ಬೆಂಗಳೂರು:ಸ್ಥಳೀಯತೆಯಿಂದ ಜಾಗತಿಕದೆಡೆಗೆ (ಗ್ಲೋಕಲ್) ಎಂಬುದು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಹೈಲೈಟ್. ಜಾಗತಿಕ ತಲ್ಲಣಗಳಿಗೆ ಪರಿಹಾರೋಪಾಯ, ದೇಶದ ರಕ್ಷಣೆಗೆ ಇನ್ನಷ್ಟು ಬಲ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಆಯಾಮಗಳನ್ನು ಪ್ರಧಾನಿ ಕಾರ್ಯಕ್ರಮ ಒಳಗೊಂಡಿರುವುದು ವಿಶೇಷ. ಭಾರತವು ಜಿ-20 ಸಾರಥ್ಯ ವಹಿಸಿದ ನಂತರ ಮತ್ತೊಂದು ಮಹತ್ವದ ಕಾರ್ಯಕ್ರಮಕ್ಕೆ ಬೆಂಗಳೂರು ಸಾಕ್ಷಿಯಾಗಲಿದ್ದು, ತಾಪಮಾನದ ತಲ್ಲಣಗಳಿಗೆ ಪರಿಹಾರದ ದಿಕ್ಸೂಚಿಯಾಗುವ ಸಾಧ್ಯತೆಗಳಿವೆ.
ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 3 ದಿನಗಳ ‘ಭಾರತ ಇಂಧನ ಸಪ್ತಾಹ’ಕ್ಕೆ ಮೋದಿ ಸೋಮ ವಾರ ಚಾಲನೆ ನೀಡಲಿರುವುದು ಪ್ರಾಮುಖ್ಯತೆ ಹೆಚ್ಚಿಸಿದೆ. ವಾತಾವರಣದಲ್ಲಿ ಇಂಗಾಲಾಮ್ಲ (ಸಿಒ2) ಪ್ರಮಾಣ ತಗ್ಗಿಸದಿದ್ದರೆ ಉಳಿಗಾಲವಿಲ್ಲವೆಂದು ಜಗತ್ತು ಅರಿತಿದ್ದು, ಈ ನಿಟ್ಟಿನಲ್ಲಿ ಹಸಿರು ಇಂಧನ ಉಪಕ್ರಮಗಳಿಗೆ ಭಾರತವೇ ಮೇಲ್ಪಂಕ್ತಿ ಹಾಕಿಕೊಟ್ಟಿದೆ. 30ಕ್ಕೂ ಹೆಚ್ಚು ಸಚಿವರು, 30 ಸಾವಿರಕ್ಕೂ ಅಧಿಕ ಇಂಧನ ವಲಯದ ಪ್ರತಿನಿಧಿಗಳು, 500ಕ್ಕೂ ಹೆಚ್ಚು ಭಾಷಣಕಾರರು ಭವಿಷ್ಯದ ಸವಾಲುಗಳನ್ನು ರ್ಚಚಿಸಲಿದ್ದಾರೆ. ಹಸಿರು ಇಂಧನ ವಲಯದಲ್ಲಿ ಕರ್ನಾಟಕ ಸೇರಿ ದೇಶದ ಅಸಾಧಾರಣ ಸಾಮರ್ಥ್ಯ ವಿಶ್ವದ ಎದುರು ಅನಾವರಣಗೊಳ್ಳಲಿದ್ದು, ಸಾವಿರಕ್ಕೂ ಅಧಿಕ ಮಳಿಗೆಗಳು ಕೈಗನ್ನಡಿಯಾಗಲಿವೆ. ಭವಿಷ್ಯದಲ್ಲಿ ಭಾರತವು ಇಂಧನ ಪರಿವರ್ತನೆಯ ಶಕ್ತಿ ಕೇಂದ್ರವಾಗಲಿದೆ ಎನ್ನುವುದನ್ನು ಪವನ, ಸೌರ, ಜೈವಿಕ ಇಂಧನ, ಎಥೆನಾಲ್ ಉತ್ಪಾದನೆ ಅಂಕಿ-ಅಂಶಗಳು, 8 ವರ್ಷಗಳಲ್ಲಿ 318 ಟನ್​ಗಳಷ್ಟು ಸಿಒ2 ಹೊರಸೂಸುವಿಕೆ ತಗ್ಗಿದ್ದನ್ನು ಸಾರಲಿವೆ.
ಮತಬೇಟೆ:ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದ್ದರೂ ಚುನಾವಣಾ ಲಾಭದ ಆಶಯ ಅಂತರ್ಗತವಾಗಿದೆ. ಇದೇ ತಿಂಗಳಲ್ಲಿ ಹ್ಯಾಟ್ರಿಕ್ ಭೇಟಿ ನಿರೀಕ್ಷೆಯಿದ್ದು, ಆ ಪೈಕಿ ಸೋಮವಾರ ಮೊದಲ ಕಾರ್ಯಕ್ರಮ ಆಯೋಜನೆಯಾಗಿದೆ. ಫೆ.13ಕ್ಕೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಉದ್ಘಾಟನೆ ಮತ್ತು ಫೆ.27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುವ ನಿರೀಕ್ಷೆಯಿದೆ. ಹಸಿರು ಮಂತ್ರ ಮೋದಿ ತಂತ್ರವಾಗಿರುವ ಜತೆಗೆ ಸಮಗ್ರ, ಸುಸ್ಥಿರ ಅಭಿವೃದ್ಧಿ ಕೋಟೆ ಕಟ್ಟಿ ಮತಬೇಟೆಗೆ ಇಳಿಯುವ ಮೂಲಕ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಕಾರ್ಯತಂತ್ರವಿದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಎಚ್​ಎಎಲ್ ಕಾರ್ಯಕ್ರಮದಲ್ಲಿ ಕೇಂದ್ರದ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಸಚಿವರಾದ ಜೆ.ಸಿ. ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಿ.ಸಿ. ನಾಗೇಶ್, ವಿ. ಸೋಮಣ್ಣ , ಸಂಸದ ಜಿ.ಎಸ್. ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್ ವೇದಿಕೆ ಹಂಚಿಕೊಳ್ಳಲಿದ್ದಾರೆ.
1- ಭಾರತವನ್ನು ಪರಿಸರ ಸ್ನೇಹಿ, ಪರಿವರ್ತನೆಯ ಇಂಧನ ಶಕ್ತಿ ಕೇಂದ್ರವಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸೇರಿ ದೇಶದ ಹಸಿರು ಇಂಧನ ಉಪಕ್ರಮಗಳ ಅನಾವರಣ. ಚಾಲ್ತಿಯಲ್ಲಿರುವ 60 ಶತಕೋಟಿ ಡಾಲರ್ ಮೊತ್ತದ ಹಸಿರು ಇಂಧನ ಉತ್ಪಾದನಾ ಯೋಜನೆಗಳ ಮೇಲೆ ಬೆಳಕು
2- ಪರಿಸರ ಸ್ನೇಹಿ, ನಾವೀನ್ಯತೆ, ಹೊಸ ತಂತ್ರಜ್ಞಾನ ಬಳಕೆ, ರಕ್ಷಣಾ ವ್ಯವಸ್ಥೆ ಉನ್ನತೀಕರಣಕ್ಕೆ ಎಚ್​ಎಎಲ್​ನ ಹಗುರ ಬಳಕೆ ಹೆಲಿಕಾಪ್ಟರ್ ಉತ್ಪಾದನಾ ಘಟಕ ಸಾಕ್ಷಿ. ದೇಶೀಯವಾಗಿ ವಿನ್ಯಾಸ, ಅಭಿವೃದ್ಧಿಪಡಿಸಿದ ಮೂರು ಟನ್ ಶ್ರೇಣಿ ಏಕ ಇಂಜಿನ್, ವಿವಿಧೋದ್ದೇಶಿತ ಹೆಲಿಕಾಪ್ಟರ್ ಆರಂಭಿಕ ಉತ್ಪಾದನೆಯಾಗಿದ್ದು, ಕ್ರಮೇಣ ಲಘು ಯುದ್ಧ, ಬಹುಪಾತ್ರ, ನಾಗರಿಕ ಬಳಕೆ ಹೆಲಿಕಾಪ್ಟರ್​ಗಳ ತಯಾರಿಕೆ, ರಿಪೇರಿಗೆ ವಿಸ್ತರಣೆಯಾಗಲಿದ್ದು, ಆರು ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ.
3- ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಭಾಗವಾಗಿ 8,484 ಎಕರೆ ಪ್ರದೇಶದ ತುಮಕೂರು ಕೈಗಾರಿಕಾ ಪ್ರದೇಶ ಮೂರು ಹಂತಗಳಲ್ಲಿ ಅಭಿವೃದ್ಧಿಯಾಗಲಿದೆ. ಬಹುಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ 115 ಕೋಟಿ ರೂ., ತಿಪಟೂರಿನ ಯೋಜನೆಗೆ 430 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯೇ ಲಕ್ಷ್ಯ ಹೊಂದಿದೆ.
– ಸೌರ, ಪವನ, ತ್ಯಾಜ್ಯ ಇತ್ಯಾದಿ ಮೂಲಗಳ ನವೀಕರಿಸಬಹುದಾದ ಇಂಧನ ಉತ್ಪಾದನೆ ಸ್ಥಾಪಿತ ಸಾಮರ್ಥ್ಯ- 15,900 ಮೆಗಾ ವಾಟ್, ಪ್ರಗತಿ ಹಂತದ ಯೋಜನೆಗಳ ಸಾಮರ್ಥ್ಯ- 9,000 ಮೆಗಾ ವಾಟ್
– ಭಾರತೀಯ ಇಂಧನ ವಿನಿಮಯ ಲಿಮಿಟೆಡ್​ನ ಅಂಕಿ-ಅಂಶದ ಪ್ರಕಾರ ನವೀಕರಿಸಬಹುದಾದ ಇಂಧನ ಮೂಲದಿಂದ ಕಳೆದ ವರ್ಷ 2.67 ಬಿಲಿಯನ್ ಯೂನಿಟ್ ವಿಕ್ರಯ, ದೇಶಕ್ಕೆ ಮೊದಲ ರ್ಯಾಂಕ್ ಗಳಿಕೆ
– ಏಷ್ಯಾದಲ್ಲೇ ಅತಿಹೆಚ್ಚು ಪ್ರತಿದಿನ 11 ಲಕ್ಷ ಕಿಲೋ ಲೀಟರ್ ಎಥೆನಾಲ್ ಉತ್ಪಾದನೆ, ಒಂದೂವರೆ ವರ್ಷದಲ್ಲಿ ಶೇ.20ರಷ್ಟು ಏರಿಕೆ ಗುರಿ. ರಾಜ್ಯದಲ್ಲಿ ಸದ್ಯಕ್ಕೆ ಪೆಟ್ರೋಲ್​ನಲ್ಲಿ ಶೇ.10ರಷ್ಟು ಎಥೆನಾಲ್ ಪ್ರತಿದಿನ ಮಿಶ್ರಣ.
– ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್ ಹೈಡ್ರೋಜನ್ ಮತ್ತು ಉಪ ಉತ್ಪನ್ನಗಳಿಗೆ 1.57 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಐದು ಯೋಜನೆಗಳಿಗೆ ಅಸ್ತು, 1.29 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳ ಒಡಂಬಡಿಕೆ
– ನವೀಕರಿಸಬಹುದಾದ ಇಂಧನ ವಲಯದಲ್ಲಿ 29,397 ಕೋಟಿ ರೂ. ಹೂಡಿಕೆಯ 72 ಯೋಜನೆಗಳಿಗೆ ಅಂಕಿತ, 2.99 ಲಕ್ಷ ಕೋಟಿ ರೂ. ಹೂಡಿಕೆಯ 24 ಯೋಜನೆಗಳಿಗೆ ಒಪ್ಪಂದ.
ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ:ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಬಿದರೆಹಳ್ಳಕಾವಲ್​ನಲ್ಲಿರುವ ಏಷ್ಯಾದಲ್ಲಿಯೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕಾರ್ಖಾನೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಶಿಲಾನ್ಯಾಸ, ಜಲಜೀವನ್ ಅಭಿಯಾನದಡಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. 60 ನಿಮಿಷಗಳ ಕಾರ್ಯಕ್ರಮದಲ್ಲಿ ಮೋದಿ ಜತೆ ರಕ್ಷಣಾ ಸಚಿವ ರಾಜನಾಥ್​ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾದ್ಯಂತ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಹಾಗೂ ಬೃಹತ್ ಬೈಕ್ ರ್ಯಾಲಿಗಳ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ.
ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?

ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 19 =
Remember me
