ವಿಜಯಪುರ:ಮಹಾರಾಷ್ಟ್ರ ಗಡಿ ಕ್ಯಾತೆಯ ಬಗ್ಗೆ ಸರ್ಕಾರವನ್ನು ಸಮರ್ಥಿಸಿದ್ದ ಎಂ.ಬಿ ಪಾಟೀಲ್​ ಈಗ ಸರ್ಕಾರದ ಅವ್ಯವಸ್ಥೆಯ ಬಗ್ಗೆಯೂ ಹರಿಹಾಯ್ದಿದ್ದಾರೆ.
‘ರಾಜ್ಯದಲ್ಲಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಕಳೆದ ಮೂರುವರೆ ವರ್ಷದಲ್ಲಿ ಇಡೀ ರಾಜ್ಯದಲ್ಲಿ ಒಂದೇ ಒಂದು ಹಳ್ಳಿಯಲ್ಲಿ ಬಡವರಿಗೆ ಮನೆ ಕಟ್ಟಿಕೊಡಲಿಕ್ಕೆ ಆಗಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹದಿನೈದು ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಅಂಥ ಮನೆಗಳಿಗೂ ಹಣ ಕೊಟ್ಟಿಲ್ಲ. ಕರೊನಾ ಸಂದರ್ಭದಲ್ಲಿ ಪರಿಹಾರ ಕೂಡ ಸಮರ್ಪಕವಾಗಿ ನೀಡಿಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಗುತ್ತಿಗೆದಾರರ ಸಂಘದವರೇ ಪ್ರಧಾನ ಮಂತ್ರಿ ಗೆ ಪತ್ರ ಬರೆದಿದ್ದಾರೆ. ಬಹುತೇಕ ಸಚಿವರು ಹಾಗೂ ಬಹುತೇಕ ಇಲಾಖೆಯಲ್ಲಿ 40% ರಷ್ಟು ಕಮೀಷನ್ ಕೇಳುತ್ತಿದ್ದು, ಬಿಲ್ ಪಾವತಿ ಆಗದ ಕಾರಣ ಗುತ್ತಿಗೆದಾರರು ಬೇಸತ್ತಿದ್ದಾರೆ ಎಂದರು. ಶಾಲೆಗಳ ಸ್ಥಿತಿ ಗಂಭೀರವಾಗಿದೆ, ಶಿಕ್ಷಕರ ನೇಮಕಾತಿ ಆಗಿಲ್ಲ. ಹೀಗೆ ಅನೇಕ ಸಮಸ್ಯೆಗಳಿಂದ ರಾಜ್ಯ ಜರ್ಝರಿತವಾಗಿದೆ’ ಎಂದು ಎಂಬಿ ಪಾಟೀಲ್​ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಚುನಾವಣೆ ಅಕ್ರಮ, ಹಿಂದುತ್ವ ವಿಚಾರ, ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಿದರು.
ಚುನಾವಣೆ ಅಕ್ರಮ:ಸರ್ಕಾರ ಬಿಬಿಎಂಪಿಯಲ್ಲಿ “ಚಿಲುಮೆ” ಎಂಬ ಖಾಸಗಿ ಸಂಸ್ಥೆ ಮೂಲಕ ಅಕ್ರಮ ಎಸಗಲು ಹೊರಟಿದೆ. ಯಾವುದೇ ಟೆಂಡರ್ ಕರೆಯದೇ, ಸಂಸ್ಥೆಯ ಬಗ್ಗೆ ಮಾಹಿತಿ ಪಡೆಯದೇ ಕೇವಲ ಅರ್ಜಿ ಸಲ್ಲಿಸಿದ ಮರುದಿನವೇ ಆ ಸಂಸ್ಥೆಗೆ ಜವಾಬ್ದಾರಿ ನೀಡಿದ್ದು ಅಕ್ರಮವಲ್ಲವೇ? ಆ ಸಂಸ್ಥೆ ಮೂಲಕ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಮಾಡಿದ್ದು ಅಕ್ರಮವಲ್ಲವೇ? ಎಂದು ಪ್ರಶ್ನಿಸಿದರು. ವಿಶೇಷವಾಗಿ ಅಲ್ಪಸಂಖ್ಯಾತರಿದ್ದಲ್ಲಿ, ದಲಿತರಿದ್ದಲ್ಲಿ, ಕೊಳಚೆ ಪ್ರದೇಶದಲ್ಲಿರುವ ಮತದಾರರ ಹೆಸರು ಡಿಲಿಟ್ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಬಿ.ಎಲ್.ಒ ಗಳು ಸರ್ಕಾರಿ ಹಾಗೂ ಅರೆ ಸರ್ಕಾರಿ ಆಗಿರುತ್ತಾರೆ. ಆದರೆ ಇಲ್ಲಿ ಚಿಲುಮೆ ಸಂಸ್ಥೆ ಅವರು ಬಿ.ಎಲ್.ಒ ಜವಾಬ್ದಾರಿ ಕೂಡ ನಿಭಾಯಿಸುತ್ತಿರುವುದು ಅಚ್ಚರಿಯ ಸಂಗತಿ. ಈ ಎಲ್ಲ ಕಾರಣಗಳಿಂದಾಗಿ ಕಾಂಗ್ರೆಸ್ ನಿಂದ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಈಗಾಗಲೇ ತನಿಖೆ ಕೂಡ ನಡೆದು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಇಂಥ ವ್ಯವಸ್ಥೆ ಹುಟ್ಟುಹಾಕಿರುವುದು ದುರಂತ ಎಂದರು.
ಇದು ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಕೆಲಸ ನಡೆದಿದೆ‌. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಕಂಡು ಬಂದಿದೆ. ವಿಜಯಪುರ ದಲ್ಲೂ ದೂರು ನೀಡಲಾಗಿದೆ. ಚುನಾವಣೆ ಅಧಿಕಾರಿಗಳು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಂ.ಬಿ. ಪಾಟೀಲ ತಿಳಿಸಿದರು. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದ ಬಿಜೆಪಿ ಇದೀಗ ಮತದಾರರ ಪಟ್ಟಿ ಯಿಂದ ಹೆಸರು ಅಳಿಸಿ ಹಾಕುವ ಮೂಲಕ ಮತ್ತೆ ವಾಮ ಮಾರ್ಗವಾಗಿ ಅಧಿಕಾರಕ್ಕೆ ಬರಲು ಯತ್ನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2018 ರ ಪ್ರಣಾಳಿಕೆಯಲ್ಲಿ ಬಿಜೆಪಿ 300 ಭರವಸೆ ನೀಡಿದ್ದು, ಕೇವಲ 25 ಬೇಡಿಕೆ ಈಡೇರಿಸಿದೆ. ನೀರಾವರಿ 1.50 ಲಕ್ಷ ಕೋಟಿ ರೂಪಾಯಿ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಈವರೆಗೆ ನೀಡಿದ್ದೆಷ್ಟು? ಎಂದರು.
ಹಿಂದುತ್ವ ಮತ್ತು ಧಾರ್ಮಿಕ ವಿಚಾರ:ಸತೀಶ ಜಾರಕಿಹೊಳಿ ಅವರ ಉದ್ದೇಶ ಬೇರೆ. ಹಿಂದು ಧರ್ಮ ವೇ ಆಫ್ ಲೈಫ್. ಜೈನ್ ಬೌದ್ದ ಸಿಖ್ ಪಾರ್ಸಿ ಎಲ್ಲರೂ ಹಿಂದೂಗಳು. ಇದನ್ನು ಮೋಹನ್ ಭಾಗವತ್ ಅವರೇ ಹೇಳಿದ್ದಾರೆ. ಇದನ್ನೇ ಸತೀಶ ಜಾರಕಿಹೊಳಿ ಹೇಳಿದ್ದು ಅಪಾರ್ಥವಾದ ಹಿನ್ನೆಲೆ ಕ್ಷಮೆ ಕೇಳಿದ್ದಾರೆ. ಇನ್ನು ಸಿ.ಟಿ. ರವಿ ಸಿದ್ದರಾಮಯ್ಯ ಅವರನ್ನು ಕುರಿತು ಸಿದ್ರಾಮುಲ್ಲಾಖಾನ ಎಂದಿರುವುದು ರವಿ ಅವರ ಕೀಳು ಅಭಿರುಚಿ‌. ಸಿದ್ದರಾಮಯ್ಯ ಒಬ್ಬ ಹಿಂದುಳಿದ ಹಾಲುಮತ ಸಮಾಜದವರು. ಹೀಗಾಗಿ ಹಾಗೆ ಮಾತನಾಡುವುದು ಸರಿಯಲ್ಲ. ಮುಂದೆ ಆ ಹಾಲುಮತ ಸಮಾಜ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದರು.
ಸಿಎಂ ಪೈಪೋಟಿ ವಿಚಾರ:ಸ್ವಂತ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಶಾಸಕಾಂಗ ಪಕ್ಷದ ಸಭೆ ಕರೆದು, ಕೇಂದ್ರದ ವೀಕ್ಷಕರ ಅಭಿಪ್ರಾಯ ಪಡೆದು ಹೈಕಮಾಂಡ್ ಮುಖ್ಯಮಂತ್ರಿ ಅವರನ್ನು ಘೋಷಣೆ ಮಾಡಲಿದೆ. ಹೀಗಾಗಿ ಆ ವಿಷಯ ಸದ್ಯಕ್ಕೆ ಅಪ್ರಸ್ತುತ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
