ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಷಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಶುಕ್ರವಾರ ರಾಜ್ಯಕ್ಕೆ ಆಗಮಿಸಿದರು. ಈ ವೇಳೆ ಎಚ್.ಡಿ ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಷಿ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.
ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೃಹತ್ ಸಂಖ್ಯೆಯ ಕಾರ್ಯಕರ್ತರು, ಮುಖಂಡರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಸೇಬು, ಮೋಸಂಬಿ ಹಾರ ಹಾಕಿ ಸ್ವಾಗತಿಸಿದರಲ್ಲದೆ, ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದರು. ವಿಮಾನ ನಿಲ್ದಾಣದ ಲಾಂಜ್​ನಿಂದ ಹೊರ ಬರುತ್ತಿದ್ದಂತೆಯೇ ಹೂಮಾಲೆ ಹಾಕಿ, ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ಕಾರ್ಯಕರ್ತರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು. ತರುವಾಯ ಸಾದರಹಳ್ಳಿ ಗೇಟ್ ಬಳಿ ಜೆಡಿಎಸ್ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವಿಕರಿಸಿದರು.
ಕೃಷಿಗೆ ತೊಂದರೆ ಆಗದಂತೆ ಕೆಲಸ:ನನಗೆ ಸಿಕ್ಕಿರುವ ಅವಕಾಶವನ್ನು ರಾಜ್ಯದ ಜನತೆಗೆ ಅರ್ಪಿಸುತ್ತೇನೆ. ಮೋದಿ ಅವರ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಜೆಡಿಎಸ್ ಮುಗಿಸಿದ್ದೇವೆ ಎಂದು ದುರಹಂಕಾರದಲ್ಲಿ ಮಾತನಾಡಿರುವವರಿಗೆ ಉತ್ತರ ಕೊಡುವುದಿಲ್ಲ. ನರೇಂದ್ರ ಮೋದಿ ನನಗೆ ಎರಡು ದೊಡ್ಡ ಖಾತೆ ಕೊಟ್ಟಿದ್ದಾರೆ. ಸಮಯ ವ್ಯರ್ಥ ಮಾಡುವುದಿಲ್ಲ. ಎಲ್ಲ ಇಲಾಖೆಯಲ್ಲಿ ರಾಜ್ಯದ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡುತ್ತೇನೆ. ರೈತರ ಕೃಷಿಗೆ ತೊಂದರೆ ಕೊಡದಂತೆ ಕಾರ್ಖಾನೆ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬಳಿಕ ಜೆ.ಪಿ.ಭವನದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕೇಂದ್ರ ಸರ್ಕಾರದ ಸಹಕಾರ ಪಡೆಯುವುದು ರಾಜ್ಯ ಸರ್ಕಾರದ ಕರ್ತವ್ಯ. ನನ್ನ ಖಾತೆಯ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಗಳನ್ನು ನೀಡುತ್ತೇನೆ. ಕೃಷಿ ಸಚಿವನಾಗದೇ ಇದ್ದರೂ ಅವರ ಜತೆಗೆ ಇದ್ದು ಕೆಲಸ ಮಾಡುತ್ತೇನೆ. ರೈತರ ವಿಚಾರದಲ್ಲಿ ನಾವು ಎಲ್ಲಿ ಎಡವಿದ್ದೇವೆ. ಅದರ ಬಗ್ಗೆ ಕಾರ್ಯಕ್ರಮ ರೂಪಿಸಬೇಕಾಗಿದೆ. ಅದಕ್ಕೆ ಕೆಲಸ ಮಾಡುತ್ತೇವೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಗೊತ್ತಿದೆ. ನನಗೆ ಸಿಕ್ಕ ಖಾತೆಯಲ್ಲಿ ಉದ್ಯೋಗ ಕೊಡಿಸುವುದರ ಜತೆಗೆ, ಬೇರೆ ಕಡೆ ಉದ್ಯೋಗ ಕೊಡಿಸುತ್ತೇನೆ. ಅದಕ್ಕೆ ನಮ್ಮ ಯುವಕರು ರೆಡಿಯಾಗಿರಬೇಕು ಎಂದರು.
ಸ್ವಾಭಿಮಾನಿಗಳಾಗುವಂತೆ ಮಾಡಬೇಕು:ನಾನು ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರ್ತಾ ಇಲ್ಲ, ಊಟ ಸೇರ್ತಾ ಇಲ್ಲ. ನನಗೆ ಅನುಭವ ಇಲ್ಲ, ಸ್ವಲ್ಪ ಸಮಯ ಬೇಕು. ಮಹಿಳೆಯರಿಗೆ ಎರಡು ಸಾವಿರ ರೂ. ಕೊಟ್ಟು ಸಮಾಧಾನಪಡಿಸುವುದಲ್ಲ. ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡಬೇಕು ಎನ್ನುವುದು ನಮ್ಮ ಗುರಿ. ನಾಲ್ಕು ದಿನ ದೆಹಲಿಯಲ್ಲಿ ಕೆಲಸ ಮಾಡುತ್ತೇನೆ. ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ. ಅದರಲ್ಲೂ ಒಂದು ದಿನ ಮಂಡ್ಯದಲ್ಲಿ ಇರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ನಿಖಿಲ್ ಕುಮಾರಸ್ವಾಮಿ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಬೇಕು. ಮದುವೆ, ಸಾವಿನ ಸಂದರ್ಭದಲ್ಲಿ ಕಾರ್ಯಕರ್ತರ ಜತೆಗೆ ನಿಲ್ಲಬೇಕು, ಬಡ ಜನರ ಜತೆಗೆ ಇರಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಆಶೀರ್ವಾದ ಪಡೆದ ಎಚ್ಡಿಕೆ:ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜೆಡಿಎಸ್ ಕಚೇರಿಗೆ ಆಗಮಿಸಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಕುಮಾರಸ್ವಾಮಿ, ಬಳಿಕ ಮಾಜಿ ಪ್ರಧಾನಿ ದೇವೇಗೌಡ ದಂಪತಿಯಿಂದ ಆಶೀರ್ವಾದ ಪಡೆದುಕೊಂಡರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನೂ ಸೌಹಾರ್ದ ಭೇಟಿ ಮಾಡಿದರು.
ಮಂಡ್ಯ:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನ ಹಾಗೂ ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಎದುರಾಗಿರುವ ಕಾನೂನಾತ್ಮಕ ಸಮಸ್ಯೆ ಹಿನ್ನೆಲೆಯಲ್ಲಿ ಸಮಾವೇಶ ಮಾಡುವುದು ಬೇಡವೆಂದು ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ.16ರಂದು ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ರದ್ದುಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಂಡವಪುರ:ಎಚ್. ಡಿ.ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಮಂಡ್ಯ ತಾಲೂಕು ಚಿಕ್ಕಮಂಡ್ಯ ಗ್ರಾಮದ ಲೋಕೇಶ್ ಶುಕ್ರವಾರ ಮೇಲುಕೋಟೆಯಲ್ಲಿರುವ ಯೋಗಾನರಸಿಂಹ ಸ್ವಾಮಿ ಬೆಟ್ಟದ 365 ಮೆಟ್ಟಿಲು ಗಳನ್ನು ಮಂಡಿಯಲ್ಲಿ ಹತ್ತಿ ಹರಕೆ ತೀರಿಸಿದ್ದಾರೆ.

ಹುಬ್ಬಳ್ಳಿ:ಎರಡನೇ ಬಾರಿಗೆ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನ ಪಡೆದ ನಂತರ ಪ್ರಲ್ಹಾದ ಜೋಶಿ ಶುಕ್ರವಾರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೇರಿದ್ದ ನೂರಾರು ಜನ ಬಿಜೆಪಿ ಕಾರ್ಯಕರ್ತರು, ಪ್ರಲ್ಹಾದ ಜೋಶಿ ಅವರಿಗೆ ಹೂವಿನ ಮಾಲೆ ಹಾಕಿ ಸ್ವಾಗತಿಸಿದರು. ಬೈಕ್ ರ‍್ಯಾಲಿ ಜತೆಗೆ ವಿಮಾನ ನಿಲ್ದಾಣದಿಂದ ಕೇಶ್ವಾಪುರದ ಮಯೂರಿ ಎಸ್ಟೇಟ್​ನ ಅವರ ಮನೆಯವರೆಗೆ ಮೆರವಣಿಗೆ ನಡೆಸಿದರು. ಮಾರ್ಗ ಮಧ್ಯೆ ಬೃಹತ್ ಸೇಬು ಹಣ್ಣಿನ ಮಾಲೆಯನ್ನು ಪ್ರಲ್ಹಾದ ಜೋಶಿ ಅವರಿಗೆ ಹಾಕಲಾಯಿತು. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರ ಪುತ್ಥಳಿಗಳಿಗೆ ಪ್ರಲ್ಹಾದ ಜೋಶಿ ಮಾಲಾರ್ಪಣೆ ಮಾಡಿದರು.

ಮೋದಿ ಭವಿಷ್ಯದ ಇಂಧನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಬಹುದಾದ ನವೀಕರಿಸಬಹುದಾದ ಇಂಧನ ಖಾತೆಯನ್ನು ನನಗೆ ನೀಡಿದ್ದಾರೆ. ಜತೆಗೆ ದೇಶಕ್ಕೆ ಆಹಾರ ಭದ್ರತೆ ಒದಗಿಸುವ ಆಹಾರ, ಗ್ರಾಹಕರ ಹಿತರಕ್ಷಣೆಯಂತಹ ಪ್ರಮುಖ ಖಾತೆಯೂ ನನಗೆ ಸಿಕ್ಕಿದೆ ಎಂದು ಜೋಶಿ ಹೇಳಿದರು.
ಈ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜೋಶಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣ ಎಲ್ಲಿ ತಮ್ಮ ಬುಡಕ್ಕೆ ಬರುತ್ತದೆಯೋ ಎಂದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ, ವಿಷಯಾಂತರ ಮಾಡಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಅಪಚಾರಕ್ಕೆ ಇಳಿದಿದೆ ಎಂದು ಆರೋಪಿಸಿದರು. ಅಲ್ಲದೆ ನಟ ದರ್ಶನ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಪೊಲೀಸರು ತನಿಖೆ ನಡೆಸಬೇಕು. ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಬಿಹಾರ: ಅರ್ಹ ಯುವಕರಿಗೆ ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಘೋಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eight =
Remember me
