
|ಅವಿನಾಶ್ ಜೈನಹಳ್ಳಿಮೈಸೂರು
ಭಿನ್ನಮತದ ನಡುವೆಯೂ ಜೆಡಿಎಸ್​ಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು. ಕಾಂಗ್ರೆಸ್​ಗೆ ಖಾತೆ ತೆರೆಯುವ ಕನಸು. ಶತಾಯಗತಾಯ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳಬೇಕೆಂಬುದು ಬಿಜೆಪಿ ತವಕ. ಜೂ.13ರಂದು ನಡೆಯಲಿರುವ ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಕ್ಷೇತರ ಅಭ್ಯರ್ಥಿಗಳಾದ ಪ್ರಸನ್ನ ಎನ್.ಗೌಡ ಹಾಗೂ ಎನ್.ಎಸ್.ವಿನಯ್ ಪ್ರಮುಖ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಕ್ಷೇತ್ರ ಒಳಗೊಂಡಿದೆ. 19 ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಕಳೆದ ಬಾರಿಯೂ ಸ್ಪರ್ಧಿಸಿ ಪರಾಭವಗೊಂಡಿದ್ದ ಮೈ.ವಿ.ರವಿಶಂಕರ್ ಅವರನ್ನೇ ಬಿಜೆಪಿ ಈ ಬಾರಿಯೂ ಕಣಕ್ಕಿಳಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಹೊಸ ಮುಖಗಳಿಗೆ ಮಣೆ ಹಾಕಿವೆ.
ಮರಳಿ ಪಡೆಯಲು ಬಿಜೆಪಿ ಪ್ರಯತ್ನ!:ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಮೈ.ವಿ. ರವಿಶಂಕರ್ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದ ಮಟ್ಟಿಗೆ ತನ್ನ ನೇರ ಎದುರಾಳಿಯಾಗಿರುವ ಜೆಡಿಎಸ್​ನ ಭಿನ್ನಮತೀಯ ಬಣದ ಮತಗಳು ಬೇರೆ ಪಕ್ಷದ ಅಭ್ಯರ್ಥಿಗಳ ಜತೆಗೆ, ಬಿಜೆಪಿ ಅಭ್ಯರ್ಥಿಗೂ ಸಿಗಲಿವೆ. ಈ ಮೂಲಕ ನೇರ ಪ್ರತಿಸ್ಪರ್ಧಿಯ ಮತ ಗಳಿಕೆ ಪ್ರಮಾಣ ಕಡಿಮೆಯಾದರೆ, ಗೆಲುವು ಸುಲಭವಾಗುತ್ತದೆ ಎಂಬುದು ಪಕ್ಷದ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಗಳ ಜೆಡಿಎಸ್ ಯುವ ನಾಯಕರನ್ನು ಬಿಜೆಪಿ ತನ್ನತ್ತ ಸೆಳೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಹೊಂದಿರುವ ನಾಯಕರು ಕಮಲದ ಕಡೆ ಮುಖ ಮಾಡಿರುವುದು ಬಿಜೆಪಿ ಅಭ್ಯರ್ಥಿಗೆ ಪೂರಕವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ರೈತ ಸಂಘದ ಅಭ್ಯರ್ಥಿ- ಮೂವರೂ ಮಂಡ್ಯ ಜಿಲ್ಲೆಯವರು. ಜತೆಗೆ ಒಂದೇ ಸಮá-ದಾಯದವರು. ಈ ಕಾರಣದಿಂದ ಜಿಲ್ಲೆಯ ಹಾಗೂ ಸಮá-ದಾಯದ ಮತ ಮೂವರಲ್ಲೂ ಹಂಚಿಕೆಯಾಗುವ ಸಾಧ್ಯತೆಗಳಿದ್ದು, ಬಿಜೆಪಿಗೆ ಕೊಂಚ ಮುನ್ನಡೆಯಾಗುವ ಸಾಧ್ಯತೆ ಇದೆ.
ಇನ್ನು ಬಿಜೆಪಿ ಟಿಕೆಟ್ ಸಿಗದೆ ಇದ್ದಿದ್ದರಿಂದ ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎಸ್.ವಿನಯ್ ಸ್ವತಂತ್ರವಾಗಿ ಕಣಕ್ಕಿಳಿದಿದ್ದು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವುದು ಹಾಗೂ ಬಿಜೆಪಿಯ ಕೆಲ ಶಾಸಕರು ಮತ್ತು ಮುಖಂಡರು ಅಷ್ಟಾಗಿ ಪ್ರಚಾರ ಮಾಡಿದಿರುವುದು ರವಿಶಂಕರ್​ಗೆ ಹಿನ್ನಡೆಯ ಅಂಶವಾಗಿದೆ. ರವಿಶಂಕರ್ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಸಚಿವರು ಪ್ರಮುಖ ನಾಕರು ಪ್ರಚಾರ ನಡೆಸುವ ಮೂಲಕ ಅಲೆ ಸೃಷ್ಟಿಸಿದ್ದಾರೆ.
ಅಡ್ಡಿಯಾದ ಪಕ್ಷೇತರರು!:ಪ್ರಮುಖ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ಕೆಲವು ಪಕ್ಷೇತರ ಅಭ್ಯರ್ಥಿ ಗಳು ಅಡ್ಡಗಾಲು ಹಾಕುವ ಸಾಧ್ಯತೆ ಇದೆ. ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಪ್ರಸನ್ನ ಎನ್.ಗೌಡ ಕಣಕ್ಕಿಳಿಸಿವೆ. ಎಸ್​ಡಿಪಿಐನ ರಫತ್ ಉಲ್ಲಾ ಖಾನ್, ಬಿಎಸ್​ಪಿ ಬೆಂಬಲಿತ ಅಭ್ಯರ್ಥಿ ಡಾ.ಬಿ.ಎಚ್.ಚನ್ನಕೇಶವಮೂರ್ತಿ ಕಾಂಗ್ರೆಸ್ ಮತ್ತು ಜೆಡಿಎಸ್ ವೋಟ್​ಗೆ ಕೈ ಹಾಕುವ ಸಾಧ್ಯತೆ ಇದೆ. ಎನ್.ಎಸ್.ವಿನಯ್ ಬಿಜೆಪಿಯನ್ನು ಕಂಗೆಡಿಸಿದ್ದಾರೆ. ಈ ಅಭ್ಯರ್ಥಿಗಳು ಎಷ್ಟು ಪ್ರಮಾಣದಲ್ಲಿ ಮೊದಲ ಪ್ರಾಶಸ್ಱದ ಮತ ಪಡೆಯುತ್ತಾರೆ? ಇವರ ಮೊದಲ ಪ್ರಾಶಸ್ಱದ ಮತ ಯಾರಿಗೆ, 2ನೇ ಪ್ರಾಶಸ್ಱದ ಮತವಾಗುತ್ತದೆ ಎನ್ನುವುದರ ಮೇಲೂ ಸೋಲು ಗೆಲುವು ನಿರ್ಧಾರವಾಗಲಿದೆ. ಇವರಲ್ಲದೆ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಎನ್.ವೀರಭದ್ರಸ್ವಾಮಿ, ಪಕ್ಷೇತರರಾದ ಸಿ.ಕಾವ್ಯಶ್ರೀ, ಎಂ.ಮಹೇಶ್, ಡಾ.ಜೆ.ಅರುಣಕುಮಾರ್, ಪುಟ್ಟಸ್ವಾಮಿ, ಡಾ.ಜೆ.ಸಿ.ರವೀಂದ್ರ, ಎಚ್.ಪಿ.ಸುಜಾತಾ, ಎನ್.ರಾಜೇಂದ್ರಸಿಂಗ್ ಬಾಬು, ಕೆ.ಪಿ.ಪ್ರಸನ್ನಕುಮಾರ್, ಎಸ್.ರಾಮು, ಡಾ.ಎಚ್.ಎಲ್.ವೆಂಕಟೇಶ್ ಕಣದಲ್ಲಿದ್ದಾರೆ.
ದಳಕ್ಕೆ ಭಿನ್ನಮತದ ಬಿಸಿ!:ಕ್ಷೇತ್ರದಲ್ಲಿ ಪ್ರಬಲ ನೆಲೆ ಹೊಂದಿರುವ ಜೆಡಿಎಸ್​ಗೆ ಈ ಬಾರಿ ಭಿನ್ನಮತದ ಬಿಸಿ ಜೋರಾಗಿಯೇ ತಟ್ಟಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮುಗೆ ಟಿಕೆಟ್ ನೀಡಿರುವುದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೀಲಾರ ಜಯರಾಮ್ ದಳಪತಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಮರಿತಿಬ್ಬೇಗೌಡ ಇದೇ ವಿಷಯವಾಗಿ ದಳಪತಿಗಳ ಜತೆ ಮುನಿಸಿಕೊಂಡು ಭಿನ್ನಮತ ಹೊರಹಾಕಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಆ ಪಕ್ಷದ ಕೆಲವು ಪ್ರಮುಖ ನಾಯಕರು ಚುನಾವಣಾ ಪ್ರಚಾರದಿಂದ ದೂರ ಸರಿದಿದ್ದಾರೆ. ಪ್ರಭಾವಿ ನಾಯಕ ಜಿ.ಟಿ.ದೇವೇಗೌಡ ತಟಸ್ಥರಾಗಿರುವುದು ಜೆಡಿಎಸ್​ಗೆ ನುಂಗಲಾರದ ತುತ್ತಾಗಿದೆ. ಹಾಲಿ ಎಂಎಲ್​ಸಿ ಕೆ.ಟಿ.ಶ್ರೀಕಂಠೇಗೌಡ ಎಚ್.ಕೆ.ರಾಮು ಬೆನ್ನಿಗೆ ನಿಂತಿದ್ದಾರೆ. ನಮ್ಮದು ಮುಖಂಡರ ಪಕ್ಷವಲ್ಲ, ಕಾರ್ಯಕರ್ತರು ಹಾಗೂ ಮತದಾರರ ಪಕ್ಷ. ಏನೇ ಭಿನ್ನಮತ ಇದ್ದರೂ ಕಾರ್ಯಕರ್ತರು ಮತ್ತು ಮತದಾರರು ನಮ್ಮನ್ನು ಕೈಬಿಡುವುದಿಲ್ಲ. ಇದು ಕಳೆದ ಚುನಾವಣೆಯಲ್ಲೇ ಸಾಬೀತಾಗಿದ್ದು, ಈ ಬಾರಿಯೂ ಅದು ನಿಜವಾಗಲಿದೆ ಎನ್ನುವ ನಂಬಿಕೆ ದಳಪತಿಗಳದು.
ಕಾಂಗ್ರೆಸ್ ಗೆದ್ದರೆ ಇತಿಹಾಸ:ಪದವೀಧರರ ಕ್ಷೇತ್ರದಲ್ಲಿ ಒಮ್ಮೆಯೂ ಗೆಲ್ಲದ ಕಾಂಗ್ರೆಸ್ ಈ ಬಾರಿ ವಿಜಯ ಸಾಧಿಸಲೇಬೇಕೆಂಬ ಛಲದಿಂದ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಪುತ್ರ ಮಧು ಅವರನ್ನು ಕಣಕ್ಕಿಳಿಸಿದೆ. ಮಧು ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದು, ಅವರ ಪರವಾಗಿ ನಾಲ್ಕು ಜಿಲ್ಲೆಗಳ ಹಾಲಿ, ಮಾಜಿ ಶಾಸಕರು ಕೂಡ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಧು ಗೆದ್ದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಹೆಚ್ಚಲಿದೆ. ಮರಿತಿಬ್ಬೇಗೌಡ ಮತ್ತು ತಂಡ ಮಧು ಪರ ಬ್ಯಾಟ್ ಬೀಸುತ್ತಿರುವುದು ಕಾಂಗ್ರೆಸ್​ಗೆ ಕೊಂಚ ಅನುಕೂಲ ಕಲ್ಪಿಸಿದಂತಾಗಿದೆ.

|ರಾಯಣ್ಣ ಆರ್.ಸಿ.ಬೆಳಗಾವಿ
ವಿಧಾನ ಪರಿಷತ್​ನ ಅಸಂಖ್ಯಾತ ಪದವೀಧರರ ಪರ ದನಿಯಾಗಲು ಅವಕಾಶ ಒದಗಿಸುವ ವಾಯವ್ಯ ಪದವೀಧರ ಕ್ಷೇತ್ರ(ಮೇಲ್ಮನೆ)ದ ಚುನಾವಣೆ ಕಣ ರಂಗೇರಿದೆ. ಮತದಾನಕ್ಕೆ ಕೇವಲ 2 ದಿನ ಬಾಕಿ ಉಳಿದಿದ್ದು, ತಮ್ಮ-ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷದ ರಾಜ್ಯದ ಮುಖಂಡರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನಡೆಯಲಿರುವ ಈ ಪರಿಷತ್ ಚುನಾವಣೆಗಳ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿರುವುದರಿಂದ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿರುವ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ನಡುವೆ ಸ್ಪರ್ಧೆ ಏರ್ಪಟ್ಟಿದೆ. ನಿರಾಣಿ ಹೊರತುಪಡಿಸಿ, ಕಾಂಗ್ರೆಸ್ ಅಭ್ಯರ್ಥಿ ಸಂಕ ಸೇರಿ ಕಣದಲ್ಲಿರುವ ಇನ್ನುಳಿದ 10 ಜನರು ಹೊಸಬರು.
ಕಸರತ್ತು ಬಲು ಜೋರು:ನಿರಾಣಿ ಕುಟುಂಬಕ್ಕೂ ಇದು ಪ್ರತಿಷ್ಠೆಯ ಪ್ರಶ್ನೆ ಯಾಗಿರುವುದರಿಂದ ಅವರ ತಂಡಗಳು ಮೂರೂ ಜಿಲ್ಲೆಗಳಲ್ಲಿ (ಬೆಳಗಾವಿ, ಬಾಗಲ ಕೋಟೆ, ವಿಜಯಪುರ) ಮತಗಟ್ಟೆವಾರು ಕೆಲಸ ಮಾಡುತ್ತಿವೆ. ಒಳಗೊಳಗೆ ಚುನಾವಣೆ ಕಸರತ್ತು ಬಲು ಜೋರಾಗಿ ನಡೆಯುತ್ತಿದೆ. ಆದರೆ ಹಣಮಂತ ನಿರಾಣಿ ಎದುರು ಸ್ಪರ್ಧಿಸಿರುವ ಅಥಣಿ ಮೂಲದ ನ್ಯಾಯವಾದಿ ಸುನೀಲ ಸಂಕ ಅವರಿಗೆ ಪದವೀಧರರು ಈ ಬಾರಿ ಎಷ್ಟು ಅಂಕ ನೀಡುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ಭೌಗೋಳಿಕವಾಗಿ ಅತಿ ವಿಶಾಲವಾಗಿರುವ ವಾಯವ್ಯ ಪದವೀಧರ ಕ್ಷೇತ್ರವು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ 33 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯುತ್ತಿದೆ.
ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ, ಭಾರೀ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಹೋದರ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಕೈಗಾರಿಕೆ ಸಚಿವರಾಗಿ ನಿರಾಣಿ ಅವರು ಮಾಡಿರುವ ಕಾರ್ಯಗಳು, ಹಣಮಂತ ನಿರಾಣಿ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಬಿಜೆಪಿ, ಆರ್​ಎಸ್​ಎಸ್ ಸೇರಿ ಸಂಘ ಪರಿವಾರದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಕಳೆದ 1 ತಿಂಗಳನಿಂದ ಶ್ರಮಿಸುತ್ತಿದ್ದಾರೆ.
ಕೆಎಲ್​ಇ-ಬಿಎಲ್​ಡಿ-ಬಿವಿವಿ ನಿರ್ಣಾಯಕ:ಪದವೀಧರ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಬೆಳಗಾವಿಯ ಕೆಎಲ್​ಇ ಸೊಸೈಟಿ, ವಿಜಯಪುರದ ಬಿಎಲ್​ಡಿ ಸೊಸೈಟಿ ಹಾಗೂ ಬಸವೇಶ್ವರ ವಿದ್ಯಾವರ್ಧಕ ಸಂಘಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಮೂರು ಸಂಸ್ಥೆಗಳ ಆಡಳಿತದ ಚುಕ್ಕಾಣಿ ಹಿಡಿದ ನಾಯಕರು ಕೈಗೊಳ್ಳುವ ನಿರ್ಧಾರದ ಮೇಲೆ ಗೆಲುವು ಸಾಧಿಸುವ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಉ.ಕ.ದಲ್ಲಿ ಬಿಎಸ್​ವೈ ವರ್ಚಸ್ಸು!:2016-17ನೇ ಸಾಲಿನಲ್ಲಿ ನಡೆದ ವಾಯವ್ಯ ಪದವೀಧರ ಮತಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಲಿಲ್ಲ. ಆದರೂ, ಶಿಕ್ಷಕ-ಪದವೀಧರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದರು. ಈಗಲೂ ಬಿಜೆಪಿ ಗೆಲುವಿಗೆ ಯಡಿಯೂರಪ್ಪ ವರ್ಚಸ್ಸು ನೆರವಾಗಲಿದೆ ಎನ್ನುತ್ತವೆ ಪಕ್ಷದ ಮೂಲಗಳು.
ಹಣಮಂತ ನಿರಾಣಿ ದಾಖಲೆ ಗೆಲುವು:ವಾಯವ್ಯ ಪದವೀಧರ ಮತ ಕ್ಷೇತ್ರದಿಂದ ವಿಧಾನ ಪರಿಷತ್​ಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಒಟ್ಟು 85,744 ಮತಗಳ ಪೈಕಿ 43,605 ಮತ ಪಡೆದು ಜಯಭೇರಿ ಬಾರಿಸಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬೈಲಹೊಂಗಲ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಅವರನ್ನು 20,087 ಮತಗಳ ಭಾರಿ ಅಂತರದಿಂದ ಸೋಲಿಸಿದ್ದರು. ಏಳು ಸುತ್ತಿನಲ್ಲಿ ಪ್ರಥಮ ಪ್ರಾಸ್ಱದ 37,630 ಮತ ಪಡೆದ ನಿರಾಣಿ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದರು. ಮಹಾಂತೇಶ ಕೌಜಲಗಿ 23,518, ಜೆಡಿಯುನ ಡಾ ಎಂ.ಪಿ. ನಾಡಗೌಡ 3536 ಮತ ಪಡೆದುಕೊಂಡಿದ್ದರು.
ಕಣದಲ್ಲಿರುವ ಅಭ್ಯರ್ಥಿಗಳು:ಹಣಮಂತ ರುದ್ರಪ್ಪ ನಿರಾಣಿಬಿಜೆಪಿ, ಸುನೀಲ ಅಣ್ಣಪ್ಪ ಸಂಕ-ಕಾಂಗ್ರೆಸ್, ಜೆ.ಸಿ. ಪಟೇಲ್, ಸರ್ವ ಜನತಾ ಪಾರ್ಟಿ, ಯಲ್ಲಪ್ಪ ಮ. ಕಲಕುಟ್ರಿ-ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಆದರ್ಶಕುಮಾರ ಪೂಜಾರಿ, ಘಟಿಗೇಪ್ಪ ಮಲ್ಲಪ್ಪ ಮಗದುಮ್ಮ, ದೀಪಿಕಾ ಎಸ್, ನಿಂಗಪ್ಪ ಭಜಂತ್ರಿ, ಭೀಮಸೇನ್ ಬಾಳಪ್ಪ ಬಾಗಿ, ಆರ್.ಆರ್.ಪಾಟೀಲ, ಸುಭಾಸ್ ಕೊಟೇಕಲ್.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
