ದೇಶದ ಒಂದೊಂದು ಗ್ರಾಮವೂ ಒಳ್ಳೆಯ ಉದ್ದೇಶ, ದೊಡ್ಡ ಗುರಿ ಇರಿಸಿಕೊಂಡು ಕೆಲಸ ಮಾಡಿದರೆ ಖಂಡಿತವಾಗಿಯೂ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನಿವಾರಿಸಬಹುದು. ಇದಕ್ಕೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಗ್ರಾಮ ಸಾಕ್ಷಿಯಾಗಿದ್ದು, ರಕ್ತದಾನದ ಮೂಲಕ ಮಾನವೀಯತೆಗೆ ಹೊಸ ಭಾಷ್ಯ ಬರೆದಿದೆ.
ವಿಚಿತ್ರ, ವೈರುಧ್ಯ ಎನಿಸಿದರೂ ಇದು ಸತ್ಯ. ಯಾವುದೇ ಕುಟುಂಬದಲ್ಲಿ ಹೆಣ್ಣು ತಾಯಿಯಾಗುತ್ತಾಳೆ ಎಂದರೆ ಅದು ಸಂಭ್ರಮ, ಸಡಗರದ ಸಂಗತಿಯೇ. ತಾಯಿಯಾಗುವ ಮುನ್ನ ಸೀಮಂತ ಶಾಸ್ತ್ರ ಮಾಡಿ, ಸಂಬಂಧಿಕರಿಗೆ, ಆತ್ಮೀಯರಿಗೆ ಭರ್ಜರಿ ಔತಣ ನೀಡಲಾಗುತ್ತದೆ. ಮಗು ಹುಟ್ಟಿದ ಮೇಲೆ ನಾಮಕರಣ ಕಾರ್ಯಕ್ರಮಕ್ಕೂ ಮತ್ತೆ ಆಮಂತ್ರಣ, ಭರ್ಜರಿ ಭೋಜನ. ಬಂದವರೆಲ್ಲರು ಊಟ ಮಾಡಿ, ಹಾರೈಸಿ ಹೋಗುತ್ತಾರೆ ಎಂಬುದೇನೋ ನಿಜ. ಆದರೆ, ಸೀಮಂತ ಮತ್ತು ಮಗುವಿನ ನಾಮಕರಣದ ನಡುವೆ ಹೆರಿಗೆಯ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ, ರಕ್ತದ ತುರ್ತು ಅಗತ್ಯ ಬಿದ್ದಲ್ಲಿ ರಕ್ತಸಂಬಂಧಿಗಳೆನಿಸಿಕೊಂಡ ಬಹುತೇಕರು ‘ವ್ಯಾಪ್ತಿ ಪ್ರದೇಶದ ಹೊರಗೆ’ ಅಥವಾ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಂಥ ಸಂದರ್ಭದಲ್ಲಿ ಹಸಿ ಬಾಣಂತಿಯ ಸ್ಥಿತಿ ಏನಾಗಬೇಡ? ತುರ್ತು ರಕ್ತ ಹೊಂದಿಸದಿದ್ದಲ್ಲಿ ಪ್ರಾಣಕ್ಕೇ ಕುತ್ತು (ಅಪಘಾತ, ಇತರ ಅವಘಡಗಳ ಸಂದರ್ಭದಲ್ಲೂ ‘ರಕ್ತ ನೀಡುವರಾರು’ ಎಂಬ ಸಂಕಷ್ಟ ಎದುರಾಗುತ್ತದೆ).
ಮದುವೆಯಾಗಿ ಇಪ್ಪತ್ತು ವರ್ಷದ ಬಳಿಕ ತಾಯಿಯಾದ ಒಬ್ಬ ಮಹಿಳೆಗೂ ಇದೇ ಸ್ಥಿತಿ ಬಂತು. ಆಗ ಸಹೃದಯಿಯೊಬ್ಬರು ಸರಿಯಾದ ಸಮಯಕ್ಕೆ ರಕ್ತ ನೀಡಿ, ಪ್ರಾಣ ಉಳಿಸಿದರು. ಆಗ ಆ ಮಹಿಳೆ ಅನುಭವಿಸಿದ ಸಾರ್ಥಕ ಭಾವ ಎಷ್ಟು ವಿಶಿಷ್ಟವಾಗಿತ್ತೆಂದರೆ ಹುಟ್ಟಿದ ಮಗುವಿಗೆ ರಕ್ತದಾನಿಯ (ರಾಕೇಶ್ ಉಂಡೆವಲ್ಲಿ) ಹೆಸರನ್ನೇ ಇಟ್ಟು, ಸಂಭ್ರಮಿಸಿದರು.
ಅಕ್ಕಿಆಲೂರು ಗ್ರಾಮದಲ್ಲಿ ಪ್ರೇರಣೆಯ ಇಂಥ ನೂರಾರು ಮಿಂಚುಗಳು ಸಿಗುತ್ತವೆ. ಹಾವೇರಿ ಜಿಲ್ಲೆ ಏಲಕ್ಕಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಇದೇ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿಯ ಘಾಟು ವಿದೇಶಗಳವರೆಗೂ ತಲುಪಿದೆ. ನಮ್ಮಲ್ಲಿ ಒಂದೊಂದು ಗ್ರಾಮಗಳಿಗೂ ವಿಶಿಷ್ಟವಾದ ಶಕ್ತಿಯಿದ್ದು, ಅವುಗಳ ಮುಖೇನ ವ್ಯವಸ್ಥೆಯನ್ನು ಸಬಲಗೊಳಿಸಿರುವ ನಿದರ್ಶನಗಳಿಗೆ ಕೊರತೆಯಿಲ್ಲ. ಇದೇ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಗ್ರಾಮ ಅಕ್ಕಿಆಲೂರು-‘ವಿಶ್ವದ ಮೊದಲ ರಕ್ತಸೈನಿಕರ ತವರೂರು’ ಎಂಬ ಖ್ಯಾತಿಗೆ, ಹಿರಿಮೆಗೆ ಪಾತ್ರವಾಗಿದೆ. ಸೇನಾನಿಗಳ ಶೌರ್ಯ ಗೊತ್ತು, ಸೈನಿಕರ ತ್ಯಾಗ, ಬಲಿದಾನ ಗೊತ್ತು ; ಆದರೆ ರಕ್ತಸೈನಿಕ ಯಾರು ಅಂತೀರಾ? ಯಾವುದೇ ಸಂದರ್ಭದಲ್ಲಿ ರಕ್ತದಾನಕ್ಕೆ ಸಿದ್ಧವಾಗಿರುವ ಜೀವರಕ್ಷಕ ಸೈನಿಕರು ಇವರು!
‘ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವೇ ಇಲ್ಲ’ ಎಂಬ ನೈರಾಶ್ಯವಾದವನ್ನು ಬದಿಗಿರಿಸಿ, ಹೊಸ ಹೆಜ್ಜೆ ಇರಿಸಿದರೆ, ಸುಧಾರಣೆಯ ದಾರಿ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಈ ಗ್ರಾಮ ಸಾಗಿಬಂದ ಹಾದಿಯೇ ಸಾಕ್ಷಿ. ರಕ್ತದಾನದ ವಿಷಯದಲ್ಲಿ ಪ್ರೇರಣೆಯಾಗಿರುವ, ನೇತ್ರದಾನ, ದೇಹದಾನದ ಬಗ್ಗೆಯೂ ಅರಿವಿನ ಬೆಳಕು ಹರಡುತ್ತಿರುವ ಈ ಗ್ರಾಮದಲ್ಲಿ ಬದಲಾವಣೆ ಆರಂಭವಾಗಿದ್ದರ ಹಿಂದೆಯೂ ಸ್ವಾರಸ್ಯಕರ ಕಥನವಿದೆ.
35 ವರ್ಷದ ಕರಬಸಪ್ಪ ಮನೋಹರ ಗೊಂದಿ ವೃತ್ತಿಯಲ್ಲಿ ಪೊಲೀಸ್ ಪೇದೆ. ವೃತ್ತಿಯ ಆರಂಭದಿಂದಲೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಅಕ್ಕಿಆಲೂರು ಇವರ ಸ್ವಂತ ಊರು. ಪ್ರಸ್ತುತ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇವರು ಕೊಟ್ಟ ಆರೋಗ್ಯವನ್ನು ಸಮಾಜದ ಸ್ವಾಸ್ಥ್ಯ ಸುಧಾರಿಸಲು ವಿನಿಯೋಗಿಸಬೇಕೆಂದು ನಿರ್ಧರಿಸಿದ ಇವರು ಈವರೆಗೆ ರಕ್ತದಾನದಲ್ಲಿ ಶತಕವನ್ನೂ ದಾಟಿ (ಕ್ರಿಕೆಟ್​ನಲ್ಲಿ ರನ್​ಗಳ ಶತಕ ಕೇಳಿ ಗೊತ್ತಿರುವ ನಮಗೆ, ರಕ್ತದಾನದಲ್ಲಿ ಶತಕ ಪುಳಕಗೊಳಿಸುವಂಥದ್ದು), ಒಟ್ಟು 112 ಬಾರಿ ರಕ್ತದಾನ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಮೊದಲ ಶತಕ ರಕ್ತದಾನಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
2014ರಲ್ಲಿ ವಿಶಿಷ್ಟವಾಗಿ ಮದುವೆಯಾದ ಕರಬಸಪ್ಪ ಗೊಂದಿ ಅವರು, ನೇತ್ರದಾನ, ದೇಹದಾನದ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ಮದುವೆ ಸಂದರ್ಭದಲ್ಲೇ ಆಯೋಜಿಸಿದ್ದರು. 2015ರಲ್ಲಿ ಮಹಿಳೆಯೊಬ್ಬರಿಂದ ‘ರಕ್ತದ ತುರ್ತು ಅವಶ್ಯಕತೆ ಇದೆ, ಕೊಡಿಸಬಲ್ಲಿರಾ?’ ಎಂಬ ಕೋರಿಕೆ ಬಂತು. ಆಗ ರಕ್ತದ ಅವಶ್ಯಕತೆ, ಇನ್ನೊಂದೆಡೆ ರಕ್ತದಾನದ ಬಗ್ಗೆ ಜನರಲ್ಲಿರುವ ಉದಾಸೀನತೆಯನ್ನು ಗಮನಿಸಿದ ಗೊಂದಿ, ಈ ಸ್ಥಿತಿಯ ಬದಲಾವಣೆಯನ್ನು ತಮ್ಮ ಗ್ರಾಮದಿಂದಲೇ ಆರಂಭಿಸಬೇಕು ಎಂದು ಸಂಕಲ್ಪಿಸಿದರು. ಇದರ ಫಲವಾಗಿಯೇ 2015ರಲ್ಲಿ ಸಮಾನಮನಸ್ಕರ ಜತೆ ಸೇರಿ ಸ್ನೇಹಮೈತ್ರಿ ಬ್ಲರ್ಡ್ ಆರ್ವಿು ಆರಂಭಿಸಿದರು. ‘ಯೋಧರು ಗಡಿಯನ್ನು ಕಾಯುವುದರ ಮುಖಾಂತರ ನಮ್ಮ ರಕ್ಷಣೆ ಮಾಡುತ್ತಾರೆ, ನಾವುಗಳು ರಕ್ತದಾನ ಮಾಡುವ ಮೂಲಕ ಇತರರ ಪ್ರಾಣವನ್ನು ಉಳಿಸೋಣ, ಇದಕ್ಕಾಗಿ ನಾವೆಲ್ಲ ರಕ್ತಸೈನಿಕರಾಗೋಣ’ ಎಂದು ಯುವಕರಲ್ಲಿ ಹುರಿದುಂಬಿಸಿದರು. 2017ರಲ್ಲಿ ನಡೆದ ಮೊದಲ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡವರು ಕೇವಲ ಆರು ಮಂದಿಯಾದರೂ, ಕರಬಸಪ್ಪ ಪ್ರಯತ್ನ ಮುಂದುವರಿಸಿದರು. ಇದರ ಪರಿಣಾಮ, ಬರೀ ಅಕ್ಕಿಆಲೂರು ಗ್ರಾಮವಲ್ಲದೆ ಹಾವೇರಿ, ಹುಬ್ಬಳ್ಳಿ-ಧಾರವಾಡ ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅನೇಕ ಊರುಗಳಲ್ಲಿ ಈವರೆಗೆ 143 ರಕ್ತದಾನ ಶಿಬಿರಗಳು ನಡೆದಿದ್ದು, 6200 ಯೂನಿಟ್​ಗಿಂತ ಅಧಿಕ ರಕ್ತ ಸಂಗ್ರಹವಾಗಿದೆ, ಅವಶ್ಯಕತೆ ಇರುವ ರೋಗಿಗಳಿಗೆ ನೆರವಾಗಿದೆ. ಈ ಶಿಬಿರಗಳಲ್ಲಿ ಸಾವಿರಾರು ಜನರು ರಕ್ತದಾನ ಮಾಡಿದ್ದಾರೆ.
ಅಕ್ಕಿಆಲೂರು ಗ್ರಾಮವೊಂದರಲ್ಲೇ 18ರಿಂದ 57 ವರ್ಷ ವಯಸ್ಸಿನ 1,200 ಜನರು ರಕ್ತದಾನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಇದೇ ಗ್ರಾಮದಲ್ಲಿ ಜಿಮ್ಮಿ ಮತ್ತು ಸಿರಿ ಎಂಬ ಶ್ವಾನಗಳು ಕೂಡ ರಕ್ತದಾನ ಮಾಡಿವೆ. ಈ ಸಮಾಜಮುಖಿ ಕಾರ್ಯದಲ್ಲಿ ಜನರ ಸಹಭಾಗಿತ್ವ ಹೆಚ್ಚಿಸಲು ಸ್ನೇಹಮೈತ್ರಿ ಬ್ಲಡ್ ಆರ್ವಿು ಹೊಸ ಚಿಂತನೆಗಳನ್ನು ಅನುಷ್ಠಾನಗೊಳಿಸಿತು. ಗ್ರಾಮ-ಪಟ್ಟಣಗಳಲ್ಲಿ ನಡೆಯುವ ಮದುವೆ, ನಾಮಕರಣ, ಭೂಮಿಪೂಜೆ, ಗೃಹಪ್ರವೇಶ, ಗ್ರಾಮಗಳ ಜಾತ್ರೆ ಅಷ್ಟೇ ಅಲ್ಲ ಬ್ಯಾಂಕುಗಳ ವಾರ್ಷಿಕ ಮಹಾ ಸಮ್ಮೇಳನದ ಸಂದರ್ಭಗಳಲ್ಲೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ. ನೇತ್ರದಾನ, ದೇಹದಾನದ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಜಾಗೃತಿಯ ಫಲವಾಗಿ 72 ಜನರಿಂದ ಮರಣಾನಂತರ ನೇತ್ರದಾನ ಮಾಡಿಸಲಾಗಿದೆ. ಸಂಗ್ರಹಿಸಿದ ಕಣ್ಣುಗಳನ್ನು ಹುಬ್ಬಳ್ಳಿಯ ಏಮ್್ಸ, ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಮತ್ತು ಶಿರಸಿಯ ಲಯನ್ಸ್ ನೇತ್ರ ಭಂಡಾರಕ್ಕೆ ದಾನ ಮಾಡಲಾಗಿದೆ. ಅಲ್ಲದೆ, ನೇತ್ರ ತಪಾಸಣಾ ಶಿಬಿರಗಳನ್ನು 45ಕ್ಕೂ ಅಧಿಕ ಕಡೆ ಉಚಿತವಾಗಿ ಆಯೋಜಿಸಿ, 1400ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ.
ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದಾವಣಗೆರೆ ಸಹಯೋಗದಲ್ಲಿ ಥಲಸೇಮಿಯಾ, ಹಿಮೋಫಿಲಿಯಾ ಪೀಡಿತರಿಗೆ ಉಚಿತ ಆರೈಕೆ ಸದನವನ್ನು ಅಕ್ಕಿಆಲೂರನಲ್ಲಿ ಪ್ರಾರಂಭಿಸಲಾಗಿದೆ. ಥಲಸೇಮಿಯಾ ಮತ್ತು ಹಿಮೋಫಿಲಿಯಾದಿಂದ ಬಳಲುತ್ತಿರುವ ಹಾವೇರಿ ಜಿಲ್ಲೆಯ 250 ಮಕ್ಕಳಿಗೆ ಪ್ರತಿ ತಿಂಗಳು ನಿಯಮಿತವಾಗಿ ಅಕ್ಕಿಆಲೂರು ಗ್ರಾಮದ ರಕ್ತಸೈನಿಕರೇ ರಕ್ತದಾನ ಮಾಡುತ್ತಿದ್ದಾರೆ. ಹೀಗಾಗಿ ಈ ಮಕ್ಕಳು ರಕ್ತಕ್ಕಾಗಿ ಅಲೆದಾಡುವ ಸ್ಥಿತಿ ಸೃಷ್ಟಿಯಾಗಿಲ್ಲ. ಇದೇ ಆದರ್ಶ ಸ್ಥಿತಿ ಪ್ರತಿ ಜಿಲ್ಲೆ ಅಥವಾ ತಾಲೂಕಿನಲ್ಲಿ ನಿರ್ವಣವಾದರೆ ರೋಗಿಗಳಿಗೆ ಎಷ್ಟು ಅನುಕೂಲ ಅಲ್ಲವೇ?
ರಕ್ತದಾನ ಮತ್ತು ನೇತ್ರದಾನದ ಮೂಲಕ ಜೀವಗಳನ್ನು ಉಳಿಸಲು, ಅರಳಿಸಲು ಸಾಧ್ಯ, ಹೀಗಾಗಿ ಇದು ದೇವರಕಾರ್ಯವೂ ಹೌದು ಎಂದು ಇದಕ್ಕೆ ಆಧ್ಯಾತ್ಮಿಕ ಸ್ಪರ್ಶ ನೀಡಲಾಗಿದೆ. ದೇವರ ಕಾರ್ಯದಲ್ಲಿ (ಜಾತ್ರೆ) ದೇವರು ಮೆಚ್ಚುವಂಥ ಕೆಲಸ ಮಾಡಿ ಎಂದು ಜನರನ್ನು ಹುರಿದುಂಬಿಸಿ, ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕರಬಸಪ್ಪ ಗೊಂದಿಯವರ ಈ ಪ್ರಯತ್ನಗಳಿಗೆ ಹಲವು ಸ್ವಾಮೀಜಿಗಳು, ಮಠಾಧೀಶರು ಬೆಂಬಲವಾಗಿ ನಿಂತಿದ್ದಾರೆ. ಅಕ್ಕಿಆಲೂರು ಗ್ರಾಮದಲ್ಲಿರುವ ವಿರಕ್ತ ಮಠದ ಶಿವಬಸವ ಶ್ರೀಗಳು 9 ಬಾರಿ, ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ 13 ಬಾರಿ, ಕೂಡಲ ಗುರುನಂದೇಶ್ವರ ಮಠದ ಗುರುಮಹೇಶ್ವರ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ 14 ಬಾರಿ ರಕ್ತದಾನ ಮಾಡಿ, ಮಾದರಿಯಾಗಿದ್ದಾರೆ. ಪ್ರವಚನಗಳಲ್ಲಿ ‘ತಪ್ಪದೇ ರಕ್ತದಾನ ಮಾಡಿ’ ಎಂದು ಕರೆ ನೀಡುತ್ತಿದ್ದಾರೆ. ಸ್ವಾಮೀಜಿಗಳಿಂದ ಪ್ರೇರಣೆ ಪಡೆದ ಜನರು ಹೊಸದಾಗಿ ರಕ್ತದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಗ್ರಾಮೀಣ ಭಾಗದಲ್ಲಿ ರಕ್ತದಾನದ ಕುರಿತಂತೆ ಹಲವು ತಪು್ಪ ತಿಳಿವಳಿಕೆಗಳಿವೆ. ಇದನ್ನು ಹೋಗಲಾಡಿಸಲು ಸಾರಿಗೆ ಬಸ್ಸನ್ನೇ ರಕ್ತದಾನದ ರಥವಾಗಿ ಪರಿವರ್ತಿಸಲಾಗಿರುವುದು ವಿಶೇಷ. ಹಾನಗಲ್ಲ-ಹಾವೇರಿ ಮಾರ್ಗದಲ್ಲಿ ನಿತ್ಯ ಸಂಚರಿಸುವ ಬಸ್​ವೊಂದನ್ನು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ‘ರಕ್ತದಾನ ರಥ’ವಾಗಿ ಪರಿವರ್ತಿಸಲಾಗಿದೆ. ಅತಿ ಹೆಚ್ಚು ರಕ್ತದಾನ ಮಾಡಿದವರ ವಿವರ, ರಕ್ತದಾನ ಮಾಡಬೇಕಾದ ಅವಶ್ಯಕತೆ ಮತ್ತು ಇತರ ಘೋಷವಾಕ್ಯಗಳನ್ನು ಇದು ಒಳಗೊಂಡಿದ್ದು, ಪ್ರತಿನಿತ್ಯ 40 ಗ್ರಾಮಗಳ ಮುಖಾಂತರ ಸಂಚರಿಸುತ್ತಿದೆ. ರಕ್ತದಾನ ರಥದ ಮೂಲಕ ಸ್ಪೂರ್ತಿ ಪಡೆದು, ರಕ್ತದಾನಕ್ಕೆ ಮುಂದಾದವರು ಅನೇಕರು. ಈ ಪೈಕಿ ಯುವಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವುದು ಸಕಾರಾತ್ಮಕ ಬೆಳವಣಿಗೆ. ರಕ್ತರಥದ ಪರಿಕಲ್ಪನೆಯನ್ನು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮೆಚ್ಚಿಕೊಂಡು, ಪ್ರಶಂಸೆ ವ್ಯಕ್ತಪಡಿಸಿದೆ.
ಪಿಯುಸಿ ಓದುತ್ತಿರುವ 6200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷೆಯನ್ನು ಉಚಿತವಾಗಿ ನೆರವೇರಿಸಿ, ರಕ್ತದ ಗುಂಪನ್ನು ವರ್ಗೀಕರಿಸಲಾಗಿದೆ. ‘ರಕ್ತದಾನದೊಂದಿಗೆ ಪದವಿ ಪ್ರವೇಶ’ ಎಂಬ ಅಭಿಯಾನದ ಮೂಲಕ, ಈ ವಿದ್ಯಾರ್ಥಿಗಳು ಪದವಿ ಸೇರುವ ಹಂತದಲ್ಲಿ ರಕ್ತದಾನ ಮಾಡುವಂತೆ ಹುರಿದುಂಬಿಸಲಾಗುತ್ತಿದೆ. ಕಾರ್ತಿಕೋತ್ಸವ ಸಂದರ್ಭದಲ್ಲಿ ಜನರು ರಕ್ತಸೈನಿಕರ (ರಕ್ತದಾನಿಗಳ) ಒಳಿತಿಗೆ ಹಾರೈಸಿ, ಮನೆಯಲ್ಲಿ ದೀಪ ಬೆಳಗಿದ ಭಾವನಾತ್ಮಕ ಕ್ಷಣಗಳಿಗೂ ಅಕ್ಕಿಆಲೂರು ಗ್ರಾಮ ಸಾಕ್ಷಿಯಾಗಿದೆ. ತುರ್ತು ಸಂದರ್ಭಗಳಲ್ಲಿ ಇಲ್ಲಿನ 1,200ಕ್ಕೂ ಮಂದಿ ರಕ್ತದಾನಕ್ಕೆ ಸಿದ್ಧವಾಗಿರುವುದು ಸಾಮಾನ್ಯ ಸಂಗತಿಯೇನಲ್ಲ.
ಈ ನಿರಂತರ ಪ್ರಯತ್ನಗಳಿಂದ ಅಕ್ಕಪಕ್ಕದ ಗ್ರಾಮಗಳಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಹಾನಗಲ್ಲ ತಾಲೂಕಿನ 50ಕ್ಕೂ ಅಧಿಕ ಗ್ರಾಮದ ಜನರು ಸ್ವಯಂಸ್ಪೂರ್ತಿಯಿಂದ ರಕ್ತದಾನಕ್ಕೆ ಮುಂದೆ ಬರುತ್ತಿದ್ದಾರೆ. ರಕ್ತದಾನ ಶಿಬಿರಗಳನ್ನೂ ಆಯೋಜಿಸುತ್ತಿದ್ದಾರೆ. ಹಾವೇರಿ ಜಿಲ್ಲಾ ರಕ್ತನಿಧಿಗೆ ಹೆಚ್ಚು ರಕ್ತ ಸಂಗ್ರಹಕ್ಕಾಗಿ ರಾಜ್ಯ ಮಟ್ಟದ ಪ್ರಶಸ್ತಿ ಸಹ ಸ್ನೇಹಮೈತ್ರಿ ಬ್ಲಡ್​ಆರ್ವಿುಗೆ ಲಭಿಸಿದೆ.
‘ನಮ್ಮ ಆರೋಗ್ಯದ ಹಿತರಕ್ಷಣೆ ದೃಷ್ಟಿಯಲ್ಲೂ ರಕ್ತದಾನ ಮಾಡುವುದು ಅತಿ ಅವಶ್ಯ. ರಕ್ತದಾನದಲ್ಲಿ ನಾಲ್ಕು ವಿಧಗಳಿದ್ದು, ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಆರೋಗ್ಯ ಇನ್ನಷ್ಟು ವೃದ್ಧಿಸುತ್ತದೆ ಹೊರತು ಕ್ಷೀಣಿಸುವುದಿಲ್ಲ. ಈ ನಿಟ್ಟಿನಲ್ಲಿ ಜನರ ದೃಷ್ಟಿಕೋನ ಬದಲಾಗಬೇಕಿದೆ. ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ನನ್ನ ಕೆಲಸಕ್ಕೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರ ಸಿಕ್ಕಿದೆ’ ಎಂದು ಹೇಳುವ ಕರಬಸಪ್ಪ ಗೊಂದಿ, (88611-18881) ಅಕ್ಕಿಆಲೂರು ಗ್ರಾಮದಂತೆ ಇಡೀ ಹಾನಗಲ್ಲ ತಾಲೂಕನ್ನು ರಕ್ತದಾನ, ನೇತ್ರದಾನ ಕಾರ್ಯದಲ್ಲಿ ಮಾದರಿಯಾಗಿ ಮಾಡುವ ಗುರಿ ಹೊಂದಿದ್ದಾರೆ.
ಸಮಾಜದ ಸಮಸ್ಯೆಗಳ ಬಗ್ಗೆಯೇ ರ್ಚಚಿಸುತ್ತ ಕಾಲಹರಣ ಮಾಡುವುದಕ್ಕಿಂತ ಪರಿಹಾರದ ನಿಟ್ಟಿನಲ್ಲಿ ಇಂಥ ದಿಟ್ಟ ಹೆಜ್ಜೆಗಳನ್ನು ಇರಿಸಿದರೆ ಎಂಥ ಅದ್ಭುತ ಬದಲಾವಣೆ ತರಬಹುದು ಅಲ್ಲವೇ? ಗ್ರಾಮಗಳು ಅವುಗಳ ಶಕ್ತಿ, ಆಸಕ್ತಿಯ ಅನುಸಾರ ಜಲ ಸಂರಕ್ಷಣೆ, ಗಿಡ ನೆಡುವಿಕೆ, ಸ್ವಚ್ಛತೆ, ಸ್ವಾವಲಂಬನೆ, ಹಸಿರು ಇಂಧನ, ಸಾವಯವ ಕೃಷಿ… ಹೀಗೆ ಒಂದೊಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಹೋದರೂ ಗ್ರಾಮೀಣ ಭಾರತ ಸಮೃದ್ಧವಾಗುವುದರಲ್ಲಿ ಸಂಶಯವಿಲ್ಲ. ಹಾಂ, ಇದೆಲ್ಲದರ ಜತೆ ರಕ್ತದಾನವನ್ನು ಮಾಡಿ ನಿಜವಾದ ರಕ್ತಸಂಬಂಧಿಯಾಗುವುದನ್ನು ಮರೆಯದಿರೋಣ. ಒಂದು ಜೀವವನ್ನು ಉಳಿಸಿದ ಸಾರ್ಥಕತೆ ನಮ್ಮ ಬಾಳನ್ನೂ ಆವರಿಸಿಕೊಳ್ಳಲಿ. ಈ ಮೂಲಕ ಮಾನವೀಯತೆ ಹೊಸ ಆಯಾಮಕ್ಕೆ ತೆರೆದುಕೊಂಡರೆ ಇಂಥ ಪ್ರಯತ್ನಗಳು ನಿಜಕ್ಕೂ ಯಶಸ್ವಿಯಾದಂತೆ.
(ಲೇಖಕರು ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕರು)
IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
