|ಅಶೋಕ ಶೆಟ್ಟರಬಾಗಲಕೋಟೆ
ವಾಯವ್ಯ ಶಿಕ್ಷಕರ ಕ್ಷೇತ್ರ ಯಾವ ವಿಧಾನಸಭೆ ಚುನಾವಣೆಗೂ ಕಡಿಮೆ ಇಲ್ಲ ಎನ್ನುವಂತೆ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದೆ. ವಿಜಯದ ನಗೆ ಬೀರಲು ಕೈ-ಕಮಲ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ತಾವೇನು ಕಡಿಮೆ ಎನ್ನುವಂತೆ ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಅಖಾಡಕ್ಕೆ ರಂಗು ತಂದಿದ್ದಾರೆ. ಹೀಗಾಗಿ ಮುಂಗಾರಿನ ರೋಹಿಣಿ ಮಳೆ ಅಬ್ಬರಿಸಿ ವಾತಾವರಣ ತಂಪುಗೊಳಿಸಿದ್ದರೂ ಪರಿಷತ್ ಚುನಾವಣೆ ಕಾವು ಮಾತ್ರ ರಾಜಕೀಯ ಪಕ್ಷಗಳಲ್ಲಿ ಬೆವರು ತರಿಸುತ್ತಿದೆ. ವಾಯವ್ಯ ಶಿಕ್ಷಕರ ಕ್ಷೇತ್ರವನ್ನು ಕಳೆದ ಎರಡು ಚುನಾವಣೆಯಲ್ಲಿ ಸುಲಭವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿಗೆ ಈ ಸಲ ಗೆಲುವು ಅಷ್ಟು ಸರಳವಾಗಿಲ್ಲ ಎನ್ನುವ ಅರಿವು ಬಂದಂತಾಗಿದೆ. ಹೀಗಾಗಿ ಪ್ರಚಾರ ಕಣಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯ ಮತ್ತು ಕೇಂದ್ರ ಸಚಿವರು, ಘಟಾನುಘಟಿಗಳು ಪ್ರವೇಶ ಮಾಡಿದ್ದಾಗಿದೆ. ಶತಾಯಗತಾಯ ಹ್ಯಾಟ್ರಿಕ್ ಬಾರಿಸಲೇಬೇಕೆಂದು ನಾನಾ ರಣತಂತ್ರಗಳನ್ನು ಹೆಣೆಯುತ್ತಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಇತ್ತ ಕಾಂಗ್ರೆಸ್ ಸಹ ಹಣಬಲ, ಜಾತಿಬಲ, ಅನುಭವ ಬಲ ಹೀಗೆ ಎಲ್ಲ ಬಲವುಳ್ಳ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಸ್ಪರ್ಧೆ ತೀವ್ರಗೊಳ್ಳುವಂತೆ ಮಾಡಿದೆ. ಹಳೇ ಹುಲಿಯನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಮಾಜಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಪ್ರಭಾವಿಗಳು ರಂಗ ಪ್ರವೇಶ ಮಾಡಿದ್ದಾಗಿದೆ. ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಜೆಡಿಎಸ್ ಸಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಬ್ಬರದ ಪ್ರಚಾರ ನಡೆಸಿ ಹೋಗಿದ್ದಾರೆ. ಕಾಂಗ್ರೆಸ್​ನ ಟಿಕೆಟ್ ವಂಚಿತ ಎನ್.ಬಿ. ಬನ್ನೂರ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ತಮ್ಮ ಶಕ್ತ್ಯಾನುಸಾರ ಮತಬೇಟೆಗೆ ಇಳಿದಿದ್ದು, ವಿಜಯಮಾಲೆ ಸದ್ಯಕ್ಕಂತೂ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ನೆತ್ತಿಯ ಮೇಲೆ ತೂಗಾಡುತ್ತಿದೆ.
ಹಳೇ ಹುಲಿ ಅಖಾಡಕ್ಕಿಳಿಸಿದ ಕೈ:ಶತಾಯಗತಾಯ ಕ್ಷೇತ್ರ ಗೆಲ್ಲಬೇಕು ಎಂದು ಕಾಂಗ್ರೆಸ್ ಸಾಕಷ್ಟು ಅಳೆದು ತೂಗಿ ಎಲ್ಲ ಬಲವುಳ್ಳ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ಕಣಕ್ಕೆ ಇಳಿಸಿದೆ. ಶಾಸಕ, ಸಂಸದ, ಸಚಿವರಾಗಿ ಅನುಭವ ಇರುವ ಪ್ರಕಾಶ ಅವರಿಗೆ ಶಿಕ್ಷಕರ ಕ್ಷೇತ್ರ ಯಾಕೆ ಎನ್ನುವ ಪ್ರಶ್ನೆಯೂ ಇದೆ. ಜೊತೆಗೆ ವಯಸ್ಸು 77 ಎನ್ನುವುದು ಮೈನಸ್ ಪಾಯಿಂಟ್. ಆದರೆ ಚುನಾವಣೆ ಗೆಲ್ಲುವ ಪಟ್ಟುಗಳನ್ನು ಬಲ್ಲವರಾಗಿದ್ದು ಹಾಗೂ ಒಟ್ಟು ಮತದಾರರಲ್ಲಿ ಬೆಳಗಾವಿ ಜಿಲ್ಲೆಯ ಮತದಾರರ ಸಂಖ್ಯೆ ಹೆಚ್ಚಿರುವುದು ಅವರಿಗೆ ಪ್ಲಸ್ ಪಾಯಿಂಟ್. ಸದ್ಯಕ್ಕಂತೂ 47 ವರ್ಸಸ್ 77ರ ಚುನಾವಣಾ ಕಾದಾಟ ಜೋರಾಗಿದೆ.
ಫಲಿತಾಂಶ ನಿರ್ಧರಿಸುವ ಸಂಸ್ಥೆಗಳು:ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡಿರುವ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 25,388 ಮತದಾರರು ಇದ್ದಾರೆ. ಮೂರು ಜಿಲ್ಲೆಗಳಲ್ಲಿ ಇರುವ ಮೂರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಯಾವ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತವಾಗುತ್ತದೆ ಅವರು ಗೆಲ್ಲುವ ಸಾಧ್ಯತೆ ಹೆಚ್ಚು. ಬೆಳಗಾವಿಯ ಡಾ. ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರಾಗಿರುವ ಕೆಎಲ್​ಇ ಸಂಸ್ಥೆ, ವಿಜಯ ಪುರದ ಎಂ.ಬಿ.ಪಾಟೀಲ ನೇತೃತ್ವದ ಬಿಎಲ್​ಡಿ ಸಂಸ್ಥೆ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಕಾರ್ಯಾ ಧ್ಯಕ್ಷರಾಗಿರುವ ಬಿವಿವಿ ಸಂಘ ಪ್ರಮುಖ ಸಂಸ್ಥೆಗಳು ಆಗಿವೆ.
ಜಾತಿ ಲೆಕ್ಕಾಚಾರ ಬಲು ಜೋರು:ಇನ್ನು ಬುದ್ದಿವಂತರ ಕ್ಷೇತ್ರ ಎನ್ನಿಸಿ ಕೊಂಡಿದ್ದರೂ ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಜಾತಿ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಕೈ-ಕಮಲ ಅಭ್ಯರ್ಥಿಗಳು ಇಬ್ಬರೂ ಲಿಂಗಾ ಯತರೇ ಇದ್ದರೂ ಒಳಪಂಗಡ ರಾಜಕಾರಣ ನುಸುಳಿದೆ. ಪಕ್ಷೇತರ ಅಭ್ಯರ್ಥಿಗಳಿಗೂ ಜಾತಿ ಮತಗಳ ಕೂಡಿಸುವ, ಕಳೆಯುವ ಲೆಕ್ಕ ನಡೆದಿದೆ. ಇದರ ಜೊತೆಗೆ ಹಣದ ಹರಿವು ಕಡಿಮೆಯೇನಿಲ್ಲ.
ಹ್ಯಾಟ್ರಿಕ್​ಗೆ ಶಹಾಪುರ ಬೆವರು:ಬಿಜೆಪಿಯ ಅರುಣ ಶಹಾಪುರ 2010 ಮತ್ತು 2016ರಲ್ಲಿ ಸರಳವಾಗಿ ಗೆಲುವಿನ ದಡ ತಲುಪಿದ್ದರು. ಆ ಮೂಲಕ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜೃಂಭಿಸಿತ್ತು. ಮೂರನೇ ಅವಧಿಗೂ ಪಕ್ಷ ಶಹಾಪುರಗೆ ಮಣೆ ಹಾಕಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಇದೆ. ಎರಡೂ ಸಲ ಪ್ರಥಮ ಪ್ರಾಶಸ್ತಯ ಮತಗಳ ಮೇಲೆ ವಿಜಯದುಂದುಭಿ ಮೊಳಗಿಸಿದ್ದ ಅವರಿಗೆ ಈ ಸಲ ಚುನಾವಣೆಯೂ ಸುಲಿದ ಬಾಳೆಹಣ್ಣಿನಂತೆ ಇಲ್ಲವಾಗಿದೆ. ಈಗಾಗಲೆ ಎರಡು ಸಲ ಗೆದ್ದಿರುವ ಅರುಣಗೆ ವಯಸ್ಸು ಇನ್ನೂ 47 ಎನ್ನುವುದು ಪ್ಲಸ್ ಪಾಯಿಂಟ್ ಆದರೂ ಹಿಂದಿನ ಅವಧಿಯಲ್ಲಿ ಶಿಕ್ಷಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗಿಲ್ಲ ಎನ್ನುವ ಬೇಸರ ವ್ಯಕ್ತವಾಗುತ್ತಿದೆ.
ಸೋಲಿನ ಸರಪಳಿ ಕಳಚುತ್ತ?:ಕಳೆದ ಸಲ ಕಾಂಗ್ರೆಸ್ ಟಿಕೆಟ್ ಪಡೆದು ಎರಡನೇ ಸ್ಥಾನದಲ್ಲಿ ಇದ್ದ ಎನ್.ಬಿ. ಬನ್ನೂರಗೆ ಸಿದ್ದರಾಮಯ್ಯ ಬೆಂಬಲ ಇದ್ದಾಗ್ಯೂ ಈ ಸಲ ಟಿಕೆಟ್ ಕೈ ತಪ್ಪಿದೆ. ಇದರಿಂದ ಬಂಡಾಯ ಬಾವುಟ ಹಾರಿಸಿರುವ ಬನ್ನೂರ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. 2004ರಲ್ಲಿ ಪದವೀಧರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ, 2010ರಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಸ್ವತಂತ್ರ ಹಾಗೂ 2016ರಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಈವರೆಗೂ ಗೆಲುವು ಮರೀಚಿಕೆ ಆಗಿದೆ. ಹೀಗಾಗಿ ಈ ಸಲ ಶಿಕ್ಷಕರು ತಮ್ಮ ಮೇಲೆ ಅನುಕಂಪದ ನೋಟ ಬೀರಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಅಲ್ಲದೇ ಕಣದಲ್ಲಿ ಇರುವ ಎಲ್ಲ ಅಭ್ಯರ್ಥಿಗಳ ಪೈಕಿ ಶಿಕ್ಷಕರ ಜೊತೆ ಹೆಚ್ಚು ಒಡನಾಟ ಇರುವ ಅಭ್ಯರ್ಥಿ ಎನ್ನುವ ಹೆಗ್ಗಳಿಕೆ.
ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆ:ವಾಯವ್ಯ ಕ್ಷೇತ್ರದಲ್ಲಿ ಜೆಡಿಎಸ್ ಬಲಾಢ್ಯವಾಗಿಲ್ಲ. ಇದ್ದಿದ್ದರಲ್ಲೆ ವಿಜಯಪುರ ಜಿಲ್ಲೆಯಲ್ಲಿ ಶಾಸಕರನ್ನು ಒಳಗೊಂಡಿದೆ. ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯುವ ಪ್ರಯತ್ನದಲ್ಲಿದೆ. ಹೀಗಾಗಿ ಈ ಸಲ ಶಿಕ್ಷಕರ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಗಿಟ್ಟಿಸಬೇಕು ಎನ್ನುವ ಕಾರಣಕ್ಕೆ ಪ್ರಬಲ ಪ್ರಚಾರ ಕೈಗೊಂಡಿದೆ. ಚಂದ್ರಶೇಖರ ಲೋಣಿ ಅವರನ್ನು ಅಭ್ಯರ್ಥಿ ಮಾಡಿದ್ದು, ಎಚ್​ಡಿಕೆ ಮೂರು ಜಿಲ್ಲೆಗಳಲ್ಲಿ ಅಬ್ಬರ ಪ್ರಚಾರ ನಡೆಸಿ ಹೋಗಿದ್ದಾರೆ. ಹಾಗೆಯೇ ಬಾಗಲಕೋಟೆ ಬಿವಿವಿ ಸಂಘದ ನಿವೃತ್ತ ಶಿಕ್ಷಕ ಶ್ರೀನಿವಾಸಗೌಡ ಗೌಡರ ಸಹ ಪಕ್ಷೇತರ ಅಭ್ಯರ್ಥಿಯಾಗಿದ್ದು, ಮತದೋಚುವ ಸಾಧ್ಯತೆಗಳು ಇವೆ. ಹಿಂದೆ ಹಲವು ಚುನಾವಣೆಗಳಲ್ಲಿ ಸಕ್ರಿಯವಾಗಿದ್ದ ಇವರು ಇದೀಗ ತಾವೇ ಅಭ್ಯರ್ಥಿಯಾಗಿದ್ದು, ಪ್ರಚಾರ ಕಾರ್ಯ ಜೋರಾಗಿ ಕೈಗೊಂಡಿದ್ದಾರೆ.
ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
