| ಮೃತ್ಯುಂಜಯ ಕಪಗಲ್ ಬೆಂಗಳೂರು
ವಂಚಿತ ಆಕಾಂಕ್ಷಿಗಳ ಸಿಟ್ಟು, ನಿರ್ದಿಷ್ಟ ಖಾತೆಗೆ ಹಿರಿಯ ಸಚಿವರ ಬಿಗಿಪಟ್ಟು ಸಡಿಲಿಸಲು ಕಾಂಗ್ರೆಸ್ ನಾಯಕರು ಬೆವರಿಳಿಸಿದ ನಡುವೆ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟವರು ಮತ್ತೊಂದು ಬೇಗುದಿಗೆ ಸಿಲುಕಿಸುವ ಲಕ್ಷಣಗಳು ಗೋಚರಿಸಿವೆ.
ಖಾತೆಗಳ ಹಂಚಿಕೆಗೆ ಮುನ್ನವೇ ಜಿಲ್ಲಾ ಉಸ್ತುವಾರಿ ಹಲವು ಸಚಿವರು ಪರೋಕ್ಷ ಇಲ್ಲವೇ ಆಪ್ತೇಷ್ಟರ ಮುಖೇನ ತಮ್ಮ ಅಪೇಕ್ಷೆ ತೋಡಿಕೊಂಡು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಮುನಿದವರ ಮನವೊಲಿಕೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬಿಡುವಿಲ್ಲದ ರಾಜಿ ಸಂಧಾನದ ಪ್ರಯತ್ನ ಮುಂದುವರಿಸಿದ್ದಾರೆ. ಒಂದಿಬ್ಬರು ಹಿರಿಯ ಸಚಿವರ ಮನವೊಲಿಕೆಯಲ್ಲಿ ಯಶಸ್ವಿಯಾಗಿದ್ದರೆ, ಇನ್ನೂ ಕೆಲವರು ಪಟ್ಟು ಸಡಿಲಿಸಿಲ್ಲ. ವಂಚಿತರ ಅಸಮಾಧಾನ ತಣಿಸುವ ಕಸರತ್ತು ಬಾಕಿಯಿರುವಂತೆಯೇ ಉಸ್ತು‘ವರಿ’ಯು ಸಿಎಂ, ಡಿಸಿಎಂ ಮತ್ತಿತರ ನಾಯಕರಿಗೆ ಎದುರಾಗಿದೆ.
ಪರೋಕ್ಷ ಲಾಬಿ:ಹಳಬರು-ಹೊಸಬರ ಪೈಕಿ ಕೆಲವರಿಗೆ ಖಾತೆ ಯಾವುದು ಕೊಟ್ಟರೂ ಸೈ. ಇಂತಹವರ ಮುಖ್ಯ ಗುರಿ ಜಿಲ್ಲಾ ಉಸ್ತುವಾರಿಯದ್ದಾಗಿದೆ. ಇದೇ ಕಾರಣಕ್ಕೆ ಪರೋಕ್ಷವಾಗಿ ಲಾಬಿ ಶುರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲಾ, ಹಿರಿಯ ನಾಯಕರಿಗೆ ನಿಕಟತೆ, ಆಪ್ತತೆ ಆಧಾರದಲ್ಲಿ ಉಸ್ತುವಾರಿ ಗಿಟ್ಟಿಸಿಕೊಳ್ಳುವ ಕನಸು ಕಾಣಲಾರಂಭಿಸಿದ್ದಾರೆ. ಜಿಲ್ಲಾ ಆಡಳಿತದ ಜತೆಗೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ. ವೈಯಕ್ತಿಕವಾಗಿ ಪ್ರಭಾವ, ವರ್ಚಸ್ಸು ವೃದ್ಧಿಸಲಿದೆ ಎಂಬುದು ಬಹುತೇಕರ ಲೆಕ್ಕಾಚಾರವಾಗಿದೆ. ಉಸ್ತುವಾರಿಗೆ ಸಮರ್ಥನೀಯ ಕಾರಣಗಳ ಪಟ್ಟಿಯನ್ನು ಆಪ್ತರ ಮುಖೇನ ರವಾನಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಲ್ಲಿದ್ದಾರೆ.
ಪೈಪೋಟಿ ಸಾಧ್ಯತೆ:ತೆರೆಮರೆ ಲಾಬಿ, ಪರೋಕ್ಷ ಅಭಿಲಾಷೆಯನ್ನು ಗಮನಿಸಿದರೆ ಒಂದಕ್ಕಿಂತ ಹೆಚ್ಚು ಮಂತ್ರಿಗಳಿರುವ ಜಿಲ್ಲೆಗಳಲ್ಲಿ ‘ಉಸ್ತುವಾರಿ’ಗಾಗಿ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ಗೆ ಅವರ ಆಪ್ತರೇ ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಈ ಒತ್ತಡ ನಿಭಾಯಿಸುವ ಬಗೆಯೂ ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸಿಎಂ ಸೇರಿ ಮೈಸೂರು ಜಿಲ್ಲೆ ಮೂವರು, ತುಮಕೂರು, ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಚಿವರಿದ್ದಾರೆ. ಉಸ್ತುವಾರಿ ತಿಕ್ಕಾಟಗಳಿಗೆ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರವೆಂಬ ವ್ಯತ್ಯಾಸವೇನಿಲ್ಲ. ಇಂತಹ ಕಿರಿಕ್​ನಿಂದಾಗಿ ಯಾರಿಗೂ ಕೊಡುವುದು ಬೇಡವೆಂದು ಮುಖ್ಯಮಂತ್ರಿ ತಮ್ಮ ಬಳಿ ಇರಿಸಿಕೊಂಡ ನಿದರ್ಶನಗಳಿವೆ.
ಆತಂಕ:ಸ್ವಂತ ಜಿಲ್ಲೆಗೆ ಸಚಿವರು ಉಸ್ತುವಾರಿಗ ಳಾದರೆ ಅಭಿವೃದ್ಧಿ, ಆಡಳಿತದ ಮೇಲೆ ನಿಯಂತ್ರಣ, ಪಕ್ಷದ ಹಿತ ಮುಂತಾದ ಬಹುಪಯೋಗಗಳಿವೆ. ಬೇರೆ ಜಿಲ್ಲೆಯ ಉಸ್ತುವಾರಿ ಒಪ್ಪಿಸಿದರೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಲೋಕಸಭೆ ಚುನಾವಣೆ ಪೂರ್ವ ತಯಾರಿಗೆ ಅಡ್ಡಿಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಬಹುದು ಎಂದು ಕೆಲವು ಸಚಿವರಲ್ಲಿ ಮನೆ ಮಾಡಿದೆ ಎಂದು ಮೂಲಗಳು ಹೇಳಿವೆ. ಆಡಳಿತ ಯಂತ್ರಾಂಗಕ್ಕೆ ಚುರುಕು, ಅಭಿವೃದ್ಧಿಗೆ ವೇಗದ ಸ್ಪರ್ಶ ನೀಡುವ ಉದ್ದೇಶದಿಂದ ತ್ವರಿತವಾಗಿ ಉಸ್ತುವಾರಿ ಸಚಿವರನ್ನು ನೇಮಿಸಬೇಕು ಎಂಬ ಗಟ್ಟಿ ಧ್ವನಿ ಕೇಳಿಬರಲಾರಂಭಿಸಿದೆ. ಲೋಕಸಭೆ
ಚುನಾವಣೆಗೆ ಹೆಚ್ಚೆಂದರೆ 11 ತಿಂಗಳಷ್ಟೇ ಉಳಿದಿದೆ. ಪೂರ್ವ ಸಿದ್ಧತೆ, ಜನರ ಮನಗೆಲ್ಲಲು ಕಾಂಗ್ರೆಸ್ ಸರ್ಕಾರದ ಛಾಪು ಮೂಡಿಸುವ ಕೆಲಸಗಳಿಗೆ ವೇಗ ನೀಡಬೇಕು ಎನ್ನುವುದು ಉಸ್ತು ವಾರಿ ಆಸೆಯಿಟ್ಟುಕೊಂಡವರ ಒತ್ತಾಸೆಯಾಗಿದೆ.
ಪಾರದರ್ಶಕತೆ, ಎಲ್ಲರ ವಿಶ್ವಾಸದ ಹೆಸರಿನಲ್ಲಿ ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಿಗೆ ನೇಮಿಸುವ ಪರಿಪಾಠಕ್ಕೂ ಸಚಿವರ, ಶಾಸಕರು, ಹಿರಿಯ ಮುಖಂಡರು ತಕರಾರು ತೆಗೆದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಈ ಪ್ರಯೋಗ ಮಾಡಿ ಕೈಸುಟ್ಟುಕೊಂಡಿದೆ. ಜಿಲ್ಲೆ ಅರ್ಥ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ಹಿಡಿಯಲಿದ್ದು, ಹೊಂದಾಣಿಕೆ ಕೊರತೆ ಎದುರಾಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವೂ ಫಲಿಸುವುದಿಲ್ಲ. ಪರಸ್ಪರ ದೂರು-ಪ್ರತಿದೂರು, ತಪು್ಪ ಮಾಹಿತಿಗಳ ಹಂಚಿಕೆಯಾಗಬಹುದು ಎನ್ನುವುದು ತಗಾದೆ ತೆಗೆದವರ ವಾದ. ಆಯಾ ಜಿಲ್ಲೆಯವರೇ ಉಸ್ತುವಾರಿಗಳಾದರೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಸಾಧ್ಯವಾಗಲಿದೆ ಎಂಬ ಸಂದೇಶ ತಲುಪಿಸಿದ್ದಾರೆ.
ತುಮಕೂರು: ಸಚಿವ ಸ್ಥಾನ ವಂಚಿತರಾಗಿರುವ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಪರವಾಗಿ ಅವರ ಮೊಮ್ಮಗಳು ಕಾಂಗ್ರೆಸ್ ವರಿಷ್ಠ ರಾಹುಲ್​ಗಾಂಧಿಗೆ ಪತ್ರ ಬರೆದಿರುವುದು ಸುದ್ದಿಯಾಗಿದೆ. ತಾತನಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡ 7 ವರ್ಷದ ಮೊಮ್ಮಗಳಾದ ಆರನಾ ಸಂದೀಪ್ ಪತ್ರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ವೈರಲ್ ಆಗಿದೆ. ಜಯಚಂದ್ರ ಪುತ್ರ ಟಿ.ಜೆ.ಸಂಜಯ್ ಕೂಡ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು:ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ, ಮುಂದಿನ ಲೋಕಸಭೆ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಕನಿಷ್ಠ 20 ಸ್ಥಾನಗಳನ್ನು ಗೆದ್ದು ನಾವು ವರಿಷ್ಠರಿಗೆ ಗಿಫ್ಟ್ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣದಿಂದ ಕಾರ್ಯೋನ್ಮುಖರಾಗಿ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ನಾಡಿನ ಜನತೆ ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆ ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆಯುವುದನ್ನು ತಪ್ಪಿಸಿ.
ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆಯನ್ನು ತಪ್ಪಿಸಿ ಎಂದು ಸೂಚಿಸಿದ್ದಾರೆ.
ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಉಡುಗೊರೆ ನೀಡಬೇಕು. ಈ ಗುರಿ ಇಟ್ಟುಕೊಂಡು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ಎಲ್ಲ ಸಚಿವರಿಗೂ ಮನವರಿಕೆ ಮಾಡಿಸಿದ್ದಾರೆ.
ನಾವು ನೀಡಿರುವ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಿಂದಿನ ಬಾರಿಯ ತಪ್ಪುಗಳು ಈ ಬಾರಿ ಮರುಕಳಿಸಬಾರದು ಎಂದಿರುವ ಅವರು ಖಾತೆ ಹಂಚಿಕೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ನೀವೆಲ್ಲ ಸಕ್ರಿಯರಾಗಿ. ವಿರೋಧ ಪಕ್ಷದಲ್ಲಿದ್ದಾಗ ನಾವು ನಡೆಸಿದ ಹೋರಾಟದ ಫಲವಾಗಿ ಜನತೆ ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿ ನಮ್ಮ ಕೈ ಹಿಡಿದಿದ್ದಾರೆ. ಈಗ ನಾವು ಸರ್ಕಾರವನ್ನು, ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಜನಪರ ನಿಷ್ಠೆ ಮತ್ತು ಕೆಲಸಗಳ ಮೂಲಕ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ದಾಖಲಿಸಬೇಕಿದೆ ಎಂದು ತಿಳಿಸಿದ್ದಾರೆ. ಕೇಂದ್ರದ ದುರಾಡಳಿತವನ್ನು ಕರ್ನಾಟಕದ ಮೂಲಕ ಕೊನೆಗೊಳಿಸಲು ಪರಿಸ್ಥಿತಿ ಹದವಾಗಿದೆ. ಇದನ್ನು ನಾವು ಮರೆಯಬಾರದು. ಹೀಗಾಗಿ ಸಚಿವರು ತಮಗೆ ಉಸ್ತುವಾರಿ ವಹಿಸಲಾಗುವ ಜಿಲ್ಲೆಗಳಿಗೆ ಹೆಚ್ಚೆಚ್ಚು ಪ್ರವಾಸ ಮಾಡಬೇಕು. ಜಿಲ್ಲೆ, ತಾಲೂಕು ಮಟ್ಟದಲ್ಲೇ ಸಮಸ್ಯೆ ಬಗೆಹರಿಸಬೇಕು. ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ನಿಗಾ ಇಟ್ಟು ಭ್ರಷ್ಟಾಚಾರಕ್ಕೆ ಬರೆ ಎಳೆಯಬೇಕು ಎಂದು ಸಚಿವರಿಗೆ ಸೂಚನೆ ನೀಡಿ ಕಳಿಸಿದ್ದಾರೆ.
ಯಾವುದೇ ನಿರ್ದಿಷ್ಟ ಸಂಘಟನೆಗಳನ್ನು ನಿಷೇಧಿಸುವುದಾಗಿ ರಾಜ್ಯ ಸರ್ಕಾರ ಎಲ್ಲೂ ಹೇಳಿಲ್ಲ. ಅದಕ್ಕೆ ಅಂಥ ತರಾತುರಿಯೇನಿಲ್ಲ. ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸುವುದಾಗಿ ಅಷ್ಟೇ ಹೇಳಲಾಗಿದೆ. ಎಸ್​ಡಿಪಿಐ, ಆರ್​ಎಸ್​ಎಸ್ ಎಂದು ಉದಾಹರಣೆಗೆ ಹೇಳಲಾಗಿದೆಯೇ ಹೊರತು ಅವುಗಳನ್ನು ನಿಷೇಧಿಸುವುದಾಗಿ ಹೇಳಿಲ್ಲ.
| ಸತೀಶ್ ಜಾರಕಿಹೊಳಿ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
