ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದ ಜನತೆಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ದಿಢೀರ್ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದ ಸರ್ಕಾರ ಇದೀಗ ಪ್ರತಿ ಅರ್ಧ, ಒಂದು ಲೀಟರ್ ಹಾಲಿನ ಪ್ಯಾಕೆಟ್ ದರವನ್ನು 2 ರೂ. ಹೆಚ್ಚಿಸಿದೆ. ಇದಕ್ಕೆ 50 ಎಂಎಲ್ ಹೆಚ್ಚುವರಿ ಹಾಲನ್ನು ಸೇರಿಸಿಕೊಡುವ ನೆಪ ಹೇಳಿದೆ. ಮತ್ತೊಂದೆಡೆ ಎಪಿಎಲ್ ಕಾರ್ಡ್​ಗಳಿಗೆ ಮಾಸಿಕ ಕೊಡಲಾಗುತ್ತಿದ್ದ 10 ಕೆಜಿ ಅಕ್ಕಿ ನೀಡುವುದನ್ನು ಆಹಾರ ಇಲಾಖೆ ನಿಲ್ಲಿಸಿದೆ.
ಬೆಂಗಳೂರು:ಹಾಲಿನ ಪ್ರಮಾಣ ಗಣನೀಯವಾಗಿ ಏರಿಕೆ ಆಗಿರುವ ನೆಪ ಹೇಳಿರುವ ಕೆಎಂಎಫ್ ಇನ್ಮುಂದೆ ಪ್ರತಿ ಪ್ಯಾಕೆಟ್​ನಲ್ಲಿ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ. ಆದರೆ ಹೆಚ್ಚುವರಿ ಹಾಲು ಸೇರಿಸಿರುವುದಕ್ಕೆ 2 ರೂ. ದರ ಏರಿಕೆ ಮಾಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಷ್ಕೃತ ದರ ಮಂಗಳವಾರವೇ ಜಾರಿಗೆ ಬಂದಿದೆ.
ಇನ್ಮುಂದೆ ಅರ್ಧ ಲೀಟರ್ (500 ಎಂಎಲ್) ಹಾಲಿನ ಪ್ಯಾಕೆಟ್ 550 ಎಂಎಲ್ ಪ್ಯಾಕೆಟ್ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ. ಒಂದು ಲೀಟರ್ (1000 ಎಂಎಲ್) ಹಾಲಿನ ಪ್ಯಾಕೆಟ್ ಬದಲಿಗೆ 1050 ಎಂಎಲ್ ಹಾಲಿನ ಪ್ಯಾಕೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಲಾಭ-ನಷ್ಟದ ಮಾತಿಲ್ಲ:ಹೆಚ್ಚುವರಿಯಾಗಿ ಹಾಲು ಬರುತ್ತಿರುವುದರಿಂದ ಉಳಿಕೆ ಹಾಲನ್ನು ಪುಡಿ ಮಾಡಲು ನಾನಾ ಘಟಕಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಆದರೂ ಇನ್ನೂ ಮೂರ್ನಾಲ್ಕು ಲಕ್ಷ ಲೀಟರ್ ಹಾಲು ಉಳಿಕೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಗ್ರಾಹಕರಿಗೆ ಈ ಲಾಭವನ್ನು ನೀಡಲು ಕೆಎಂಎಫ್ ಮುಂದಾಗಿದೆ. 50 ಎಂಎಲ್​ಗೆ ಸರಾಸರಿ 2 ರೂ ಖರ್ಚು ಬರುವುದರಿಂದ ಪ್ರತಿ ಲೀಟರ್​ಗೆ 2 ರೂ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಲಾಭ ನಷ್ಟದ ಬಗ್ಗೆ ಲೆಕ್ಕ ಹಾಕದೆ, ಇದು ಹಾಲು ಉತ್ಪಾದಕರ ಸಂಸ್ಥೆ ಆಗಿರುವುದರಿಂದ ಅದರ ಲಾಭವನ್ನು ಗ್ರಾಹಕರಿಗೆ ಮತ್ತು ಹಾಲು ಉತ್ಪಾದಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ಕೆಎಂಎಫ್ ಸಮರ್ಥನೆ:ರಾಜ್ಯದಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ 44 ರೂ. ಇದ್ದರೆ, ಕೇರಳದಲ್ಲಿ 52 ರೂ., ದೆಹಲಿಯಲ್ಲಿ 54 ರೂ., ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ 56, ಆಂಧ್ರ ಪ್ರದೇಶದಲ್ಲಿ 58 ರೂ. ಇದೆ. ಈ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೂ ರಾಜ್ಯದಲ್ಲಿ ಹಾಲಿನ ದರ ಕಡಿಮೆಯೇ ಇದೆ ಎಂದು ಕೆಎಂಎಫ್ ಸಮರ್ಥನೆ ನೀಡಿದೆ.
4 ಲಕ್ಷ ಲೀಟರ್ ಹಾಲು ಮಾರಾಟ ಸಾಧನೆ:50 ಎಂಎಲ್ ಹಾಲಿನ ಬೆಲೆ ಹೆಚ್ಚಳದಿಂದಾಗಿ ಈಗಾಗಲೇ ಮಾರಾಟವಾಗುತ್ತಿರುವ ಹಾಲಿನ ಜೊತೆಗೆ ಹೆಚ್ಚುವರಿಯಾಗಿ 3.50 ಲಕ್ಷ ಲೀಟರ್​ನಿಂದ 4 ಲಕ್ಷ ಲೀಟರ್ ಹಾಲು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಹೆಚ್ಚುವರಿ ಹಾಲನ್ನು ಪೌಡರ್ ಮಾಡಿ ಶೇಖರಿಸಿಟ್ಟುಕೊಂಡು ಮಾರಾಟ ಮಾಡಬೇಕಾದ ಅನಿವಾರ್ಯತೆ ಒತ್ತಡದಲ್ಲಿದ್ದ ಕೆಎಂಎಫ್​ಗೆ ಸ್ವಲ್ಪ ಮಟ್ಟಿಗೆ ಭಾರ ಕಡಿಮೆಯಾಗಲಿದೆ. ಕೆಎಂಎಫ್​ಗೆ ಬರುತ್ತಿರುವ ಹಾಲಿನ ಸಂಗ್ರಹ 90 ಲಕ್ಷ ಲೀಟರ್ ಆಜುಬಾಜಿನಲ್ಲಿತ್ತು. ಈ ತನಕ 94 ಲಕ್ಷ ಲೀಟರ್ ಹಾಲು ಬಂದಿದ್ದು ಗರಿಷ್ಠ ಸಂಗ್ರಹವಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆಯಾದ ಬೆನ್ನಲ್ಲೇ ಜಾನುವಾರುಗಳಿಗೆ ಹಸಿರು ಮೇವು ಲಭಿಸಿದ್ದರಿಂದ ಹಾಲಿನ ಇಳುವರಿ ಗಣನೀಯವಾಗಿ ಏರಿಕೆ ಆಗಿದ್ದು, ನಿತ್ಯದ ಸಂಗ್ರಹ 99 ಲಕ್ಷ ಲೀಟರ್​ಗೆ ಮುಟ್ಟಿದೆ. ಯಾವುದೇ ಕ್ಷಣದಲ್ಲಿ ಕೆಎಂಎಫ್ ಹಾಲು ಸಂಗ್ರಹ 1 ಕೋಟಿ ಲೀಟರ್ ದಾಟಿ ದಾಖಲೆ ಬರೆಯುವ ನಿರೀಕ್ಷೆ ಇದೆ.
ಹಾಲಿನ ಪ್ಯಾಕೆಟ್​ಗೆ ಹೆಚ್ಚುವರಿಯಾಗಿ 50 ಮಿ.ಲೀ. ಸೇರಿಸಿ 2 ರೂ. ಮಾತ್ರ ಹೆಚ್ಚು ಸಂಗ್ರಹಿಸಲಾಗುತ್ತಿದೆ. ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ.
ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ
ತುರ್ತು ಪರಿಸ್ಥಿತಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಾಲಿನ ದರ ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರಿಗೆ ‘ಬಂಪರ್ ಕೊಡುಗೆ’ ಕೊಟ್ಟಿದೆ! ಈ ದರ ಏರಿಕೆ ಲಾಭ ಹಾಲು ಉತ್ಪಾದಕರಿಗೆ ಸಿಗಲಿದೆಯೋ ಅಥವಾ ಕೆಎಂಎಫ್ ಜೋಳಿಗೆಗೆ ಹೋಗಲಿದೆಯೋ? ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ.
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ. ಈ ಜನವಿರೋಧಿ ಸರ್ಕಾರವನ್ನು ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ.
ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಹಾಲಿನ ದರ ಏರಿಕೆ ಮಾಡಿಲ್ಲ. ಹಾಲಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ಅರ್ಧ ಲೀಟರ್ ಮತ್ತು 1 ಲೀಟರ್ ಹಾಲಿನ ಪ್ಯಾಕೆಟ್​ನಲ್ಲಿ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಿ ತಲಾ 2 ರೂ. ಏರಿಕೆ ಮಾಡಲಾಗಿದೆ.
| ಎಂ.ಕೆ. ಜಗದೀಶ್ , ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್
ಬೆಂಗಳೂರು:ರಾಜ್ಯಾದ್ಯಂತ ಎಪಿಎಲ್ ಕಾರ್ಡ್​ಗಳಿಗೆ ಅಕ್ಕಿ ನೀಡುವುದನ್ನು ಆಹಾರ ಇಲಾಖೆ ನಿಲ್ಲಿಸಿದೆ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಎಪಿಎಲ್ ಕಾರ್ಡ್​ಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, ರಾಜ್ಯದಲ್ಲಿರುವ ಒಟ್ಟು 24 ಲಕ್ಷ ಎಪಿಎಲ್ ಕಾರ್ಡ್​ಗಳ ಪೈಕಿ ಶೇ.80 ಕಾರ್ಡ್​ದಾರರು ರೇಷನ್ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ರೇಷನ್ ನಿಲ್ಲಿಸಲು ಆಹಾರ ಇಲಾಖೆ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎಪಿಎಲ್ ಕಾರ್ಡ್​ಗಳಿಗೆ ರೇಷನ್ ವಿತರಣೆ ಇರುವುದಿಲ್ಲ ಎಂದು ನೋಟಿಸ್ ಅಂಟಿಸಲಾಗಿದೆ.

ಹೊಸ ಪಡಿತರ ಕಾರ್ಡ್:ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಇಲಾಖೆ ಎಪಿಎಲ್ ನೀಡಲಾಗುತ್ತಿದೆ. ಇನ್ನು ಮುಂದೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ರೇಷನ್​ಗಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಎಪಿಎಲ್ ಕಾರ್ಡ್ ಮಂಜೂರು ಮಾಡಲುಇಲಾಖೆ ಚಿಂತಿಸಿದೆ. ಹಲವು ವರ್ಷಗಳಿಂದ ಕೆಲವರು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಳಧನಿಕರು ಎಪಿಎಲ್ ಕಾರ್ಡ್​ನ ಅಕ್ಕಿಯನ್ನು ಪಾಲಿಶ್ ಮಾಡಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 35ರಿಂದ 50 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಕಳ್ಳ ಮಾರ್ಗದಲ್ಲಿ ಪಡಿತರ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಎಪಿಎಲ್ ಕಾರ್ಡ್ ರದ್ದುಪಡಿಸಲು ಮುಂದಾಗಿತ್ತು. ಕಾರ್ಡ್ ರದ್ದು ಮಾಡುವ ಸಂಬಂಧ ಇಲಾಖೆ ಅಧಿಕಾರಿಗಳ ಜತೆ ಹಲವು ಬಾರಿ ಮಾತುಕತೆ ನಡೆಸಿತ್ತು. ಇದೀಗ, ಎಪಿಎಲ್ ಕಾರ್ಡ್​ಗಳಿಗೆ ರೇಷನ್ ನಿಲ್ಲಿಸಲು ಇಲಾಖೆ ಮುಂದಾಗಿದೆ.
ಜಿಲ್ಲಾವಾರು ಕಾರ್ಡ್​ದಾರರ ಮಾಹಿತಿ: ಬೆಂಗಳೂರು 4,37,651, ಬೆಳಗಾವಿ 3,23,164, ದಕ್ಷಿಣಕನ್ನಡ 1,73,720, ಕಲಬುರಗಿ 1,15,594, ಉಡುಪಿ 1,15, 126, ಮೈಸೂರು 1,11,024, ಶಿವಮೊಗ್ಗ 1,03,347, ಧಾರವಾಡ 95,973, ಉತ್ತರ ಕನ್ನಡ 90,190, ವಿಜಯಪುರ 86,914, ತುಮಕೂರು 66,503, ಚಿಕ್ಕಮಗಳೂರು 64,857, ಬಾಗಲಕೋಟೆ 63,573, ಮಂಡ್ಯ 57,472, ಬೀದರ್ 53,621, ಹಾವೇರಿ 53,263, ದಾವಣಗೆರೆ 45,854, ಚಿತ್ರದುರ್ಗ 44,454, ಬಳ್ಳಾರಿ 43,757, ಹಾಸನ 43,281, ರಾಯಚೂರು 42,561, ಗದಗ 38,666, ಕೊಡಗು 37,198,
ವಿಜಯನಗರ 33,320, ಕೋಲಾರ 27,369, ಬೆಂ.ಗ್ರಾಮಾಂತರ 23,158, ಚಿಕ್ಕಬಳ್ಳಾಪುರ 19,281, ರಾಮನಗರ 17,839, ಯಾದಗಿರಿ 17,609, ಚಾಮರಾಜನಗರ 14,739.
ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − four =
Remember me
