| ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯದಲ್ಲಿ ಒಂದೆಡೆ ಮಕ್ಕಳ ಕಳ್ಳ ಸಾಗಣೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ, ವರ್ಷದಿಂದ ವರ್ಷಕ್ಕೆ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಆತಂಕ ಮೂಡಿಸಿದೆ. ಇವೆರಡರ ನಿಯಂತ್ರಣಕ್ಕೆ ಕಾನೂನು ಬಲಗೊಳಿಸಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಕಳ್ಳ ಸಾಗಣೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂಬ ಅಂಕಿ- ಅಂಶಗಳು ಲಭ್ಯವಾಗಿವೆ. ಮೂರು ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಕ್ಕಳು ಪತ್ತೆಯೇ ಆಗಿಲ್ಲ. ಅದೇ ರೀತಿಯಲ್ಲಿ ಸರ್ಕಾರದಿಂದ ಲಭ್ಯವಾಗಿರುವ ಅಂಕಿ-ಅಂಶಗಳ ಪ್ರಕಾರವೇ 45,557 ಅಪ್ರಾಪ್ತ ಗರ್ಭಿಣಿಯರು ಅಧಿಕೃತವಾಗಿಯೇ ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಇವೆರಡರ ನಿಯಂತ್ರಣವೂ ಸರ್ಕಾರಕ್ಕೆ ಈಗ ದೊಡ್ಡ ಸವಾಲಿನ ಕೆಲಸವಾಗಿದೆ.
ನಾಪತ್ತೆಯಾಗುವ ಅಥವಾ ಕಳ್ಳ ಸಾಗಣೆಯಾಗುವ ಮಕ್ಕಳು ನಂತರ ಗರ್ಭಿಣಿಯರಾಗಿ ಹೊರ ಬರುತ್ತಿರುವ ಆತಂಕವೂ ಇದೆ. ಸಾಮಾಜಿಕವಾಗಿ ದೊಡ್ಡ ಪಿಡುಗಾಗಿದ್ದು, ಹೆಣ್ಣುಮಕ್ಕಳ ಸಬಲೀಕರಣದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತಿದೆ. ಆರ್ಥಿಕವಾಗಿ ದುರ್ಬಲವಾಗಿರುವುದು ಕಳ್ಳ ಸಾಗಣೆ ಹಾಗೂ ಅಪ್ರಾಪ್ತ ಗರ್ಭಿಣಿಯರಾಗುವುದಕ್ಕೆ ಪರಸ್ಪರ ಸಂಬಂಧ ಇದೆ.
ಕಾರಣಗಳೇನು?:ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಲು ಸಾಕಷ್ಟು ಕಾರಣಗಳಿವೆ. ಸರ್ಕಾರದಲ್ಲಿ ಲಭ್ಯವಾಗಿರುವ ಅಂಕಿ-ಅಂಶಗಳು ಒಂದು ಸಂಖ್ಯೆ ಮುಂದಿಟ್ಟರೆ, ಬೆಳಕಿಗೆ ಬಾರದ ಸಾವಿರಾರು ಪ್ರಕರಣಗಳು ಮುಚ್ಚಿ ಹೋಗುತ್ತಿವೆ ಎಂಬುದನ್ನು ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಗಳು ಹೇಳುತ್ತವೆ.
ಬಾಲ್ಯ ವಿವಾಹ, ದೂರು ಬಂದರೂ ಸರಿಯಾದ ಕ್ರಮಗಳು ಆಗದಿರುವುದು, ಕಿಶೋರಾವಸ್ಥೆಯಲ್ಲಿ ಮಕ್ಕಳಿಗೆ ಸರಿಯಾದ ಕೌನ್ಸೆಲಿಂಗ್ ಇಲ್ಲದೇ ಇರುವುದು, ಅತ್ಯಾಚಾರವಾದರೆ ಅದನ್ನು ಮುಚ್ಚಿಡುವುದು, ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿ, ಪ್ರೇಮದ ಸುಳಿಗೆ ಸಿಲುಕುವುದು, ಸ್ಥಳೀಯವಾಗಿ ಆಶಾ, ಸಖಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ಇಲ್ಲದಿರುವುದು, ಆರೋಗ್ಯದ ಮಾಹಿತಿಯ ಕೊರತೆ, ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು, ಶಾಲೆ ತೊರೆಯುತ್ತಿರುವುದು ಪ್ರಮುಖ ಕಾರಣವಾಗಿದೆ ಎಂಬುದನ್ನು ಮಕ್ಕಳ ತಜ್ಞರು ಗುರುತಿಸುತ್ತಾರೆ.
ಬಾಲ್ಯ ವಿವಾಹ ತಡೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ ಪೂರ್ಣಪ್ರಮಾಣದಲ್ಲಿ ನಿಂತಿಲ್ಲ. ಬಾಲ್ಯ ವಿವಾಹವಾಗಿ ಆಕೆ ಗರ್ಭಿಣಿಯಾದರೂ ಅದನ್ನು ಅತ್ಯಾಚಾರವೆಂದೇ ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಸಹ ಎಲ್ಲಿಯೂ ಅದು ಜಾರಿಗೆ ಬರುತ್ತಿಲ್ಲ. ಆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಾಗ ಮಾತ್ರ ಬಾಲ್ಯ ವಿವಾಹಗಳಿಗೆ ತಡೆ ಬೀಳಬಹುದೆಂದು ಹೇಳಲಾಗುತ್ತದೆ.
ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳು:ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಚಿತ್ರದುರ್ಗ, ತುಮಕೂರು, ಕಲಬುರಗಿ, ಕೋಲಾರ, ಶಿವಮೊಗ್ಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚಿನ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು ಕಂಡು ಬಂದಿದ್ದಾರೆ.
* ಕೆಳ ಹಂತದ ಸಿಬ್ಬಂದಿಗೆ ಸೂಕ್ತ ತರಬೇತಿ
* ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ
* ಬಾಲ್ಯ ವಿವಾಹಗಳಿಗೆ ಸಂಪೂರ್ಣ ನಿಯಂತ್ರಣ
* ಆದಿವಾಸಿಗಳಲ್ಲಿ ಕಾನೂನಿನ ಅರಿವು ಮೂಡಿಸುವುದು
* ಗರ್ಭಿಣಿಯರ ಸಾವು
* ಅವಧಿ ಪೂರ್ವ ಶಿಶು ಜನನ
* ಆರ್ಥಿಕ ತೊಂದರೆ
* ಉನ್ನತ ಶಿಕ್ಷಣದಿಂದ ವಂಚಿತ
* ಆರೋಗ್ಯದ ಸಮಸ್ಯೆಗಳು ಉಲ್ಬಣ
* ಸಾಮಾಜಿಕವಾಗಿ ಕೆಟ್ಟ ಪರಿಣಾಮ
* ಆತ್ಮಹತ್ಯೆಗಳ ಹೆಚ್ಚಳ
* ಆರ್ಥಿಕ ತೊಂದರೆ, ಸರ್ಕಾರದ ಮೇಲೆ ಹೆಚ್ಚಿನ ಅವಲಂಬನೆ
ಅಪ್ರಾಪ್ತ ಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ಕೊಟ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆ ಇಲಾಖೆಯ ಸಚಿವರ ಜತೆಗೂ ಚರ್ಚೆ ಮಾಡಲಾಗುವುದು.
| ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಸರ್ಕಾರದಿಂದ ಲಭ್ಯವಾದ ಮಾಹಿತಿ ಪ್ರಕಾರವೇ ಮೂರೂವರೆ ವರ್ಷದಲ್ಲಿ 45 ಸಾವಿರಕ್ಕೂ ಅಧಿಕ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರಿದ್ದಾರೆ. ಮಾಹಿತಿ ಸಿಗದೆ ಇರುವವರು ಇನ್ನೂ ಸಾವಿರಾರು ಜನ ಇದ್ದಾರೆ. ಹೆಣ್ಣು ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಸರ್ಕಾರ ಕಾನೂನು ಬಿಗಿಗೊಳಿಸುವ ಕೆಲಸ ಮಾಡಬೇಕಾಗಿದೆ.
| ಪರಶುರಾಮ, ಒಡನಾಡಿ ಸೇವಾ ಸಂಸ್ಥೆ, ಮೈಸೂರು
ಅಪ್ರಾಪ್ತ ಗರ್ಭಿಣಿಯರ ಸಮಸ್ಯೆ ಸರ್ಕಾರಕ್ಕೆ ದೊಡ್ಡ ಸವಾಲು. ಇದನ್ನು ತಡೆಯಲೇ ಬೇಕಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ಕೂಡಲೇ ಈ ಸಮಸ್ಯೆಯತ್ತ ಗಮನ ಹರಿಸುತ್ತೇವೆ. ಅಗತ್ಯ ಬಿದ್ದರೆ ಹೊಸ ಕಾನೂನು ತರುತ್ತೇವೆ. ಇದರ ಜತೆಗೆ ಮಕ್ಕಳ ಕಳ್ಳ ಸಾಗಣೆಯಲ್ಲಿ ಮೂರನೇ ಸ್ಥಾನದಲ್ಲಿರುವುದನ್ನು ಶೂನ್ಯಕ್ಕೆ ತರಬೇಕಾಗಿದೆ. ಆ ನಿಟ್ಟಿನಲ್ಲಿಯೂ ವಿವಿಧ ಇಲಾಖೆಗಳ ಜತೆ ಯೋಜನೆ ರೂಪಿಸುತ್ತೇವೆ.
| ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಕಾನೂನು ಬಿಗಿಗೊಳಿಸಲು ಚರ್ಚೆ:ಚಿಕಿತ್ಸೆಗೆ ಬರುವ ಗರ್ಭಿಣಿಯರ ಮಾಹಿತಿಯನ್ನು ಪೊಲೀಸ್ ಮತ್ತು ಮಹಿಳಾ ಇಲಾಖೆಗೆ ಆರೋಗ್ಯ ಇಲಾಖೆ ನೀಡುತ್ತಿದೆ. ಕಾನೂನನ್ನು ಬಿಗಿಗೊಳಿಸುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು ತಜ್ಞರು ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಜತೆ ಚರ್ಚೆ ನಡೆಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಂದಾಗಿದ್ದಾರೆ. ಕಾನೂನಿನಲ್ಲಿ ಅಪ್ರಾಪ್ತರೊಂದಿಗೆ ದೈಹಿಕ ಸಂಬಂಧ ಬೆಳೆಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲೇಬೇಕೆಂದು ನಿರ್ಧರಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದ ಮುಂದೆ ಬರುವ ಪ್ರಕರಣಗಳಲ್ಲಿ ಮಾತ್ರ ಪರಿಹಾರ ಸಿಗುತ್ತಿದೆ. ಆದರೆ, ಪ್ರಕರಣಗಳಿಗೆ ತಡೆ ಬೀಳುತ್ತಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 2 =
Remember me
