ಬೆಂಗಳೂರು:ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮವು (ಎನ್​ಎಂಡಿಸಿ) ಬಳ್ಳಾರಿ ಜಿಲ್ಲೆಯ ದೋಣಿಮಲೈನಲ್ಲಿ ಪಡೆದಿರುವ ಗಣಿ ಗುತ್ತಿಗೆ ಅವಧಿಯನ್ನು ವಿಸ್ತರಿಸಿ, ರಾಜಧನ ಮೊತ್ತವನ್ನು ತಾತ್ಪೂರ್ತಿಕವಾಗಿ ಶೇ.15 ರಿಂದ 37.25ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸುದೀರ್ಘ ಮಾತುಕತೆ ಫಲಪ್ರದವಾಗಿದೆ ಎಂದು ನಂತರ ಸುದ್ದಿಗಾರರಿಗೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ರಾಜಧನದ ಜತೆಗೆ ಪ್ರೀಮಿಯಂ ಪಾವತಿ ಸಮಸ್ಯೆಯಿಂದಾಗಿ ಎನ್​ಎಂಡಿಸಿ ಗಣಿ ಗುತ್ತಿಗೆ ನವೀಕರಣ ಇಲ್ಲವೇ ಅವಧಿ ವಿಸ್ತರಣೆಯು 2018ರಿಂದ ನನೆಗುದಿಗೆ ಬಿದ್ದಿದ್ದು, ಸುಗಮ ವ್ಯವಹಾರಕ್ಕೆ ಉತ್ತೇಜಿಸಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯ ಮತ್ತು ಸಿಎಂ ಬಿಎಸ್​ವೈ ಮುಕ್ತ ಚರ್ಚೆ ನಡೆಸಿದ ಕಾರಣ ಈ ಬಿಕ್ಕಟ್ಟು ಬಗೆಹರಿದಿದೆ ಎಂದರು.
ರಾಜಧನ ಜತೆಗೆ ಪ್ರೀಮಿಯಂ ಮೊತ್ತ ನಿಗದಿ ಕುರಿತು ಅಧ್ಯಯನ ನಡೆಸಿ ನ್ಯಾಯಸಮ್ಮತ ವರದಿ ಸಲ್ಲಿಸಲೆಂದು ಗಣಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕೇಂದ್ರ ಉಕ್ಕು ಪ್ರಾಧಿಕಾರದ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಯನ್ನು ಒಳಗೊಂಡ ಈ ಸಮಿತಿ 3 ತಿಂಗಳಲ್ಲಿ ವರದಿ ಸಲ್ಲಿಸಲಿದೆ.
ಸಾರ್ವಜನಿಕ ವಲಯದ ಉದ್ಯಮವು ರಾಜ್ಯ ಸರ್ಕಾರಗಳಿಗೆ ನೀಡಬಹುದಾದ ರಾಜಧನ ಮತ್ತು ಪ್ರೀಮಿಯಂ ಮೊತ್ತದ ಕುರಿತು ಈ ಸಮಿತಿ ಸಲ್ಲಿಸಲಿರುವ ಶಿಫಾರಸು ಅಂತಿಮವಾಗಿದೆ. ಸಿಎಂ ಬೇಡಿಕೆಯಂತೆ ಈ ಸಮಿತಿ ವರದಿ ಸಲ್ಲಿಸುವ ತನಕ ಅಂದರೆ, 3 ತಿಂಗಳಮಟ್ಟಿಗೆ ಎನ್​ಎಂಡಿಸಿ ರಾಜಧನ ಮೊತ್ತವನ್ನು ಶೇ.15 ರಿಂದ 37.25 ಏರಿಸಲು ಸಮ್ಮತಿಸಲಾಗಿದೆ ಎಂದು ತಿಳಿಸಿದರು.
ಕಲ್ಲಿದ್ದಲು ದರ ಮರು ಪರಿಶೀಲನೆ
ಕರ್ನಾಟಕ ವಿದ್ಯುತ್ ನಿಗಮಕ್ಕೆ ಪೂರೈಸುತ್ತಿರುವ ಕಲ್ಲಿದ್ದಲು ದರ ದುಬಾರಿಯಾಗಿದ್ದು, ಮರು ಪರಿಶೀಲಿಸಬೇಕೆಂಬ ಕೋರಿಕೆಗೆ ಸ್ಪಂದಿಸಿ ಸಿಂಗರೇಣಿ ಕಲ್ಲಿದ್ದಲು ಸಿಎಂಡಿಗೆ ಸೂಕ್ತ ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಅಗತ್ಯಬಿದ್ದರೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಲು ಸಿದ್ಧವಿದೆ. ಅಲ್ಲದೆ, ಕಲ್ಲಿದ್ದಲು ಗುಣದರ್ಜೆ ವ್ಯತ್ಯಾಸ ಸಮಸ್ಯೆ ಇತ್ಯರ್ಥಕ್ಕೂ ತಿಳಿಸಲಾಗಿದೆ. ಕಲ್ಲಿದ್ದಲು ಮಾದರಿ ಸಂಗ್ರಹ ಮತ್ತು ತಪಾಸಣೆ ದಕ್ಷ ಮತ್ತು ಪಾರದರ್ಶಕವಾಗಿ ನಿರ್ವಹಿಸಬೇಕೆಂದು ಸಿಂಗರೇಣಿ ಕಂಪನಿ ತಾಕೀತು ಮಾಡಲಾಗಿದೆ ಎಂದರು.
ಮಹಾರಾಷ್ಟ್ರದ ಭಾರಂಜಾ ಕಲ್ಲಿದ್ದಲು ಗಣಿಯೊಂದು ಕರ್ನಾಟಕಕ್ಕೆ ಮಂಜೂರಾಗಿ ವರ್ಷಗಳೇ ಕಳೆದಿವೆ. ಗಣಿ ಅಭಿವೃದ್ಧಿ ಪಾಲಕ (ಎಂಡಿಒ) ನೇಮಕ ವಿಳಂಬ ಮತ್ತು ರಾಜಧನ ಪಾವತಿ ಸಮಸ್ಯೆಯೇ ವಿಳಂಬಕ್ಕೆ ಕಾರಣವಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಂಡಿಒ ನೇಮಕ ನಿರ್ಧರಿಸಿ ಕಳುಹಿಸಿದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಪ್ರದೇಶದಲ್ಲಿ ಕಳುವಾಗಿರುವ ಕಲ್ಲಿದ್ದಲು ಪ್ರಮಾಣ ಮತ್ತು ರಾಜಧನ ಕುರಿತು ಮಹಾರಾಷ್ಟ್ರ ಸರ್ಕಾರದ ಜತೆಗೆ ರ್ಚಚಿಸಲೆಂದು ಕಲ್ಲಿದ್ದಲು ನಿಯಂತ್ರಕರನ್ನು ಕಳುಹಿಸಲಿದ್ದು, ಶೀಘ್ರವೇ ಭಾರಂಜಾ ಕಲ್ಲಿದ್ದಲು ಗಣಿಯು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರವಾಗಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಹರಾಜಿನ ಮೂಲಕ ಗಣಿ ಗುತ್ತಿಗೆ ಪ್ರಕ್ರಿಯೆ ವಿಳಂಬ ತಪ್ಪಿಸಲೆಂದು ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಜಿ2 ಬದಲಿಗೆ ಜಿ4 ಹಂತದ ಗಣಿಗಳನ್ನು ಗುತ್ತಿಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಹರಾಜು ಪ್ರಕ್ರಿಯೆಗೆ ಕಾಲಾವಕಾಶ ಬೇಕಿರುವ ಕಾರಣ ಸಂಯೋಜಿತ (ಪ್ರಾಸ್ಪೆಕ್ಟಿವ್ ಅಂಡ್ ಮೈನಿಂಗ್) ಪರವಾನಗಿ ನೀಡಲಿದ್ದು, ಈ ಲೈಸೆನ್ಸ್ ಪ್ರಕಾರ ಗುರುತಿಸಿದ ಪ್ರದೇಶದಲ್ಲಿ ಖನಿಜವಿದ್ದರೆ ಗಣಿಗಾರಿಕೆ ಮುಂದುವರಿಯುತ್ತದೆ ಇಲ್ಲದಿದ್ದರೆ ತನ್ನಿಂದ ತಾನೇ ಗುತ್ತಿಗೆಯಿಂದ ಹೊರ ಹೋಗಬೇಕಾಗುತ್ತದೆ ಪ್ರಲ್ಹಾದ ಜೋಶಿ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಸಿ.ಸಿ.ಪಾಟೀಲ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೇಂದ್ರದ ಗಣಿ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್ ಮತ್ತಿತರ ಅಧಿಕಾರಿಗಳು ಇದ್ದರು.
ಕೋಲಾರದಲ್ಲಿ ಖನಿಜಾನ್ವೇಷಣೆ
ಕೋಲಾರದಲ್ಲಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್ (ಬಿಜಿಎಂಎಲ್)ನ ಒಡೆತನದಲ್ಲಿರುವ 12,000 ಎಕರೆ ಜಮೀನಿನ ಪೈಕಿ 3,200 ಎಕರೆ ಕೈಗಾರಿಕೆ ಪಾರ್ಕ್​ಗೆ ಬೇಕೆಂದು ರಾಜ್ಯ ಸರ್ಕಾರ ಬೇಡಿಕೆಯಿಟ್ಟಿದೆ. ಈ ಪ್ರಸ್ತಾವನೆಗೆ ಪೂರಕವಾದ ನಿರ್ಧಾರ ತೆಗೆದುಕೊಂಡು 3 ತಿಂಗಳಲ್ಲಿ ಭೌತಿಕ ಸಮೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವೆ. ಈ ಮಧ್ಯೆ ಇನ್ನೂ ಗಣಿಗಾರಿಕೆ ನಡೆಯದ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತು ಪತ್ತೆ ಹಚ್ಚಲೆಂದು ಖನಿಜಾನ್ವೇಷಿಸಿ 6 ತಿಂಗಳಲ್ಲಿ ಸಮಗ್ರ ವರದಿ ನೀಡಬೇಕು ಎಂದು ಕೇಂದ್ರದ ಖನಿಜಾನ್ವೇಷಣೆ ನಿಗಮ (ಎಂಇಸಿಎಲ್)ಕ್ಕೆ ಸೂಚಿಸಲಾಗಿದೆ.
ಈ ವರದಿ ಪ್ರಕಾರ ಯಾವುದಾದರೂ ಖನಿಜವಿರುವುದು ಖಚಿತಪಟ್ಟರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದಾಯ ಬರುತ್ತದೆ. ಯಾವುದೇ ಖನಿಜವಿಲ್ಲವೆಂದು ದೃಢಪಟ್ಟ ಜಮೀನನ್ನು ರಾಜ್ಯಕ್ಕೆ ಹಸ್ತಾಂತರಿಸಿ, ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಅನುಕೂಲ ಮಾಡಿ ಕೊಡಲಾಗುವುದು ಪ್ರಲ್ಹಾದ ಜೋಶಿ ತಿಳಿಸಿದರು.
ಬಿಜಿಎಂಎಲ್​ನ 3200 ಎಕರೆ ಕೈಗಾರಿಕೆಗೆ?
ಕೋಲಾರದ ‘ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್’(ಬಿಜಿಎಂಎಲ್)ನಲ್ಲಿ ಬಳಕೆ ಆಗದೇ ಉಳಿದಿರುವ 3,200 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಬಿಟ್ಟುಕೊಡುವಂತೆ ರಾಜ್ಯ ಮಾಡಿರುವ ಮನವಿಗೆ ಕೇಂದ್ರ ಸ್ಪಂದಿಸಿದ್ದು, ಇದರಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣ ಉದ್ದಿಮೆ ಸ್ಥಾಪಿಸಲು ಸಾಧ್ಯವಾಗಲಿದೆ ಎಂದು ಕೈಗಾರಿಕಾ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಕೈಗಾರಿಕಾ ಅಭಿವೃದ್ಧಿಯ ಒಂದು ವರ್ಷದ ಸಾಧನೆ ಕುರಿತ ಪುಸ್ತಕವನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನಾವರಣಗೊಳಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ ರಾಜ್ಯವನ್ನು ಕೈಗಾರಿಕೆ ಹಾಗೂ ಹೂಡಿಕೆದಾರರ ಸ್ನೇಹಿ ಸ್ಥಾನದಲ್ಲಿ ದೇಶದಲ್ಲಿ ನಂ.1 ಸ್ಥಾನ ಪಡೆಯುವ ಗುರಿ ನಮ್ಮದು. 2-3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವುದರ ಮೂಲಕ 11 ಕ್ಲಸ್ಟರ್​ಗಳನ್ನು ಅಭಿವೃದ್ಧಿಪಡಿಸುವ ಜತೆಗೆ, ರಾಜ್ಯದಲ್ಲಿ ಕೈಗಾರಿಕಾ ಟೌನ್​ಶಿಪ್​ಗಳನ್ನು ನಿರ್ವಿುಸಲಾಗುವುದು. ಮುಖ್ಯವಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ವೈಜ್ಞಾನಿಕ ನೀತಿ ಜಾರಿಗೆ ತರಲಾಗುತ್ತದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
