮಾಡಿ, ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿಯ ನಿದ್ರೆಗೆಡಿಸಬಹುದು ಎಂಬ ಆಲೋಚನೆ ಕಾಂಗ್ರೆಸ್ ನಾಯಕರಲ್ಲಿದೆ.
ಸ್ಥಳೀಯ ವರ್ಚಸ್ಸುಯುವ ಸಂಸದ ಎಂದು ಕಳೆದ ಚುನಾವಣೆಯಲ್ಲಿ ಎಕ್ಸ್ ಟ್ರಾ ಮೈಲೇಜ್ ಪಡೆದುಕೊಂಡಿದ್ದ ತೇಜಸ್ವಿಸೂರ್ಯ ಕಳೆದ ನಾಲ್ಕೂವರೆ ವರ್ಷದಲ್ಲಿ ವ್ಯಾಪಕ ಚಟುವಟಿಕೆ ನಡೆಸಿದ್ದಾರೆ. ವಿದ್ಯಾರ್ಥಿ ವೇತನ ನೆರವು, ಉದ್ಯೋಗ ಮೇಳ ನಡೆಸಿದ್ದಾರೆ.
ಚುನಾವಣಾ ವಿಚಾರಅಯೋಧ್ಯೆ ರಾಮಮಂದಿರ, ನರೇಂದ್ರ ಮೋದಿ ಮರು ಆಯ್ಕೆ ಹೊರತು ಬೇರೆ ವಿಚಾರವೇನೂ ಕಾಣಿಸುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಸ್ಪರ್ಧಿಸಲು ಅವಕಾಶ ಪಡೆದ ತೇಜಸ್ವಿ ಸೂರ್ಯರನ್ನೇ ಪುನರಾಯ್ಕೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿಯಲ್ಲಿ ಆ ಪಕ್ಷದ ಕಾರ್ಯಕರ್ತರೂ ಇಲ್ಲ. ಮತದಾರರು ಮೋದಿ ಪ್ರಧಾನಿಯಾಗಲಿ ಎಂಬ ಮನಸ್ಥಿತಿ ಯಲ್ಲಿದ್ದಾರೆ. ಬಿಜೆಪಿ ಹೊರತಾದ ವಾತಾವರಣದಲ್ಲಿ ತೇಜಸ್ವಿ ಸೂರ್ಯ ಬಗ್ಗೆ ಆಕ್ಷೇಪಣೆಗಳೇ ಇವೆ. ಬರೀ ಮಾತಷ್ಟೇ, ಸಿಕ್ಕ ಅವಕಾಶ ಬಳಸಿಕೊಂಡು ಕ್ಷೇತ್ರಕ್ಕೆ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಾರೆ. ಜನರ ಕೈಗೆ ಸಿಗುವ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂಸದರು ಬೇಕು ಎಂದು ವಾದ ಮುಂದಿಡುತ್ತಾರೆ. ಹಾಗೆಯೇ, ಸಹಕಾರ ಸಂಘಗಳ ಅವ್ಯವಹಾರವಾದ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಠೇವಣಿದಾರರ ಬೆನ್ನಿಗೆ ನಿಲ್ಲಲಿಲ್ಲ ಎಂಬ ಸಂಗತಿ ಜನರಿಂದ ದೂರವಾಗಿಲ್ಲ.
ದೇಶದಲ್ಲೇ ಅತ್ಯಧಿಕ ಜನೌಷಧ ಕೇಂದ್ರ ಸ್ಥಾಪನೆ
ಕೋವಿಡ್ ಸಂದರ್ಭದಲ್ಲಿ ವಿಶೇಷ ತಂಡ ರಚಿಸಿ ಜನರಿಗೆ ನೆರವಾಗಿ ಅಗತ್ಯಪೂರೈಸಲಾಗಿತ್ತು. 8-10 ಸ್ಟಾರ್ಟ್​ಅಪ್ ಒಟ್ಟಾಗಿಸಿ, ಹೋಮ್ೈನ್ ವಾಟ್ಸಪ್ ಮೂಲಕ ನಿಭಾಯಿಸಲಾಗಿತ್ತು. 120 ಜನೌಷಧಿ ಕೇಂದ್ರ ತೆರೆಯಲಾಗಿದ್ದು, ಇಡೀ ದೇಶದಲ್ಲಿ ಹೆಚ್ಚು ಜನೌಷಧಿ ಕೇಂದ್ರ ಇರುವ ಕ್ಷೇತ್ರ ಇದಾಗಿದೆ. ಇದರಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಇದರ ಲಾಭ ಪಡೆಯುತ್ತಿದ್ದಾರೆ. ದಾನಿಗಳ ಸಹಾಯ, ಸಂಸದರ ನಿಧಿ ಬಳಸಿ ನಮೋ ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ. ಮಾಸಿಕ 500 ಡಯಾಲಿಸಿಸ್ ಆಗುತ್ತದೆ. ಫಾರ್ಮ ಕಂಪನಿ, ದಾನಿಗಳ ಸಹಯೋದಲ್ಲಿ ನಮೋ ಆರೋಗ್ಯ ನಿಧಿ ಯೋಜನೆ ನಡೆಸುತ್ತಿದ್ದು, 3-5 ಸಾವಿರ ರೂ. ಮೌಲ್ಯದ ಉಚಿತ ಔಷಧಿ ವಿತರಿಸಲಾಗುತ್ತಿದೆ. 900 ಮಂದಿಗೆ ಇದರಿಂದ ಲಾಭವಾಗಿದೆ. ಆಯುಷ್ಮಾನ್ ಭಾರತ್ ನೋಂದಣಿ ಅಭಿಯಾನ ನಡೆಸಲಾಗಿದೆ. ಶಾಲಾ ಮಕ್ಕಳಿಗಾಗಿ ಪರೀಕ್ಷಾಪೇ ಚರ್ಚಾ ಆಯೋಜಿಸಲಾಗಿತ್ತು. ಶಾಲಾ ಮಕ್ಕಳಿಗಾಗಿ ಜಿ20 ಮಾದರಿ ಸಮ್ಮೇಳನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದ ರೀತಿ ಶಾಲಾ ಮಕ್ಕಳಿಗೆ ಪರೀಕ್ಷಾ ಎಕ್ಸಾಂ ವರ್ಕ್ ಬುಕ್ ಸಿದ್ಧಪಡಿಸಿ ಹಂಚಲಾಗಿದೆ.
?ಬೆಂಗಳೂರು ಸಬ್ ಅರ್ಬನ್ ರೈಲು, ಮೆಟ್ರೋ ಯೋಜನೆ ಮಂದಗತಿಯಲ್ಲಿ ಸಾಗಿತ್ತು, ಅದಕ್ಕೆ ವೇಗ ನೀಡಲು ಪ್ರಯತ್ನ ಮಾಡಲಾಗಿದೆ. ?ಸಂಸದರ ನಿಧಿಯಿಂದ 8 ಶೌಚಾಲಯ ನಿರ್ವಿುಸಲಾಗಿದೆ. ಜಯನಗರದಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್, ಆಡುಗೋಡಿಯಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ನಿರ್ವಿುಸಲಾಗುತ್ತಿದೆ. ?ಸ್ಟಾರ್ಟ್​ಅಪ್ ಸ್ಥಾಪಕರ ಸಭೆ ನಡೆಸಲಾಗಿದೆ. ವಿದೇಶಾಂಗ ಸಚಿವರೊಂದಿಗೆ ಯುವ ಸಂವಾದ ನಡೆಸಿಕೊಡಲಾಗಿದೆ. ಸಾಮಾಜಿಕ ಜಾಲತಾಣ ಇನ್​ಫ್ಲುಯೆನ್ಸರ್ ಸಭೆ ನಡೆಸಲಾಗಿದೆ. ಮೋದಿ ಕ್ರಿಕೆಟ್ ಕಪ್ ಆಯೋಜನೆ, ಪಿಎಂ ಸ್ವನಿಧಿ ಬಗ್ಗೆ ಜಾಗೃತಿ ಮತ್ತು ಪ್ರಮಾಣ ಪತ್ರ ವಿತರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
