ದಾವಣಗೆರೆ:ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್​ರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ಹಲವರು ಆಗಮಿಸಿದ್ದಾರೆ. ಈ ವೇಳೆ ಬಿಕ್ಕಿ ಬಿಕ್ಕಿ ಅತ್ತ ರೇಣುಕಾಚಾರ್ಯ, ‘ಸರ್ ನನ್ನ ಮಕ್ಕಳೆಲ್ಲಾ ಚಂದ್ರು ಬರ್ತಾನೆ ಅಂತಾರೆ ಸರ್. ಸಾವು ನನಗೆ ಬರಬೇಕಿತ್ತು, ನನ್ನ ಮಗನಿಗೆ ಬರಬಾರದಿತ್ತು… ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ರೇಣುಕಾಚಾರ್ಯರ ಹೆಗಲ ಮೇಲೆ ಕೈಹಾಕಿದ ಯಡಿಯೂರಪ್ಪ ಧೈರ್ಯ ತುಂಬಿದರು.
ಅತ್ತ ಚಂದ್ರಶೇಖರ್​ರ ಸಹೋದರ-ಸಹೋದರಿಯರು, ಪಾಲಕರ ಗೋಳಾಟವನ್ನೂ ನೊಡಲಾಗ್ತಿಲ್ಲ. ‘ಚಂದ್ರು ಯಾವಾಗ್ಲೂ ಡಿಫ್ರೆಂಟ್ ಆಗಿ ಯೋಚ್ನೆ ಮಾಡ್ತಿದ್ದ. ನಾವು ಯಾವಾಗ್ಲಾದ್ರು ತಪ್ಪು ಮಾಡಿದ್ರೆ ಅದನ್ನ ತಿದ್ದಿ ನಮ್ಗೆ ಬುದ್ಧಿ ಹೇಳ್ತಿದ್ದ. ಇವಾಗ ಅವನು ನಮ್ಮ ಜೊತೆ ಇಲ್ಲ ಅಂತ ನಂಬೋಕೇ ಆಗ್ತಿಲ್ಲ. ಅವನು ಮೊನ್ನೆ ಕಾಣೆಯಾದಾಗಲೂ ಮನೆಗೆ ಬಂದೇ ಬರ್ತಾನೆ ಅಂದುಕೊಂಡಿದ್ವಿ. ನಾಲ್ಕೈದು ದಿನ ಏನ್ ಮಾಡ್ದ? ಎಲ್ಲಿ ಮಲಗಿದ್ದ? ಎಲ್ಲೆಲ್ಲಿ ಓಡಾಡಿದ್ದ? ಇವನ್ನೆಲ್ಲಾ ಬಂದು ಹೇಳ್ತಾನೆ ಅಂದುಕೊಂಡಿದ್ವಿ. ಆದ್ರೆ ಅವನನ್ನ ಈ ರೀತಿಯಾಗಿ ನಾವು ನೋಡ್ತೀವಿ ಅಂದು ಕೊಂಡಿರಲಿಲ್ಲ. ಚಂದ್ರು ಅಣ್ಣಗೆ ಟ್ರಿಪ್ ಹೋಗೋದು ಅಂದ್ರೆ ತುಂಬಾ ಇಷ್ಟ. ನಮ್ಮ ಜೊತೆಯಲ್ಲಿ ತಲೆಹರಟೆ ಮಾಡ್ಕೊಂಡು ಇರ್ತಿದ್ದ…’ ಎನ್ನುತ್ತಾ ಚಂದ್ರವಿನ ಸಹೋದರ-ಸಹೋದರಿಯರು ಅಳುತ್ತಿದ್ದಾರೆ. ಚಂದ್ರಶೇಖರ್​ರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿದೆ. ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಅ.30ರ ರಾತ್ರಿ ನಾಪತ್ತೆಯಾಗಿದ್ದ ಚಂದ್ರಶೇಖರ್​ ಹೊನ್ನಾಳಿ-ನ್ಯಾಮತಿ ರಸ್ತೆಯ ತುಂಗಾ ಮೇಲ್ದಂಡೆ ನಾಲೆಯಲ್ಲಿ ಗುರುವಾರ ಸಂಜೆ ಶವವಾಗಿ ಪತ್ತೆಯಾಗಿದ್ದರು. ನಾಲೆ ಸೇತುವೆ ಮೇಲೆ ಕಾರಿನ ಬಿಡಿ ಭಾಗಗಳು ಕಾಣಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಾಗ ಚಂದ್ರಶೇಖರ್​ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಿಂದ 30 ಅಡಿ ಆಳದ ನಾಲೆಗೆ ಬಿದ್ದಿರುವುದು ಪತ್ತೆಯಾಗಿತ್ತು. ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಕ್ರೇನ್​ ಮೂಲಕ ಕಾರನ್ನು ಮೇಲೆತ್ತಿದ್ದು ಕೊಳೆತ ಸ್ಥಿತಿಯಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಚಂದ್ರಶೇಖರ್​ ಮೃತದೇಹ ಪತ್ತೆಯಾಗಿತ್ತು.
ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಶುಕ್ರವಾರ(ಇಂದು) ಮಧ್ಯಾಹ್ನ 3ಕ್ಕೆ ಹೊನ್ನಾಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಕೊಲೆ ಕೇಸ್​ ದಾಖಲು:ಚಂದ್ರಶೇಖರ್​ ಅವರದು ಆಕಸ್ಮಿಕ ಸಾವಲ್ಲ. ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿ ರೇಣುಕಾಚಾರ್ಯ ಕುಟುಂಬಸ್ಥರು ಹೊನ್ನಾಳಿ ಪೊಲೀಸ್​ ಠಾಣೆಗೆ ಗುರುವಾರ ರಾತ್ರಿ ದೂರು ನೀಡಿದ್ದಾರೆ.
ಮನೆಯಿಂದ 3 ಕಿ.ಮೀ. ದೂರ:ರೇಣುಕಾಚಾರ್ಯ ಅವರ ಮನೆಯಿಂದ ಮೂರು ಕಿಲೋ ಮೀಟರ್​ ದೂರದ ಹೊನ್ನಾಳಿ-ನ್ಯಾಮತಿ ರಸ್ತೆಯ ಎಚ್​. ಕಡದಕಟ್ಟೆ ಸಮೀಪದ ನಾಲೆಯಲ್ಲಿ ಬಿಳಿ ಬಣ್ಣದ ಕ್ರೇಟಾ ಕಾರು ಬಿದ್ದಿದ್ದು ಅಪಘಾತದ ಶಂಕೆ ವ್ಯಕ್ತವಾಗಿದೆ.
ಆರು ಜನರು ವಶಕ್ಕೆ:ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಕಿರಣ್​ ಸೇರಿ ಆರು ಜನರನ್ನು ಪೊಲೀಸರು ಈಗಾಗಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾವಿನ ಸುತ್ತ ಅನುಮಾನದ ಹುತ್ತ:ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಿದ್ದು, ಆಕಸ್ಮಿಕ ಅಪಘಾತವೋ, ಆತ್ಮಹತ್ಯೆಯೋ, ಕೊಲೆಯೋ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ. ಚಂದ್ರಶೇಖರ್​ ಕಾರು ಚಲಾಯಿಸುತ್ತಿದ್ದರು ಎನ್ನುವುದಾದರೆ, ಅವರ ಮೃತದೇಹ ಹಿಂಬದಿ ಸೀಟಿಗೆ ಹೇಗೆ ಬಂದಿತು ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಕಾರಿನ ಏರ್​ ಬ್ಯಾಗ್​ ಓಪನ್​ ಆಗಿತ್ತು. ಸೀಟು ಬೆಲ್ಟ್​ ಹಾಕಿದ್ದರೆ ಮಾತ್ರ ಓಪನ್​ ಆಗಲು ಸಾಧ್ಯ. ಬೆಲ್ಟ್​ ಹಾಕಿದ್ದರೆ ಶವ ಹಿಂದೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿದೆ. ಪೊಲೀಸರು ಈ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ ಗೌರಿಗದ್ದೆಗೆ ಹೋಗಿ ಶಿವಮೊಗ್ಗಕ್ಕೆ ಬಂದು ಸ್ನೇಹಿತರನ್ನಿಳಿಸಿದ ಚಂದ್ರು ಅವರ ಕ್ರೆಟಾ ಕಾರನ್ನು ಸ್ವಿಪ್ಟ್​ ಡಿಸೈರ್​ ಕಾರೊಂದು ಹಿಂಬಾಲಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದಾಗಿ ಶಾಸಕರು ಹೇಳಿದ್ದು ಆ ಕಾರಿಗೂ ಈ ಪ್ರಕರಣಕ್ಕೂ ಲಿಂಕ್​ ಇದೆಯೇ ಎಂದೂ ಪರಿಶೀಲಿಸಲಾಗುತ್ತಿದೆ. ಭಾನುವಾರ ರಾತ್ರಿ 11.36ರ ವೇಳೆ ನ್ಯಾಮತಿ-ಸುರಹೊನ್ನೆ ಸಮೀಪ ಚಂದ್ರು ಅವರ ಮೊಬೈಲ್​ ಲೋಕೇಷನ್​ ಪತ್ತೆಯಾಗಿತ್ತು. ಬಳಿಕ ಸೋಮವಾರ ಬೆಳಗ್ಗೆ 6.28ರ ವೇಳೆ ಸ್ವಿಚ್ಡ್​ ಆಫ್​ ಆಗಿತ್ತು.
ರೇಣುಕಾಚಾರ್ಯರ ತಮ್ಮನ ಪುತ್ರ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ… ಕಾರಿನ ಹಿಂಬದಿ ಸೀಟಿನ ರಹಸ್ಯ ಏನು?

ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಪೊಲೀಸ್​ ಕಾನ್​ಸ್ಟೆಬಲ್​ ನೇಮಕಾತಿ: ವಯೋಮಿತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
