ರುದ್ರಣ್ಣ ಹರ್ತಿಕೋಟೆಬೆಳಗಾವಿ:ಮಹಾರಾಷ್ಟ್ರ ಗಡಿ ವಿವಾದವನ್ನು ಪದೇಪದೆ ಕೆದಕುತ್ತ ಆ ರಾಜ್ಯದಲ್ಲಿರುವ ಕನ್ನಡಿಗರಲ್ಲಿ ಮೂಡಿಸಿರುವ ಅಭದ್ರತೆಯ ಭಾವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅವರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಜತೆಗೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾದಲ್ಲಿರುವ ಕನ್ನಡಿಗರಲ್ಲೂ ಭರವಸೆ ಮೂಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಮೊದಲ ಹಂತದಲ್ಲಿ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಸಮಸ್ಯೆ ಆಲಿಸಲಿದೆ.
ಎಚ್ಚೆತ್ತ ಸರ್ಕಾರ:
ಕರ್ನಾಟಕದ 865 ಹಳ್ಳಿ ಮತ್ತು ಪಟ್ಟಣಗಳನ್ನು ಸೇರಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಲ್ಲದೆ, ಹೊರನಾಡ ಮರಾಠಿಗರ ನೆರವಿಗೆ ಕೆಲ ಯೋಜನೆಗಳನ್ನು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದ ಬೆನ್ನ ಹಿಂದೆಯೇ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಮಹಾರಾಷ್ಟ್ರದ ಸಚಿವರು, ಸಂಸದರು ಬೆಳಗಾವಿಗೆ ಬಂದು ಸಭೆ ನಡೆಸುವುದಾಗಿ ಹೇಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ರಾಜ್ಯದಲ್ಲಿಯೇ ಆ ಭಾಗದ ಜನರ ಸಭೆ ನಡೆಸಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಈಗಾಗಲೇ ಜತ್, ಅಕ್ಕಲಕೋಟೆಯ ಅನೇಕ ಹಳ್ಳಿಗಳು ಕರ್ನಾಟಕಕ್ಕೆ ಸೇರುವಂತೆ ಠರಾವು ಪಾಸ್ ಮಾಡಿವೆ.
ಗಡಿ ಪ್ರಾಧಿಕಾರಕ್ಕೆ ಸೂಚನೆ:
ಬೆಳಗಾವಿಯಲ್ಲಿಯೇ ಮಹಾ ರಾಷ್ಟ್ರದ ಕನ್ನಡಿಗರೊಂದಿಗೆ ಸಭೆ ನಡೆಸುವ ಮೂಲಕ ಅವರ ಸಮಸ್ಯೆ ಗಳನ್ನು ತಿಳಿದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಕೊಡಲಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯವಾದ ಕೂಡಲೇ ಮಾಜಿ ಸಂಸದ ಪ್ರಭಾಕರ ಕೋರೆ ಅವರೊಂದಿಗೆ ಜತ್, ಅಕ್ಕಲಕೋಟೆ ಮೊದಲಾದ ಮಹಾರಾಷ್ಟ್ರ ಭಾಗದ ಕನ್ನಡಿಗರೊಂದಿಗೆ ಚರ್ಚೆ ಮಾಡಿ ಅವರ ಸಮಸ್ಯೆಯನ್ನು ಆಲಿಸಲಿದ್ದಾರೆ. ಆ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಬಳಿಕ ಉಳಿದ ಗಡಿ ರಾಜ್ಯಗಳ ಕನ್ನಡಿಗರ ಸಮಸ್ಯೆ ಆಲಿಸಲು ಪ್ರಾಧಿಕಾರ ಸಭೆಗಳನ್ನು ನಡೆಸಲಿದೆ.
ಸವಾಲು ಹಾಕಿದ್ದು ಸರಿಯಲ್ಲ:
ಗಡಿ ವಿವಾದ ಸಂಬಂಧವಾಗಿ ಕರ್ನಾಟಕ ಸರ್ಕಾರ ನಮಗೆ ಸವಾಲು ಹಾಕಿದ್ದು ಸರಿಯಲ್ಲ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬುಧವಾರ ನಾಗಪುರ ಅಧಿವೇಶನದಲ್ಲಿ ಹೇಳಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿ 865 ಹಳ್ಳಿಗಳ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇದಕ್ಕಾಗಿ ಕಾನೂನು ಪ್ರಕಾರ ಸಾಧ್ಯವಿರುವ ಎಲ್ಲ ಹೋರಾಟ ಮಾಡುತ್ತೇವೆ. ಈ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೂ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಶಿಂಧೆ ತಿಳಿಸಿದ್ದಾರೆ. ಶಿಂಧೆ ಈ ಹೇಳಿಕೆಯಿಂದ ಗಡಿ ವಿವಾದದ ವಾಗ್ಯುದ್ಧ ಇನ್ನಷ್ಟು ಬಿರುಸಾಗುವ ಲಕ್ಷಣ ಕಾಣಿಸಿದೆ.
2ನೇ ಹಂತದಲ್ಲಿ ಉನ್ನತ ಮಟ್ಟದ ಸಭೆ
ಪ್ರಾಧಿಕಾರವು ಬೆಳಗಾವಿಯಲ್ಲಿ ಪ್ರಾಥಮಿಕ ಸಭೆ ನಡೆಸಲಿದೆ. ಆ ನಂತರ ಬೆಂಗಳೂರು ಅಥವಾ ಬೆಳಗಾವಿ ಯಲ್ಲಿ ಸಚಿವರು, ಮುಖ್ಯ ಕಾರ್ಯದರ್ಶಿ ಸೇರಿ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮಗಳ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುತ್ತದೆ.
ಮೀಸಲಾತಿ ಸೌಲಭ್ಯ
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಹೊರನಾಡ ಕನ್ನಡಿಗರಿಗೆ ಮೀಸಲಾತಿ ನೀಡಲಾಗುತ್ತಿತ್ತು, ಆ ನಂತರ ಅದು ನಿಂತಿದೆ. ಈಗ ಮತ್ತೆ ಹೊರನಾಡ ಕನ್ನಡಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಪ್ರಾಧಿಕಾರದ ತೀರ್ಮಾನ ಬಂದ ನಂತರ ನಿರ್ಧಾರ ತೆಗೆದುಕೊಳ್ಳಲಿದೆ.
ಗಡಿ ಕನ್ನಡಿಗರ ಜತೆ ಸಭೆ ನಡೆಸುವಂತೆ ಮುಖ್ಯಮಂತ್ರಿಗಳಿಂದ ಸೂಚನೆ ಬರುವ ಮಾಹಿತಿ ಲಭ್ಯವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಕೂಡಲೇ ಸಭೆ ನಡೆಸಲಿದ್ದೇವೆ. ಬೇರೆ ಬೇರೆ ರಾಜ್ಯಗಳ ಕನ್ನಡಿಗರ ಜತೆಗೂ ಸಭೆ ನಡೆಸಿ ನಂತರ ಸರ್ಕಾರಕ್ಕೆ ಅವರ ಸಮಸ್ಯೆಗಳ ಬಗ್ಗೆ ಶಿಫಾರಸು ಮಾಡಲಿದ್ದೇವೆ.
| ಡಾ.ಸಿ. ಸೋಮಶೇಖರ್ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
ಮಹಾರಾಷ್ಟ್ರ ವಿಧಾನಸಭೆ ನಿರ್ಣಯ ತೆಗೆದುಕೊಂಡಿರು ವುದರಿಂದ ರಾಜ್ಯದಲ್ಲಿಯೂ ಸರ್ಕಾರ ಹೊರನಾಡ ಕನ್ನಡಿಗರ ನೆರವಿಗೆ ಧಾವಿಸಬೇಕಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದೇವೆ. ಮೀಸಲಾತಿ ಎಷ್ಟಿರಬೇಕು ಎಂಬುದು ಸರ್ಕಾರದ ವಿವೇಚನೆಗೆ ಸೇರಿದೆ.
| ಅಶೋಕ್ ಚಂದರಗಿಕನ್ನಡಪರ ಹೋರಾಟಗಾರ, ಬೆಳಗಾವಿ
ಅಭಿವೃದ್ಧಿ ಮೇಲ್ವಿಚಾರಣೆ
ಗಡಿ ಅಭಿವೃದ್ಧಿ ಪ್ರಾಧಿಕಾರ 63 ಗಡಿ ತಾಲೂಕು ಗಳಲ್ಲಿ ವಿವಿಧ ಇಲಾಖೆಗಳಿಂದ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಿದೆ. ಹಿಂದೆ ಗಡಿ ಪ್ರದೇಶ ಅಭಿವೃದ್ಧಿ ನಿಧಿ ನೀಡಲಾಗುತ್ತಿತ್ತು. ಈಗ ನಿಲ್ಲಿಸಲಾಗಿದೆ. ಉಳಿದ ತಾಲೂಕುಗಳಿಗೆ ನೀಡುವಂತೆ ಈ ತಾಲೂಕುಗಳಿಗೆ ಅನುದಾನ ನೀಡಲಾಗುತ್ತಿದೆ. ಆದರೆ ಅದರಿಂದ ಗಡಿಯಲ್ಲಿರುವ ನೆರೆ ರಾಜ್ಯದ ಕನ್ನಡ ಪ್ರದೇಶದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಪ್ರಾಧಿಕಾರದ ಕೆಲಸ ಮೇಲ್ವಿಚಾರಣೆ ಮಾತ್ರವೇ ಹೊರತು ಪ್ರಾಧಿಕಾರದಿಂದಲೇ ಯೋಜನೆ ಕೈಗೊಳ್ಳುವಂತಿಲ್ಲ.
ಆರ್ಥಿಕ ನೆರವು
ಮೀಸಲಾತಿ ಜತೆಗೆ ಹೊರ ರಾಜ್ಯಗಳಲ್ಲಿರುವ ಕನ್ನಡಪರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಆ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡಪರ ವಾತಾವರಣ ನಿರ್ವಿುಸಲಾಗುತ್ತದೆ. ಅಲ್ಲಿಯ ಕನ್ನಡ ಶಾಲೆಗಳಿಗೆ ಪುಸ್ತಕ, ಇತರೆ ಸೌಲಭ್ಯ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ನೀಡುವ ಬಗ್ಗೆಯೂ ತೀರ್ಮಾನ ಮಾಡಲಿದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
