ಕಾರವಾರ:ಕಾಡಿನಿಂದಲೇ ಕೂಡಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಎಂಬ ಕುಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಕಂದಾಯ ಸಚಿವ ಆರ್. ಅಶೋಕ್ ನೆಟ್​ವರ್ಕ್, ವಿದ್ಯುತ್ ಇಲ್ಲದೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಗ್ರಾಮಸ್ಥರಲ್ಲಿ ಶುಕ್ರವಾರ ಭರವಸೆಯ ಬೆಳಕು ಮೂಡಿಸಿದ್ದಾರೆ. ಸರಸರನೆ ಮರವೇರಿ ಅಡಕೆ ಕೊಯ್ಯುವ ಗೌಡನನ್ನು ಕಂಡು ಹುಬ್ಬೇರಿಸಿದ ಅಶೋಕ್, ಪೆಟ್ಟಿಗೆಯ ಜೇನು ಸವಿದರು. ಆಲೆಮನೆ ಪದ್ಧತಿ ವೀಕ್ಷಿಸಿದರು. ಸಿದ್ದಿ ಪುಗಡಿ ನೃತ್ಯಕ್ಕೆ ಹೆಜ್ಜೆ ಹಾಕಿದರು. ಹಾಲಕ್ಕಿ ಹಾಡಿಗೆ ದನಿಯಾದರು. ಅಚವೆ ಗ್ರಾಪಂ ವ್ಯಾಪ್ತಿಯ ಕುಂಟಗಣಿಯಲ್ಲಿ ಜಿಲ್ಲೆಯ 5,500ಕ್ಕೂ ಅಧಿಕ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಿಸಿದರು. ನಂತರ ಅಂಗಡಿಬೈಲ್​ನ ಸಿದ್ದಿ ಕಾಲನಿಯ ಸುಬ್ರಾಯ ಸಿದ್ದಿ ಎಂಬುವರ ಮನೆಯಲ್ಲಿ ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಹಿಲ್ಲೂರು ಬಿಸಿಎಂ ಹಾಸ್ಟೆಲ್​ನಲ್ಲಿ ರಾತ್ರಿ ವಾಸ್ತವ್ಯ ಮಾಡಿದರು. ಇದಕ್ಕೂ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಲೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯವಾಹಿನಿಗೆ:ತಳ ಸಮುದಾಯಗಳು ಮೂಲ ಸಂಪ್ರದಾಯವನ್ನು ಉಳಿಸಿಕೊಂಡಿವೆ. ಇಂಥ ಭಾರತೀಯ ಪರಂಪರೆ ಉಳಿಯಬೇಕು. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ನಾವೇ ಪರಕೀಯರಾಗುತ್ತೇವೆ. ತಳ ಸಮಾಜಗಳ ಜತೆ ನಾವು ಕಲಿಯುವುದು ಬಹಳ ಇದೆ. ಆದರೆ, ಇಂಥ ಸಮುದಾಯಗಳು ಸೌಲಭ್ಯಗಳಿಂದ ವಂಚಿತವಾಗಿವೆ. ಸಿದ್ದಿ, ಹಾಲಕ್ಕಿ, ಕೊರಗ ಮುಂತಾದ ತುಳಿತಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶ. ಗ್ರಾಮ ವಾಸ್ತವ್ಯ ಜನರ ಹಲವು ಸಮಸ್ಯೆಗಳನ್ನು ಅರಿಯಲು ಕಾರಣವಾಗಿದೆ ಎಂದರು. ಜನರ ಸಮಸ್ಯೆಯನ್ನು ಖುದ್ದು ವೀಕ್ಷಿಸಿದರೆ ಕ್ಯಾಬಿನೆಟ್​ನಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು. ಇಲ್ಲಿನ ಅರಣ್ಯ ಉತ್ಪನ್ನ, ಕೃಷಿ ಮಾಡಿದವರಿಗೆ ಮಾರುಕಟ್ಟೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
6500 ಫಲಾನುಭವಿಗಳಿಗೆ ಸೌಲಭ್ಯ:ಗ್ರಾಮ ವಾಸ್ತವ್ಯ ಕೇವಲ ಒಂದು ಸಣ್ಣ ಕಾರ್ಯಕ್ರಮವಾಗಿರಲಿಲ್ಲ. ಈ ನೆಪದಲ್ಲಿ ಜಿಲ್ಲೆಯ 6500 ಜನರಿಗೆ ಸೌಲಭ್ಯ ದೊರೆಯಿತು. ಗ್ರಾಮವಾಸ್ತವ್ಯಕ್ಕೂ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಐದಾರು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದರು. ಕಂದಾಯ ಅಧಿಕಾರಿಗಳು ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿ ವಿವಿಧ ಮಾಸಾಶನಕ್ಕೆ ಅರ್ಹರಾಗಿರುವವರನ್ನು ಹುಡುಕಿ ಸ್ವತಃ ಅರ್ಜಿ ಪಡೆದಿದ್ದರು. ಪರಿಣಾಮ ಅಂಕೋಲಾದ ಸಣ್ಣ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆದರೂ ಇಡೀ ಜಿಲ್ಲೆಯ ಸಾವಿರಾರು ಜನರಿಗೆ ಸೌಲಭ್ಯ ದೊರೆಯಲು ಕಾರಣವಾಯಿತು.
ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್ ಸಿಗಲ್ಲ ಎಂಬ ಜನರ ಮನೋಭಾವನೆ ಬದಲಾಗುವಂತೆ ಗ್ರಾಮ ವಾಸ್ತವ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ ಮುಂಬರುವ ಒಂದು ವರ್ಷದಲ್ಲಿ ಎಲ್ಲ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. ನಮ್ಮ ಗ್ರಾಮ ವಾಸ್ತವ್ಯ ದಿನದಿಂದ ದಿನಕ್ಕೆ ಪ್ರಸಿದ್ಧವಾಗುತ್ತಿದೆ. ಅದನ್ನು ಪ್ರತಿ ಪಕ್ಷ ಜೆಡಿಎಸ್, ಕಾಂಗ್ರೆಸ್ ಶಾಸಕರೂ ಒಪ್ಪಿಕೊಳ್ಳುತ್ತಾರೆ.
|ಆರ್. ಅಶೋಕ್ಕಂದಾಯ ಸಚಿವ
ಸರಳತೆ ಮೆರೆದ ‘ಸಾಮ್ರಾಟ’:ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲು ಆಹ್ವಾನಿಸಲಾಗಿತ್ತು. ಸಚಿವ ಅಶೋಕ್ ಅವರು ಸ್ಥಳಕ್ಕೇ ತೆರಳಿ ಹಲವರಿಗೆ ಪ್ರಮಾಣಪತ್ರ ನೀಡಿ ಸರಳತೆ ಮೆರೆದರು. ಕಂದಾಯ ಇಲಾಖೆಗೆ ಸಂಬಂಧಿಸಿದ 1458, ಪಂಚಾಯತ್​ರಾಜ್ ಇಲಾಖೆಯ 1390, ಆರೋಗ್ಯ ಇಲಾಖೆಯ 489, ಹೆಸ್ಕಾಂನ 483 ಸೇರಿ ವಿವಿಧ ಫಲಾನುಭವಿಗಳಿಗೆ ಪ್ರಮಾಣಪತ್ರ, ಚೆಕ್ ನೀಡಲಾಯಿತು.
ಸ್ಥಳದಲ್ಲೇ ಉದ್ಯೋಗ:ಸಚಿವ ಅಶೋಕ್ ಅವರು ಭೇಟಿ ನೀಡಿದ ಕುಂಟಗಣಿ ಸುಬ್ರಾಯ ಸಿದ್ದಿ ಕುಟುಂಬದ ಯುವತಿಗೆ ಉದ್ಯೋಗದ ಭರವಸೆ ನೀಡಿದರು. ಎಂಎಸ್​ಡಬ್ಲು್ಯ ಓದಿದ ಭಾಗೀರಥಿ ಸಿದ್ದಿ ಅವರನ್ನು ಗ್ರಾಮ ಸಹಾಯಕರನ್ನಾಗಿ ನೇಮಕ ಮಾಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೂಚನೆ ನೀಡಿದರು. ಪೊಲೀಸ್ ಕೆಲಸಕ್ಕೆ ಸೇರಲಿಚ್ಛಿಸಿರುವ ಕಾವ್ಯಾ ಸಿದ್ದಿ ಅವರಿಗೆ ವೈಯಕ್ತಿಕ ಖರ್ಚಿನಲ್ಲಿ ತರಬೇತಿ ನೀಡುವುದಾಗಿ ತಿಳಿಸಿದರು. ಎಂಎಸ್​ಸಿ ಓದುತ್ತಿರುವ ಪೂಜಾ ನಾರಾಯಣ ಸಿದ್ದಿ ಅವರಿಗೆ ಲ್ಯಾಪ್​ಟಾಪ್ ವಿತರಿಸಿದರು.
10 ಕೋಟಿ ರೂ. ಬಿಡುಗಡೆ:ಜಿಲ್ಲೆಯ 9000ಕ್ಕೂ ಅಧಿಕ ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲ. ಸಚಿವ ಪೂಜಾರಿ ಹಾಗೂ ಶಾಸಕರು ಆಸಕ್ತಿ ವಹಿಸಿ ಇತ್ತೀಚೆಗೆ ಅನುದಾನ ಬಿಡುಗಡೆಗೆ ಪ್ರಯತ್ನಿಸಿದ್ದರು. ಇಂಧನ ಸಚಿವ ಸುನೀಲ ಕುಮಾರ ಇತ್ತೀಚೆಗೆ ಆಗಮಿಸಿದ ಸಂದರ್ಭದಲ್ಲಿ ಅವರ ಬಳಿ ವಿನಂತಿಸಿ ಬೆಳಕು ಯೋಜನೆಯ ಬಾಕಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಆಯ್ದ ಫಲಾನುಭವಿಗಳಿಗೆ ಶುಕ್ರವಾರ ಬೆಳಕು ಯೋಜನೆಯ ಹಕ್ಕು ಪತ್ರವನ್ನು ಸಚಿವ ಆರ್.ಅಶೋಕ್ ವಿತರಿಸಿದರು. ಎಲ್ಲರಿಗೂ 3 ತಿಂಗಳಲ್ಲಿ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಐಬಿಯಲ್ಲಿ ಉಳಿಯುವಂತಿಲ್ಲ:ಐಬಿಯಲ್ಲಿ ಉಳಿದಿದ್ದ ಅಧಿಕಾರಿಗಳನ್ನು ಎಚ್ಚರಿಸಿದ ಅಶೋಕ್, ಸರ್ಕಾರದ ಹಾಸ್ಟೆಲ್, ಶಾಲೆಗಳಲ್ಲಿ ಉಳಿಯಬೇಕು. ಅಲ್ಲಿನ ಸಮಸ್ಯೆ ಅರಿಯಬೇಕು. ಬದಲಾವಣೆ ತರಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಅರಣ್ಯದಿಂದ ಕೂಡಿದ ಜಿಲ್ಲೆಯ ಅತೀ ಹಿಂದುಳಿದ ಗ್ರಾ.ಪಂ. ಅಚವೆ. ಸಚಿವರ ಗ್ರಾಮ ವಾಸ್ತವ್ಯದಿಂದ ಗ್ರಾಮದ ಅಭಿವೃದ್ಧಿಗೆ 1 ಕೋಟಿ ರೂ. ಘೊಷಿಸಿದ್ದಾರೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ತುಂಬ ಅನುಕೂಲವಾಗಿದೆ. ಇದೊಂದು ಅತ್ಯುತ್ತಮ ಕಾರ್ಯಕ್ರಮ.
|ಬಾಲಚಂದ್ರ ಶೆಟ್ಟಿಅಚವೆ ಗ್ರಾಪಂ ಉಪಾಧ್ಯಕ್ಷ
ಐವತ್ತು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಗರೀಬಿ ಹಠಾವೊ ಎಂಬ ಘೊಷಣೆ ಮಾಡಿದ್ದು ಬಿಟ್ಟರೆ, ಬಡವರನ್ನು ತುಳಿದಿದೆ. ಅವರಿಗೆ ಆಪಾದನೆ ಮಾಡುವುದು ರೂಢಿಯಾಗಿದೆ ಎಂದು ಸಚಿವ ಆರ್. ಅಶೋಕ ಟೀಕಿಸಿದರು. ಇದು ಚುನಾವಣೆ ವರ್ಷ, ಕಾಂಗ್ರೆಸ್​ನವರು ಬೇಡ ಎಂದರೂ ಏನಾದರು ಆರೋಪ ಮಾಡುತ್ತಾರೆ. ಅವರಿದ್ದಾಗ ಏನು ಮಾಡಿದರು ಎಂದು ಹೇಳಲು ತಯಾರಿಲ್ಲ ಎಂದರು. ಯುಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಬುಲ್ಡೋಜರ್ ಪಾರ್ಟಿ ಎಂದಿದ್ದರು. ಈಗ ಬುಲ್ಡೋಜರ್ ಪಾರ್ಟಿಯೇ ಅಧಿಕಾರಕ್ಕೆ ಬಂದಿದೆ. ಗೋವಾದಲ್ಲಿ ಮೂರನೇ ಸ್ಥಾನದಲ್ಲಿ ಇದ್ದವರನ್ನೂ ರೆಸಾರ್ಟ್​ನಲ್ಲಿ ಕೂಡಿಟ್ಟಿದ್ದರು. ಸ್ಪೆಷಲ್ ಫ್ಲೈಟ್​ನಲ್ಲಿ ಗೋವಾಗೆ ಹೋದವರು ಟ್ರೇನ್​ನಲ್ಲಿ ವಾಪಸಾದರು ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು. ಈಶ್ವರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪಾದನೆ ಬರುತ್ತವೆ. ನಾವು ನ್ಯಾಯಯುತ ತನಿಖೆಗೆ ಸಹಕಾರ ನೀಡುತ್ತೇವೆ ಎಂದರು.
ಇ-ಸ್ವತ್ತು ಸಮಸ್ಯೆಗೆ ಶೀಘ್ರ ಮುಕ್ತಿ:ಮುಂದಿನ ತಿಂಗಳು ಕ್ಯಾಬಿನೆಟ್​ನಲ್ಲಿ ರ್ಚಚಿಸಿ, ಇ-ಸ್ವತ್ತು ಸಮಸ್ಯೆಗೆ ಮುಕ್ತಿ ಕೊಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದರು. ಅಂಕೋಲಾ ತಾಲೂಕು ಅಚವೆ ಗ್ರಾಪಂ ವ್ಯಾಪ್ತಿಯ ಕುಂಟಗಣಿ ಗ್ರಾಮದಲ್ಲಿ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಇ-ಸ್ವತ್ತು ಸಮಸ್ಯೆ ಬಗ್ಗೆ ಈಗಾಗಲೆ ರಚನೆಯಾದ ಕ್ಯಾಬಿನೆಟ್ ಉಪ ಸಮಿತಿ ವರದಿ ನೀಡಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿ, ಗೌಳಿ ಮುಂತಾದ 23 ಹೊಸ ಜನವಸತಿ ಪ್ರದೇಶ ಗುರುತಿಸಿ ಗ್ರಾಮ ಘೊಷಣೆ ಮಾಡಲಾಗಿದೆ. ಶಾಲೆ, ಅಂಗನವಾಡಿ, ಮುಂತಾದ ಉದ್ದೇಶಗಳಿಗೆ 110 ಎಕರೆ ಸರ್ಕಾರಿ ಜಾಗ ಮಂಜೂರು ಮಾಡಲಾಗಿದೆ. ಅರಣ್ಯ ಅತಿಕ್ರಮಣ ಸಕ್ರಮ ವಿಚಾರವಾಗಿ ಗ್ರಾಮ ಸಭೆಗಳಲ್ಲಿ ತೀರ್ವನಿಸಲು ಚಿಂತಿಸಲಾಗುತ್ತಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಗೆ 26 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ. ಅದರಲ್ಲಿ ಬೆಳೆ ಪರಿಹಾರಕ್ಕೆ 5.6 ಕೋಟಿ ರೂ., ಪ್ರವಾಹದಿಂದ ಹಾನಿಯಾದ ಮನೆ ನಿರ್ವಣಕ್ಕೆ 11.99 ಕೋಟಿ ರೂ., ಕೋವಿಡ್​ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲು 10 ಕೋಟಿ ರೂ. ನೀಡಲಾಗಿದೆ. ವಿವಿಧ ಪಿಂಚಣಿ ಯೋಜನೆಯಡಿ 180 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದರು.
ಅಚವೆ ಗ್ರಾ.ಪಂ.ಗೆ 1 ಕೋಟಿ ರೂ.:ಗ್ರಾಮ ವಾಸ್ತವ್ಯ ಮಾಡಿದ ಅಚವೆ ಗ್ರಾಮ ಪಂಚಾಯಿತಿಗೆ 1 ಕೋಟಿ ರೂ. ಅನುದಾನವನ್ನು ಸಚಿವ ಆರ್. ಅಶೋಕ್ ಘೊಷಿಸಿದರು. ವಾರದಲ್ಲಿ ಹಣ ಜಿಲ್ಲಾಧಿಕಾರಿ ಖಾತೆಗೆ ಜಮಾ ಆಗಲಿದೆ. ಅದರಲ್ಲಿ ಮಾಣಿಗದ್ದೆ ಸೇತುವೆಗೆ 25 ಲಕ್ಷ ರೂ. ಕುಂಟಗಣಿ ದುರ್ಗಾಂಬಿಕಾ ದೇವಸ್ಥಾನ ರಸ್ತೆಗೆ 25 ಲಕ್ಷ ರೂ., ಹಿಲ್ಲೂರು ಸಭಾ ಭವನಕ್ಕೆ 10 ಲಕ್ಷ ರೂ. ಖರ್ಚು ಮಾಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಡೆತನ ನೀಡಲು ಉಪಸಮಿತಿ:ಅರಣ್ಯ ಅಲ್ಲದ ಭೂಮಿಗಳಿಗೆ ಒಡೆತನ ಕೊಡಬೇಕು ಎಂಬ ನಿಟ್ಟಿನಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ. ಬೆಟ್ಟ, ಬಾಣೆ, ಕುಂಮ್ಮಿ ಮುಂತಾದ ಭೂಮಿಗಳು ಈ ವ್ಯಾಪ್ತಿಗೆ ಬರಲಿವೆ. ಜಿಲ್ಲೆಯ ಜನರಿಗೆ ಅನುಕೂಲವಾಗುವ ನಿರೀಕ್ಷೆ ಇದೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಜಿಲ್ಲೆಯ ಹಂಗಾಮಿ ಲಾಗಣಿ, 78ಕ್ಕೂ ಪೂರ್ವದ ಅತಿಕ್ರಮಣಕ್ಕೆ ಸಕ್ರಮ ಸಮಸ್ಯೆ ಬಗೆಹರಿಸಲು ಅಶೋಕ್ ಅವರು ಸಚಿವ ಸಂಪುಟದಲ್ಲಿ ನಮ್ಮ ಬೆಂಬಲಕ್ಕೆ ಬರಬೇಕು ಎಂದು ಶಿವರಾಮ ಹೆಬ್ಬಾರ್ ಮನವಿ ಮಾಡಿದರು.
95ಸಿ ಅರ್ಜಿ ಮಂಜೂರು:ಸರ್ಕಾರಿ ಭೂಮಿ ಅತಿಕ್ರಮಿಸಿ ಮನೆ ಕಟ್ಟಿಕೊಂಡು, ಸಕ್ರಮಕ್ಕೆ 95ಸಿ ಅಡಿ ಅರ್ಜಿ ಸಲ್ಲಿಸಿದವರಿಗೆ ಬಹುಕಾಲದಿಂದ ಹಕ್ಕು ಪತ್ರ ದೊರೆತಿರಲಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯೇ ನಡೆದಿರಲಿಲ್ಲ. ಗ್ರಾಮ ವಾಸ್ತವ್ಯದ ಕಾರಣ ಒಂದೇ ವಾರದಲ್ಲಿ ಸಭೆ ನಡೆಸಿ, 1458 ಅತಿಕ್ರಮಣ ಸಕ್ರಮ 95ಸಿ ಅರ್ಜಿ ವಿಲೇವಾರಿ ಮಾಡಿ ಪ್ರಮಾಣಪತ್ರ ವಿತರಿಸಲಾಯಿತು.
ಗೋಪೂಜೆ ಮಾಡಿ ಚಾಲನೆ:ಸಚಿವ ಅಶೋಕ ಅವರು ಗೋಪೂಜೆ ಮಾಡಿ, ಈಡುಗಾಯಿ ಒಡೆದು ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ಕುಂಟಗಣಿ ಸೇವಾ ಸಹಕಾರಿ ಸಂಘದಿಂದ ಅಲಂಕೃತ ಟ್ರ್ಯಾಕ್ಟರ್​ನಲ್ಲಿ ಸಚಿವರನ್ನು ಮೆರವಣಿಗೆ ಮಾಡಲಾಯಿತು. ಸಿದ್ದಿ ಡುಮಾಮಿ ಕುಣಿತ, ಹಾಲಕ್ಕಿ ಸುಗ್ಗಿ ಸೇರಿ ವಿವಿಧ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ಗಮನ ಸೆಳೆದ ಸ್ಟಾಲ್​ಗಳು:ಕೃಷಿ, ಅರಣ್ಯ, ತೋಟಗಾರಿಕೆ, ಪಶು ಸಂಗೋಪನೆ, ಆರೋಗ್ಯ ಇಲಾಖೆಗಳ ಸ್ಟಾಲ್​ಗಳು ಗಮನ ಸೆಳೆದವು. ತಾಳೆ, ಬಿಳಿ ಮುರಗಲು, ಮುದ್ದು ಮೊಲಗಳು ಪ್ರದರ್ಶನಗೊಂಡವು. ಇಲಾಖೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

ಕರೊನಾ ಪ್ರಕರಣ ಹೆಚ್ಚಳ, ಶಾಲೆಗಳನ್ನು ಮುಚ್ಚುವುದೇ ಕೊನೆಯ ಆಯ್ಕೆ!; ಎಲ್ಲಿ ಈ ಚಿಂತನೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + two =
Remember me
