| ವಿಲಾಸ ಮೇಲಗಿರಿ ಬೆಂಗಳೂರುಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ- ಕರ್ನಾಟಕ ಪ್ರದೇಶಗಳಲ್ಲಿ ಶಾಲೆ, ಶಿಕ್ಷಕರ ಕೊರತೆ ಬಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ, ಇಲ್ಲಿನ ಜಿಲ್ಲೆಗಳಲ್ಲಿಯೇ ‘ಗಂಭೀರ ಅನಾರೋಗ್ಯ ಅಥವಾ ಅಸ್ವಸ್ಥರಾಗಿರುವ ಶಿಕ್ಷಕರ ಸಂಖ್ಯೆಯೂ ಹೆಚ್ಚು ಎಂಬುದು ಇತ್ತೀಚೆಗೆ ನಡೆದ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆ ವೇಳೆ ‘ಬಯಲಿಗೆ’ ಬಂದಿದೆ. ಕಾರಣ ವೈದ್ಯಕೀಯ ಹಾಗೂ ಅಂಗವಿಕಲ ಕೋಟಾ ದಡಿಯಲ್ಲಿ ವರ್ಗಾವಣೆ ಕೋರಿ ದವರಲ್ಲಿ ಶೇ.90 ಶಿಕ್ಷಕರು ಇಲ್ಲಿ ನವರಾಗಿದ್ದಾರೆ! ಹೌದು. ಈ ವಿಚಾರ ಇಲಾಖೆಗೂ ದಿಗ್ಭŠಮೆ ಮೂಡಿಸಿದ್ದು, ಈ ‘ಅಸ್ವಸ್ಥ’ರನ್ನು ಕಂಡುಹಿಡಿದು ಸೂಕ್ತ ‘ಚಿಕಿತ್ಸೆ’ ನೀಡಲು ಸಜ್ಜಾಗಿದೆ.
ಸರ್ಕಾರಕ್ಕೆ ಒಟ್ಟಾರೆ ವರ್ಗಾವಣೆ ಪ್ರಕ್ರಿಯೆ ಬಹುದೊಡ್ಡ ತಲೆನೋವಿನ ಸಂಗತಿ. ಆದರೆ, ಶಿಕ್ಷಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಇತ್ತೀಚಿನ ವರ್ಷಗಳಲ್ಲೇ ಅತಿಹೆಚ್ಚು ವರ್ಗಾವಣೆ ಈ ಬಾರಿ ನಡೆದಿವೆ. ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ, ತಾಂತ್ರಿಕ ಸಹಾಯಕ ಶಿಕ್ಷಕರು/ಅಧಿಕಾರಿಗಳು, ಸಾಮಾನ್ಯ ಕೋರಿಕೆ ವರ್ಗಾವಣೆ, ಜಿಲ್ಲಾ ಹಂತ, ವಿಭಾಗೀಯ ಹಾಗೂ ಅಂತರ್ ವಿಭಾಗೀಯ ವರ್ಗಾವಣೆಗಳನ್ನು ನಡೆಸಲಾಗಿದೆ.
ಪ್ರಸ್ತುತ ಹೆಚ್ಚುವರಿ ಶಿಕ್ಷಕರು 8,020, ಕೋರಿಕೆ ಮೇರೆಗೆ 13,000, ಜಿಲ್ಲೆಯಿಂದ ಹೊರಗೆ 6,000 ಸೇರಿದಂತೆ ಅಂದಾಜು 27 ಸಾವಿರ ಶಿಕ್ಷಕರ ವರ್ಗಾವಣೆ ನಡೆದಿದೆ. ಯಾದಗಿರಿ, ರಾಯಚೂರು, ಕಲಬುರಗಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸ್ವಂತ ಜಿಲ್ಲೆ, ಇಷ್ಟಪಟ್ಟ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ.
15-20 ವರ್ಷಗಳಿಂದ ವರ್ಗಾವಣೆ ಸಿಗದವರಿಗೂ ಈ ಬಾರಿ ವರ್ಗಾವಣೆ ಭಾಗ್ಯ ಸಿಕ್ಕಿದೆ. ಇದರಿಂದ ಶಿಕ್ಷಕರಿಗೆ ಸಾಕಷ್ಟು ಅನುಕೂಲವೂ ಆಗಿದೆ. ಆದರೆ, ಇದಕ್ಕಾಗಿ ಬಹು ದೊಡ್ಡ ಗೋಲ್‍ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ವರ್ಗಾವಣೆಗೆ ಕೆಲವು ಶಿಕ್ಷಕರು ಕಳ್ಳದಾರಿ ಕಂಡುಕೊಂಡಿದ್ದಾರೆ. ಗಂಭೀರ ಅಸ್ವಸ್ಥತೆ ಕಾರಣ ನೀಡಿ ವೈದ್ಯಕೀಯ ಕೋಟಾದಡಿ ಸುಲಭವಾಗಿ ವರ್ಗಾವಣೆಗೆ ಅವಕಾಶ ಸಿಗುವ ಕಾರಣ ನೂರಾರು ಶಿಕ್ಷಕರು ನಕಲಿ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿರುವ ಆರೋಪಗಳು ಕೇಳಿಬಂದಿವೆ.
ಇನ್ನು ವಿಚಿತ್ರವೆಂದರೆ, ವೈದ್ಯಕೀಯ ಪ್ರಮಾಣಪತ್ರವನ್ನು ತ್ರಿಸದಸ್ಯ ಮಂಡಳಿ ನೀಡಬೇಕು. ತ್ರಿಸದಸ್ಯ ಮಂಡಳಿ ನೀಡಿದ ದಾಖಲೆಗಳೇ ಈಗ ನಕಲಿಯಾಗಿರುವುದು ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ.
ಪ್ರಮಾಣಪತ್ರದ ನೈಜತೆ ಶಂಕೆ:ಕೆಲ ಶಿಕ್ಷಕರು ವೈದ್ಯಕೀಯ ಮತ್ತು ಅಂಗವಿಕಲ ಪ್ರಕರಣದಡಿ ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ಸೂಕ್ತ ದಾಖಲೆ ಒದಗಿಸದೇ ಅಧಿಸೂಚನೆಯಲ್ಲಿ ನಿಗದಿಪಡಿಸಲಾಗಿರುವ ಯಾವುದೇ ಕಾಯಿಲೆ ಇಲ್ಲದೇ ಇದ್ದರೂ ತ್ರಿಸದಸ್ಯ ಮಂಡಳಿಯಿಂದ ವೈದ್ಯಕೀಯ ಪ್ರಮಾಣಪತ್ರ ಪಡೆದಿದ್ದಾರೆ. ಈ ಪ್ರಮಾಣಪತ್ರದ ನೈಜತೆ ಬಗ್ಗೆ ಮತ್ತು ಕೌನ್ಸೆಲಿಂಗ್ ಸಮಯದಲ್ಲಿ ಕಾಯಿಲೆ ಬಗ್ಗೆ ಪೂರಕ ದಾಖಲೆಗಳನ್ನು ಹಾಜರುಪಡಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮೂರು ಜಿಲ್ಲೆಗಳಲ್ಲಿ ಅತಿಹೆಚ್ಚು:ವೈದ್ಯಕೀಯ ಹಾಗೂ ಅಂಗವಿಕಲ ಪ್ರಕರಣಗಳ ಶೇ.90 ರಷ್ಟು ಶಿಕ್ಷಕರು ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯಿಂದಲೇ ವರ್ಗಾವಣೆ ಕೋರಿರುವ ವಿಚಾರದಲ್ಲಿ ಸಾಕಷ್ಟು ಅನುಮಾನ ಹಾಗೂ ದೋಷಗಳು ಮೇಲ್ನೋಟಕ್ಕೆ ಕಂಡುಬಂದಿವೆ.
ಕಲಬುರಗಿ ವಿಭಾಗದಲ್ಲಿ ಮರುಪರಿಶೀಲನೆ:ರಾಜ್ಯದ ನಾನಾ ಕಡೆಗಳಲ್ಲಿ ನಕಲಿ ಪ್ರಮಾಣಪತ್ರಗಳ ಇಂತಹ ಪ್ರಕರಣ ನಡೆದಿರುವ ಸಾಧ್ಯತೆ ಇದೆಯಾದರೂ ಮೇಲ್ನೋಟಕ್ಕೆ ಕಲಬುರಗಿ ವಿಭಾಗದಲ್ಲಿ ಹೆಚ್ಚು ಅನುಮಾನಾಸ್ಪದ ವರ್ಗಾವಣೆ ನಡೆದಿವೆ. ಹೀಗಾಗಿ ಈ ವಿಭಾಗದಲ್ಲಿ ವೈದ್ಯಕೀಯ/ ಅಂಗವಿಕಲ ಪ್ರಮಾಣಪತ್ರ ನೀಡಿ ವರ್ಗಾವಣೆಗೊಂಡಿರುವ ಪ್ರಕರಣಗಳನ್ನು ಮರುಪರಿಶೀಲನೆಗೆ ಒಳಪಡಿಸಲು ಕಲಬುರಗಿ ವಿಭಾಗದ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಕಡ್ಡಾಯ ವಿಶೇಷ ತಪಾಸಣೆ:ವೈದ್ಯಕೀಯ/ ಅಂಗವಿಕಲ ಕೋಟಾದಡಿ ವರ್ಗಾವಣೆ ಪಡೆದುಕೊಂಡಿರುವ ಶಿಕ್ಷಕರು ತ್ರಿಸದಸ್ಯ ವೈದ್ಯಕೀಯ ಮಂಡಳಿಯಿಂದ ಪಡೆದ ಮೂಲ ಪ್ರಮಾಣಪತ್ರ, ಶಿಕ್ಷಕರ ಗುರುತಿನ ಚೀಟಿ, ಅವಲಂಬಿತರ ಆಧಾರ್ ಕಾರ್ಡ್, ಕಾಯಿಲೆಗೆ ಚಿಕಿತ್ಸೆ ಪಡೆದ ಬಗ್ಗೆ ವೈದ್ಯರ ಸಲಹಾ ಚೀಟಿ, ಔಷಧ ಖರೀದಿಸಿರುವ ಬಗ್ಗೆ ವೋಚರ್ ಹಾಗೂ ಈ ಹಿಂದೆ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದಲ್ಲಿ ಆಂತಹ ಆಸ್ಪತ್ರೆಯ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತ್ರಿಸದಸ್ಯ ವೈದ್ಯಕೀಯ ಮಂಡಳಿಯ ಮುಂದೆ ಆ.23 ರಿಂದ 25ರ ಒಳಗಾಗಿ ವಿಶೇಷ ತಪಾಸಣೆಗೆ ಒಳಪಡಿಸಲು ನಿರ್ದೇಶನ ನೀಡಲಾಗಿದೆ.
ಕ್ರಿಮಿನಲ್ ಮೊಕದ್ದಮೆ ದಾಖಲು:ವೈದ್ಯಕೀಯ/ ಅಂಗವಿಕಲ ಕೋಟಾದಡಿ ವರ್ಗಾವಣೆ ಪಡೆದುಕೊಂಡಿರುವ ಶಿಕ್ಷಕರು ವೈದ್ಯಕೀಯ ತಪಾಸಣೆಗೆ ಗೈರು ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ. ವೈದ್ಯಕೀಯ ಮಂಡಳಿಯಿಂದ ಕಾಯಿಲೆ ಬಗ್ಗೆ ವ್ಯತಿರಿಕ್ತ ವರದಿ ಬಂದಲ್ಲಿ ತಕ್ಷಣ ಅಂತಹ ಶಿಕ್ಷಕರ ವರ್ಗಾವಣೆ ಆದೇಶ ರದ್ದುಪಡಿಸಲಾಗುತ್ತದೆ. ಅಷ್ಟೇ ಅಲ್ಲ, ಅಂತಹ ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಪಟ್ಟ ಉಪ ನಿರ್ದೇಶಕರು ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟ ಸೂಚನೆ ನೀಡಿ ಜ್ಞಾಪನಾ ಪತ್ರ ಹೊರಡಿಸಿದೆ.
ವೈದ್ಯಕೀಯ/ ಅಂಗವಿಕಲ ಕೋಟಾದಡಿ ವರ್ಗಾವಣೆ ಪಡೆದು ಕೊಂಡಿರುವ ಶಿಕ್ಷಕರನ್ನು ಕಡ್ಡಾಯವಾಗಿ ತ್ರಿಸದಸ್ಯ ವೈದ್ಯಕೀಯ ಮಂಡಳಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
| ವೃಷಭೇಂದ್ರಯ್ಯ ಸ್ವಾಮಿ, ರಾಯಚೂರು ಡಿಡಿಪಿಐ
ಹಿನ್ನೆಲೆ ಏನು? ಎತ್ತ?:ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮದಡಿ ಅಂತರ್ ವಿಭಾಗ ಮಟ್ಟದ ವರ್ಗಾವಣೆಗೆ ವೇಳಾಪಟ್ಟಿ ಬಿಡುಗಡೆ ಮಾಡಿ, ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ವೈದ್ಯಕೀಯ, ಅಂಗವಿಕಲ ಪ್ರಕರಣದಡಿ ನಡೆದ ವರ್ಗಾವಣೆಯಲ್ಲಿ ಗೋಲ್‍ಮಾಲ್ ನಡೆದಿದೆ. ಅನೇಕ ಶಿಕ್ಷಕರು ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಯಾವುದೇ ಕಾಯಿಲೆ ಇಲ್ಲದೇ ಇದ್ದರೂ ವೈದ್ಯಕೀಯ ತ್ರಿಸದಸ್ಯ ಮಂಡಳಿ ಪ್ರಮಾಣಪತ್ರ ನೀಡಿ ವರ್ಗಾವಣೆಯಾಗಿದ್ದಾರೆ.
ರಾಹುಲ್ ಗಾಂಧಿಗೆ ಹಾಲಿವುಡ್​​ನಿಂದ ಪ್ರಪೋಸಲ್ಸ್​ ಇವೆ, ಅವರ್ಯಾಕೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ?: ಸಾರಿಕಾ ಪಾಸ್ವಾನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
