| ಡಾ.ಕೆ.ಸುಧಾಕರ್​
ಕುದಿ ಹೆಚ್ಚೆ ವೆಗಟುವುದು; ಕಡಿಮೆಯಿರೆ ಹಸಿ ನಾತ
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ
ಅದರವೊಲೆ ಮನದ ಹದ, ಅದನೆಚ್ಚರದಿ
ಬದುಕು ಸೊಗ ಹದದಿಂದ ಮಂಕುತಿಮ್ಮ
ಹಾಲನ್ನು ಕಾಯಿಸುವಾಗ ಹದವಾಗಿ ಕಾಯಿಸಿದರೆ, ಕೆನೆಕಟ್ಟಿ, ಕುಡಿಯಲು ರುಚಿಕರ. ಹೆಚ್ಚಾಗಿ ಕಾಯಿಸಿದರೆ ಅಡಿಕಟ್ಟಿ ಸೀದಿರುವ ವಾಸನೆ ಬರುತ್ತದೆ. ಅಲ್ಲದೆ ಕಡಿಮೆ ಕಾಯಿಸಿದರೆ, ಸರಿಯಾಗಿ ಕಾಯದೆ ಹಸಿ ವಾಸನೆ ಬಂದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ಹಾಲನ್ನು ಹದವಾಗಿ ಕಾಯಿಸಬೇಕು. ಅದರಂತೆಯೇ ಮನಸ್ಸನ್ನೂ ಎಚ್ಚರದಿಂದ ಹದವಾಗಿಟ್ಟುಕೊಂಡು ಬಾಳಬೇಕು ಎಂದು ಈ ಕಗ್ಗದ ಮೂಲಕ ಅರ್ಥಪೂರ್ಣವಾಗಿ ವರ್ಣಿಸಲಾಗಿದೆ.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ವ್ಯಾಖ್ಯಾನವನ್ನು ವಿಸ್ತರಿಸಿಕೊಳ್ಳಬೇಕಿದೆ. ಶರೀರದ ಕಾಯಿಲೆಗಳಂತೆ ಮಾನಸಿಕ ರೋಗ ಹೆಚ್ಚಿರುವ ಕಾಲಮಾನದಲ್ಲಿ ಮನಸ್ಸಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ವಿಶೇಷವಾಗಿ ಕೋವಿಡ್ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡ, ಖಿನ್ನತೆ ಹೆಚ್ಚಾಗಿದ್ದು ಅದರ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ.
ಕರೊನಾ ಹರಡಲು ಆರಂಭವಾಗಿದೆ ಎಂದು ಗೊತ್ತಾದ ಕ್ಷಣದಿಂದಲೇ ಜನ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಿಕೊಂಡರು. ಶೀತ ಬಂದಿದೆಯೇ? ರುಚಿ ವಾಸನೆ ಗ್ರಹಿಕೆ ಇಲ್ಲವೇ? ಸುಸ್ತಾಗುತ್ತಿದೆಯೇ? ಎಂದು ಪರೀಕ್ಷಿಸಿಕೊಂಡರು. ಆದರೆ, ಎಷ್ಟು ಜನ ಮಾನಸಿಕ ಆರೋಗ್ಯದ ಕಡೆ ಗಮನ ಕೊಟ್ಟಿದ್ದಾರೆ? ದೈಹಿಕ ಆರೋಗ್ಯ ನೋಡಿಕೊಂಡರೆ ಸಾಕು, ಮಾನಸಿಕ ಆರೋಗ್ಯ ಏಕೆ ಬೇಕು ಎನ್ನುವ ನಿರ್ಲಕ್ಷ್ಯ ಕೂಡ ನಮ್ಮಲ್ಲಿದೆ. ಮನಸ್ಸು ನಮ್ಮ ನಿಯಂತ್ರಣದಲ್ಲೇ ಇದೆ ಅಂದಮೇಲೆ ಅದರ ಆರೋಗ್ಯ ಕಟ್ಟಿಕೊಂಡು ಏನಾಗಬೇಕು ಎಂಬಂಥ ನಿರ್ಲಕ್ಷ್ಯವಿದು.
90ರ ದಶಕದಲ್ಲಿ ಜಗತ್ತಿನಲ್ಲಿ ಮಾನಸಿಕ ಸಮಸ್ಯೆಗಳ ಬಗ್ಗೆ ಕಾಳಜಿ ಹೆಚ್ಚಾಯಿತು. ವರ್ಲ್ಡ್ ಫೆಡರೇಷನ್ ಫಾರ್ ಮೆಂಟಲ್ ಹೆಲ್ತ್ ಸಂಸ್ಥೆ 1992ರ ಅ.10ರಂದು ಈ ಆಚರಣೆ ಆರಂಭಿಸಿತು. ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ಕೊಡುತ್ತೇವೆಯೋ, ಅಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ಕೊಡಬೇಕು ಎಂಬುದು ಈ ಆಚರಣೆಯ ಪ್ರಮುಖ ಉದ್ದೇಶ. 2020ರ ವರ್ಷದ ಆಚರಣೆಯಲ್ಲಿ, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಯಾಗಬೇಕು ಎಂಬ ಗುರಿ ಹೊಂದಲಾಗಿದೆ.
ಹೆಚ್ಚಿದ ಮಾನಸಿಕ ಸಮಸ್ಯೆ:ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವವರ ಸಂಖ್ಯೆ ಅತಿ ಹೆಚ್ಚಿದೆ. ಕಳೆದ ವರ್ಷದ ಅಧ್ಯಯನ ವರದಿ ಪ್ರಕಾರ, ಭಾರತದಲ್ಲಿ ಶೇ.7.5 ಜನ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಗತ್ತಿನ ಒಟ್ಟು ಮಾನಸಿಕ ಅನಾರೋಗ್ಯಗಳಲ್ಲಿ ಶೇ.15 ಭಾರತದಲ್ಲೇ ಇದೆ. 1990ರಿಂದ 2017ರವರೆಗಿನ ಅವಧಿಯಲ್ಲಿ ಭಾರತದಲ್ಲಿ 7 ಜನರಲ್ಲಿ ಒಬ್ಬರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಈ ಅಧ್ಯಯನ ವರದಿ ಹೇಳಿತ್ತು. ಇದರಿಂದಾಗಿ ಆರ್ಥಿಕತೆಗೂ ಹೊಡೆತ ಬೀಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿತ್ತು. 2020ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ.20 ಜನ ಮಾನಸಿಕ ಅನಾರೋಗ್ಯದಿಂದ ಬಳಲಬಹುದು ಎಂದು ಅಂದಾಜು ಮಾಡಲಾಗಿತ್ತು. ಇದೇ ವರ್ಷದಲ್ಲಿ ಕರೊನಾ ಪಿಡುಗು ಬಂದಿರುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಿದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.
ಬೆಂಗಳೂರಿನ 99ರ ವೃದ್ಧೆ ಕರೊನಾ ಸೋಂಕಿಗೆ ಒಳಗಾಗಿ, ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಅವರ ಕುಟುಂಬ ಸದಸ್ಯರಿಗೂ ಸೋಂಕು ತಗಲಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಈ ವೃದ್ಧೆ ಕೇವಲ 9 ದಿನಗಳಲ್ಲಿ ಚೇತರಿಸಿಕೊಂಡು ಕುಟುಂಬದ ಇತರ ಸದಸ್ಯರಿಗಿಂತ ಮೊದಲೇ ಮನೆಗೆ ತೆರಳಿದ್ದರು. ಆನಂತರ ರಾಜ್ಯದಲ್ಲಿ 100ರ ವಯೋಮಾನ ಮೀರಿದವರು ಕೂಡ ಗುಣ ಹೊಂದಿದ ಉದಾಹರಣೆಗಳಿವೆ. ಇದು ಮಾನಸಿಕ ಶಕ್ತಿಯ ಅಗಾಧತೆ. ಲಾಕ್​ಡೌನ್ ಆದಾಗ ಬಾರ್ ಮುಚ್ಚಿದ್ದವು. ಆ ವೇಳೆ ಮದ್ಯವ್ಯಸನಿಗಳು ಒತ್ತಡಕ್ಕೆ ಒಳಗಾಗಿದ್ದರು. ಮದ್ಯ ಸೇವಿಸಲು ಸಾಧ್ಯವಾಗದೆ ಅನೇಕರು ಹಾಸಿಗೆ ಹಿಡಿದಿ ದ್ದರು. ಅನೇಕರಲ್ಲಿ ವಿತ್​ಡ್ರಾ ಲಕ್ಷಣ ಕಾಣಿಸಿಕೊಂಡಿದ್ದವು. ಆಶಾದಾಯಕ ವಿಚಾರವೆಂದರೆ, ಇದೇ ಲಾಕ್​ಡೌನ್ ವ್ಯಸನಿಗಳಿಗೆ ಮದ್ಯದ ಕೆಟ್ಟ ಚಟ ಬಿಡಲು ಸದವಕಾಶವಾಗಿತ್ತು.
ಕೋವಿಡ್ ತಂದೊಡ್ಡಿದ ಸಂಕಷ್ಟ:ಕರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟ ಕೋಟ್ಯಂತರ ಜನರಲ್ಲಿ ಮಾನಸಿಕ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿದೆ. ಉದ್ಯೋಗ ನಷ್ಟ, ವೇತನ ಕಡಿತ, ಉದ್ಯೋಗ ಇದ್ದರೂ ಮನೆಯಲ್ಲೇ ಕುಳಿತು ಕೆಲಸ ಮಾಡಬೇಕಾದ ಪರಿಸ್ಥಿತಿ, ಎಲ್ಲವೂ ಮನಸ್ಸಿನ ಮೇಲೆ ಒತ್ತಡ ಹೆಚ್ಚಿಸಿದೆ. ಈ ಸಮಸ್ಯೆಯಿಂದ ಜನರನ್ನು ಹೊರಗೆ ತಂದು ಮತ್ತೆ ಆರ್ಥಿಕತೆಯನ್ನು ಮೊದಲಿಗಿಂತ ಹೆಚ್ಚು ಎತ್ತರಕ್ಕೆ ಕೊಂಡೊಯ್ಯುವ ಶತಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಲೆಂದೇ ಮಾನಸಿಕ ಆರೋಗ್ಯ ವಿಭಾಗವಿದೆ. ಈ ವಿಭಾಗದಿಂದ ಈವರೆಗೆ 7,13,867 ಜನರಿಗೆ ಆಪ್ತ ಸಮಾಲೋಚನೆ ಸೇವೆ ನೀಡಲಾಗಿದೆ. ಕರೊನಾ ವಾರಿಯರ್ಸ್ ಆದ ವೈದ್ಯರು, ನರ್ಸ್​ಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ ಆಪ್ತ ಸಮಾಲೋಚನೆ ಪಡೆಯದವರಿಗೆ ಮಾನಸಿಕ ರೋಗ ಇಲ್ಲವೆಂದು ಅರ್ಥವಲ್ಲ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಸಂದರ್ಭದಲ್ಲಿ ಮನೆಯ ಸದಸ್ಯರೇ ಆಪ್ತ ಸಮಾಲೋಚನೆ ನೀಡಬಹುದು.
ಭಾರತೀಯ ಸಂಪ್ರದಾಯ ಮನಸ್ಸಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಪ್ರತಿ ದಿನ ಯೋಗಾಭ್ಯಾಸ, ಧ್ಯಾನ ಮೊದಲಾದ ಚಟುವಟಿಕೆಗಳು ಮನಸ್ಸನ್ನು ಆಹ್ಲಾದಕರವಾಗಿರಿಸಲು ಸಹಾಯ ಮಾಡುತ್ತವೆ. ವೈರಸ್ ದೂರವಿಡಲು ಕೈಗಳನ್ನು ಸ್ಯಾನಿಟೈಸರ್​ನಿಂದ ಸ್ವಚ್ಛಗೊಳಿಸುವಂತೆ, ಉತ್ತಮ ಚಿಂತನೆಗಳಿಂದ ಮನಸ್ಸನ್ನು ತೊಳೆದು ಸ್ವಚ್ಛ ಮಾಡಿ, ಕೆಟ್ಟ ಚಿಂತನೆಗಳನ್ನು ಸಾಯಿಸಬೇಕು. ಕರೊನಾ ವಿರುದ್ಧದ ಯುದ್ಧದ ಮಧ್ಯಭಾಗದಲ್ಲಿರುವ ನಮಗೆ, ಮಾನಸಿಕ ಆರೋಗ್ಯವನ್ನು ನಿರಂತರ ಕಾಪಾಡಿಕೊಳ್ಳಬೇಕು ಎಂಬುದು ಸದಾ ನೆನಪಲ್ಲಿರಬೇಕು.
(ಲೇಖಕರು ವೈದ್ಯಕೀಯ ಶಿಕ್ಷಣ ಸಚಿವರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
