| ಕೀರ್ತಿನಾರಾಯಣ ಸಿ. ಬೆಂಗಳೂರುಮಾಹಿತಿ ಹಕ್ಕು ಕಾರ್ಯಕರ್ತರ ವಿವರ ಸಂಗ್ರಹಕ್ಕೆ ಮುಂದಾದ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೆಲವೇ ಕೆಲವರು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಪದೇಪದೆ ಸಾವಿರಾರು ಅರ್ಜಿಗಳನ್ನು ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ಕೇವಲ 15 ವ್ಯಕ್ತಿಗಳಿಂದ ಬರೋಬ್ಬರಿ 18,134 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ! ಈ ಪೈಕಿ ಒಬ್ಬ ವ್ಯಕ್ತಿಯ 7,994 ಅರ್ಜಿಗಳಿವೆ!
ಸರ್ಕಾರದ ಯೋಜನೆ ಯಾವುದು? ಎಷ್ಟು ಖರ್ಚು ಆಗಿದೆ? ಯಾವಾಗ ಪೂರ್ಣಗೊಳ್ಳುತ್ತದೆ? ಹೀಗೆ ಪ್ರತಿಯೊಂದನ್ನು ಪ್ರಶ್ನಿಸಿ ತಿಳಿದುಕೊಳ್ಳುವ ಸೌಲಭ್ಯವನ್ನು ಮಾಹಿತಿ ಹಕ್ಕು ಕಾಯ್ದೆ-2005 ಅಸ್ತ್ರ ಜನರ ಕೈಗೆ ಸಿಕ್ಕಿದೆ. ಆದರಿದು ದುರ್ಬಳಕೆಯಾಗುತ್ತಿರುವ ಆರೋಪಕ್ಕೆ ಪುಷ್ಟಿ ಕೊಡುವಂತೆ ಕೆಲವರು ಮಾತ್ರ ಸರ್ಕಾರದ ಎಲ್ಲ ಇಲಾಖೆಗಳಿಗೂ ಆರ್​ಟಿಐನಡಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಸಂಗತಿ ಬಯಲಾಗಿದೆ. ಕರ್ನಾಟಕ ಮಾಹಿತಿ ಆಯೋಗದಲ್ಲಿ ಅಂದಾಜು 42 ಸಾವಿರ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಉಳಿದಿವೆ.
ಇದರಲ್ಲಿ 15 ಜನ ಸಲ್ಲಿಸಿರುವ 18,134 ಪ್ರಕರಣಗಳಿದ್ದು, ಈ ಪೈಕಿ 12,392 ಅರ್ಜಿಗಳು ಮೂವರಿಗೆ ಸೇರಿವೆ. ಬೆರಳೆಣಿಕೆ ವ್ಯಕ್ತಿಗಳು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿರುವುದರಿಂದಾಗಿ ಸದುದ್ದೇಶದಿಂದ ಸಾಮಾನ್ಯ ಜನರು, ರೈತರು ಸಲ್ಲಿಸಿರುವ ಒಂದೋ ಎರಡೋ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ.
ಇದೇ ಕಾರಣಕ್ಕಾಗಿ 2023 ಆ.31ರವರೆಗೆ ಮಾಹಿತಿ ಹಕ್ಕು ಆಯೋಗದಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ 300ಕ್ಕಿಂತ ಮೇಲ್ಪಟ್ಟು ಮೇಲ್ಮನವಿಗಳನ್ನು ಸಲ್ಲಿಸಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ಪ್ರತಿವಾರ ಪೂರ್ಣಪೀಠದಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಬರೀ ಮೂವರು ಸಲ್ಲಿಸಿದ್ದ 12,382 ಅರ್ಜಿಗಳನ್ನು ವಜಾಗೊಳಿಸಲಾಗಿದೆ.
ಉತ್ತರ ಕರ್ನಾಟಕ ಭಾಗದ ವ್ಯಕ್ತಿಯ 7,994, ಬೆಂಗಳೂರಿನ ವ್ಯಕ್ತಿಯ 3,579 ಹಾಗೂ ಮತ್ತೊಬ್ಬನ 809 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಉಳಿದಿದ್ದವು. ಇಷ್ಟೂ ಅರ್ಜಿಗಳನ್ನು ಪೂರ್ಣಪೀಠ ತಿರಸ್ಕರಿಸಿದೆ.
ಪಾಟೀ ಸವಾಲು ಸಂದರ್ಭದಲ್ಲಿ ಪೂರ್ಣಪೀಠ ಕೇಳಿದ ಪ್ರಶ್ನೆಗಳಿಗೆ ಅರ್ಜಿದಾರರು ಸರಿಯಾದ ಮಾಹಿತಿ ಕೊಟ್ಟಿಲ್ಲ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಬಗ್ಗೆ ದಾಖಲಾತಿಗಳನ್ನು ಪ್ರಸ್ತುತಪಡಿಸದ ಹಿನ್ನೆಲೆಯಲ್ಲಿ ಮೇಲ್ಮನವಿಗಳನ್ನು ತಿರಸ್ಕರಿಸಲಾಗಿದೆ.
ಪದೇಪದೆ ಆರ್​ಟಿಐನಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಸರ್ಕಾರದ ಎಲ್ಲ ಇಲಾಖೆಗಳಿಗೂ ಮಾಹಿತಿ ಕೇಳಿ ಸಾವಿರಾರು ಅರ್ಜಿಗಳನ್ನು ಹಾಕಿದ್ದಾರೆ. ಅದರಲ್ಲೂ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುವಂತಹ ಇಲಾಖೆಗಳಿಗೆ ಅರ್ಜಿ ಸಲ್ಲಿಕೆಯಾಗುತ್ತಿರುವುದು ಜಾಸ್ತಿ. ಲೋಕೋಪಯೋಗಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಂದಾಯ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳು, ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್​ಟಿಒ), ತಹಶೀಲ್ದಾರ್​ಗಳು, ಬಿಬಿಎಂಪಿ ಸೇರಿ ಸರ್ಕಾರಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಇಲಾಖೆಗಳನ್ನು ಟಾರ್ಗೆಟ್ ಮಾಡಿ ಅರ್ಜಿಗಳನ್ನು ಹಾಕುತ್ತಿರುವುದು ಪೂರ್ಣಪೀಠದ ವಿಚಾರಣೆ ವೇಳೆ ಗೊತ್ತಾಗಿದೆ.
ವಿಚಾರಣೆ ಸಂದರ್ಭದಲ್ಲಿ ಈ ಹಿಂದೆ ಅರ್ಜಿದಾರರೊಬ್ಬರ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಇತ್ಯರ್ಥಪಡಿಸಿರುವುದು ಪೂರ್ಣಪೀಠದ ಗಮನಕ್ಕೆ ಬಂದಿದೆ. ಈಗ ಅದೇ ವ್ಯಕ್ತಿಗೆ ಸೇರಿದ 7 ಸಾವಿರಕ್ಕೂ ಅಧಿಕ ಮೇಲ್ಮನವಿಗಳು ಬಾಕಿ ಇದೆ. ಈ ಮೊದಲು ಇತ್ಯರ್ಥವಾಗಿರುವ 3 ಸಾವಿರ ಅರ್ಜಿಗಳಿಗೆ ಸಂಬಂಧಿಸಿದಂತೆ ಈವರೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ, ಎಸಿಬಿ ಅಥವಾ ಇನ್ನಾವುದೇ ತನಿಖಾ ಸಂಸ್ಥೆಗಳಲ್ಲಿ ಎಷ್ಟು ಕೇಸ್​ಗಳನ್ನು ದಾಖಲಿಸಿದ್ದೀರಾ? ಎಷ್ಟು ಜನರಿಗೆ ಈವರೆಗೆ ಶಿಕ್ಷೆ ಕೊಡಿಸಿದ್ದೀರಾ? ಎಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಪಡಿಸಿದ್ದೀರಾ? ಎಂಬುದರ ಬಗ್ಗೆ ದಾಖಲಾತಿ ಒದಗಿಸುವಂತೆ ಪೂರ್ಣಪೀಠ ಕೇಳಿದೆ. ಆದರೆ, ಅರ್ಜಿದಾರರು ಯಾವುದೇ ದಾಖಲಾತಿಗಳನ್ನು ಒದಗಿಸಿಲ್ಲ.
2 ಕೋಟಿ ರೂ. ವಸೂಲಿ?:ಗುತ್ತಿಗೆದಾರರೊಬ್ಬರು ವರ್ಕ್ ಆರ್ಡರ್ ಇಲ್ಲದೆಯೇ 200 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ನಡೆಸಿದ್ದರು. ವರ್ಕ್ ಆರ್ಡರ್ ಪ್ರತಿ ಕೊಡುವಂತೆ ಆರ್​ಟಿಐನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ವರ್ಕ್ ಆರ್ಡರ್ ಆಗಿರಲಿಲ್ಲ. ಈಗ ಹೊರಡಿಸಿದರೆ 200 ಕೋಟಿ ರೂ. ಬಿಲ್ ಮಾಡಲಾಗಲ್ಲ. ಕೊನೆಗೆ ಗುತ್ತಿಗೆದಾರನಿಂದ 2 ಕೋಟಿ ರೂ. ಪಡೆದು ಅರ್ಜಿದಾರ ಸುಮ್ಮನಾಗಿದ್ದ ಎಂಬ ವಿಚಾರ ಅನಧಿಕೃತವಾಗಿ ಮಾಹಿತಿ ಆಯೋಗದ ಗಮನಕ್ಕೆ ಬಂದಿದೆ.
ಪ್ರತಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಇಲಾಖೆಯ ಮಾಹಿತಿ ಹಕ್ಕು ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಯನ್ನು ನೋಟಿಸ್ ಕೊಟ್ಟು ಕರೆಸಬೇಕು. ಒಬ್ಬ ವ್ಯಕ್ತಿ ಸಲ್ಲಿಸಿರುವ 7,000 ಅರ್ಜಿಗಳ ವಿಚಾರಣೆಗೆ ಸಂಬಂಧಪಟ್ಟ ಇಲಾಖೆಗಳ 14 ಸಾವಿರ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಬೇಕು. ಅಧಿಕಾರಿಗಳಿರುವುದು ಸಾರ್ವಜನಿಕರ ಸೇವೆಗೆ. ಆರ್​ಟಿಐ ಅರ್ಜಿಗಳ ವಿಚಾರಣೆಗೆ ಬಂದು ಕೂತರೆ ಕೆಲಸ ಮಾಡುವುದು ಯಾವಾಗ. ದಿನಕ್ಕೆ 25 ಅರ್ಜಿಗಳ ವಿಚಾರಣೆ ನಡೆಸಬಹುದು. ಇರುವುದು 4 ಕೋರ್ಟ್, ಒಬ್ಬ ವ್ಯಕ್ತಿಯ ಅರ್ಜಿಗಳನ್ನು ವಿಚಾರಣೆ ಮಾಡುತ್ತಿದ್ದರೆ 42 ಸಾವಿರ ಅರ್ಜಿಗಳ ವಿಲೇವಾರಿಯಾಗುವುದು ಯಾವಾಗ?
ಬೆಂಗಳೂರು:ತ್ರೖೆಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್​ಟಿಐ ಅಡಿ ಅರ್ಜಿ ಸಲ್ಲಿಸುವವರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದ ಸರ್ಕಾರ ತೀವ್ರ ಆಕ್ಷೇಪದ ನಡುವೆ ತನ್ನ ತೀರ್ವನದಿಂದ ಹಿಂದೆ ಸರಿದಿದೆ. ಸೆ.6ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಲ್ಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕಳಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಆರ್​ಟಿಐ ಅರ್ಜಿದಾರರ ಮಾಹಿತಿ ಕಳಿಸುವಂತೆ ಸೂಚಿಸಿತ್ತು. ಇದನ್ನು ವಿರೋಧಿಸಿ ಆರ್​ಟಿಐ ಕಾರ್ಯಕರ್ತರು ಅ.6ರಂದು ಮಾಹಿತಿ ಆಯೋಗದ ಎದುರು ಹೋರಾಟ ನಡೆಸಲು ಸಿದ್ಧವಾಗಿದ್ದರು. ಜತೆಗೆ ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೂ ಪ್ರಯತ್ನ ನಡೆಸಿದ್ದರು. ಇಷ್ಟೆಲ್ಲ ಬೆಳವಣಿಗೆ ನಡುವೆ ಎಚ್ಚೆತ್ತ ಸರ್ಕಾರ, ಮಾಹಿತಿ ಕಲೆ ಹಾಕುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಜತೆಗೆ, ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಹಕ್ಕು ಕೇಳಿರುವ ಅರ್ಜಿದಾರರ ಬಗ್ಗೆ ಬೇರೆ ಯಾರೂ ಮಾಹಿತಿ ಪಡೆಯಲು ಅವಕಾಶ ಇಲ್ಲದಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.
ರಾಜಧಾನಿಯಲ್ಲಿ ಬಸ್​ ನಿಲ್ದಾಣಗಳೇ ನಾಪತ್ತೆ!; ಒಂದು ತಿಂಗಳ ಬಳಿಕ ದೂರು ದಾಖಲು!

ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − thirteen =
Remember me
