ಬೆಂಗಳೂರು:ಹೊಸ ತಾಲೂಕುಗಳ ಪೈಕಿ 40 ತಾಲೂಕುಗಳಲ್ಲಿ ಸುಸಜ್ಜಿತ ಆಡಳಿತ ಸೌಧ ನಿರ್ವಿುಸಲು ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ಬಜೆಟ್​ನಲ್ಲಿ ಅನುದಾನ ನಿಗದಿಪಡಿಸುವ ನಿರೀಕ್ಷೆಯಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಕಟಿಸಿದರು. ‘ವಿಜಯವಾಣಿ’ ಸಂವಾದದಲ್ಲಿ ಸೋಮವಾರ ಪಾಲ್ಗೊಂಡ ಅವರು, ಹೊಸ ತಾಲೂಕುಗಳ ಕಚೇರಿಗಳಿಗೆ ಸ್ವಂತ ಕಚೇರಿಗಳಿಲ್ಲದ ಸಮಸ್ಯೆ ಸರ್ಕಾರದ ಗಮನಕ್ಕಿದೆ. ದೊಡ್ಡ ಸಂಖ್ಯೆಯಲ್ಲಿ ಹೊಸ ಹೊಸ ತಾಲೂಕುಗಳು ರಚನೆಯಾಗಿದ್ದು, ಇದರಲ್ಲಿ 59 ತಾಲೂಕುಗಳಿಗೆ ಆಡಳಿತ ಸೌಧಗಳಿಲ್ಲ. ಈ ಪೈಕಿ 40 ಹೊಸ ತಾಲೂಕುಗಳಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಸೌಧ ನಿರ್ವಿುಸಲು ಅನುದಾನ ಕೋರಿದ ಪ್ರಸ್ತಾವನೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 2022-23ನೇ ಸಾಲಿನ ಮುಂಗಡಪತ್ರದಲ್ಲಿ ಅನುದಾನ ಘೋಷಿಸಲಿದ್ದಾರೆ ಎಂದು ಹೇಳಿದರು. ಹೊಸ ಕಟ್ಟಡಗಳಾಗುವ ತನಕ ಕಚೇರಿಗಳ ಬಾಡಿಗೆ ವೆಚ್ಚ ಭರ್ತಿಗೆ ಮಾಸಿಕ 15 ಲಕ್ಷ ರೂ. ನೀಡುತ್ತಿದ್ದು, ಸ್ವಂತ ಕಟ್ಟಡಗಳು ಹೊಂದಿದರೆ ಹೆಚ್ಚಿನ ಆರ್ಥಿಕ ಹೊರೆ ತಪ್ಪಲಿದೆ. ಈ ಹಿನ್ನೆಲೆಯಲ್ಲಿ ಒಮ್ಮೆಗೆ 40 ಆಡಳಿತ ಸೌಧ ನಿರ್ವಣಕ್ಕೆ ಸರ್ಕಾರ ಮುಂದಾಗಿದೆ ಎಂದರು.
ಹೊಸ ಜಿಲ್ಲೆ ಪ್ರಸ್ತಾವನೆಯಿಲ್ಲ:ಹೊಸ ಜಿಲ್ಲೆಗಳ ಘೋಷಣೆ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯಿಲ್ಲ. ಬೆಳಗಾವಿ ಜಿಲ್ಲೆ ವಿಭಜನೆಯಲ್ಲಿ ಸೂಕ್ಷ್ಮ ವಿಚಾರಗಳಿವೆ. ತುಮಕೂರು ಸೇರಿ ಹಲವೆಡೆ ಹೊಸ ಜಿಲ್ಲೆಗಳಿಗೆ ಬೇಡಿಕೆ ಇರಬಹುದು. ಆದರೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯಿಲ್ಲ, ಅಂತಹ ಚಿಂತನೆಯನ್ನೂ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು. ಭೂಮಾಪಕರ ಕೊರತೆಯಿಂದ ಕಂದಾಯ ಇಲಾಖೆ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ. ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳ ನಿವಾರಣೆಗೆ ಹೊಸದಾಗಿ 2,000 ಪರವಾನಗಿ ಪಡೆದ ಭೂಮಾಪಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 800 ಪರವಾನಗಿ ಭೂಮಾಪಕರ ನೇಮಕವಾಗಿದ್ದು, ಇನ್ನುಳಿದ 1,200 ಲೈಸನ್ಸ್​ವುಳ್ಳ ಸರ್ವೆಯರ್​ಗಳು ಭರ್ತಿಯಾಗಲಿದ್ದಾರೆ. ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಮತ್ತು ಪರವಾನಗಿ ಪಡೆದ ಭೂ ಮಾಪಕರಿಗೆ ಸಮಾನ ಜವಾಬ್ದಾರಿ ಹಂಚುವ ಮೂಲಕ ಕೆಲಸದ ಒತ್ತಡ ತಗ್ಗಿಸಲು ಕ್ರಮವಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು. ಕಂದಾಯ ಕಟ್ಟಿಲ್ಲವೆಂಬ ಒಂದೇ ಕಾರಣಕ್ಕೆ ಸಾಗುವಳಿ ಮಾಡುತ್ತಿರುವ ಜಮೀನು ಪಹಣಿಯಲ್ಲಿ ‘ಬೀಳು ಭೂಮಿ’ ತೋರಿಸುತ್ತಿರುವುದನ್ನು ಸರಿಪಡಿಸಲಾಗುವುದು. ಪಹಣಿಯಲ್ಲಿ ತಿದ್ದುಪಡಿಗೆ ಅಧಿಕಾರಿಗಳಿಗೆ ಸೂಚಿಸಿ, ಲಕ್ಷಾಂತರ ಜನರ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ವಕೀಲರ ನೇಮಕ ಅಧಿಕಾರಕ್ಕೆ ಮನವಿ:ಸರ್ಕಾರಿ ಜಮೀನು ಕಬಳಿಕೆ ಅಥವಾ ಒತ್ತುವರಿ ಪ್ರಕರಣದಲ್ಲಿ ಕೋರ್ಟ್​ಗಳಲ್ಲಿ ಸಮರ್ಥ ವಾದ ಮಂಡಿಸುವುದಕ್ಕೆ ಸಮರ್ಥ ವಕೀಲರನ್ನು ನೇಮಿಸುವ ಅಧಿಕಾರ ಕಂದಾಯ ಇಲಾಖೆಗೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಎದುರಾಳಿಗಳು ಮೇಧಾವಿ ಮತ್ತು ನಿಷ್ಣಾತ ವಕೀಲರನ್ನು ನೇಮಿಸಿಕೊಳ್ಳುವ ಕಾರಣ ಸರ್ಕಾರದ ವಾದ ಪೇಲವವಾಗಿ ಪ್ರಕರಣ ಬಿದ್ದು ಹೋಗಿ ನಷ್ಟವಾಗುತ್ತದೆ. ಕಾನೂನು ಇಲಾಖೆ ಬದಲಿಗೆ ಕಂದಾಯ ಇಲಾಖೆಗೆ ವಕೀಲರ ನೇಮಕ ಅಧಿಕಾರ ನೀಡಿದರೆ ವೈಫಲ್ಯ ತಪ್ಪಿಸಬಹುದು ಎಂದು ಆರ್.ಅಶೋಕ್ ಸಮರ್ಥಿಸಿಕೊಂಡರು.
ಡ್ರೋನ್ ಮೂಲಕ ಜಮೀನು ಸಮೀಕ್ಷೆ:ರಾಜ್ಯದಲ್ಲಿ ಯಾವ ಜಮೀನು ಎಷ್ಟಿದೆ ಎಂದು ಲೆಕ್ಕ ಪರಿಶೋಧನೆ (ಲ್ಯಾಂಡ್ ಆಡಿಟ್) ಮಾಡಲೆಂದು ಡ್ರೋನ್ ಮೂಲಕ ಜಮೀನು ಸಮೀಕ್ಷೆ ನಡೆಸಲಿದ್ದು, ಇದಕ್ಕಾಗಿ 280 ಕೋಟಿ ರೂ. ವೆಚ್ಚಕ್ಕೆ ಅಡಳಿತಾತ್ಮಕ ಅನುಮೋದನೆ ಲಭಿಸಿದೆ. ಸಮೀಕ್ಷೆ ಬಳಿಕ ಕಂದಾಯ, ಗೋಮಾಳ, ಖರಾಬು, ಮುಜರಾಯಿ ಇನ್ನಿತರ ಸರ್ಕಾರಿ ಮತ್ತು ಖಾಸಗಿ ಜಮೀನು ಎಷ್ಟೆಂಬುದು ನಿಖರವಾಗಿ ತಿಳಿಯಲಿದೆ. ಕೇಂದ್ರ ಸರ್ಕಾರದ ನೆರವಿನಡಿ ರಾಮನಗರ ಸೇರಿ ಐದು ಜಿಲ್ಲೆಗಳಲ್ಲಿ ಡ್ರೋನ್ ಸಮೀಕ್ಷೆ ಪ್ರಾರಂಭವಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ದಾಖಲೆಗಳ ಡಿಜಿಟಿಲೀಕರಣ ಮಾಡಲಾಗುವುದು. ಅಲ್ಲದೆ, ರೈತರ ಕೈಗೆ ಎಲ್ಲ ವಿವರ ಒದಗಿಸುವ ಪಾಸ್ ಬುಕ್ ವಿತರಿಸುವ ಯೋಚನೆಯಿದೆ ಎಂದು ಆರ್.ಅಶೋಕ್ ಮಾಹಿತಿ ನೀಡಿದರು.
ಅತ್ಯಾಧುನಿಕ ತಂತ್ರಜ್ಞಾನ:ಹಳೆಯ ಕಂಪ್ಯೂಟರ್​ಗಳು, ಸರ್ವರ್, ತಂತ್ರಾಂಶ ಸಮಸ್ಯೆ, ಡೇಟಾ ಸಾಮರ್ಥ್ಯದ ಒತ್ತಡ, ಬ್ಯಾಟರಿ ದುರ್ಬಲತೆ… ಇವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಿತ್ಯದ ಸಮಸ್ಯೆಗಳು. ಈ ಸಮಸ್ಯೆಗಳಿಗೆ ಪೂರ್ಣವಿರಾಮವಿಟ್ಟು ಜನಸ್ನೇಹಿ ಆಡಳಿತ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ ಇಡೀ ಇಲಾಖೆಗೆ ಅತ್ಯಾಧುನಿಕ ಕಂಪ್ಯೂಟರ್ ಅಳವಡಿಸಿ, ಸುಧಾರಿತ ತಂತ್ರಜ್ಞಾನ ಒದಗಿಸಲಿದೆ. ‘ವಿಜಯವಾಣಿ’ ಸಂವಾದದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಈ ವಿಷಯ ಪ್ರಕಟಿಸಿದರು. ಇಲಾಖೆಯಲ್ಲಿ ಈಗಿರುವ ಕಂಪ್ಯೂಟರ್​ಗಳನ್ನು 2014ರಲ್ಲೇ ಬದಲಿಸಬೇಕಿತ್ತು. ಅವುಗಳನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿರುವ ಕಾರಣ ನಾನಾ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಈಗ ಇಡೀ ತಾಂತ್ರಿಕ ವ್ಯವಸ್ಥೆಯನ್ನೂ ಅಮೂಲಾಗ್ರವಾಗಿ ಬದಲಿಸಿ ಆಸ್ತಿ ನೋಂದಣಿ ಸಮಸ್ಯೆಗೆ ತಿಲಾಂಜಲಿ ಹೇಳಲಾಗುತ್ತದೆ ಎಂದು ಹೇಳಿದರು.
ಅರ್ಜಿ ಸಲ್ಲಿಸದೆ ಪಿಂಚಣಿ:ಬೋಗಸ್ ಪಿಂಚಣಿ ಪಾವತಿ ಪತ್ತೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 400 ಕೋಟಿ ರೂ. ಉಳಿತಾಯವಾಗಲಿದೆ. ಪಿಂಚಣಿಗಾಗಿ ಇನ್ನುಮುಂಚೆ ಯಾರೂ ಕಚೇರಿಗಳಿಗೆ ಅಲೆಯುವಂತಿಲ್ಲ. ಕಂದಾಯ ಇಲಾಖೆಯಲ್ಲಿ ಪ್ರತಿಯೊಬ್ಬರ ಆಧಾರ್ ಕಾರ್ಡ್ ಸೇರಿ ಎಲ್ಲ ದಾಖಲೆಗಳಿದ್ದು, ಅರ್ಹರಿಗೆ ತಕ್ಷಣ ಪಿಂಚಣಿ ಸೌಲಭ್ಯ ಸಿಗಲಿದೆ. ಯಾವುದೇ ಅರ್ಜಿ ಪಡೆಯದೆ ಈಗಾಗಲೆ 28 ಸಾವಿರ ಅರ್ಹರಿಗೆ ಪಿಂಚಣಿ ಸವಲತ್ತು ಕಲ್ಪಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ಕಂದಾಯ ಗ್ರಾಮಗಳ ಸ್ಥಾನಮಾನ:ನಿರ್ದಿಷ್ಟ ಮಾನದಂಡ ಪೂರೈಸಿದ 16,000-20,000 ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವುದಕ್ಕೆ ಸಿದ್ಧತೆಗಳಾಗಿವೆ. ಕಂದಾಯ ಗ್ರಾಮದ ಮಾನ್ಯತೆ ಪಡೆದರೆ ಅಲ್ಲಿನ ನಿವಾಸಿಗಳಿಗೆ ಸರ್ಕಾರದ ಸವಲತ್ತುಗಳು ಸಿಗಲಿದ್ದು, ಮೂಲ ಸವಲತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಶೋಕ್ ತಿಳಿಸಿದರು.
ವಿಶೇಷ ಪ್ರಕರಣ:ಬೆಂಗಳೂರು ನಗರ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೊಸದಾಗಿ ಮೂರು ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗಳನ್ನು ಸೃಜಿಸಲಾಗಿದೆ. ನನೆಗುದಿಗೆ ಬಿದ್ದಿರುವ ಬಹು ಕೋಟಿ ರೂ. ಮೌಲ್ಯದ ಭೂ ಕಬಳಿಕೆ ಪ್ರಕರಣಗಳ ವಿಲೇವಾರಿ, ಭೂ ಕಂದಾಯ ಪ್ರಕರಣಗಳ ತ್ವರಿತ ವಿಚಾರಣೆಗೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆರ್.ಅಶೋಕ್ ಸಮಜಾಯಿಷಿ ನೀಡಿದರು.
ಒಮ್ಮೆ ಹುಬ್ಬಳ್ಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಹೋಗಿದ್ದಾಗ ಅಲ್ಲಿ ಕಾರ್ಯಕ್ರಮ ಮುಗಿಸಿ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬರಬೇಕಿತ್ತು. ಆದರೆ ಸಿಎಂ ಇನ್ನೂ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಕಾರಣ 2 ಗಂಟೆ ತಡವಾಗುತ್ತದೆ ಎನ್ನುವ ಮಾಹಿತಿ ಬಂತು. ಆಗ ಅಧಿಕಾರಿಗಳ ಜತೆಗೆ ಮಾತನಾಡುತ್ತ ಕುಳಿತೆ. ಆಗ ಹೊಳೆದಿದ್ದೆ ರೈತನ ಮನೆ ಬಾಗಿಲಿಗೆ ದಾಖಲೆ ತಲುಪಿಸುವ ವ್ಯವಸ್ಥೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡಿದ ಸಂದರ್ಭ ಭೂ ದಾಖಲೆಗಳನ್ನು ತಲುಪಿಸುವುದಕ್ಕೆ ಸಮಸ್ಯೆಗಳೇನು? ಎಂದು ಕೇಳಿದೆ. ಅದಕ್ಕವರು ವಾರದಲ್ಲಿ ಎಲ್ಲವನ್ನೂ ಕೊಡಲು ಸಾದ್ಯ ಎಂದು ತಿಳಿಸಿದರು. ಅರ್ಜಿ ಕೊಟ್ಟ ಒಂದು ದಿನದಲ್ಲಿ ತಲುಪುವ ವ್ಯವಸ್ಥೆ ಆಗಬೇಕು ಎಂದುಕೊಂಡಿದ್ದೇನೆ. ಅದಕ್ಕಾಗಿಯೇ ಒಂದು ಯೋಜನೆಯನ್ನು ಸಿದ್ಧಪಡಿಸಲು ಈಗಾಗಲೆ ಕ್ರಮ ಕೈಗೊಂಡಿದ್ದು, ಅದಕ್ಕೆ ಈ ರೀತಿಯಲ್ಲಿ ಒಕ್ಕಣೆ ಬರೆದಿದ್ದೇನೆ.
ಇನ್ನು ಅಲೆದಾಟ ಬೇಕಿಲ್ಲಇಂದು, ನಾಳೆ ಸುತ್ತಾಟವಿಲ್ಲಬಂತು ನೋಡಿ ಮನೆ ಬಾಗಿಲಿಗೆ ದಾಖಲೆ
ಯೋಜನೆಗೆ ಶೀಘ್ರವೇ ಹೆಸರು ನಾಮಕರಣ ಮಾಡಿ, ಬಜೆಟ್ ಅಧಿವೇಶನಕ್ಕೆ ಮುಂಚೆಯೇ ಸಿಎಂ ಜತೆಗೆ ಒಂದು ಹಳ್ಳಿಗೆ ಹೋಗಿ ಭೂಮಿಗೆ ಸಂಬಂಧಿಸಿದಂತೆ ಐದು ದಾಖಲೆಗಳನ್ನು ರೈತರಿಗೆ ಉಚಿತವಾಗಿಯೇ ಕೊಡಲು ಉದ್ದೇಶಿಸಲಾಗಿದೆ ಎಂದು ಆರ್.ಅಶೋಕ್ ವಿವರಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಯಡಿಯೂರಪ್ಪ ಹುಷಾರಿಲ್ಲದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದರು. ನಾನು ಆಗ ಆರೋಗ್ಯ ಸಚಿವನಾಗಿದ್ದೆ. ಮಾತನಾಡಿಸಿ ಹೊರಟಾಗ ಮಧ್ಯರಾತ್ರಿ 3 ಗಂಟೆ. ಇನ್ನು ಮಲಗಿದರೆ ನಿದ್ರೆ ಬರುತ್ತದೆ ಎಂದು ಕೆ.ಸಿ. ಜನರಲ್ ಆಸ್ಪತ್ರೆಗೆ ಹೋದೆ. ಅಲ್ಲಿ ಹೆರಿಗೆ ವಾರ್ಡ್ ಬಳಿ ಯಾರಿಗೂ ಗೊತ್ತಾಗದ ಹಾಗೆ ತಲೆ ಮೇಲೆ ಶಾಲು ಹೊದ್ದು ಕುಳಿತಿದ್ದೆ. ಅಲ್ಲಿ ನಡೆದ ಘಟನಾವಳಿಗಳು, ಆಸ್ಪತ್ರೆ ಅವ್ಯವಸ್ಥೆ ಲಂಚಾವತಾರಕ್ಕೆ ಕನ್ನಡಿ ಹಿಡಿದವು. ಗಂಡು ಮಗುವಾದರೆ 1 ಸಾವಿರ, ಹೆಣ್ಣು ಮಗುವಾದರೆ 500 ರೂ. ಕೊಡುವುದು ನನ್ನ ಕಣ್ಣ ಮುಂದೆಯೇ ನಡೆಯುತ್ತಿತ್ತು. ಎಲ್ಲೆಲ್ಲಿಂದಲೋ ಹೆರಿಗೆಗಾಗಿ ಬಂದವರು, ತಮ್ಮ ಬಳಿ ಇದ್ದ ಹಣವನ್ನು ಲಂಚವಾಗಿ ಕೊಟ್ಟು, ಹೋಗುವಾಗ ಬೈದುಕೊಂಡು ಹೋಗುತ್ತಿದ್ದಾರಲ್ಲ ಎನ್ನುವ ಕಾರಣಕ್ಕೆ ಏನಾದರೂ ಪರಿಹಾರ ಯೋಜನೆ ಹುಡುಕಬೇಕು ಎಂದು ನಿರ್ಧರಿಸಿದೆ. ಆಗಲೇ ಹೊಳೆದಿದ್ದು ಮಡಿಲು ಯೋಜನೆ. ಅದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಹೆಗ್ಗಳಿಕೆಯೂ ನನ್ನದು.
ಕೋವಿಡ್ ಸಂದರ್ಭ ಸಾವುಗಳ ಸಂಖ್ಯೆ ದಿನವೂ ಹೆಚ್ಚುತ್ತಲೇ ಇತ್ತು. ಶವ ಸುಡುವುದಕ್ಕೆ ಸಾದ್ಯವಾಗದೆ, ಆಂಬ್ಯುಲೆನ್ಸ್​ಗಳು ಕ್ಯೂ ನಿಲ್ಲಲಾರಂಭಿಸಿದ್ದವು. ಆಗ ತಕ್ಷಣವೇ ಬೆಂಗಳೂರಿನ ಹೊರ ಭಾಗದಲ್ಲಿ ಶವ ಸುಡುವ ವ್ಯವಸ್ಥೆಯನ್ನು ತುರ್ತಾಗಿ ಮಾಡಿದೆವು. ಸಮಸ್ಯೆ ನಿಧಾನವಾಗಿ ಕರಗಲಾರಂಭಿಸಿತು. ಶವ ಸುಟ್ಟ ಮೇಲೆ ಅದರ ಅಸ್ಥಿಯನ್ನು ಸಂಗಮಕ್ಕೆ ತೆರಳಿ ನದಿಯಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ. ಕೋವಿಡ್ ಕಾರಣದಿಂದ ಶವಸಂಸ್ಕಾರ ಬಳಿಕವೂ ಬಹಳಷ್ಟು ಜನರು ಅಸ್ಥಿ ಪಡೆಯಲು ಬರಲೇ ಇಲ್ಲ. ಮನೆಯಲ್ಲಿ ಎಲ್ಲರೂ ಪಾಸಿಟಿವ್ ಆಗಿದ್ದವರು ಬರಲಾಗಲಿಲ್ಲ. ಹೊರ ದೇಶಗಳಿಂದ ಬಂದಿದ್ದವರು ಶವಸಂಸ್ಕಾರ ಬಳಿಕ ಹಿಂತಿರುಗಿದ್ದರು. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಾರಣ. ಸಾಮೂಹಿಕ ಅಸ್ಥಿ ವಿಸರ್ಜನೆಯನ್ನು ಸರ್ಕಾರದಿಂದಲೇ ಮಾಡಲು ತೀರ್ವನಿಸಿದೆ. ಆಗ ಟೀಕೆ- ಟಿಪ್ಪಣಿಗಳು ಕೇಳಿಬಂದವು. ಜನರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಆದರೆ ಅಸ್ಥಿ ವಿಸರ್ಜನೆಗೆ ಸರ್ಕಾರ ಮುತುವರ್ಜಿ ವಹಿಸಿದೆ ಎಂದು ವಿಪಕ್ಷಗಳು ವ್ಯಂಗ್ಯವಾಡಿದವು. ಇನ್ನಷ್ಟು ಜನರು ಯಾರದೊ ಅಸ್ಥಿಯನ್ನು ನೀವೇಕೆ ವಿಸರ್ಜನೆ ಮಾಡಿ ಆ ಪಾಪ ಹೊತ್ತುಕೊಳ್ತೀರಿ? ಎಂದರು. ನನಗೂ ಪಾಪ-ಪುಣ್ಯದ ಪೀಕಲಾಟ ಶುರುವಾಯ್ತು. ದೇವರ ಮೇಲೆ ಭಾರ ಹಾಕಿ ಒಂದು ದಿನ ಸರ್ಕಾರಿ ಕಾರು ಬಿಟ್ಟು, ಖಾಸಗಿ ವಾಹನದಲ್ಲಿ ನಾನೇ ಕಾವೇರಿ ಸಂಗಮಕ್ಕೆ ಹೊರಟೆ. ದಾರಿಯುದ್ದಕ್ಕೂ ಮನಸ್ಸಿನಲ್ಲಿ ಪಾಪ-ಪುಣ್ಯ ಹೊಯ್ದಾಟ ನಡೆದಿತ್ತು. ಗಟ್ಟಿ ಮನಸ್ಸು ಮಾಡಿ ಸಂಗಮದಲ್ಲಿ ಸಾಮೂಹಿಕವಾಗಿ ಅಸ್ಥಿ ವಿಸರ್ಜನೆ ಮಾಡಿ ಬಂದೆ. ಆಮೇಲೆ ಮಾದ್ಯಮದಲ್ಲಿ ಸುದ್ದಿಯಾಯ್ತು. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಯ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಮೂಹಿಕ ಅಸ್ಥಿ ವಿಸರ್ಜನೆ ಬಗ್ಗೆ ಪ್ರಶಂಸೆ ವ್ಯಕ್ತವಾಯ್ತು. ಆಗ ನನಗೂ ಸಾರ್ಥಕ ಭಾವ ಮೂಡಿತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
