ಬಾಗಲಕೋಟೆ:ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ನಡೆದ ಪಾದಯಾತ್ರೆಯಿಂದ ಈವರೆಗೂ ನಿರಂತರವಾಗಿ ತಮ್ಮ ವಿರುದ್ಧ ಬರುತ್ತಿದ್ದ ಟೀಕಾಪ್ರಹಾರದ ಬಗ್ಗೆ ಮೌನವಹಿಸಿದ್ದ ಸಚಿವ ಮುರುಗೇಶ ನಿರಾಣಿ, ಇದೀಗ ಮೌನ ಮುರಿದು ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಿರುದ್ಧ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಸಮಾಜದ ಮುಖಂಡರೂ ಆದ ಮುರುಗೇಶ ನಿರಾಣಿ, ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲು ನಾನು ಅಡ್ಡಿಯಾಗಿದ್ದೇನೆ ಎಂದು ಸ್ವಾಮೀಜಿ ಬೆಳಗಾವಿಯಲ್ಲಿ ಹೇಳಿದ್ದಾರೆ. ಇದಕ್ಕೆ ಸಾಕ್ಷಿ ಒದಗಿಸಿದರೆ ಇಂದೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ಸ್ವಾಮೀಜಿ ಸನ್ಯಾಸತ್ವ ತೊರೆದು ರಾಜಕಾರಣಕ್ಕೆ ಬರಲಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ನೇರವಾಗಿ ಸವಾಲು ಎಸೆದರು.
ನಾವು ಮನಸ್ಸು ಮಾಡಿದರೆ ಇಡೀ ರಾಜ್ಯದಲ್ಲಿ ಅವರನ್ನು ಸೋಲಿಸುತ್ತೇವೆ, ಇವರನ್ನು ಸೋಲಿಸುತ್ತೇವೆ ಎನ್ನುತ್ತೀರಿ. ಹಿಂದೆ ನಮ್ಮ ಸಮಾಜದ ಅನೇಕರ ಪರವಾಗಿ ಅಡ್ಡಾಡಿದ್ದೀರಲ್ಲ, ಎಷ್ಟು ಜನರನ್ನು ಗೆಲ್ಲಿಸಿದ್ದೀರಿ? ಆಗ ನಿಮ್ಮ ಶಕ್ತಿ ಏನಂತ ಗೊತ್ತಾಗಿದೆ ಎಂದು ಶ್ರೀಗಳ ಹೇಳಿಕೆಗೆ ವ್ಯಂಗ್ಯವಾಡಿದರು. 2018ರಲ್ಲಿ ನಿಮ್ಮ ಪೀಠ ಇರುವ ಕ್ಷೇತ್ರದಲ್ಲೇ ನಿಮ್ಮ ಎಂಎಲ್​ಎ(ವಿಜಯಾನಂದ ಕಾಶಪ್ಪನವರ)ಯನ್ನು ಗೆಲ್ಲಿಸಲು ನಿಮಗೆ ಆಗಲಿಲ್ಲ. 2019ರಲ್ಲಿ ನಿಮ್ಮ ಕ್ಷೇತ್ರದಲ್ಲಿ ಲೋಕಸಭೆ ಅಭ್ಯರ್ಥಿ(ವೀಣಾ ಕಾಶಪ್ಪನವರ) ಗೆಲ್ಲಿಸಲು ಆಗಲಿಲ್ಲ. ಧಾರವಾಡದಲ್ಲಿ ನಮ್ಮ ಸಮಾಜದ ವಿನಯ ಕುಲಕರ್ಣಿ, 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ(ಲಕ್ಷ್ಮಿ ಹೆಬ್ಬಾಳ್ಕರ್ ಪರ) ಹಾಗೂ ಚಿಕ್ಕೋಡಿ (ಪ್ರಕಾಶ ಹುಕ್ಕೇರಿ ಪರ) ಕ್ಷೇತ್ರಗಳಲ್ಲಿ ಹಗಲು-ರಾತ್ರಿ ನೀವು ಅಡ್ಡಾಡಿದರೂ ಫಲಿತಾಂಶ ಏನಾಯ್ತು? ಎಂದು ಖಾರವಾಗಿಯೇ ಪ್ರಶ್ನಿಸಿದರು.
ಸ್ವಾಮಿಗಳೇ, ನಾವು ಸೋಲೋದು ಅಥವಾ ಗೆಲ್ಲೋದು ಮತದಾರರ ಕೈಯಲ್ಲಿದೆ. ಇವತ್ತು ಲಕ್ಷಾಂತರ ಜನರು ಸೇರುತ್ತಿದ್ದಾರೆ ಎಂದರೆ ನಮಗೆ 2ಎ ಮೀಸಲಾತಿ ಸಿಗಬೇಕು ಅಂತ. ನಿಮ್ಮ ನಡತೆ, ನಡವಳಿಕೆ ನೋಡಿ ಅಲ್ಲ. ದೊಡ್ಡ ಸ್ಥಾನದಲ್ಲಿ ಇದ್ದೀರಿ. ಬಾಯಿ ಚಪಲಕ್ಕೆ ಯಾರ ಬಗ್ಗೆಯೂ ಮಾತನಾಡಬಾರದು. ಒಬ್ಬರ ಮನಸ್ಸಿಗೆ ಎಷ್ಟು ನೋವು ಆಗುತ್ತದೆ ಎಂದು ತಿಳಿದುಕೊಳ್ಳಬೇಕು ಎಂದು ಸ್ವಾಮೀಜಿಗೆ ಸಲಹೆ ನೀಡಿದರು.
3 ಪೀಠ ಆಗಿವೆ, ಇನ್ನೂ 2 ಮಾಡ್ತೇವೆ:ರಾಜ್ಯದಲ್ಲಿ ಪಂಚಮಸಾಲಿ ಮೂರು ಪೀಠ ಮಾಡಿದ್ದೇ ನಾನು. ಇನ್ನೂ ಎರಡು ಪೀಠಗಳನ್ನು ಮಾಡುತ್ತೇವೆ. 80 ಲಕ್ಷ ಜನರು ಇರುವ ಪಂಚಮಸಾಲಿ ಸಮಾಜದಲ್ಲಿ ಶುಭ ಕಾರ್ಯಗಳಿಗೆ ಸ್ವಾಮೀಜಿಗಳು ಸಿಗಬೇಕು ಎನ್ನುವ ಕಾರಣಕ್ಕೆ ಮಾಡಲಾಗಿದೆ. ಎಲ್ಲರೂ ಅಣ್ಣ-ತಮ್ಮರಾಗಿ ಒಂದೇ ಕುಟುಂಬದವರಂತೆ ನಡೆಯಬೇಕು. ಈ ರೀತಿ ಜಗಳ ಹಚ್ಚುವುದು ಆಗಬಾರದು ಎಂದರು.
2008 ರಿಂದ 2021ರ ವರೆಗೂ ನಿಮ್ಮ ಪೀಠಕ್ಕೆ (ಕೂಡಲಸಂಗಮ ಪಂಚಮಸಾಲಿ ಪೀಠ) ಯಾರು ಹತ್ತಿರ ಇದ್ದರು? ಆಗು-ಹೋಗು ಯಾರು ನೋಡಿಕೊಳ್ಳುತ್ತಿದ್ದರು? ಇದನ್ನು ನಾನು ಹೇಳಬಾರದು. ಅದು ಇಡೀ ಸಮಾಜ ಹಾಗೂ ಆರೂವರೆ ಕೋಟಿ ಜನರಿಗೆ ಗೊತ್ತಿದೆ ಎಂದು ಸಚಿವರು ಹೇಳಿದರು.
ಯತ್ನಾಳಗೆ ಟಕ್ಕರ್:ಶಾಸಕ ಯತ್ನಾಳ್ ವಿರುದ್ಧವೂ ಗುಡುಗಿದ ನಿರಾಣಿ, ‘ನಾನು ವಾಜಪೇಯಿ, ಆಡ್ವಾಣಿ ಅವರನ್ನು ಬಿಟ್ಟು ಯಾರ ಕಾಲಿಗೂ ಬಿದ್ದಿಲ್ಲ’ ಎನ್ನುವ ಯತ್ನಾಳ್, ಇತ್ತೀಚೆಗೆ ದೆಹಲಿಗೆ ಹೋಗಿ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದೇಕೆ? ಯಡಿಯೂರಪ್ಪ ಹಾಗೂ ನನ್ನನ್ನು ಒಂದು ಮಾಡಿ ಎಂದು ಹೋಗಿರಲಿಲ್ವ ಎಂದು ಪ್ರಶ್ನಿಸಿದರು.
ಎಲ್ಲಿತ್ತು ನಿನ್ನ ಬಾರಕೋಲು?:ತಮ್ಮ ವಿರುದ್ಧ ಆಗಾಗ್ಗೆ ವ್ಯಂಗ್ಯ, ಟೀಕೆ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧವೂ ಸಚಿವ ನಿರಾಣಿ ಗುಡುಗಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಬಾರಕೋಲು ಚಳವಳಿ ಮಾಡುತ್ತೇನೆ ಅಂತಾರೆ. ಹಿಂದೆ ಸರ್ಕಾರ ನಿಮ್ಮದೇ ಇತ್ತು. ನಿಮ್ಮ ತಂದೆಯೇ ಮಂತ್ರಿ ಆಗಿದ್ದರು. ಪಂಚಮಸಾಲಿ ರಾಜ್ಯಾಧ್ಯಕ್ಷರು ಆಗಿದ್ದರು. ಆ ವೇಳೆಯಲ್ಲಿ ನೀನು ಯಾಕೆ ಮಾಡಲಿಲ್ಲ? 3ಬಿ, 2ಎ ಗೆ ಯಾಕೆ ಸೇರಿಸಲಿಲ್ಲ? ಆಗ ಎಲ್ಲಿತ್ತು ನಿನ್ನ ಬಾರಕೋಲು? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಟಾಂಗ್ ನೀಡಿದರು.
ಸಮುದಾಯವನ್ನು ಜಾತಿ ಕಾಲಂಗೆ ತಂದಿದ್ದು ಬಿಎಸ್​ವೈ:ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಾತಿ ಕಾಲಂನಲ್ಲಿ ಇರಲೇ ಇಲ್ಲ. ಈ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನೇ ಪ್ರಸ್ತಾವನೆ ಇಟ್ಟಿದ್ದೆ. ಆಗ ಅವರು ನಾಲ್ವರು ಸಚಿವರ ಕಮಿಟಿ ರಚಿಸಿದರು. ಕಮಿಟಿ ಶಿಫಾರಸಿನ ಬಳಿಕ ಜಾತಿ ಕಾಲಂಗೆ ಬಂತು. ಬಳಿಕ 2ಎ ಮೀಸಲಾತಿ ಕೊಡಿ ಎಂದು ಕೇಳಿದೆವು. ಆದರೆ, ಬಿಎಸ್​ವೈ ಬಳಿಕ ಬಂದ ಸರ್ಕಾರಗಳು ಅದನ್ನು ಮುಂದುವರಿಸಲಿಲ್ಲ ಎಂದು ಸಚಿವ ನಿರಾಣಿ ಹಿಂದಿನ ಘಟನೆ ಮೆಲುಕು ಹಾಕಿದರು. ಅಲ್ಲದೆ, 2ಎ ಮೀಸಲಾತಿ ವಿಚಾರವಾಗಿ ಬಿಎಸ್​ವೈ ವಿರುದ್ಧ ಟೀಕಾಕಾರರಿಗೂ ಸಚಿವರು ತಿರುಗೇಟು ನೀಡಿದರು.
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

ಶಾಸಕ ರೇಣುಕಾಚಾರ್ಯ ಇದ್ದ ವೇದಿಕೆಯತ್ತ ಕುರಿಗಳನ್ನು ನುಗ್ಗಿಸಿ ತರಾಟೆಗೆ ತೆಗೆದುಕೊಂಡ ಜನರು; ಕಾರಣವಿದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
