ರಾಜ್ಯದಲ್ಲಿ ಕೊಳವೆಬಾವಿಗೆ ಮಗು ಬಿದ್ದ ಮತ್ತೊಂದು ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸತೀಶ್-ಪೂಜಾ ದಂಪತಿ ತಮ್ಮ 4 ಎಕರೆ ಜಮೀನಿನಲ್ಲಿ ನಿಂಬೆ ಮತ್ತು ಕಬ್ಬಿನ ಬೆಳೆಗೆ ನೀರಿನ ಕೊರತೆ ಎದುರಾಗಿದ್ದರಿಂದ ಕೊಳವೆಬಾವಿ ಕೊರೆಸಿದ್ದರು. ನೀರು ಬೀಳದೇ ಇದ್ದುದರಿಂದ ಅದನ್ನು ಹಾಗೇ ಬಿಟ್ಟಿದ್ದರು. ದುರದೃಷ್ಟವಶಾತ್ ಅವರದೇ ಮಗು, 2 ವರ್ಷದ ಸಾತ್ವಿಕ್ ಆ ಕೊಳವೆಬಾವಿಯಲ್ಲಿ ತಲೆಕೆಳಗಾಗಿ ಬಿದ್ದಿದ್ದಾನೆ. ಸುಮಾರು 22 ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಅದೃಷ್ಟಕ್ಕೆ ಮಗು ಬದುಕಿ ಉಳಿದಿದೆ. ಆದರೆ ಈ ಘಟನೆಯಿಂದ ಸಾರ್ವಜನಿಕರು ಮತ್ತು ಅಧಿಕಾರಿಗಳು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ.
ಇಂತಹ ಘಟನೆಗಳು ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವುದು ಪರಿಪಾಠವೇ ಆಗಿಹೋಗಿದೆ. ಕೆಲವು ವರ್ಷಗಳ ಹಿಂದೆ ಈ ವಿಷಯ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮೆಟ್ಟಿಲೇರಿದ್ದೂ ಉಂಟು. ಆ ಸಂದರ್ಭದಲ್ಲಿ ಅತ್ಯಂತ ಕಠಿಣ ಶಬ್ದಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ನ್ಯಾಯಪೀಠ ‘ಇಂತಹ ಇನ್ನೊಂದೇ ಒಂದು ಘಟನೆ ನಡೆದರೂ ಸಹಿಸುವುದಿಲ್ಲ’ ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಈ ಸಂಬಂಧ ಮಾರ್ಗಸೂಚಿಗಳು ರಚನೆಯಾಗುವುದಕ್ಕೂ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ಗಳೇ ಮುನ್ನುಡಿ ಬರೆದಿದ್ದವು.
ಆ ಮಾರ್ಗಸೂಚಿಗಳು ಈಗಲೂ ಅಸ್ತಿತ್ವದಲ್ಲಿವೆ. ತೆರೆದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಅದಕ್ಕೆ ಆಯಾ ಭಾಗದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಸಹಾಯಕ ಇಂಜಿನಿಯರ್ ಮತ್ತು ಉಪ ತಹಸೀಲ್ದಾರ್​ರನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ಮಾರ್ಗಸೂಚಿಯಲ್ಲಿ ಅವಕಾಶವಿದೆ. ಕೊಳವೆಬಾವಿ ಕೊರೆಸುವುದಕ್ಕೆ 15 ದಿನ ಮೊದಲು ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು; ವಿಫಲವಾದ ಕೊಳವೆಬಾವಿಯನ್ನು ಕಲ್ಲು, ಮಣ್ಣು, ಇಟ್ಟಿಗೆಗಳಿಂದ ಮುಚ್ಚಬೇಕು; ಮುಚ್ಚಿರುವ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ; ಆ ಸಮಿತಿಯಲ್ಲಿ ಎಸ್​ಪಿ, ಎಕ್ಸಿಕ್ಯೂಟಿವ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ತಹಸೀಲ್ದಾರ್​ಗೆ ಸ್ಥಾನ; ನೀರು ಬಂದರೆ ಆ ಕೊಳವೆಬಾವಿಗೆ ಸೂಕ್ತ ಫೆನ್ಸಿಂಗ್ ಅಥವಾ ಕ್ಯಾಪ್ ಅಳವಡಿಕೆ; ಹೀಗೆ ಅನೇಕ ನಿಯಮಗಳು ಆ ಮಾರ್ಗಸೂಚಿಯಲ್ಲಿ ಇವೆ. ಆದರೆ ಅವು ಕಾಗದದ ಮೇಲೆಯೇ ಉಳಿದಿವೆ, ಅನುಷ್ಠಾನಕ್ಕೆ ಬಂದಿಲ್ಲ ಎಂಬುದಕ್ಕೆ ಇಂಡಿ ತಾಲೂಕಿನಲ್ಲಿ ನಡೆದಿರುವ ಘಟನೆಯೇ ತಾಜಾ ನಿದರ್ಶನ. ಘಟನೆ ಸಂಭವಿಸಿದ ಬಳಿಕ ಅದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸುವ ಹಿರಿ-ಕಿರಿಯ ಅಧಿಕಾರಿಗಳು, ಘಟನೆ ಸಂಭವಿಸುವುದಕ್ಕೆ ಮೊದಲೇ ಮಾರ್ಗಸೂಚಿಗಳನ್ವಯ ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿಬಿಟ್ಟರೆ ಇಂತಹ ಅವಘಡಗಳನ್ನು ಖಂಡಿತ ತಪ್ಪಿಸಬಹುದು.
ಈ ವಿಷಯದಲ್ಲಿ ಅಧಿಕಾರಿಗಳನ್ನು ಮಾತ್ರ ದೂಷಿಸಿದರೆ ತಪ್ಪಾದೀತು. ಇದರಲ್ಲಿ ಜನರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ. ತಮ್ಮ ಜಮೀನಿನಲ್ಲಿ ಅಥವಾ ಬೇರೆ ಯವರ ಜಾಗದಲ್ಲಿ ಇಂತಹ ವಿಫಲ ಕೊಳವೆಬಾವಿಗಳು ಇದ್ದರೆ ತಾವೇ ಅವುಗಳನ್ನು ಮುಚ್ಚುವ ಜವಾಬ್ದಾರಿಯುತ ನಡವಳಿಕೆಯನ್ನು ಸಾರ್ವಜನಿಕರು ತೋರಬೇಕಾಗಿದೆ. ಕೊನೇ ಪಕ್ಷ, ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಮುಖೇನ ಅಥವಾ ಮೌಖಿಕವಾಗಿ ತಿಳಿಸಿ, ಅವರಿಂದ ಮುಚ್ಚಿಸುವ ಕೆಲಸವನ್ನಾದರೂ ಮಾಡಬೇಕು. ಒಟ್ಟಿನಲ್ಲಿ, ಅಮಾ ಯಕ ಕಂದಮ್ಮಗಳು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳದಂತೆ ಎಚ್ಚರ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ಯಾರೂ ಮರೆಯಬಾರದು.
‘ನ್ಯಾಷನಲ್ ಕ್ರಶ್’ ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

ಏಪ್ರಿಲ್‌ 14 ರಿಂದ ಬಲ್ಕ್‌ ಬಳಕೆದಾರರಿಗೆ ಶೇ 10ರಷ್ಟು ಕಾವೇರಿ ನೀರು ಪೂರೈಕೆ ಕಡಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
