|ಡಾ.ಕೆ ಸುಧಾಕರ್ಆರೋಗ್ಯ-ವೈದ್ಯಕೀಯ ಶಿಕ್ಷಣ ಸಚಿವ
ದೇಶದ ಪ್ರಧಾನಮಂತ್ರಿಯಾಗಿ ಅಥವಾ ಅವರೇ ಪ್ರಾಮಾಣಿಕವಾಗಿ ಬಿಂಬಿಸಿಕೊಂಡಿರುವಂತೆ ಜನರ ‘ಪ್ರಧಾನ ಸೇವಕ’ನಾಗಿ ನರೇಂದ್ರ ಮೋದಿ ಅವರು ತಮ್ಮ ಆಡಳಿತದ ಎಂಟು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ. ಸ್ವತಂತ್ರ ಭಾರತದ ರಾಜಕಾರಣದಲ್ಲಿ ನಿಸ್ಸಂದೇಹವಾಗಿಯೂ ಇದೊಂದು ಐತಿಹಾಸಿಕ ಸಂದರ್ಭ. ಏಕೆಂದರೆ, 1947ರ ನಂತರದ ಬಹುಕಾಲ ಈ ದೇಶವನ್ನು ಆಳಿರುವುದು ಕಾಂಗ್ರೆಸ್ ಪಕ್ಷ. ಮಧ್ಯೆ ಒಂದೆರಡು ಬಾರಿ ಬೇರೆ ಪಕ್ಷಗಳ ಖಿಚಡಿ ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗಲೂ ಅವುಗಳ ಹಿಂದೆ ಕೂಡ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕಾಂಗ್ರೆಸ್ ಪಾತ್ರ ಇದ್ದೇ ಇತ್ತು. ಈ ದೃಷ್ಟಿಯಿಂದ ನೋಡಿದರೆ, ಐದು ವರ್ಷಗಳ ಯಶಸ್ವಿ ಆಡಳಿತ ನಡೆಸಿದ ಮೊಟ್ಟಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎನ್ನುವ ಹೆಗ್ಗಳಿಕೆ ವಾಜಪೇಯಿ ಅವರಿಗೆ ಸಲ್ಲುತ್ತದೆ. ಆದರೆ, ಕಳೆದ 20-25 ವರ್ಷಗಳಲ್ಲಿ ದೇಶದ ರಾಜಕಾರಣದಲ್ಲಿ ಆಗಿರುವ ಬದಲಾವಣೆ ಅಭೂತಪೂರ್ವವಾದುದು. ಅದರಲ್ಲೂ 2014ರಿಂದ ಈಚೆಗೆ ನಮ್ಮ ದೇಶದ ರಾಜಕಾರಣ ಮತ್ತು ಆಡಳಿತದ ಚಹರೆಗಳೇ ಚಾರಿತ್ರಿಕವಾಗಿ ಅಂದರೆ ಅತ್ಯಂತ ಸಕಾರಾತ್ಮಕವಾಗಿ- ಪರಿವರ್ತನೆಗೊಂಡಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಪೂರ್ವದ ಅಂಚಿನ ಅರುಣಾಚಲ ಪ್ರದೇಶದಿಂದ ಪಶ್ಚಿಮದ ಅಂಚಿನ ಗುಜರಾತಿನವರೆಗೆ ದೇಶವಾಸಿಗಳೆಲ್ಲರೂ ಹಿತಾನುಭವದ ಮುದ ಅನುಭವಿಸಿ, ಪುಳಕಗೊಳ್ಳುತ್ತಿದ್ದಾರೆ. ಈ ಕಾಲಾವಧಿಯಲ್ಲಿ ಮುನ್ನೆಲೆಗೆ ಬಂದಿರುವ ರಾಜಕೀಯ ಸಂಸ್ಕೃತಿಯ ಮುಖ್ಯ ಲಕ್ಷಣಗಳನ್ನು Dreams & Develoment & Delivery ಎಂದು ಧಾರಾಳವಾಗಿ ಹೇಳಬಹುದು. ಈ ಹೊಸ ಸಂಸ್ಕೃತಿಯ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದ ಮತ್ತು ಇದು ಯಶಸ್ವಿಯಾಗುವಂತೆ ಮಾಡಿದ್ದರ ಶ್ರೇಯಸ್ಸು ಖಂಡಿತವಾಗಿಯೂ ಸಲ್ಲಬೇಕಾದ್ದು ಪ್ರಧಾನಿ ಮೋದಿ ಅವರಿಗೆ! ಇದರಲ್ಲಿ ಅವರ ಅಸಾಧಾರಣ ನಾಯಕತ್ವದ ಗುಣ, ‘ಔಟ್ ಆಫ್ ಬಾಕ್ಸ್ ಚಿಂತನೆಗಳು, ದೇಶದ ಹಿತಾಸಕ್ತಿಯ ಬಗೆಗೆ ಅವರಿಗಿರುವ ದೂರದೃಷ್ಟಿ ಮತ್ತು ಎಣೆಯಿಲ್ಲದ ಬದ್ಧತೆ ಹಾಗೂ ಯೋಗದಾನಗಳೆಲ್ಲವೂ ಮೇಳೈಸಿವೆ. ಈ ದೃಷ್ಟಿಯಿಂದ ನೋಡಿದರೆ, ಮೋದಿ ಅವರ ವ್ಯಕ್ತಿತ್ವವು ಚಾತುರ್ಯ, ಧೀಮಂತಿಕೆ ಮತ್ತು ಕ್ಷಾತ್ರ ತೇಜಸ್ಸುಗಳ ಮಹಾಸಂಗಮ!
ಮೋದಿ ಅವರು ಕಳೆದ 20 ವರ್ಷಗಳಿಂದಲೂ ಸತತವಾಗಿ ಸಾರ್ವಜನಿಕ ಹುದ್ದೆಯಲ್ಲಿರುವವರು. ಈ ಅವಧಿಯಲ್ಲಿ ಅವರು ಅನೇಕ ಸತ್ತ್ವಪರೀಕ್ಷೆಗಳನ್ನು ಎದುರಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಎರಡು ವರ್ಷಗಳ ಹಿಂದೆ (2020ರ ಜನವರಿಯಲ್ಲಿ) ಧುತ್ತನೆ ಎದುರಾದ ಕೋವಿಡ್ ಸಾಂಕ್ರಾಮಿಕ ಮತ್ತು ಅದು ಸೃಷ್ಟಿಸಿದ ಆರ್ಥಿಕ ಮತ್ತು ವೈದ್ಯಕೀಯ ಕ್ಷೋಭೆಗಳು ಅವರ ಪಾಲಿಗೆ ಎದುರಾದ ಬಹುದೊಡ್ಡ ಅಗ್ನಿಪರೀಕ್ಷೆ ಎನ್ನುವುದು ನನ್ನ ನಂಬಿಕೆ. ಏಕೆಂದರೆ, ನಾವು ಬದುಕುತ್ತಿರುವ ಆಧುನಿಕ ಕಾಲವು ವೈದ್ಯಕೀಯ ಅದ್ಭುತಗಳು ಸಾಧ್ಯವಾಗಿರುವ ಘಟ್ಟ; ಮನುಕುಲವು ಅನೇಕ ಭೀಕರ ಕಾಯಿಲೆ-ಕಸಾಲೆಗಳನ್ನು ಗೆದ್ದಿರುವ ಕಾಲಮಾನ. ಜತೆಗೆ, ಕೋವಿಡ್ ತರಹದ ‘ಪ್ಯಾಂಡಮಿಕ್ ಸ್ವರೂಪದ ಸಾಂಕ್ರಾಮಿಕಗಳು 100 ವರ್ಷಗಳ ಅವಧಿಯಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇಡೀ ಜಗತ್ತು ಇನ್ನೆಂದೂ ಇಂಥ ಕಾಯಿಲೆಗಳು ಬರಲಾರವು ಎನ್ನುವ ನಂಬಿಕೆಯಲ್ಲೇ ಇತ್ತೆನ್ನಿ! ಆದರೆ, 2020ರ ಡಿಸೆಂಬರಿನಲ್ಲಿ ನೆರೆಯ ಚೀನಾದಲ್ಲಿ ಕಾಣಿಸಿಕೊಂಡ ಈ ಕೋವಿಡ್ ಸಾಂಕ್ರಾಮಿಕವು ಕೇವಲ ಒಂದು ತಿಂಗಳಲ್ಲಿ ಭಾರತದಲ್ಲೂ ಕಾಣಿಸಿಕೊಂಡಿತು. ಅದರಲ್ಲೂ ಇಡೀ ದೇಶದಲ್ಲಿ ಈ ಸಾಂಕ್ರಾಮಿಕಕ್ಕೆ ತುತ್ತಾಗಿ ಮೊಟ್ಟಮೊದಲ ಸಾವು ಸಂಭವಿಸಿದ್ದು ನಮ್ಮ ಕಲಬುರಗಿಯಲ್ಲಿ.
ಇದು ಎಲ್ಲ ದೃಷ್ಟಿಗಳಿಂದಲೂ ಭಾರತದ ನಾಯಕತ್ವದ ಸಾಮರ್ಥ್ಯಪರೀಕ್ಷೆಯಾಗಿತ್ತು. ಏಕೆಂದರೆ, ಮುಂದುವರಿದ ದೇಶಗಳಾದ ಅಮೆರಿಕ, ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್, ಚೀನಾ ಸೇರಿ ‘ದೊಡ್ಡಣ್ಣಗಳೆಲ್ಲ ಕರೋನಾ ಎದುರು ತತ್ತರಿಸಿ ಹೋಗಿದ್ದವು; ದಿನವೂ ಸಾವಿರಾರು ಜನ ಅಸಹಾಯಕರಾಗಿ ಕೊನೆಯುಸಿರೆಳೆಯುತ್ತಿದ್ದರು; ಆಸ್ಪತ್ರೆಗಳು ಕೂಡ ಸ್ತಬ್ಧಗೊಂಡವು. ಇನ್ನು ಚಿಕ್ಕಪುಟ್ಟ ದೇಶಗಳು ಎದುರಿಸಿದ ದುರವಸ್ಥೆಯ ಬಗ್ಗೆಯಂತೂ ಹೇಳುವುದೇ ಬೇಡ. ಆದರೆ, ಇಂತಹ ಸಂದರ್ಭಗಳು ಒಬ್ಬ ಯುಗಪುರುಷನನ್ನೂ ಸೃಷ್ಟಿಸುತ್ತವೆ! ಕರೋನಾ ಸಂದರ್ಭದಲ್ಲಿ ದೇಶವನ್ನು ಅತ್ಯಂತ ಸಮರ್ಥವಾದ ಉಪಕ್ರಮಗಳ ಮೂಲಕ ನಿಭಾಯಿಸಿದ ಮೋದಿ, ತಮ್ಮೊಳಗಿದ್ದ ಈ ‘ಜಾಗತಿಕ ನಾಯಕನನ್ನು ಅನಾವರಣಗೊಳಿಸಿದರು. ಅವರು ಕೈಗೊಂಡ ಕ್ರಮಗಳಲ್ಲಿ ಧೈರ್ಯದಿಂದ ಲಾಕ್-ಡೌನ್ ಘೊಷಿಸಿದ್ದು, ಲಸಿಕೆ ಅಭಿವೃದ್ಧಿಗೆ ಪಣ ತೊಟ್ಟಿದ್ದು, ಮಾಸ್ಕ್ ಮತ್ತು ಪಿಪಿಇ ಕಿಟ್ ವಿಚಾರದಲ್ಲಿ ಪರಾವಲಂಬಿಯಾಗಿದ್ದ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿ ಇವುಗಳನ್ನು ರಫ್ತು ಮಾಡುವ ಹಂತಕ್ಕೆ ಬೆಳೆಸಿದ್ದು, 88 ಕೋಟಿ ದುರ್ಬಲರಿಗೆ ಉಚಿತವಾಗಿ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಿದ್ದು, ಸಾವಿರಾರು ವೈದ್ಯಕೀಯ ಪ್ರಯೋಗಾಲಯಗಳನ್ನು ಕ್ಷಿಪ್ರ ಗತಿಯಲ್ಲಿ ಸ್ಥಾಪಿಸಿದ್ದು, ಆರ್ಟಿಪಿಸಿಆರ್ ಪರೀಕ್ಷೆಯನ್ನು ಸಾರ್ವತ್ರಿಕಗೊಳಿಸಿದ್ದು, ದೇಶಾದ್ಯಂತ ಅಗತ್ಯವಿರುವವರಿಗೆ ವೆಂಟಿಲೇಟರ್ ಪೂರೈಸಿದ್ದು, ‘ಆಕ್ಸಿಜನ್ ಎಕ್ಸೆ್ಪ್ರಸ್​ಗಳ ಮೂಲಕ ಸಾವಿರಾರು ಟನ್ನುಗಟ್ಟಲೆ ಆಮ್ಲಜನಕ ಪೂರೈಸಿದ್ದು, ಸಾವಿರಾರು ರೈಲ್ವೆ ಬೋಗಿಗಳನ್ನೇ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿದ್ದು, ಕೋವಿಡ್ ಪಿಡುಗಿನ ನಿಯಂತ್ರಣಕ್ಕೆ ಸೇನೆಯ ಸಹಾಯದಿಂದ ದೆಹಲಿಯ ಹೊರವಲಯದಲ್ಲಿ 10,000 ಹಾಸಿಗೆಗಳ ಬೃಹತ್ ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಿದ್ದು, ಸೋಂಕು ಹಬ್ಬುವುದು ಖಚಿತ ಎಂದು ಗೊತ್ತಾದೊಡನೆ ಚೀನಾದಲ್ಲಿದ್ದ ಭಾರತೀಯರನ್ನೆಲ್ಲ ಕರೆತಂದಿದ್ದು, ವೈದ್ಯಕೀಯ ಸಂಶೋಧನೆ ಮತ್ತು ಸಿಬ್ಬಂದಿಗೆ ಹಲವು ಅಭೂತಪೂರ್ವ ಬೆಂಬಲ ನೀಡಿದ್ದು, ನಮ್ಮ ಸಂಸ್ಕೃತಿಯ ಶಕ್ತಿಯೊಂದಿಗೆ ಇಡೀ ಪಿಡುಗನ್ನು ಹಿಮ್ಮೆಟ್ಟಿಸಿದ್ದು- ಇವೆಲ್ಲವೂ ಸೇರಿವೆ. ಇವುಗಳನ್ನು ಸ್ವಲ್ಪಮಟ್ಟಿಗಾದರೂ ನಾವು ವಿಶದವಾಗಿ ನೋಡಬೇಕಾದ ಅಗತ್ಯವಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ/ ಜಸವು ಜನಜೀವನಕೆ ಮಂಕುತಿಮ್ಮ ಎನ್ನುವ ಆರ್ಯೋಕ್ತಿಯು ಮೋದಿ ಅವರ ಪ್ರದರ್ಶಿಸಿದ ಧೀಮಂತ ನಾಯಕತ್ವವನ್ನು ವರ್ಣಿಸಲು ತಕ್ಕ ಮಾತಾಗಿದೆ.
ಸಾಂಕ್ರಾಮಿಕ ಶುರುವಾಗುತ್ತಿದ್ದಂತೆಯೇ ಮೋದಿ ಅವರು ಮಾಡಿದ ಮೊಟ್ಟಮೊದಲ ಕೆಲಸವೆಂದರೆ, ಈ ವೈರಾಣು ಸೃಷ್ಟಿಯಾದ ಚೀನಾದ ವಿದ್ಯಮಾನಗಳ ಮೇಲೆ ತೀವ್ರ ನಿಗಾ ಇಡತೊಡಗಿದರು. ಇದರ ಬೆನ್ನೆಲ್ಲೇ ಅಂದರೆ 2020ರ ಮಾರ್ಚ್ ತಿಂಗಳಲ್ಲಿ- ಸಂಪೂರ್ಣ ಲಾಕ್​ಡೌನ್ ಘೊಷಿಸಿದ್ದು. 130 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಕೆಲವೇ ದಿನಗಳಲ್ಲಿ ‘ಕೋವಿಡ್ ಕಾಲದ ರೀತಿರಿವಾಜುಗಳನ್ನು (ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ, ಸಮಾರಂಭಗಳ ರದ್ದತಿ ಇತ್ಯಾದಿಗಳು) ಜಾರಿಗೆ ತರುವಲ್ಲಿ ಕೂಡ ಅವರು ಯಶಸ್ವಿಯಾದರು. ಅವರ ಪ್ರಾಮಾಣಿಕ ಕರೆಗೆ ದೇಶದ ಜನರು ಅಷ್ಟೇ ಕಳಕಳಿಯಿಂದ ಸ್ಪಂದಿಸಿದರು. ಕೋವಿಡ್ ಅಪ್ಪಳಿಸಿದಾಗ ಉಳಿದ ದೇಶಗಳಂತೆಯೇ ನಮ್ಮಲ್ಲೂ ಯಾವುದೇ ಲಸಿಕೆ ಇರಲಿಲ್ಲ. ಇದನ್ನು ಮನಗಂಡ ಮೋದಿ ಅವರು ಇತ್ತ ದಾಪುಗಾಲಿಟ್ಟರು. ಇದರ ಫಲವಾಗಿ ಕೇವಲ ಹತ್ತೇಹತ್ತು ತಿಂಗಳಲ್ಲಿ ಸ್ವದೇಶಿ ನಿರ್ವಿುತ ಕೋವ್ಯಾಕ್ಸಿನ್ ಲಸಿಕೆ ಸಿದ್ಧವಾಯಿತು; ಇದರ ಬೆನ್ನಲ್ಲೇ ಕೋವಿಶೀಲ್ಡ್ ಕೂಡ ಬಂತು ಇದಕ್ಕೆ ಬೇಕಾದ ಪ್ರಕ್ರಿಯೆಗಳನ್ನೆಲ್ಲ ಸರಳಗೊಳಿಸಿದ ಮೋದಿ, ಸಂಶೋಧನೆ ಮತ್ತು ಅಭಿವೃದ್ಧಿಗೆಂದು 900 ಕೋಟಿ ರೂ. ಒದಗಿಸಿದರು. ಇಡೀ ದೇಶದ ಜನರಿಗೆ ಸರ್ಕಾರದ ವತಿಯಿಂದಲೇ ಉಚಿತವಾಗಿ ಲಸಿಕೆಗೆ ತೀರ್ವನಿಸಿ, ಅದನ್ನು ಜಾರಿಗೊಳಿಸಿದ ಮೋದಿ ಅವರ ಸಾಧನೆ ನಿಜಕ್ಕೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಒಂದು ಯಶೋಗಾಥೆ! ದೇಶವು 10 ಕೋಟಿ, 50 ಕೋಟಿ, 100 ಕೋಟಿ ಲಸಿಕೆಗಳ ದಾಖಲೆ ಸ್ಥಾಪಿಸಿದ್ದು ಈಗ ಚರಿತ್ರೆಯ ಮಾತು. ನಾವೆಲ್ಲವೂ ಇನ್ನು ಕೆಲವೇ ದಿನಗಳಲ್ಲಿ 200 ಕೋಟಿ ಲಸಿಕೆಯ ವಿನೂತನ ವಿಕ್ರಮಕ್ಕೆ ಸಾಕ್ಷಿಯಾಗಲಿದ್ದೇವೆ. ಈ ನಡುವೆ ದೇಶದಲ್ಲಿ ಶೇ.90ಕ್ಕಿಂತಲೂ ಹೆಚ್ಚು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಪಡೆದುಕೊಂಡಿದ್ದಾರೆ; ಹಾಗೆಯೇ ಶೇ.60ಕ್ಕಿಂತ ಹೆಚ್ಚು ಮಂದಿಗೆ ಎರಡೂ ಡೋಸ್ ಸಿಕ್ಕಿದೆ. ಅಲ್ಲದೆ, ಈಗ 12 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ಕೊಡಲಾಗುತ್ತಿದೆ. ಜತೆಗೆ, ಹಿರಿಯ ನಾಗರಿಕರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ‘ಬೂಸ್ಟರ್ ಡೋಸ್’ ಆಗಿ 3ನೇ ಸಲದ ಲಸಿಕೆ ಪೂರೈಸಲಾಗಿದೆ. ಕೋವಿಡ್ ಪಿಡುಗನ್ನು ಮೆಟ್ಟಿ ನಿಲ್ಲುವಲ್ಲಿ ಮೋದಿ ಗೆದ್ದಿದ್ದಾರೆ! ಈ ಮೂಲಕ ಅವರು ‘ಆತ್ಮನಿರ್ಭರ ಭಾರತದ ಶಕ್ತಿ-ಸಾಮರ್ಥ್ಯಗಳ ವಿರಾಟ್ ರೂಪವನ್ನೂ ತೋರಿಸಿದ್ದಾರೆ. ಇದರ ಜತೆಯಲ್ಲೇ ಜಾಗತಿಕ ರಂಗದಲ್ಲಿ ಭಾರತವು ನಮ್ಮ ಪ್ರಾಚೀನ ಸಂಸ್ಕೃತಿಯ ಅನನ್ಯತೆ ಮತ್ತು ಆಧುನಿಕ ಜ್ಞಾನ ಹಾಗೂ ಆರ್ಥಿಕತೆಗಳೊಂದಿಗೆ ವಿರಾಜಮಾನವಾಗಿ ಬೆಳಗುವಂತೆ ಮಾಡಿದ್ದಾರೆ.
ಮತದಾನ ಕೇಂದ್ರದಲ್ಲಿ ಮದ್ಯಪಾನ ಪರೀಕ್ಷೆಗೆ ಮನವಿ; ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + nine =
Remember me
