
ಬೆಂಗಳೂರು:ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದರು.ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಬೆಳಿಗ್ಗೆ 11.50ಕ್ಕೆ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕೆ ಎಲ್ಲಾ ಸಿದ್ಧತೆಗಳನ್ನು ಕಾರ್ಯಕರ್ತರು ಮಾಡಿಕೊಳ್ಳುತ್ತಿರುವುದು ಸಂತಸ ಉಂಟು ಮಾಡಿದೆ ಎಂದರು.ವಿಮಾನ ನಿಲ್ದಾಣದಿಂದ ಜೆಪಿ ಭವನಕ್ಕೆ ಬರಲಿರುವ ಅವರು ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಸೌಹಾರ್ದ ಭೇಟಿ ಮಾಡಲಿದ್ದಾರೆ. ಬಳಿಕ ಮಾಜಿ ಪ್ರಧಾನಿಗಳಾದ ದೇವೇಗೌಡರ ಮನೆಗೆ ತೆರಳಿ ತಂದೆ ತಾಯಿಯ ಆಶೀರ್ವಾದ ಪಡೆಯಲಿದ್ದಾರೆ. ನಂತರ ತಿರುಪತಿಗೆ ತೆರಳಲಿದ್ದಾರೆ ಎಂದರು.ಭಾನುವಾರ ತಮಗೆ ರಾಜಕೀಯ ಜನ್ಮ ನೀಡಿದ ರಾಮನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬಳಿಕ ತಮಗೆ ರಾಜಕೀಯ ಶಕ್ತಿ ತುಂಬಿದ ಮಂಡ್ಯದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಎರಡೂ ಕಡೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕುಮಾರಸ್ವಾಮಿ ಅವರಿಗೆ ಅಭಿನಂದನಾ ಸಭೆಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.ಎರಡು ಸಲ ರಾಜ್ಯದ ಮುಖ್ಯಮಂತ್ರಿಯಾಗಿ ಬಡವರ ಪರ, ರೈತರ ಪರ ಕೆಲಸ ಮಾಡಿರುವ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಈ ಅವಕಾಶ ದೊರಕಿರುವುದು ಅತ್ಯಂತ ಸಂತೋಷದ ಸಂಗತಿ. ಉಕ್ಕು ಸಚಿವಾಲಯದಲ್ಲಿ ನಮ್ಮ ರಾಜ್ಯಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕುವ ಮೂಲಕ ಕೆಲಸ ಆರಂಭ ಮಾಡಿದ್ದಾರೆ ಎಂದರು.ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪರವಾಗಿ ದೇಶ ಮತ್ತು ರಾಜ್ಯದ ಜನತೆ ಐತಿಹಾಸಿಕ ತೀರ್ಪು ನೀಡಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ಮೋದಿ ಅವರು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ದೇವೇಗೌಡರು ಮೋದಿ ಅವರ ನಾಯಕತ್ವ ಮೆಚ್ಚಿ ಮೈತ್ರಿ ಭಾಗವಾಗಲು ತೀರ್ಮಾನ ಮಾಡಿದರು. ಚಾಮರಾಜನಗರ, ಹಾಸನ ಹೊರತುಪಡಿಸಿ ಹಳೇ ಮೈಸೂರು ಭಾಗದಲ್ಲಿ ಎಲ್ಲಾ ಕಡೆ ಮೈತ್ರಿ ಯಶಸ್ವಿಯಾಗಿದೆ. ಜನತೆಯ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ನಿಖಿಲ್ ತಿಳಿಸಿದರು.
ಪಕ್ಷದ ಸಂಘಟನೆಗೆ ದುಡಿಯುತ್ತೇನೆ:2019ರಲ್ಲಿ ಅನಿರೀಕ್ಷಿತವಾಗಿ ನಾನು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವೆ. ಪ್ರಾದೇಶಿಕ ಪಕ್ಷ ನಿಭಾಯಿಸುವ ಜವಾಬ್ದಾರಿ ಕೂಡ ದೊಡ್ಡದು. ಸಿನಿಮಾಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೇನೆ ಎಂದರು.
ನಮ್ಮ ನಡೆ ಉತ್ತಮವಾಗಿರಬೇಕು:ದರ್ಶನ್ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ನಡೆ ನುಡಿ ಉತ್ತಮವಾಗಿ ಇರಬೇಕು. ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ಜನ ನಮ್ಮನ್ನು ಗಮನಿಸುತ್ತಿರುತ್ತಾರೆ. ದರ್ಶನ್ ಪ್ರಕರಣ ಈಗಾಗಲೇ ತನಿಖೆ ನಡೆಯುತ್ತಿದ್ದು, ಈಗ ಮಾತನಾಡುವುದಿಲ್ಲ ಎಂದರು.
ಚನ್ನಪಟ್ಟಣ: ವರಿಷ್ಠರ ನಿರ್ಧಾರ:ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಯಾರು ಅಭ್ಯರ್ಥಿ ಆಗಬೇಕೆಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ಈ ಹಂತದಲ್ಲಿ ಸದ್ಯಕ್ಕೆ ಅಲ್ಲಿ ನನ್ನ ಸ್ಪರ್ಧೆ ಚರ್ಚೆ ಅಪ್ರಸ್ತುತ. ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ ಕೂಡ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದಾರೆ. ಹೀಗಾಗಿ ಅಂತಿಮವಾಗಿ ಅಭ್ಯರ್ಥಿ ಯಾರಾಗಬೇಕೆಂದು ಎರಡು ಪಕ್ಷಗಳ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.
ಗ್ಯಾರಂಟಿ ನಿಲ್ಲಿಸುವುದು ಉದ್ದಟತನ:ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಉದ್ಧಟತನದ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಹಾಗೂ ದೇಶದಲ್ಲಿ ಹೋರಾಟ ನಡೆಯಲಿದೆ ಎಂದರು.
ಸೋಲು ನಿರೀಕ್ಷಿಸಿರಲಿಲ್ಲ:ಹಾಸನದಲ್ಲಿ ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆಯಲ್ಲಿ ಗೆಲುವು ಸೋಲು ಸಹಜ. ಸೋತ ಮಾತ್ರಕ್ಕೆ ನಾವು ಕೈ ಕಟ್ಟಿ ಮನೆಯಲ್ಲಿ ಕೂರುವುದಿಲ್ಲ. ಹಾಸನದಲ್ಲಿ ಪಕ್ಷವನ್ನು ನಂಬಿಕೊಂಡ ಹಲವಾರು ಕಾರ್ಯಕರ್ತರು ಇದ್ದಾರೆ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ ಎಂದರು.ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಕೋಲಾರ ಕ್ಷೇತ್ರದ ನೂತನ ಸಂಸದ ಮಲ್ಲೇಶ್ ಬಾಬು ಹಾಗೂ ರಾಜ್ಯದಲ್ಲಿ ಗೆದ್ದಿರುವ ಮೈತ್ರಿಕೂಟದ ಎಲ್ಲಾ ಸಂಸದರು, ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ಎಸ್.ಎಲ್.ಭೋಜೆಗೌಡರು, ಕೆ.ವಿವೇಕಾನಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
