-ಎನ್. ಗುರುನಾಗನಂದನ್
ತ್ರಿಮತಗಳಲ್ಲಿ ಒಂದಾದ ಮಧ್ವಮತವನ್ನು ಸ್ಥಾಪಿಸಿ, ಭಗವಂತನ ಪರಿಪೂರ್ಣತೆ ಮತ್ತು ಉಳಿದೆಲ್ಲದರ ಪರಿಮಿತಿಯ ನಡುವಿನ ವ್ಯತ್ಯಾಸವನ್ನು ತಿಳಿಸಿ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು ಶ್ರೀ ಮಧ್ವಾಚಾರ್ಯರು. ಶ್ರೀಹರಿಯನ್ನು ಸೇವಿಸಲು ಮುಖ್ಯಪ್ರಾಣ ದೇವರು ತ್ರೇತಾ ಯುಗದಲ್ಲಿ ಹನುಮಂತನಾಗಿ, ದ್ವಾಪರದಲ್ಲಿ ಭೀಮಸೇನನಾಗಿ, ಕಲಿಯುಗದಲ್ಲಿ ಆಚಾರ್ಯ ಮಧ್ವರಾಗಿ ಅವತರಿಸುತ್ತಾರೆ. ನಾರಾಯಣ ಪಂಡಿತಾಚಾರ್ಯರು ಮಧ್ವರ ಜೀವನದ ಪ್ರಮುಖ ಘಟನೆಗಳನ್ನು ಸಂಗ್ರಹಿಸಿ ‘ಶ್ರೀ ಸುಮಧ್ವ ವಿಜಯ’ ಎಂಬ ಕೃತಿಯನ್ನು ರಚಿಸಿದ್ದಾರೆ. ಅದರ ಮೂಲಕವೇ ಮಧ್ವರ ಅಮೋಘ ಜೀವನವನ್ನು ತಿಳಿಯಲು ಸಾಧ್ಯ.
ಮಧ್ಯಗೇಹ ದಂಪತಿಗೆ ಉಡುಪಿಯ ಅನಂತೇಶ್ವರನ ಕೃಪೆಯಿಂದ ಪಾಜಕ ಕ್ಷೇತ್ರದಲ್ಲಿ ಮಧ್ವರು ಜನಿಸುತ್ತಾರೆ. ವಾಸುದೇವ ಎಂದು ನಾಮಕರಣವಾಗುತ್ತದೆ. ಬಾಲ್ಯದಲ್ಲಿ ವಾಸುದೇವ ಹಲವಾರು ಅಸಾಧಾರಣ ಕೆಲಸಗಳನ್ನು ಮಾಡುತ್ತಾನೆ. ಮನೆಯಲ್ಲಿ ಹಸುವಿಗೆ ಎಂದು ಇಟ್ಟಿದ್ದ ಹುರುಳಿಯನ್ನು ಎಳೆ ವಯಸ್ಸಿನ ವಾಸುದೇವ ತಿಂದು ಜೀರ್ಣಿಸಿಕೊಳ್ಳುತ್ತಾನೆ. ಒಮ್ಮೆ ಸಾಲವನ್ನು ಹಿಂಪಡೆಯಲು ಶೆಟ್ಟಿ ಮಧ್ಯಗೇಹರ ಮನೆಗೆ ಬರುತ್ತಾನೆ. ಹುಣಸೆ ಮರದ ಕೆಳಗೆ ಶೆಟ್ಟಿ ಮತ್ತು ಮಧ್ಯಗೇಹರು ಮಾತನಾಡುತ್ತಿದ್ದಾಗ, ತಂದೆಯನ್ನು ಊಟಕ್ಕೆ ಕರೆಯಲು ವಾಸುದೇವ ಅಲ್ಲಿಗೆ ಬರುತ್ತಾನೆ. ಶೆಟ್ಟಿ ಮಧ್ಯಗೇಹರ ಬಳಿ ಹಣ ಕೇಳುತ್ತಿರುವುದನ್ನು ವಾಸುದೇವ ನೋಡಿ, ಅಲ್ಲೇ ಬಿದ್ದಿದ್ದ ಹುಣಸೆ ಬೀಜಗಳನ್ನು ಶೆಟ್ಟಿಗೆ ನೀಡುತ್ತಾನೆ. ಆ ಹುಣಸೆ ಬೀಜಗಳು ಶೆಟ್ಟಿಗೆ ಚಿನ್ನವಾಗಿ ಪರಿವರ್ತನೆಯಾಗುತ್ತದೆ. ಹೀಗೆ ತಂದೆಯ ಸಾಲವನ್ನು ತೀರಿಸುತ್ತಾನೆ ವಾಸುದೇವ. ಇಂದಿಗೂ ಆ ಹುಣಸೆ ಮರವನ್ನು ಕಾಣಬಹುದು. ಮತ್ತೊಮ್ಮೆ ಒಂದು ದಿನ ಪ್ರವಚನಕ್ಕೆಂದು ತಾಯಿಯ ಜತೆ ವಾಸುದೇವ ಹೋದಾಗ, ಅಲ್ಲಿನ ಪ್ರವಚನಕಾರರು ಶ್ರೀಮದ್ ಭಾಗವತದ ಒಂದು ಶ್ಲೋಕಕ್ಕೆ ತಪ್ಪಾದ ಅರ್ಥವನ್ನು ಹೇಳುತ್ತಿರುತ್ತಾರೆ. ಆಗ ಸಣ್ಣ ವಯಸ್ಸಿನ ವಾಸುದೇವ ನೂರಾರು ಜನರ ಮಧ್ಯೆ ಸರಿಯಾದ ಅರ್ಥ ತಿಳಿಸಿ ಮೊದಲ ದಿಗ್ವಿಜಯವನ್ನು ಸಾಧಿಸುತ್ತಾನೆ.
11ನೇ ವಯಸ್ಸಿಗೆ ವಾಸುದೇವ ಸಂಸಾರದ ಸಕಲ ಸುಖಗಳನ್ನು ತೊರೆದು ವಿಜಯದಶಮಿಯ ಶುಭ ಮುಹೂರ್ತದಲ್ಲಿ  ಅಚ್ಯುತಪ್ರೇಕ್ಷಾಚಾರ್ಯರಿಂದ ಸನ್ಯಾಸ ದೀಕ್ಷೆಯನ್ನು ಪಡೆಯುತ್ತಾನೆ. ಪೂರ್ಣಪ್ರಜ್ಞ ಎಂದು ಮರುನಾಮಕರಣವಾಗುತ್ತದೆ. ಅಚ್ಯುತಪ್ರೇಕ್ಷರಿಗೆ ಜಗದ್ಗುರುಗಳಾದ ಮುಖ್ಯಪ್ರಾಣನೇ ಶಿಷ್ಯನಾಗುತ್ತಾನೆ. ಅಚ್ಯುತಪ್ರೇಕ್ಷರಿಗೆ ಅದ್ವೈತ ಸಿದ್ಧಾಂತದಲ್ಲಿರುವ ದೋಷಗಳನ್ನು ತೋರಿಸಿ, ಶ್ರೀ ಹರಿಯನ್ನು ಕಾಣಲು ಇರುವ ಸರಿಯಾದ ಮಾರ್ಗವನ್ನು ಸಾರುವ ದ್ವೈತ ಸಿದ್ಧಾಂತವನ್ನು ಪೂರ್ಣಪ್ರಜ್ಞರು ಪರಿಚಯಿಸುತ್ತಾರೆ. ಶಿಷ್ಯನ ಜ್ಞಾನವನ್ನು ಕಂಡು ಅಚ್ಯುತಪ್ರೇಕ್ಷರು ಬೆರಗಾಗಿ ಶಿಷ್ಯನನ್ನು ವೇದಾಂತ ಪೀಠದಲ್ಲಿ ಕೂರಿಸಿ ಆನಂದತೀರ್ಥ ಎಂಬ ಮತ್ತೊಂದು ಹೆಸರನ್ನು ನೀಡುತ್ತಾರೆ. ಆನಂದತೀರ್ಥ ಪದದ ಅರ್ಥ ಸಕಲರಿಗೂ ಆನಂದ ನೀಡುವವನು.
ಅಚ್ಯುತಪ್ರೇಕ್ಷರು ತಮ್ಮ ಶಿಷ್ಯನನ್ನು ಬಿಟ್ಟಿರುತ್ತಿರಲಿಲ್ಲ. ಅವರಿಗಿದ್ದ ಸಕಲ ಸಂದೇಹಗಳನ್ನು ಪೂರ್ಣಪ್ರಜ್ಞರು ದೂರ ಮಾಡುತ್ತಿದ್ದರು. ಒಮ್ಮೆ ಪೂರ್ಣಪ್ರಜ್ಞರು ಗಂಗಾಸ್ನಾನಕ್ಕೆ ದೂರದ ಬದರಿಗೆ ಹೋಗಬೇಕೆಂದಾಗ, ವೃದ್ಧ ಅಚ್ಯುತ ಪ್ರೇಕ್ಷಾಚಾರ್ಯರು ಶಿಷ್ಯನನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಪೂರ್ಣಪ್ರಜ್ಞರನ್ನು ತಡೆಯುತ್ತಾರೆ. ಆಗ ಗುರುಗಳ ಮಾತನ್ನು ಒಪ್ಪಿ ಉಳಿದುಕೊಳ್ಳುತ್ತಾರೆ. ಆದರೆ ಗಂಗಾಸ್ನಾನ ಮಾಡಲೇಬೇಕೆಂದು ಪೂರ್ಣಪ್ರಜ್ಞರು ಗಂಗೆಯನ್ನು ಅವರಿದ್ದ ಉಡುಪಿಯ ಸರೋವರಕ್ಕೇ ಕರೆಸುತ್ತಾರೆ. ಆ ಸಮಯದಲ್ಲಿ ಮೆರೆದಿದ್ದ ಸಕಲರೂ ಗಂಗೆ ಬಂದು ಸರೋವರದಲ್ಲಿ ನೆಲೆಸುವ ಅಪೂರ್ವ ಘಟನೆಗೆ ಸಾಕ್ಷಿಯಾಗುತ್ತಾರೆ. ಅದು ಇಂದಿಗೂ ಮಧ್ವ ಸರೋವರ ಎಂದು ಪ್ರಚಲಿತದಲ್ಲಿದೆ.
ಮಧ್ವರು ಒಮ್ಮೆ ಸ್ನಾನಕ್ಕೆಂದು ಸಮುದ್ರಕ್ಕೆ ಹೋದಾಗ ಅಲ್ಲಿ ರುಕ್ಮಿಣಿ ಮತ್ತು ಅರ್ಜುನ ಪೂಜೆ ಮಾಡಿದ್ದ ಶ್ರೀ ಕೃಷ್ಣನ ಪ್ರತಿಮೆ ಸಿಗುತ್ತದೆ. ಅದನ್ನು ಉಡುಪಿಗೆ ತಂದು ಪ್ರತಿಷ್ಠಾಪಿಸುತ್ತಾರೆ. ಕೃಷ್ಣನ ಪೂಜೆಗೆಂದು ಅಷ್ಟ ಮಠಗಳನ್ನು ತೆರೆದು, ಎಂಟು ಸನ್ಯಾಸಿಗಳನ್ನು ನೇಮಿಸುತ್ತಾರೆ. ಇಂದಿಗೂ ಅಷ್ಟ ಮಠಗಳು ಕೃಷ್ಣನ ಸೇವೆಯನ್ನು ಮಾಡುತ್ತಿವೆ.
ಪೂರ್ಣಪ್ರಜ್ಞರು ತಮ್ಮ ಸನ್ಯಾಸಿ ಶಿಷ್ಯರ ಜತೆ ಸಂಚರಿಸುತ್ತ ಅನೇಕ ಅದ್ವೈತವಾದಿಗಳನ್ನು ಮಣಿಸುತ್ತಾರೆ. ವಾದಿಸಿಂಹ ಮತ್ತು ಬುದ್ಧಿಸಾಗರರಂತಹ ವಾದಿದಿಗ್ಗಜರನ್ನು ಪೂರ್ಣಪ್ರಜ್ಞರು ಗೆಲ್ಲುತ್ತಾರೆ. ತಮ್ಮ ಅದ್ವಿತೀಯ ಜ್ಞಾನದಿಂದ ಶೋಭನ ಭಟ್ಟ (ಪದ್ಮನಾಭ ತೀರ್ಥರು) ಮೊದಲಾದ ಅದ್ವೈತಿಗಳನ್ನು ಮಾಧ್ವರನ್ನಾಗಿಸುವಲ್ಲಿ ಯಶಸ್ವಿಯಾಗುತ್ತಾರೆ.
ಅದ್ವೈತಭಾಷ್ಯದಲ್ಲಿರುವ ದೋಷಗಳನ್ನು ಎತ್ತಿ ಹಿಡಿದು, ದ್ವೈತ ಸಿದ್ಧಾಂತವನ್ನು ಸಾರುವ 37 ಮಹಾನ್ ಕೃತಿಗಳನ್ನು ರಚಿಸಿದ್ದಾರೆ. ಅನುವ್ಯಾಖ್ಯಾನ ಮಧ್ವರ ಮೇರು ಕೃತಿಗಳಲ್ಲಿ ಒಂದು. ಅನುವ್ಯಾಖ್ಯಾನ ಬ್ರಹ್ಮಸೂತ್ರಕ್ಕೆ ಮಧ್ವರು ಬರೆದ ಟೀಕೆ. ಇದೇ ಅನುವ್ಯಾಖ್ಯಾನಕ್ಕೆ ಶ್ರೀ ಜಯತೀರ್ಥರು ಟೀಕೆಯನ್ನು ಬರೆದು ಶ್ರೀಮನ್ ನ್ಯಾಯಸುಧಾ ಕೃತಿಯನ್ನು ರಚಿಸುತ್ತಾರೆ. ಬ್ರಹ್ಮಸೂತ್ರ ಭಾಷ್ಯ, ನ್ಯಾಯ ವಿವರ್ಣ, ಅಣು ಭಾಷ್ಯ, ಋಗ್ ಭಾಷ್ಯ, ಮಹಾಭಾರತ ತಾತ್ಪರ್ಯ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ ಮಧ್ವರ ಸಿದ್ಧಾಂತವನ್ನು ಸಾರುವ ಕೃತಿಗಳು ಮತ್ತು ಮಾಧ್ವರ ನಿತ್ಯ ಪಾರಾಯಣ ಗ್ರಂಥಗಳಾಗಿವೆ.
ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ಐತರೇಯೋಪನಿಷತ್ತಿನ ಅರ್ಥ ಹೇಳುವ ಸಂದರ್ಭದಲ್ಲಿ ಮನುಷ್ಯರಿಗೆ ಕಾಣುವಂತೆ ಸಕಲ ದೇವತೆಗಳು ಆಕಾಶದಲ್ಲಿ ನಿಂತು ಭಕ್ತಿಯಿಂದ ಮಧ್ವರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿ ನಮಸ್ಕರಿಸುತ್ತಾರೆ. ನಂತರ ಮಧ್ವರು, ಪದ್ಮನಾಭ ತೀರ್ಥರನ್ನು ವೇದಾಂತ ಪೀಠದಲ್ಲಿ ಕೂರಿಸಿ ಮಾಘ ಶುಕ್ಲ ನವಮಿಯಂದು ಬದರಿಕಾಶ್ರಮವನ್ನು ಪ್ರವೇಶಿಸುತ್ತಾರೆ. ಇಂದಿಗೂ ವೇದವ್ಯಾಸರ ಸೇವೆಯನ್ನು ಮಾಡುತ್ತಾ, ಸಜ್ಜನರಿಗೆ ಅನುಗ್ರಹ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
