ಬೆಂಗಳೂರು:ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಸ್ವಪಕ್ಷದ ಸ್ಥಳೀಯ ಕಾರ್ಯಕರ್ತರ ವಿರುದ್ಧ ಮುನಿಸು ತಮಣಿಗೆ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಗೆ ಸೇರ್ಪಡೆ ಬಹುತೇಕ ಅಂತಿಮವಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಆ.21ರ ಸಂಜೆ 5ಕ್ಕೆ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಕಾರ್ಪೆರೇಟರ್​ಗಳು, ಜಿ.ಪಂ. ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಲವು ಮುಖಂಡರು ಬಿಜೆಪಿ ತೊರೆದು ಕೈ ಹಿಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್​ಗೆ ಸೇರುಲಿರುವ ಎಲ್ಲರೂ ಸೋಮಶೇಖರ್ ಬೆಂಬಲಿಗರು ಎನ್ನಲಾಗುತ್ತಿದ್ದು, ಮೊದಲು ಬೆಂಬಲಿಗರಿಗೆ ಸುರಕ್ಷಿತ ಸ್ಥಾನ ಕಲ್ಪಿಸಿ, ನಂತರ ಸೋಮಶೇಖರ್ ಕೈಗೆ ಜಿಗಿಯಲಿದ್ದಾರೆ ಎಂಬ ಅನುಮಾನ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಕರೆದಿದ್ದ ಮನವೊಲಿಕೆ ಸಭೆಯಿಂದಲೂ ಸೋಮಶೇಖರ್ ದೂರ ಅಂತರ ಕಾಯ್ದುಕೊಂಡಿದ್ದರು. ಮುಂಬರುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬೆಂಬಲಿಗರಿಗೆ ಹೆಚ್ಚಿನ ಆದ್ಯತೆ ನೀಡಲು ಎಸ್​ಟಿಎಸ್ ಬಯಸಿದ್ದಾರೆ.
ಆದರೆ ಬೆಂಬಲಿಗರ ರಾಜಕೀಯ ಭವಿಷ್ಯ ಗಟ್ಟಿಗೊಳಿಸುವ ಪ್ರಯತ್ನಗಳಿಗೆ ಬಿಜೆಪಿ ಸ್ಥಳೀಯ ಕಾರ್ಯಕರ್ತರು ಅಡ್ಡಗಾಲು ಹಾಕಲಿದ್ದಾರೆ ಎಂಬ ಸಂಶಯ ಮಡುಗಟ್ಟಿದ್ದು, ಈ ಹಿನ್ನೆಲೆಯಲ್ಲಿ ಸೋಮಶೇಖರ್ ಮೇಲೆ ಆಂತರಿಕವಾಗಿ ಒತ್ತಡ ಹೇರಿದ್ದಾರೆ.
ಬೆಂಬಲಿಗರು ಹಾಗೂ ಅನುಯಾಯಿಗಳನ್ನು ಬಿಟ್ಟುಕೊಡಲು ಎಸ್​ಟಿಎಸ್ ಕೂಡ ಸಿದ್ಧರಿಲ್ಲ. ಸ್ವಪಕ್ಷದ ಸ್ಥಳೀಯ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಪರೋಕ್ಷವಾಗಿ ಪಕ್ಷದ ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದಂತಿದೆ. ಬೆಂಬಲಿಗರಿಗೆ ಪ್ರಾಶಸ್ಱ ಸಿಗದಿದ್ದರೆ ಪಕ್ಷ ತೊರೆಯುವುದು ಅನಿವಾರ್ಯವೆಂಬ ಸಂದೇಶ ರವಾನಿಸಿದ್ದಾರೆ.
ಇದೀಗ ಎಸ್.ಟಿ.ಸೋಮಶೇಖರ್ ಹಾಗೂ ಪ್ರಮುಖ ಬೆಂಬಲಿಗರ ಜತೆಗೆ ರಾಜಿ ಸಂಧಾನದ ಮಾತುಕತೆ ನಡೆಸಿ, ಪಕ್ಷದಲ್ಲೇ ಉಳಿಸಿಕೊಳ್ಳುವ ಜವಾಬ್ದಾರಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ಒಪ್ಪಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮೂಲ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವರ್ತನೆಯಿಂದ ಬೇಸತ್ತು ಘರ್ ವಾಪಾಸಿಗೆ ಸಿದ್ಧವಾಗಿರುವ ವಲಸಿಗರ ಮನವೊಲಿಕೆಗೆ ಮುಂದಾಗಿರುವ ಮಾಜಿ ಸಿಎಂ
ಬಿ.ಎಸ್.ಯಡಿಯೂರಪ್ಪ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಶನಿವಾರ ಕರೆಸಿಕೊಂಡ ಪಕ್ಷದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಚುನಾವಣೆಯಲ್ಲಿ ಸೋಲಿಸಲು ಬಿಜೆಪಿಯವರೇ ಪ್ರಯತ್ನದರು. ಸಿಎಂ, ಡಿಸಿಎಂ ಜತೆ ವೇದಿಕೆ ಹಂಚಿಕೊಂಡ ಮಾತ್ರಕ್ಕೆ ಬಿಜೆಪಿ ತೊರೆಯುತ್ತಾರೆಂದು ಅಪಪ್ರಚಾರ ಮಾಡಿದರು ಎಂದು ಅಸಮಾಧಾನ ತೋಡಿಕೊಂಡ ಸೋಮಶೇಖರ್​ಗೆ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ. ಪಕ್ಷ ತೊರೆಯುವ ಆಲೋಚನೆ ಮಾಡಬೇಡಿ ಎಂದು ಬಿಎಸ್​ವೈ ಭರವಸೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಸೋತಿದೆ. ಆ ಸೋಲಿನ ಹೊಣೆ ಎಲ್ಲರ ಮೇಲಿದೆ. ಕಾಂಗ್ರೆಸ್ ನಡೆಸಲು ಮುಂದಾಗಿರುವ ಆಪರೇಷನ್​ಗೆ ಬಿಜೆಪಿಯ ಯಾವ ಮುಖಂಡರೂ ಒಳಗಾಗುವುದಿಲ್ಲ. ಅವರದ್ದು ವಿಫಲ ಆಪರೇಷನ್.
| ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಘರ್ ವಾಪಾಸಿ ಹೆಸರಿನಲ್ಲಿ ನಾವು ಪಕ್ಷ ಸೇರ್ಪಡೆ ಆರಂಭಿಸಿದರೆ ಬಿಜೆಪಿ, ಜೆಡಿಎಸ್ ಅರ್ಧದಷ್ಟು ಖಾಲಿಯಾಗುತ್ತದೆ. ಕೆಲವರು ಚಲುವರಾಯಸ್ವಾಮಿ ಸಂಪರ್ಕದಲ್ಲಿರಬಹುದು, ಕೆಲವರು ನನ್ನ ಸಂಪರ್ಕದಲ್ಲಿಯೂ ಇದ್ದಾರೆ.
| ಪ್ರಿಯಾಂಕ್ ಖರ್ಗೆ, ಸಚಿವ
ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬರುತ್ತಾರೆಯೋ ಅವರಿಗೆ ಕಾಂಗ್ರೆಸ್ ಬಾಗಿಲು ಸದಾ ತೆರೆದಿದೆ. ಪರಿಷತ್​ಗೆ ನಾಮನಿರ್ದೇಶಿತರಾಗಿರುವ ಸುಧಾಮ್ ದಾಸ್ ಸಹ ದಲಿತರಾಗಿದ್ದಾರೆ. ಕೆಲವು ಅಭಿಪ್ರಾಯಗಳನ್ನು ಹೈಕಮಾಂಡ್​ಗೆ ಹೇಳಿದ್ದು ಅವರ ತೀರ್ಮಾನವೇ ಅಂತಿಮ.
| ಡಾ.ಎಚ್.ಸಿ.ಮಹದೇವಪ್ಪ, ಸಚಿವ
ಬಿಜೆಪಿ ಆಪರೇಷನ್ ಮಾಡಿದರೆ ಸರಿ, ಅದೇ ಕಾಂಗ್ರೆಸ್ ಮಾಡಿದರೆ ತಪ್ಪೇ? ತಾನು ಕಳ್ಳ, ಪರರ ನಂಬ ಎನ್ನುವಂತಹ ಸ್ಥಿತಿ ಬಿಜೆಪಿಯದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಇಲ್ಲೆಲ್ಲ ಬಿಜೆಪಿ ಏನೇನು ಮಾಡಿದೆ ಎಂಬುದನ್ನು ಆ ಪಕ್ಷ ನೆನಪಿಸಿಕೊಳ್ಳಲಿ ಎಂದು ಶನಿವಾರ ತಿರುಗೇಟು ನೀಡಿದರು.
ಈ ಹಿಂದೆ ಯಾರು ಯಾರು ಏನೇನು ಮಾತನಾಡಿದರು, ಏನನ್ನು ಮಾತನಾಡಲು ಬಂದಿದ್ದರು ಅದನ್ನೆಲ್ಲ ಈಗ ಬಿಡಿಸಿ ಹೇಳಬೇಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಇದೇ ರೀತಿ ಇರಬೇಕು, ಇದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ಮಾಡಲು ಆಗುವುದಿಲ್ಲ. ವಿಪಕ್ಷಗಳು ಏನು ಬೇಕಾದರೂ ಆರೋಪ ಮಾಡಲಿ ನಮಗೆ ತೊಂದರೆ ಇಲ್ಲ ಎಂದು ಹೇಳಿದರು. ಬಿಜೆಪಿ ಆ.23ರಂದು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, ಮೊದಲು ಅವರ ನಾಯಕರು ಯಾರು ಎಂದು ತೀರ್ಮಾನ ಮಾಡಿಕೊಂಡು ಆಮೇಲೆ ಹೋರಾಟ ಮಾಡಲಿ ಎಂದು ಲೇವಡಿ ಮಾಡಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
