ಚಿಕ್ಕಬಳ್ಳಾಪುರ:ಹಳ್ಳಿಗಳಿಗೆ ಖುದ್ದು ಬೇಡಿ ನೀಡಿ, ಜನರೊಳಗೆ ತಾವೂ ಒಬ್ಬರಾಗಿ, ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿರುವ ಕಂದಾಯ ಸಚಿವ ಆರ್. ಅಶೋಕ್ ಮಂಚೇನಹಳ್ಳಿ ವ್ಯಾಪ್ತಿಯ ಜರಬಂಡಹಳ್ಳಿಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ ನಡೆಸಿದರು. ಬೆಟ್ಟಗುಡ್ಡದ ತಪ್ಪಲು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಇಡೀ ಆಡಳಿತ ಯಂತ್ರಾಂಗವೇ ಉಳಿದುಕೊಂಡಿತ್ತು. ನಗರ, ಪಟ್ಟಣ ಪ್ರದೇಶಗಳ ಮಾದರಿಯಲ್ಲಿ ವಾಹನಗಳ ಸಂಚಾರ, ಜನಪ್ರತಿನಿಧಿಗಳ ಜತೆಗೆ ಅಧಿಕಾರಿಗಳ ದೊಡ್ಡ ದಂಡು, ಬೃಹತ್ ಜನಸಂದಣಿ, ಮನೆಯ ಬಾಗಿಲಿನಲ್ಲಿ ಸಮಸ್ಯೆಗಳ ಆಲಿಸುವಿಕೆ, ಸೌಲಭ್ಯ ವಿತರಣೆ ಮತ್ತು ಜಾಗೃತಿ ಚಟುವಟಿಕೆಯ ದೊಡ್ಡ ಹಬ್ಬದ ಸಂಭ್ರಮದಿಂದ ಸ್ಥಳೀಯರು ಪುಳಕಿತರಾದರು.
ಸಾಮಾನ್ಯವಾಗಿ ಹಿಂದೆ ಸರ್ಕಾರಿ ಸೌಲಭ್ಯಗಳಿಗಾಗಿ ವಾಹನ ಸೌಕರ್ಯಗಳ ಕೊರತೆ ನಡುವೆ ಹೊರ ಭಾಗಕ್ಕೆ ಹಲವು ಬಾರಿ ಅಲೆದಾಡಬೇಕಿತ್ತು. ಅಂಥ ಪರಿಸ್ಥಿತಿಯಿಂದ ಹೈರಾಣಾಗಿದ್ದ ಗ್ರಾಮೀಣ ಜನತೆ ಸರ್ಕಾರವೇ ನೇರವಾಗಿ ಹತ್ತಿರಕ್ಕೆ ಬಂದು ಸಂಕಷ್ಟ ಆಲಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎನ್.ಎಮ್​ನಾಗರಾಜ್, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಡಿ.ಎಲ್.ನಾಗೇಶ್, ಕೋಚಿಮುಲ್ ಮಾಜಿ ನಿರ್ದೇಶಕ ಮುದ್ದಹನುಮೇಗೌಡ, ಗ್ರಾಪಂ ಅಧ್ಯಕ್ಷ ಶ್ರೀನಾಥ್ ಬಾಬು ಮತ್ತಿತರರು ಇದ್ದರು.
ಎತ್ತಿನಗಾಡಿಯಲ್ಲಿ ಮೆರವಣಿಗೆ:ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮಧ್ಯಾಹ್ನ 12.45ಕ್ಕೆ ನುಲಗುಮ್ಮನಹಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ 150 ಕೆ.ಜಿ.ತೂಕದ ಕನಕಾಂಬರದ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು. ಡೊಳ್ಳು ಕುಣಿತ, ವೀರಗಾಸೆ, ತಮಟೆವಾದನ ಕಲಾ ತಂಡಗಳೊಂದಿಗೆ ತೆರೆದ ವಾಹನದಲ್ಲಿ ಮೂವರು ಸಚಿವರು ಗ್ರಾಮದಲ್ಲಿ ಸಾಗಿದರು. ಬಳಿಕ ಎತ್ತಿನಗಾಡಿಯಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಯ ಸ್ಥಳ ಜರಬಂಡಹಳ್ಳಿಯವರೆಗೂ ಮೆರವಣಿಗೆ ನಡೆಯಿತು. ಸಾಂಪ್ರದಾಯಿಕ ವಸ್ತ್ರ ಮತ್ತು ತಲೆಗೆ ಟವೆಲ್ ಹಾಕಿಕೊಂಡಿದ್ದ ರೈತ ಮಂಚೇನಹಳ್ಳಿಯ ಶ್ರೀನಿವಾಸ್ ಅಲಂಕೃತಗೊಂಡಿದ್ದ ಎತ್ತಿನಬಂಡಿಯಲ್ಲಿ ಕರೆದುಕೊಂಡು ಹೋದರು. ಮುಂಭಾಗ ಗ್ರಾಮದ ಜನರು ಭಾರತ್ ಮಾತಾಕಿ ಜೈ ಘೊಷಣೆಗಳೊಂದಿಗೆ ಹೆಜ್ಜೆ ಹಾಕಿದರು.
ಪೂಜೆಯೊಂದಿಗೆ ಚಾಲನೆ:ನುಲಗುಮ್ಮನಹಳ್ಳಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಸಚಿವರು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ರಾಜ್ಯದ ಅಭಿವೃದ್ಧಿಯ ಜತೆಗೆ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು. ಆಗಮಿಕ ಪಂಡಿತರು ಮತ್ತು ಗ್ರಾಮದ ಮುಖಂಡರು ಜನಪ್ರತಿನಿಧಿಗಳನ್ನು ಸನ್ಮಾನಿಸಿದರು. ಇದೇ ವೇಳೆ ಆರ್.ಅಶೋಕ್ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಹಲವರು ಮುಗಿ ಬಿದ್ದಿದ್ದು ವಿಶೇಷವಾಗಿತ್ತು.
ಗ್ರಾಮ ವಾಸ್ತವ್ಯ ಯೋಜನೆ, ಸ್ವರೂಪ, ಅನುಷ್ಠಾನ ಮತ್ತು ವಿಮರ್ಶೆಯ ಬಗ್ಗೆ ವಿವರಿಸುತ್ತಲೇ ಸಚಿವರು ಕಾರ್ಯಕ್ರಮ ರೂಪಿಸಲು ಸಿಕ್ಕ ಪ್ರೇರಣೆಯ ಬಗ್ಗೆ ತಿಳಿಸಿದರು. ಕಂದಾಯ ಇಲಾಖೆ ಕಚೇರಿಗೆ ಸಾಮಾನ್ಯವಾಗಿ ಸೇವೆ ಪಡೆಯಲು ಹೆಚ್ಚಿಗೆ ಬರುವ ಶೇ.99 ಜನರಲ್ಲಿ ರೈತರು, ಕಾರ್ವಿುಕರು, ಬಡ ವರ್ಗದವರೇ ಇರುತ್ತಾರೆ. ಇದಕ್ಕೆ ಜನರು ಕಚೇರಿಗಳನ್ನು ಹುಡುಕುತ್ತಾ ಅಲೆಯುವುದಲ್ಲ, ಅಧಿಕಾರಿಗಳು ಖುದ್ದಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಸೌಲಭ್ಯ ಒದಗಿಸುವ, ಸಮಸ್ಯೆಗಳನ್ನು ಆಲಿಸುವ ಆಶಯದೊಂದಿಗೆ ಗ್ರಾಮವಾಸ್ತವ್ಯ ಕಾರ್ಯಕ್ರಮ ರೂಪಿಸಲಾಯಿತು. ಇದಕ್ಕೆ ಎಲ್ಲ ಇಲಾಖೆಗಳನ್ನು ಸಮನ್ವಯಗೊಳಿಸಲಾಯಿತು. ಇನ್ನೂ ಹಲವರು ಕಾರ್ಯಕ್ರಮಕ್ಕೆ ಅಶೋಕಣ್ಣ ಗ್ರಾಮ ವಾಸ್ತವ್ಯ ಎಂಬುದಾಗಿ ಹೆಸರಿಡಲು ಸಲಹೆ ನೀಡಿದರು. ಆದರೆ, ಇಂತಹ ಅರ್ಥಪೂರ್ಣ ಕಾರ್ಯಕ್ರಮವು ನಿರಂತರವಾಗಿ ನಡೆಯಬೇಕು. ತನ್ನ ಬಳಿಕ ನಿಲ್ಲಬಾರದು. ಯಾರೇ ಬಂದರೂ ಸಾಗುತ್ತಿರಬೇಕೆಂಬ ಚಿಂತನೆಯಲ್ಲಿ ಆ ಹೆಸರಿಡಲಿಲ್ಲ. ಅದರ ಬದಲಾಗಿ ಜಿಲ್ಲಾಧಿಕಾರಿಗಳ ನಡೆ, ಗ್ರಾಮಗಳ ಕಡೆ ಹೆಸರಿನಲ್ಲಿ ಗ್ರಾಮ ವಾಸ್ತವ್ಯ ಘೊಷಿಸಲಾಯಿತು ಎಂದು ಅಶೋಕ್ ತಿಳಿಸಿದರು.
ಹಿಂದಿನ ಮಾದರಿಯ ವಾಸ್ತವ್ಯ ಅಲ್ಲ
ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರ ಗುಣಗಾನ ಮಾಡುತ್ತಲೇ ಸಚಿವ ಆರ್.ಅಶೋಕ್, ಹಿಂದಿನ ಸರ್ಕಾರ ದಲ್ಲಿನ ಗ್ರಾಮ ವಾಸ್ತವ್ಯದ ಕಾಟಾಚಾರದ ವೈಖರಿಯನ್ನು ಪ್ರಸ್ತಾಪಿಸುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು. ಈ ಹಿಂದೆ ರಾತ್ರಿ ತಡವಾಗಿ ಬಂದು, ತಂದಿದ್ದನ್ನು ತಿಂದು, ಜನರು ಕೊಟ್ಟಿದ್ದ ಅರ್ಜಿಗಳನ್ನು ಪಡೆದು, ಫೋಟೋ ತೆಗೆಸಿಕೊಂಡು ಹೋಗುತ್ತಿದ್ದರು. ಇನ್ನೂ ಕೆಲ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಒಂದೆರಡು ಗಂಟೆಗೆ ಮುಗಿದು ಹೋಗುತ್ತಿತ್ತು. ಆದರೆ, ಇಂದಿನ ಗ್ರಾಮ ವಾಸ್ತವ್ಯವು ಭಿನ್ನ. ಪೂರ್ಣ ಪ್ರಮಾಣದಲ್ಲಿ ಜನಸ್ನೇಹಿಯಾಗಿದೆ. ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಒಂದು ದಿನ ಗ್ರಾಮದಲ್ಲಿದ್ದು, ಖುದ್ದು ಅಹವಾಲು ಆಲಿಸುವುದರ ಜತೆಗೆ ಸವಲತ್ತುಗಳನ್ನು ಒದಗಿಸುತ್ತಿವೆ. ಆಡಳಿತ ಯಂತ್ರಾಂಗವೇ ಮನೆ ಬಾಗಿಲಿಗೆ ಹೋಗುತ್ತಿದೆ. ಇದರಿಂದ ಜನರಲ್ಲಿ ವಿಶ್ವಾಸ, ನಂಬಿಕೆ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂವಿಧಾನ ದಿನ ಸ್ಮರಣೆ
ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಸಂವಿಧಾನ ದಿನ ಆಚರಣೆಯ ಸಂದೇಶ ಸಾರಲಾಯಿತು. ಸಚಿವರು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮೂಲ ಹಕ್ಕು ಮತ್ತು ಸೌಲಭ್ಯ ದೊರೆಯುವಂತಾಗಲು, ಜಗತ್ತಿನ ದೊಡ್ಡ ಸಂವಿಧಾನವನ್ನು ಭಾರತವು ಹೊಂದುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ತರವಾದುದು. ಇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಂಡು ಸುಭದ್ರ ರಾಷ್ಟ್ರ ನಿರ್ವಿುಸಬೇಕು ಎಂದು ಅಶೋಕ್ ಸಲಹೆ ನೀಡಿದರು. ಭಾರತದ ಏಕತೆ, ಸಾರ್ವಭೌಮತ್ವ, ಪ್ರಜಾಸತ್ತಾತ್ಮಕ ಮೌಲ್ಯ ಎತ್ತಿ ಹಿಡಿಯುವ ಸಂವಿಧಾನದ ಪೀಠಿಕೆಯ ಸಂದೇಶದ ಪ್ರತಿಜ್ಞಾವಿಧಿ ಬೋಧಿಸಿದರು.
ಭಾವುಕರಾದ ಅಶೋಕ್
ವಾರದ ಹಿಂದೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿ ನಡೆದ ಗ್ರಾಮವಾಸ್ತವ್ಯ ವೇಳೆ ಗಿರಿನಿವಾಸಿಗಳ ಜತೆಗೆ ಆಹಾರ ಸೇವನೆ, ಸಂಪ್ರದಾಯಗಳ ಪರಿಚಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಜನರ ಪ್ರೀತಿಯನ್ನು ಉಣಬಡಿಸಿತು. ಬೆಳಗಿನ ಉಪಾಹಾರಕ್ಕೆ ಕಾಡುಗೆಣಸು, ಮರಗೆಣಸನ್ನು ಜೇನಿನೊಂದಿಗೆ ತಿನ್ನಲು ಸ್ಥಳೀಯ ಮಹಿಳೆ ಕೊಟ್ಟಾಗ ತಾಯಿಯ ನೆನಪಾಯಿತು. ಗ್ರಾಮ ವಾಸ್ತವ್ಯದ ಪ್ರತಿಯೊಂದು ಕಡೆ ಜನರು ಆತ್ಮೀಯತೆ ತೋರುತ್ತಿರುವಿಕೆ ಸಾರ್ಥಕತೆ ಭಾವನೆ ಮೂಡಿಸುತ್ತಿದೆ ಎಂದು ಅಶೋಕ್ ಭಾವುಕರಾದರು.
ಗ್ರಾಮೀಣ ಸಂಸ್ಕೃತಿಯ ಪ್ರತೀಕ
ಮೊದಲಿನಿಂದಲೂ ಸಚಿವ ಅಶೋಕ್ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಾಸ್ತವ್ಯದಲ್ಲಿ ಗ್ರಾಮೀಣ ಸೊಗಡಿನ ವಾತಾವರಣ ನಿರ್ವಣ, ಆ ಭಾಗದ ವೈಶಿಷ್ಟ್ಯಗಳನ್ನು ಅರಿಯುವಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಅದರಂತೆ ಜರಬಂಡಹಳ್ಳಿಯಲ್ಲಿ ವೇದಿಕೆ ಕಾರ್ಯಕ್ರಮವು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿತ್ತು. ಸಿರಿಧಾನ್ಯಗಳ ರಾಶಿಯ ನಡುವೆ ದೀಪ ಹಚ್ಚುವ ಮೂಲಕ ವೇದಿಕೆ ಕಾರ್ಯಕ್ರಮವು ಪ್ರಾರಂಭವಾಯಿತು. ಇನ್ನು ಸಚಿವರ ಬದಲಿಗೆ ಕೋಲು ಹಿಡಿದುಕೊಂಡು ಬಂದ ಫಲಾನುಭವಿ ವೃದ್ಧ ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ತಾಳ ಹಾಕಿದ ಸಚಿವರು
ಜರಬಂಡಹಳ್ಳಿಯಲ್ಲಿ ಹಮ್ಮಿ ಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನೃತ್ಯ ಪ್ರದರ್ಶನದ ವೇಳೆ ಸಚಿವರಾದ ಅಶೋಕ್ ಮತ್ತು ಡಾ ಕೆ.ಸುಧಾಕರ್ ತಾಳ ಹಾಕಿ, ತಲೆ ಮತ್ತು ಕಾಲು ಅಲುಗಾಡಿಸುವಿಕೆಯ ಕುಣಿತದ ಮೂಲಕ ಗಮನ ಸೆಳೆದರು. ಸರ್ಕಾರಿ ಶಾಲೆ, ಮುರಾರ್ಜಿ ದೇಸಾಯಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ನಾಡು ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂದೇಶವನ್ನು ಸಾರುವ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ಮನರಂಜಿಸಿದರು. ಇದೇ ವೇಳೆ ವೇದಿಕೆಗೆ ಆಹ್ವಾನಿಸಿದ್ದನ್ನು ಒಪ್ಪಿ ಬಂದ ಸಚಿವರು ಕೈಯಲ್ಲಿ ತಾಳ ಹಾಕಿದರು. ವಿದ್ಯಾರ್ಥಿಗಳ ನೃತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನ ಸೆಳೆದ ಪ್ರದರ್ಶನ
ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಮತ್ತು ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಪಾಲನಾ ಸೇರಿ ವಿಧ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಜಾಗೃತಿಗಾಗಿ ಸ್ಥಾಪನೆಗೊಂಡಿದ್ದ ಮಳಿಗೆಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ವಿವಿಧ ವಸ್ತು ಪ್ರದರ್ಶನ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ನರೇಗಾ, ಕಿಸಾನ್ ಸಮ್ಮಾನ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇರಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಕರಪತ್ರ ವಿತರಿಸಲಾಯಿತು. ದೊಡ್ಡ ದೊಡ್ಡ ಭಿತ್ತಿ ಪತ್ರಗಳು ಗಮನ ಸೆಳೆದವು. ಗ್ರಾಮೀಣ ಜನರ ಆರೋಗ್ಯ ತಪಾಸಣೆ, ಔಷಧ ವಿತರಣೆಗಾಗಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಅರಳಿಮರದ ಕಟ್ಟೆಯಲ್ಲಿ ಸಂವಾದ
ಹನುಮಂತಪುರದಲ್ಲಿನ ಅರಳಿ ಮರದ ಕಟ್ಟೆಯ ಮೇಲೆ ಸಚಿವರು ರೈತರು, ಮಹಿಳೆಯರು ಸೇರಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ರಾಜಕಾಲುವೆ ಮತ್ತು ಕೆರೆಗಳ ಅಕ್ರಮ ಒತ್ತುವರಿ ತೆರವು, ಜರಬಂಡಹಳ್ಳಿಯಲ್ಲಿನ ಗ್ರಂಥಾಲಯ, ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಾಪಂ ಕಚೇರಿಗೆ ಕಾಂಪೌಂಡ್ ಮತ್ತು ಯುವ ಕ್ರೀಡಾಪಟುಗಳನ್ನು ಪೋ›ತ್ಸಾಹಿಸಲು ಆಟದ ಮೈದಾನ ನಿರ್ಮಾಣ ಸೇರಿ ಹಲವು ಬೇಡಿಕೆಗಳನ್ನು ಇಡಲಾಯಿತು. ಪಹಣಿ, ಜಮೀನಿನ ಸರ್ವೆ, ಜಂಟಿ ಖಾತೆ ಜತೆಗೆ ಭೂಮಿ ದಾಖಲೆಗಳಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಇದಕ್ಕೆ ತಾಳ್ಮೆಯಿಂದ ಉತ್ತರಿಸಿದ ಸಚಿವರು, ಕಂದಾಯ ಇಲಾಖೆ ಸುಧಾರಣೆ, ಅನುಕೂಲಕರ ಕಾಯ್ದೆಗಳ ಘೊಷಣೆ, ಮಾರಕ ನಿಯಮಗಳ ರದ್ದತಿ ಸೇರಿ ಮಹತ್ತರವಾದ ನಿರ್ಧಾರಗಳ ಬಗ್ಗೆ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + four =
Remember me
