ಬೆಂಗಳೂರು:ಭೂ ಮಾಲೀಕರು ಮೃತರಾದರೆ ಅವರ ಹೆಸರಿನಲ್ಲಿ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡಲು ಇರುವ ಸಮಸ್ಯೆಗಳನ್ನು ಪರಿಹಾರ ಮಾಡುವ ಸಲುವಾಗಿ ಜುಲೈ 16 ರಿಂದ ರಾಜ್ಯದಲ್ಲಿ ಪೌತಿಖಾತೆ ಆಂದೋಲನ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಲಕ್ಷಾಂತರ ಪೌತಿ ಖಾತೆಗಳಿದ್ದು, ಖಾತೆಗಳ ವರ್ಗಾವಣೆಗಾಗಿ ಮೃತರ ವಾರಸುದಾರರು ತಾಲೂಕು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇಂತಹ ಅಲೆದಾಟಕ್ಕೆ ಮುಕ್ತಿಯಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಮೃತರ ಹೆಸರಿನಲ್ಲಿ ಖಾತೆಗಳಿದ್ದಾಗ ಅದನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಕೆಲಸ ವಿಪರೀತ ವಿಳಂಬವಾಗುತ್ತಿದ್ದು, ಮೃತರ ಕುಟುಂಬದವರು ಯಾರು ಎಂದು ಖಚಿತಪಡಿಸಿಕೊಳ್ಳಲು ಮಹಜರು ನಡೆಸುವುದೂ ಸೇರಿ ಹಲವು ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದ್ದು ಇದರಿಂದಾಗಿ ಪೌತಿ ಖಾತೆಗಳನ್ನು ಇತ್ಯರ್ಥಪಡಿಸಲು ವರ್ಷಗಟ್ಟಲೆ ಸಮಯ ತಗಲುತ್ತಿದೆ. ಹಾಲಿ ವಾರಸುದಾರರಿಗೆ ಪೌತಿಖಾತೆ ವರ್ಗಾವಣೆ ಮಾಡುವ ಕೆಲಸ ಸರಿಯಾಗಿ ಆಗದೆ ಇರುವುದರಿಂದ ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರಿಗೆ ಲಭ್ಯವಾಗುವ ಯೋಜನೆಗಳ ನೆರವು ಪಡೆಯಲು ಆಗುತ್ತಿಲ್ಲ. ಭೂಮಿಯನ್ನು ಅಡವಿಟ್ಟು ಸಾಲ ಪಡೆಯುವುದಕ್ಕೂ ಸಮಸ್ಯೆಯಾಗಿದೆ. ಆದ್ದರಿಂದ ಎಲ್ಲ ಅಡ್ಡಿಗಳನ್ನು ನಿವಾರಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ವಿವರಿಸಿದರು. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮವಾಸ್ತವ್ಯ ಮಾಡಿದಾಗ ಪೌತಿ ಖಾತೆಗಳ ಸಮಸ್ಯೆ ಅಗಾಧವಾಗಿರುವುದು ತಮ್ಮ ಗಮನ ಬಂತು. ಆ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.
ಗ್ರಾಮವಾಸ್ತವ್ಯಕ್ಕೆ ಮುಂಚೆ ಗ್ರಾಮವನ್ನು ಘಟಕವಾಗಿ ಪರಿಗಣಿಸಲಾಗುತ್ತಿತ್ತು. ಆನಂತರ ಏಳೆಂಟು ಗ್ರಾಮಗಳನ್ನು ಹೊಂದಿರುವ ಗ್ರಾಮಪಂಚಾಯ್ತಿಗಳನ್ನು ಘಟಕವಾಗಿ ಪರಿಗಣಿಸಲಾಯಿತು. ಈಗ ತಾಲ್ಲೂಕನ್ನೇ ಒಂದು ಘಟಕವಾಗಿ ಪರಿಗಣಿಸಲಾಗಿದ್ದು ಪೌತಿಖಾತೆ ನೀಡುವ ಕೆಲಸದಿಂದ ರೈತರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದರು. ಇನ್ನು ಮುಂದೆ ಸಹಾಯಕ ಆಯುಕ್ತರುಗಳಿಗೆ ಪೌತಿಖಾತೆಗಳನ್ನು ಒದಗಿಸುವ ಸ್ವಾತಂತ್ರ್ಯ ನೀಡಲಾಗುವುದು ಎಂದರು. ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಅಲ್ಲಿನ ನೂರಾರು ಮಂದಿ ಹಾಜರಿರುವುದರಿಂದ ಅವರ ಸಮ್ಮುಖದಲ್ಲಿ ಪೌತಿ ಖಾತೆಯ ದಾಖಲೆಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಮೃತರ ಹೆಸರಿನಲ್ಲಿರುವ ಪೌತಿ ಖಾತೆಗಳನ್ನು ವರ್ಗಾಯಿಸುವಾಗ ಅವರ ಮಕ್ಕಳು, ಸೊಸೆಯರು, ಮೊಮ್ಮಕ್ಕಳ ವಿವರವನ್ನು ಸ್ಥಳೀಯರಿಂದ ಖಚಿತಪಡಿಸಿಕೊಳ್ಳಲು ಅವಕಾಶವಿದ್ದು, ಇದರಿಂದ ಹಾಲಿ ವಾರಸುದಾರರಿಗೆ ಖಾತೆ ವರ್ಗಾಯಿಸುವ ಕೆಲಸ ಸುಗಮವಾಗಲಿದೆ ಎಂದು ಅಶೋಕ್ ಹೇಳಿದರು. ಇದೇ ರೀತಿ ಸದ್ಯಕ್ಕೆ ಪೌತಿ ಖಾತೆಗಳನ್ನು ಇತ್ಯರ್ಥ ಮಾಡುವಾಗ ವಂಶವೃಕ್ಷವನ್ನು ಸರಿಯಾಗಿ ನೀಡಲಾಗುತ್ತಿಲ್ಲ. ಮೃತರ ಮಕ್ಕಳು, ಮೊಮ್ಮಕ್ಕಳು, ಇನ್ನಿತರರು ಬೇರೆ ಸ್ಥಳದಲ್ಲಿದ್ದರೆ ಅವರ ಹೆಸರನ್ನೇ ಕೈ ಬಿಡುವ ಕೆಲಸವಾಗುತ್ತಿದೆ. ಇಂತಹ ಎಲ್ಲ ಸಮಸ್ಯೆಗಳಿಗೆ ಆಂದೋಲನದಿಂದ ಪರಿಹಾರ ಸಿಗುತ್ತದೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಪೌತಿಖಾತೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ಹೆಸರನ್ನೇ ಕೈ ಬಿಡುವ ಕೆಲಸವಾಗುತ್ತಿದ್ದು ಇದರಿಂದ ಎಲ್ಲೆಡೆ ಅಪಸ್ವರ ಕೇಳುತ್ತಲೇ ಇದೆ. ಪೌತಿ ಖಾತೆ ಆಂದೋಲನದಿಂದಾಗಿ ಇಂತಹ ಅಪಸ್ವರಗಳಿಗೂ ಮುಕ್ತಿ ಯಾಡಬಹುದು ಎಂದು ಸಚಿವ ಅಶೋಕ್ ಹೇಳಿದರು.
ಜುಲೈನಲ್ಲಿ ಚಾಲನೆ:ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಜುಲೈನಲ್ಲಿ ನಡೆಸಲಿರುವ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಲಾಗುತ್ತದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿಯೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಮಾರು ಹತ್ತು ಸಾವಿರ ಪೌತಿ ಖಾತೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಕೆಲಸವಾಗಲಿದೆ. ಸರ್ಕಾರದ ಈ ತೀರ್ವನದಿಂದಾಗಿ ದಶಕಗಳ ಕಾಲದಿಂದ ರೈತರು ಎದುರಿಸುತ್ತಿರುವ ಸಮಸ್ಯೆ ದೂರವಾಗಲಿದೆ ಎಂದು ಸಚಿವ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಬೊಕ್ಕಸಕ್ಕೆ ಭಾರವಾದ ನಿಗಮಗಳು ರದ್ದು:ಆಡಳಿತ ಯಂತ್ರಕ್ಕೆ ಸರ್ಜರಿ ಮಾಡುವುದರೊಂದಿಗೆ ಸರ್ಕಾರದ ಬೊಕ್ಕಸಕ್ಕೆ ಭಾರವಾಗಿರುವ ನಿಗಮ ಮತ್ತು ಮಂಡಳಿಗಳನ್ನು ರದ್ದು ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಡಳಿತ ಸುಧಾರಣೆ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹುತೇಕ ನಿಗಮಗಳನ್ನು ವಿಲೀನ ಮಾಡುವುದರೊಂದಿಗೆ, ಇನ್ನು ಮುಂದೆ ಇಲಾಖೆಗೆ ಒಂದೇ ನಿಗಮ ಇರುವಂತೆ ನೋಡಿಕೊಳ್ಳಲಾಗುವುದು. ಕೆಲವು ಇಲಾಖೆಯಲ್ಲಿ ನಾಲ್ಕೈದು ನಿಗಮ ಮತ್ತು ಮಂಡಳಿಗಳಿದ್ದು ಬಹುತೇಕ ನಿಗಮಗಳಿಗೆ ಮಾಡಲು ಕೆಲಸವೇ ಇಲ್ಲ. ಇಂತಹ ನಿಗಮಗಳಿಗೆ ಹಲವು ಸಿಬ್ಬಂದಿ, ಅಧಿಕಾರಿಗಳಿದ್ದು ವಿನಾಕಾರಣ ಕಾರುಗಳ ಬಳಕೆಯಾಗುತ್ತಿದೆ. ಸಂಬಳ, ಸಾರಿಗೆಗಾಗಿ ದುಂದು ವೆಚ್ಚವಾಗುತ್ತಿದೆ. ನಿಗಮಗಳನ್ನು ವಿಲೀನ ಮಾಡುವುದರಿಂದ ಸಿಬ್ಬಂದಿ ಅಗತ್ಯ ಇರುವ ಕಡೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಹಣ್ಣಿನ ರಸ ತೆಗೆಯಲು, ರಬ್ಬರ್ ರಸ ತೆಗೆಯಲು ಸಹ ನಿಗಮಗಳಿವೆ. ಇಲಾಖೆಯ ಕೆಲಸವೇ ಅರಣ್ಯ ಅಭಿವೃದ್ಧಿ, ಆದರೂ ಅದಕ್ಕಾಗಿ ಪ್ರತ್ಯೇಕ ನಿಗಮವೇ ಇದೆ. ಇಂತಹ ನಿಗಮಗಳಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಭಾರ. ಇಂತಹ ಭಾರವನ್ನು ಕಡಿಮೆ ಮಾಡಿಕೊಳ್ಳುವುದು ಈಗ ಅನಿವಾರ್ಯ ಆಗಿದೆ ಎಂದು ಅಶೋಕ್ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಹಲವು ನಿಗಮಗಳಿದ್ದರೂ, ಅಲ್ಲಿ ತುಂಬ ಕೆಲಸಗಳಿವೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯಂತಹ ಪ್ರಮುಖ ಇಲಾಖೆಗಳಲ್ಲಿರುವ ನಿಗಮಗಳನ್ನು ವಿಲೀನ ಮಾಡುವುದಿಲ್ಲ ಎಂದು ಹೇಳಿದರು. ಯೋಜನಾ ಪ್ರಾಧಿಕಾರಗಳ ಸಂಖ್ಯೆಯೂ ರಾಜ್ಯದಲ್ಲಿ ಮಿತಿಮೀರಿದ್ದು ಒಂದು ಪ್ರಾಧಿಕಾರ ಮಾಡುವ ಕೆಲಸವನ್ನು ನಾಲ್ಕು ಪ್ರಾಧಿಕಾರಗಳು ಮಾಡುತ್ತಿವೆ. ಹೀಗಾಗಿ ಇನ್ನು ಮುಂದೆ ಜಿಲ್ಲೆಗೊಂದೇ ಯೋಜನಾ ಪ್ರಾಧಿಕಾರ ಕೆಲಸ ಮಾಡುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
