|ಡಾ.ಸಿ.ಎನ್.ಅಶ್ವತ್ಥನಾರಾಯಣ
ಇಂದು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದೇವೆ. ಈ ದಿನವು ರಾಷ್ಟ್ರಪತಿಗಳಾಗಿದ್ದ ಡಾ. ಎಸ್.ರಾಧಾಕೃಷ್ಣನ್ ಅವರ ಜನ್ಮದಿನವೂ ಹೌದು. ಅವರು ಸ್ವತಃ ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು. ತಾವು ಮಾಡಿದ ಶಿಕ್ಷಕ ವೃತ್ತಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕು ಎಂದು ಅವರು ಕರೆ ಕೊಟ್ಟರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದ ರಾಧಾಕೃಷ್ಣನ್ ಬೇರೆ ಕಡೆ ವರ್ಗವಾಗಿ ಹೋಗುವಾಗ ಅವರನ್ನು ಹೂವಿನ ಸಾರೋಟಿನಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರು ಮತ್ತು ಆ ಸಾರೋಟನ್ನು ತಾವೇ ಎಳೆದರು ಎಂಬುದು ಜನಜನಿತವಾದ ಸಂಗತಿ. ನಮ್ಮ ದೇಶ ಶಿಕ್ಷಕರಿಗೆ ಅತ್ಯುಚ್ಚ ಗೌರವ ಕೊಟ್ಟುಕೊಂಡು ಬಂದಿರುವುದರ ನಿದರ್ಶನವಿದು.
ಶಿಕ್ಷಕರು ನಮಗೆ ಪಠ್ಯಗಳನ್ನು ಮಾತ್ರ ಬೋಧಿಸುವುದಿಲ್ಲ. ಜೀವನದ ಪಾಠಗಳನ್ನೂ ಹೇಳಿಕೊಡುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳನ್ನು ತುಂಬುತ್ತಾರೆ. ‘ಧರ್ವೇ ರಕ್ಷತಿ ರಕ್ಷಿತಃ’ ಎಂದು ಹೇಳಿಕೊಡುವವರು ಗುರುಗಳು ತಾನೇ? ಧರ್ಮದ ದಾರಿಯಲ್ಲಿ ನಡೆದರೆ ನಿಮ್ಮನ್ನು ಧರ್ಮ ಕಾಪಾಡುತ್ತದೆ ಎಂದು ಅವರು ಹೇಳಿಕೊಟ್ಟ ಪಾಠಗಳು ನಮ್ಮ ಕಿವಿಯಲ್ಲಿ ಸದಾ ಗುಂಯ್ಗುಡುತ್ತ ಇರುತ್ತವೆ. ಅಲ್ಲದೆ, ಮನಸ್ಸಿನಲ್ಲಿ ಆಳವಾಗಿ ನಾಟಿ ಬದುಕಿನುದ್ದಕ್ಕೂ ದಾರಿದೀಪಗಳ ಹಾಗೆ ಕೈ ಹಿಡಿದು ಮುನ್ನಡೆಸುತ್ತವೆ.
ತಂದೆ- ತಾಯಿ ಇಬ್ಬರೂ ಮನೆಯಿಂದ ಕೆಲಸ ಮಾಡುವ, ಚಿಕ್ಕ ಕುಟುಂಬ ವ್ಯವಸ್ಥೆಯ ಈಗಿನ ಕಾಲಘಟ್ಟದಲ್ಲಿ ಶಿಕ್ಷಕರ ಪಾತ್ರ ಇನ್ನೂ ದೊಡ್ಡದಾಗಿದೆ. ‘ಮನೆಯೇ ಮೊದಲ ಪಾಠಶಾಲೆ, ತಾಯಿ ತಾನೆ ಮೊದಲ ಗುರುವು’ ಎಂಬ ಹಳೆಯ ಕಾಲದಿಂದ ನಾವು ಬಹಳ ದೂರ ಬಂದಿದ್ದೇವೆ. ಮಗು ಮನೆಯಲ್ಲಿ ಮತ್ತು ತಾಯಿಯಿಂದ ಕಲಿಯಬೇಕಾದ ಬಹುತೇಕ ಪಾಠಗಳನ್ನು ಶಿಶುವಿಹಾರಗಳಲ್ಲಿಯೇ ಕಲಿಯಬೇಕಾದಂಥ ಸ್ಥಿತಿಯನ್ನು ಆಧುನಿಕ ಜಗತ್ತು ನಿರ್ವಿುಸಿದೆ. ಈಗಿನ ಮಕ್ಕಳು ನಂತರವೂ ಬಹುಬೇಗ ಶಾಲೆಗೆ ಸೇರುತ್ತಾರೆ. ಅಂದರೆ, ನಾವು ಈಗ ಎಲ್ಲ ಹೊಣೆಯನ್ನು ಶಿಕ್ಷಕರ ಮೇಲೆ ಹಾಕಿದ್ದೇವೆ ಅಥವಾ ಕಾಲ ಅಂಥ ಹೊಣೆಯನ್ನು ಅವರ ಮೇಲೆ ಹಾಕಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರು ಪಾಠ ಮಾತ್ರ ಮಾಡದೇ ಗೆಳೆಯನಾಗಿ, ಮಾರ್ಗದರ್ಶಕನಾಗಿ, ಮಾದರಿ ವ್ಯಕ್ತಿಯಾಗಿ ಮತ್ತು ಇದೆಲ್ಲದಕ್ಕಿಂತ ಹೆಚ್ಚಿಗೆ ಆ ಮಗು ಮನೆಯಲ್ಲಿ ಕಳೆದುಕೊಂಡ ಎಲ್ಲವನ್ನೂ ಅಂದರೆ ಮಮತೆ ಹಾಗೂ ಪ್ರೀತಿ ವಾತ್ಸಲ್ಯವನ್ನು ತುಂಬಿಕೊಡುವ ಒಂದು ದೊಡ್ಡ ಚೇತನವಾಗಿ ಪರಿಣಮಿಸಬೇಕಾಗಿದೆ; ವರ್ತಿಸಬೇಕಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ: ಭಾರತವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿದೆ. ಇದುವರೆಗೆ ನಾವು ಮೆಕಾಲೆ ಪ್ರಣೀತ ವಸಾಹತುಶಾಹಿ ವ್ಯವಸ್ಥೆಯ ಪಳೆಯುಳಿಕೆ ಎನಿಸುವ ಶಿಕ್ಷಣ ಪದ್ಧತಿಯನ್ನೇ ಅನುಸರಿಸಿಕೊಂಡು ಬಂದಿದ್ದೇವೆ. ಈ ಶಿಕ್ಷಣ ಪದ್ಧತಿಯ ಲೋಪದೋಷಗಳ ಕುರಿತು ಈ ಮುಕ್ಕಾಲು ಶತಮಾನದಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ನವಭಾರತ ನಿರ್ವಣಕ್ಕೆ ಅಗತ್ಯವಾದ ಶಿಕ್ಷಣ ನೀತಿ ರೂಪಿಸಲು ಕೇಳಿಕೊಂಡಿದ್ದರು. ಅದಕ್ಕೆ ತಕ್ಕಂತೆ ಡಾ.ಕೆ.ಕಸ್ತೂರಿ ರಂಗನ್ ಸಮಿತಿಯು ‘ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್.ಇ.ಪಿ)’ ವರದಿ ಸಲ್ಲಿಸಿದೆ. ಈ ನೀತಿಯನ್ನು ಜಾರಿಗೊಳಿಸಲು ಮುಂದೆ ಬಂದ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂಬುದು ನಮ್ಮ ಹೆಮ್ಮೆ. ಈ ನೀತಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೊಸದಾಗಿ ರೂಪಿಸಲಿದೆ. ಏಕೆಂದರೆ, ಇದು ಭಾರತ ಕೇಂದ್ರಿತ ಶಿಕ್ಷಣ ಕ್ರಮವಾಗಿರುತ್ತದೆ. ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ.
ಈ ನೀತಿಯ ಅನುಷ್ಠಾನದಲ್ಲಿ ಬದ್ಧತೆಯುಳ್ಳ ಮತ್ತು ಪರಿಣತ ಶಿಕ್ಷಕರ ಪಾತ್ರ ಪ್ರಧಾನವಾದುದು. ಅವರಿಗೆ ಪಠ್ಯಕ್ರಮಗಳನ್ನು ಆಯ್ದುಕೊಳ್ಳಲು, ಸಂಶೋಧನೆ ಕೈಗೊಳ್ಳಲು, ಶೈಕ್ಷಣಿಕವಾಗಿ ಸಾಧನೆ ಮಾಡಲು ಅಗತ್ಯವಾದ ಎಲ್ಲ ಪೋ›ತ್ಸಾಹ, ಬೆಂಬಲವನ್ನು ಎನ್.ಇ.ಪಿ ಕಲ್ಪಿಸಿದೆ. ಅದನ್ನು ಶಿಕ್ಷಕರೂ ಬಳಸಿಕೊಂಡು, ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ, ಜಾಗತಿಕ ಅಗತ್ಯಗಳಿಗೆ ಅನುಸಾರವಾಗಿ, ಎದ್ದು ನಿಲ್ಲಬೇಕು. ಯಾವುದೇ ಶಿಕ್ಷಣ ವ್ಯವಸ್ಥೆಯಲ್ಲಿ ಕಟ್ಟಡಗಳಿಗೆ, ಪ್ರಯೋಗಶಾಲೆಗಳಿಗೆ ಎಷ್ಟು ಮಹತ್ವ ಇರುತ್ತದೆಯೋ ಅದಕ್ಕಿಂತ ಹೆಚ್ಚಿನ ಮಹತ್ವ ಶಿಕ್ಷಕರಿಗೆ ಇರುತ್ತದೆ. ಅದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿಯ ಯಶಸ್ವಿ ಅನುಷ್ಠಾನಕ್ಕೆ ಶಿಕ್ಷಕರು ಹೆಗಲು ಕೊಡಬೇಕು. ಆಗ ಮಾತ್ರ ದೇಶದ ಪ್ರಯೋಜನಕ್ಕೆ ಬರುವ ಹೊಸ ಪೀಳಿಗೆಯನ್ನು ಸೃಷ್ಟಿಸಲು ನಮಗೆ ಸಾಧ್ಯವಾಗುತ್ತದೆ. ಅದು ಎನ್.ಇ.ಪಿಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಇನ್ನೊಂದು ಹೆಗ್ಗಳಿಕೆ ಎಂದರೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿರುವುದು. ರಾಷ್ಟ್ರಕವಿ ಕುವೆಂಪು ಅವರು ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವ ಅಗತ್ಯವನ್ನು ಕುರಿತು ಪ್ರತಿಪಾದಿಸಿದವರಲ್ಲಿ ಅಗ್ರಗಣ್ಯರು. ಮಕ್ಕಳು ತಮ್ಮ ತಾಯಿಯ ಭಾಷೆಯಲ್ಲಿ ಕಲಿತರೆ ಅವರಲ್ಲಿ ವಿಷಯದ ಗ್ರಹಿಕೆ ಉನ್ನತವಾಗಿರುತ್ತದೆ ಎಂಬುದನ್ನು ಎಲ್ಲ ಶಿಕ್ಷಣ ತಜ್ಞರೂ ಹೇಳಿಕೊಂಡು ಬಂದಿದ್ದಾರೆ. ಮಕ್ಕಳಲ್ಲಿ ಸೃಜನಶೀಲತೆ ಅರಳಬೇಕಾದರೆ ಅವರು ಮಾತೃ ಭಾಷೆಯಲ್ಲಿಯೇ ಕಲಿಯಬೇಕು. ಮಕ್ಕಳೆಲ್ಲ ತೋಟದಲ್ಲಿನ ಅಂದಚೆಂದವಾದ ಹೂಗಳು ಇದ್ದಂತೆ. ಈ ಹೂಗಳು ಅರಳಿ ಕಂಗೊಳಿಸಲು ಫಲವತ್ತಾದ ಮಣ್ಣು, ಗೊಬ್ಬರ ಬೇಕು ಮತ್ತು ಆಗಾಗ ನೀರು ಹಾಕುತ್ತ ಇರಬೇಕು. ಕನ್ನಡ ಮಕ್ಕಳು ಕೂಡ ಹೀಗೆ ವೈವಿಧ್ಯಮಯವಾದ ಬಣ್ಣಗಳಿಂದ ಕಂಗೊಳಿಸಬೇಕು. ಅವರು ಕನ್ನಡತಾಯಿ ಭುವನೇಶ್ವರಿಯ ಕೊರಳಮಾಲೆಗಳಾಗಬೇಕು. ಅಂದರೆ ಅವರು ಸಾಧಕರಾಗಬೇಕು, ಸತ್ಪ್ರಜೆಗಳಾಗಬೇಕು. ಆ ಮೂಲಕ ಭಾರತಮಾತೆಯ ಹೆಮ್ಮೆಯ ಪುತ್ರರೂ ಅನಿಸಬೇಕು. ಸರ್ಕಾರ ಇಂಥ ಮಕ್ಕಳನ್ನು ಬೆಳೆಸಲು ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲು ಕಟಿಬದ್ಧವಾಗಿದೆ. ಅವರನ್ನು ತಯಾರು ಮಾಡುವುದು ಶಿಕ್ಷಕರ ಕೆಲಸ. ಶಿಕ್ಷಕರ ದಿನದ ಈ ಸಂದರ್ಭದಲ್ಲಿ ಅವರು ಆ ಪಣ ತೊಡುತ್ತಾರೆ ಎಂದು ನಾನು ನಂಬುತ್ತೇನೆ.
(ಲೇಖಕರು ಉನ್ನತ ಶಿಕ್ಷಣ ಸಚಿವರು)
18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
