ಬೆಂಗಳೂರು:ವಿವಿಧ ಸಮುದಾಯಗಳ ಮೇಲೆ ಹಿಡಿತ ಹೊಂದಿರುವ ಪ್ರಭಾವಿ ಮಠ-ಮಾನ್ಯಗಳಿಗೆ ಬಿಜೆಪಿ ವರಿಷ್ಠರ ಭೇಟಿಯ ಕಾರ್ಯಯೋಜನೆ ಸಿದ್ಧವಾಗಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷಬಾಕಿಯಿದೆ. ಆದರೂ ಪೂರ್ವಭಾವಿ ಸಿದ್ಧತೆ ನಡೆದಿದ್ದು, ಸೆಮಿಫೈನಲ್ ಎಂದೇ ಬಿಂಬಿತ ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಜ್ಜಾಗಬೇಕಾಗಿದೆ. ಸರ್ಕಾರದ ವರ್ಚಸ್ಸು ವೃದ್ಧಿಗೆ ಹತ್ತಾರು ಕ್ರಮಗಳನ್ನು ಸೂಚಿಸಿ, ಯುದ್ಧೋಪಾದಿ ಅನುಷ್ಠಾನಕ್ಕೆ ಒತ್ತು ನೀಡಲಾಗಿದ್ದರೆ, ಪಕ್ಷದ ಪರವಾದ ಅಲೆ ಸೃಷ್ಟಿಸುವುದಕ್ಕೂ ಕಾರ್ಯತಂತ್ರ ಹೆಣೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು 20, 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಒಂದು ಮಠಕ್ಕಾದರೂ ಕರೆದೊಯ್ಯುವ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವೀರಶೈವ-ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ-ಪಂಗಡ, ಇತರೆ ಹಿಂದುಳಿದ ವರ್ಗಗಳು ಸೇರಿ ಹಲವು ಸಮೀಕರಣಗಳು ಪಕ್ಷದ ವೇದಿಕೆಯಲ್ಲಿ ಸಿದ್ಧವಾಗುತ್ತಿದ್ದು, ಮಠ-ಮಾನ್ಯಗಳಿಗೆ ಭೇಟಿ ಈ ಕಾರ್ಯಯೋಜನೆ ಭಾಗವಾಗಿದೆ. ಬೆಂಗಳೂರಿನಲ್ಲಿ ವಿವಿಧ ಮಹತ್ವದ ಕಾರ್ಯಕ್ರಮಗಳ ಜತೆಗೆ ಮಠಾಧೀಶರ ಭೇಟಿ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದ್ದು, ಮೈಸೂರಿನ ಸುತ್ತೂರು ಮಠಕ್ಕೆ ಮೋದಿ ಅವರನ್ನು ಕರೆದೊಯ್ಯಲು ಪಕ್ಷದ ರಾಜ್ಯ ನಾಯಕರು ಬಯಸಿದ್ದಾರೆ.ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮೋದಿ ಸಾಗಿ ಹೋಗುವ ಮಾರ್ಗದ ಎರಡೂ ಬದಿಯಲ್ಲಿ ಮುಖಂಡರು, ಕಾರ್ಯಕರ್ತರು ನಿಂತು ಸ್ವಾಗತಿಸಲಿದ್ದು, ದೊಡ್ಡ ಪ್ರಮಾಣದಲ್ಲಿ ಹವಾ ಎಬ್ಬಿಸುವ ಕಸರತ್ತು ನಡೆದಿದೆ.
ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್ ಇನ್ನಿತರರು ಪಾಲ್ಗೊಳ್ಳುವರು. ಈ ಕಾರ್ಯಕ್ರಮದ ಬಳಿಕ ನಡ್ಡಾ ಚಿತ್ರದುರ್ಗಕ್ಕೆ ತೆರಳಿ ಸಮಾವೇಶವೊಂದರಲ್ಲಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಮುರುಘಾಮಠಕ್ಕೆ ಭೇಟಿ ವಿಷಯ ಇನ್ನೂ ಚರ್ಚೆ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ.
ಮೋರ್ಚಾ ಸಭೆಗೆ ನಡ್ಡಾ:ಪಕ್ಷದ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣ ವರ್ಗ ಯಲಹಂಕದ ಖಾಸಗಿ ಹೋಟೆಲ್​ವೊಂದರಲ್ಲಿ 16 ರಿಂದ 18ರವರೆಗೆ ನಡೆಯಲಿದೆ. 18ರ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಪ್ರವಾಸದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಬುಧವಾರ ಸಂಜೆ 4ಕ್ಕೆ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವು ಪ್ರಮುಖರು, ಪಕ್ಷದ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ವೇದಿಕೆ ಕಾರ್ಯಕ್ರಮಗಳಿರಲಿವೆ. ಮಹತ್ವಾಕಾಂಕ್ಷಿ ಬೆಂಗಳೂರು ಉಪನಗರ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದಲ್ಲದೆ, ಅನೇಕ ಮಹತ್ವದ ಅಭಿವೃದ್ಧಿ ಕಾರ್ಯಗಳು ಲೋಕಾರ್ಪಣೆಯಾಗಲಿವೆ. ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಮೋದಿಗೆ ಅರ್ಥಪೂರ್ಣ, ಅದ್ದೂರಿ ಸ್ವಾಗತ ನೀಡುವ ಚಿಂತನೆ ನಡೆದಿದೆ. ಎರಡು ದಿನಗಳ ಪ್ರವಾಸ ಪಟ್ಟಿಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಹೆಚ್ಚಿದೆ. ಆದರೂ ಸಂಘಟನಾ ಬಲವನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಬೇಕು ಎನ್ನುವುದು ಪಕ್ಷದ ಅಪೇಕ್ಷೆಯಾಗಿದೆ ಎಂದು ಮೂಲಗಳು ಹೇಳಿವೆ.
ಕೋವಿಡ್​ನಿಂದಾಗಿ ಏನೂ ನೆನಪಿಲ್ಲ; ಇ.ಡಿ. ವಿಚಾರಣೆ ವೇಳೆ ಬಂಧಿತ ಸಚಿವನ ಉತ್ತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 8 =
Remember me
