ಹೊನ್ನಾಳಿ:ನಾಲ್ಕು ದಿನದ ಹಿಂದೆ ನಾಪತ್ತೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್​ ಇಂದು(ಗುರುವಾರ) ಸಂಜೆ ತುಂಗಾ ಮೇಲ್ದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಅಪಘಾತವೋ, ಕೊಲೆಯೋ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಅ.30ರ ರಾತ್ರಿಯಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್​ಗಾಗಿ ಕುಟುಂಬಸ್ಥರು ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಕ್ಷಣಕ್ಷಣಕ್ಕೂ ಈ ಪ್ರಕರಣ ತಿರುವು ಪಡೆದುಕೊಳ್ಳುತ್ತಲೇ ಇತ್ತು. ಅ.30ರ ರಾತ್ರಿ 11.36ರ ವೇಳೆಗೆ ನ್ಯಾಮತಿ-ಸುರಹೊನ್ನೆ ಸಮೀಪ ಚಂದ್ರಶೇಖರ್​ರ ಮೊಬೈಲ್ ಲೊಕೇಷನ್ ಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿತ್ತು. ಇಂದು ನ್ಯಾಮತಿ ಮತ್ತು ಹೊನ್ನಾಳಿ ಮಧ್ಯೆ ಇರುವ ತುಂಗಾ ಮೇಲ್ಡಂಡೆ ನಾಲೆಯ ನೀರಲ್ಲಿ ಚಂದ್ರಶೇಖರ್​ರ ಕಾರು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ನಾಲೆಯಿಂದ ಕಾರನ್ನು ಹೊರತೆಗೆದಿದ್ದು, ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್​ರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರು ನಜ್ಜುಗುಜ್ಜಾಗಿರುವುದನ್ನು ನೋಡಿದರೆ ಮೇಲ್ನೋಟಕ್ಕೆ ಅಪಘಾತವಾಗಿ ಸೇತುವೆ ಮೇಲಿಂದ ಕಾರು ನಾಲೆಗೆ ಬಿದ್ದಿರಬಹುದು ಅನ್ನಿಸುತ್ತಿದೆ. ಆದರೆ ಚಂದ್ರಶೇಖರ್​ರ ಶವ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಯಾರೋ ಕೊಲೆ ಮಾಡಿ ಹಿಂಬದಿ ಸೀಟಿನಲ್ಲಿ ಹಾಕಿ ಕಾರನ್ನು ನಾಲೆಗೆ ಜೋರಾಗಿ ತಳ್ಳಿರುವ ಸಾಧ್ಯತೆಯೂ ಇದೆ‌. ಚಂದ್ರು ಅವರೇ ಕಾರು ಚಲಾಯಿಸುತ್ತಿದ್ದರೆ ಶವ ಚಾಲಕನ ಸೀಟಿನಲ್ಲೇ ಇರಬೇಕಿತ್ತು, ಹಿಂಬದಿ ಸೀಟಿಗೆ ಹೇಗೆ ಬಂತು? ಎಂಬ ಪ್ರಶ್ನೆಯೂ ಎದ್ದಿದೆ. ಕಾರು ನಾಲೆಗೆ ಬಿದ್ದು 4 ದಿನ ಆಗಿರುವುದರಿಂದ ಶವ ಕೊಳೆತು ಹಿಂಭಾಗದ ಸೀಟಿಗೆ ಹೋಗಿರುವ ಸಾಧ್ಯತೆಯೂ ಇದೆ.
ಇನ್ನು ಚಂದ್ರಶೇಖರ್​ ನಾಪತ್ತೆಗೂ ಮುನ್ನ ಗೌರಿಗದ್ದೆಯ ಆಶ್ರಮಕ್ಕೆ ಭೇಟಿ ನೀಡಿದ್ದರು. ಗೌರಿಗದ್ದೆಯಿಂದ ಶಿವಮೊಗ್ಗಕ್ಕೆ ಬಂದ ಬಳಿಕ ಹೊನ್ನಾಳಿ ಕಡೆಗೆ ಹೊರಟ ಚಂದ್ರಶೇಖರ್​ ಅವರ ಕ್ರೆಟಾ ಕಾರನ್ನು ಸ್ವಿಪ್ಟ್ ಡಿಸೈರ್ ಕಾರೊಂದು ಹಿಂಬಾಲಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಆ ಕಾರಿಗೂ ಈ ಪ್ರಕರಣಕ್ಕೂ ಲಿಂಕ್ ಇದೆಯೇ ಎಂದೂ ಪರಿಶೀಲಿಸಲಾಗುತ್ತಿದೆ.
ಗೌರಿಗದ್ದೆಗೆ ಹೋಗಿದ್ದ ಗ್ರೇ ಕಲರ್ ಕಾರು ಯಾರದ್ದು?:ಗೌರಿಗದ್ದೆಯ ವಿನಯ್​ ಗುರೂಜಿ ಆಶ್ರಮಕ್ಕೆಂದು ಹೊನ್ನಾಳಿಯಿಂದ ಬಿಳಿ ಬಣ್ಣದ ಕ್ರೆಟಾ ಕಾರಿನಲ್ಲಿ ಹೊರಟ ಚಂದ್ರಶೇಖರ್, ಶಿವಮೊಗ್ಗದಲ್ಲಿ ಕೆಲ ಸ್ನೇಹಿತರೊಂದಿಗೆ ಜತೆಯಾಗಿ ಗುರೂಜಿ ಅವರನ್ನ ಭೇಟಿಯಾಗಲು ತೆರಳಿದ್ದರು. ಆದರೆ ಗೌರಿಗದ್ದೆಗೆ ತಲುಪಿದ್ದು ಚಂದ್ರು ಅವರ ಬಿಳ್ಳಿ ಬಣ್ಣದ ಕಾರಲ್ಲ, ಬದಲಾಗಿ ಗ್ರೇ ಬಣ್ಣದ ಕಾರು! ಇದನ್ನು ವಿನಯ್ ಗುರೂಜಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ರೇಣುಕಾಚಾರ್ಯ ಅವರು ಮಾಹಿತಿ ನೀಡಿದ್ದರು.
ಮೃತದೇಹ ಪತ್ತೆಗೂ ಮುನ್ನ ಅಂದರೆ ಗುರುವಾರ ಮಧ್ಯಾಹ್ನ ಮಾಧ್ಯಮಗಳ ಜತೆ ಮಾತನಾಡಿದ್ದ ಶಾಸಕ ರೇಣುಕಾಚಾರ್ಯ, ಚಂದ್ರು ಅವರನ್ನು ಯಾರೋ ಅಪಹರಣ ಮಾಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಪಹರಣ ಮಾಡಿದವರು ಏನಾದರೂ ಡಿಮಾಂಡ್ ಮಾಡಿದರೆ ಬೇಷರತ್ತಾಗಿ ಬೇಡಿಕೆ ಈಡೇರಿಸಲು ಸಿದ್ಧನಿದ್ದೇನೆ.
ಪೊಲೀಸರಿಗೂ ದೂರು ಕೊಡಲ್ಲ. ಯಾರಾದರೂ ಹುಡುಕಿ ಕೊಟ್ಟರೆ ಅವರಿಗೆ ಸೂಕ್ತ ಬಹುಮಾನ ಕೊಡುವೆ ಎಂದೂ ಘೋಷಿಸಿದ್ದರು. ಇದೀಗ ಚಂದ್ರು ಬದುಕಿಲ್ಲ ಎಂಬ ಸುದ್ದಿ ಆಘಾತ ನೀಡಿದೆ.
ರೇಣುಕಾಚಾರ್ಯರ ತಮ್ಮನ ಮಗ ಶವವಾಗಿ ಪತ್ತೆ! ತುಂಗಾ ನಾಲೆಯಲ್ಲಿ ಸಿಕ್ಕ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿತ್ತು ಮೃತದೇಹ

ಗೋಗರೆದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ… ರಾತ್ರಿಯಿಡೀ ನೋವಿಂದ ನರಳಿದ ಗರ್ಭಿಣಿ ದುರಂತ ಸಾವು! ಜನಿಸಿದ ಅವಳಿ ಮಕ್ಕಳೂ ಬದುಕಲಿಲ್ಲ

ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 19 =
Remember me
