ಬೆಂಗಳೂರು:ಐಷಾರಾಮಿ ಬೆಂಟ್ಲಿ ಕಾರು ಸರಣಿ ಅಪಘಾತ ಪ್ರಕರಣ ಸಂಬಂಧ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಬುಧವಾರ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ಆರೋಪಿಯನ್ನು ಬಂಧಿಸಿದ ಪೊಲೀಸರು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಖ್ರಿ ಸರ್ಕಲ್ ಅಂಡರ್​ಪಾಸ್​ನಲ್ಲಿ ಫೆ.9ರಂದು ಬೆಂಟ್ಲಿ ಕಾರು ಅಡ್ಡಾದಿಡ್ಡಿ ಚಲಾಯಿಸಿ ಆಟೋ, 2 ಬೈಕ್​ಗಳಿಗೆ ಡಿಕ್ಕಿಯಾಗಿತ್ತು. ಇದರ ತನಿಖೆ ಕೈಗೊಂಡ ಸದಾಶಿವನಗರ ಸಂಚಾರ ಠಾಣೆ ಪೊಲೀಸರು, ಠಾಣೆ ಬಂದು ಶರಣಾದ ಮೊಹಮ್ಮದ್ ನಲಪಾಡ್ ಸಹಚರ ಬಾಲಕೃಷ್ಣ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ನಲಪಾಡ್​ಗೆ ನೋಟಿಸ್ ಜಾರಿ ಮಾಡಿದ್ದರು.
ಸದಾಶಿವನಗರ ಸಂಚಾರ ಠಾಣೆಗೆ ವಕೀಲರ ಜತೆ ಹಾಜರಾದ ನಲಪಾಡ್, ತನಿಖಾಧಿಕಾರಿಗಳ ವಿಚಾರಣೆ ಎದುರಿಸಿದರು. ನಲಪಾಡ್​ನನ್ನು ಬಂಧಿಸಿದ ಪೊಲೀಸರು, ಆರೋಪಿಯಿಂದ ಭದ್ರತಾ ಖಾತ್ರಿ, ಬಾಂಡ್ ಪಡೆದು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚನೆ ನೀಡಿ ಕಳುಹಿಸಿದರು.
ಠಾಣೆಯಿಂದ ಹೊರಬಂದ ಮೇಲೆ ಸುದ್ದಿಗಾರರ ಜತೆ ಮಾತನಾಡಿದ ಮೊಹಮ್ಮದ್ ನಲಪಾಡ್, ‘ಅಪಘಾತವಾಗಿರುವ ಕಾರನ್ನು ನಾನು ಚಾಲನೆ ಮಾಡಿಲ್ಲ. ಪದೇಪದೆ ಗೂಂಡಾ ಎಂದು ಬಿಂಬಿಸುವುದು ನಿಲ್ಲಿಸಿ. ಹಿಂದಿನ ಘಟನೆ (ಉದ್ಯಮಿ ಪುತ್ರ ವಿದ್ವತ್ ಕೊಲೆ ಯತ್ನ ಪ್ರಕರಣ ) ಬಳಿಕ ಸಾಕಷ್ಟು ಬದಲಾಗಿದ್ದೇನೆ. ಮತ್ತೆ ಮತ್ತೆ ಗೂಂಡಾ ಎಂದು ಬಿಂಬಿಸುವುದು ಬೇಡ ಎಂದು ಕಣ್ಣೀರಿಟ್ಟರು. ಫೆ.9ರಂದು ಮೂರು ಕಾರುಗಳಲ್ಲಿ ನಾನು ಹಾಗೂ ಸ್ನೇಹಿತರು ಬರುತ್ತಿದ್ದೆವು. ಬೆಂಟ್ಲಿ ಕಾರು ಅಪಘಾತವಾದಾಗ ನಾನು ಹಿಂದಿದ್ದ ಲ್ಯಾಂಬೋರ್ಗಿನಿ ಕಾರಿನಲ್ಲಿದ್ದೆ. ಅಪಘಾತವಾದ ತಕ್ಷಣ ಗಾಯಾಳುಗಳ ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದೇನೆ.
ಜಗತ್ತಿನಲ್ಲಿ ಇದೇನು ಮೊದಲ ಕಾರು ಅಪಘಾತವಲ್ಲ. ನಾನು ತಪ್ಪು ಮಾಡದೆ ಹೋದರೂ ನನ್ನನ್ನು ಗೂಂಡಾ ಎಂದು ಬಿಂಬಿಸಲಾಗುತ್ತಿದೆ. ನನ್ನನ್ನು ಬಿಟ್ಟು ಬಿಡಿ. ಬಳ್ಳಾರಿಯ ಅಪಘಾತ ಪ್ರಕರಣ ಘಟನೆ ಜತೆ ನನ್ನ ಹೆಸರನ್ನು ಸೇರಿಸಿ ಸುದ್ದಿ ಪ್ರಕಟಿಸಲಾಗಿದೆ. ಇದನ್ನು ನೋಡಿದ ನನ್ನ 84 ವರ್ಷದ ಅಜ್ಜ, ಮೂರು ಜನರ ಜೀವ ತೆಗೆದೆಯಾ ಎಂದು ಪ್ರಶ್ನಿಸುತ್ತಾರೆ. ಅವರಿಗೆ ನಾನು ಏನೆಂದು ಉತ್ತರ ಕೊಡಲಿ. ಎಲ್ಲಿಗೆ ಹೋದರೂ ನನ್ನ ಕಾರನ್ನು ಬಾಲಕೃಷ್ಣ (ಬಾಡಿಗಾರ್ಡ್) ಚಲಾಯಿಸುತ್ತಾರೆ. ಫೆ.9ರಂದು ಸಹ ಬೆಂಟ್ಲಿ, ಲ್ಯಾಂಬೋರ್ಗಿನಿ ಸೇರಿ ಮೂರು ಕಾರುಗಳಲ್ಲಿ ಸ್ನೇಹಿತರು ಹೋಗುತ್ತಿದ್ದವು. ಬೆಂಟ್ಲಿ ಕಾರನ್ನು ಬಾಲಕೃಷ್ಣ ಓಡಿಸುತ್ತಿದ್ದ ಎಂದು ನಲಪಾಡ್ ಸಮರ್ಥಿಸಿಕೊಂಡರು.
ಕಾರು ಚಾಲನೆ ಮಾಡಲಾಗದೆ ಕಕ್ಕಾಬಿಕ್ಕಿ!
ಹಿಟ್ ಆಂಡ್ ರನ್ ಪ್ರಕರಣದಲ್ಲಿ ಠಾಣೆಗೆ ಹಾಜರಾಗಿದ್ದ ನಲಪಾಡ್ ಬಾಡಿಗಾರ್ಡ್ ಬಾಲಕೃಷ್ಣ ಎಂಬಾತನನ್ನು ಸದಾಶಿವನಗರ ಸಂಚಾರ ಪೊಲೀಸರು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಅಪಘಾತದ ವೇಳೆ ಬೆಂಟ್ಲಿ ಕಾರು ಚಲಾಯಿಸುತ್ತಿದ್ದಾಗ ಠಾಣೆಗೆ ಹಾಜರಾದ ಬಾಲಕೃಷ್ಣನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಬೆಂಟ್ಲಿ ಕಾರಿನ ಕೀ ಕೊಟ್ಟು ಓಡಿಸುವಂತೆ ಸೂಚಿಸಿದರು. ಆಗ ಬಾಲಕೃಷ್ಣ, ಕಾರು ಸ್ಟಾರ್ಟ್ ಮಾಡಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿದ್ದ ಎನ್ನಲಾಗಿದೆ.
ಸಾಕ್ಷ್ಯ ಇರುವುದರಿಂದಲೇ ಬಂಧನ
ಮೊಹಮ್ಮದ್ ನಲಪಾಡ್ ಕಾರು ಚಾಲನೆ ಮಾಡಿರುವುದಕ್ಕೆ ಸಾಕ್ಷ್ಯ ಗಳು ಸಿಕ್ಕಿವೆ. ಅದಕ್ಕಾಗಿಯೇ ನೋಟಿಸ್ ನೀಡಿ ವಿಚಾರಣೆ ನಡೆಸಿ ಬಂಧಿಸ ಲಾಗಿತ್ತು. ಮತ್ತಷ್ಟು ದಾಖಲೆ, ಸಾಕ್ಷ್ಯ ಸಂಗ್ರಹಿಸಿ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಲು ಸಾಕಷ್ಟು ಸಮಯ ಅವಕಾಶವಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇ ಗೌಡ ತಿಳಿಸಿದ್ದಾರೆ. ಆರೋಪಿಗಳು ತಪು್ಪ ಒಪ್ಪಿಕೊಳ್ಳದಿರುವುದು ಸಹಜ.
ತಪ್ಪು ಮಾಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ತನಿಖೆ ವೇಳೆ ನಲಪಾಡ್ ತಪು್ಪ ಮಾಡಿರುವುದು ಖಚಿತವಾಗಿದೆ. ಈ ಬಗ್ಗೆ ತನಿಖಾಧಿಕಾರಿ ನನಗೆ ಮಾಹಿತಿ ನೀಡಿದ್ದಾರೆ. 3ನೇ ವ್ಯಕ್ತಿ ಟೀಕೆ, ಟಿಪ್ಪಣಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಕೋರ್ಟ್​ಗೆ ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂದು ರವಿಕಾಂತೇಗೌಡ ಮಾಹಿತಿ ನೀಡಿದರು.
ರವಿಕಾಂತೇಗೌಡ ತನಿಖಾಧಿಕಾರಿಯಲ್ಲ
ಹಿಟ್ ಆಂಡ್ ರನ್ ಪ್ರಕರಣ ನಡೆದಾಗ ನಲಪಾಡ್ ಕಾರು ಚಲಾಯಿಸಿಲ್ಲ. ಆದರೂ ಆರೋಪ ಹೊರಿಸಲಾಗಿದೆ. ನಲಪಾಡ್ ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂದು ನಲಪಾಡ್ ಪರ ವಕೀಲ ಮೊಹಮ್ಮದ್ ಉಸ್ಮಾನ್ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಪೊಲೀಸ್ ನೋಟಿಸ್ ನೀಡಿದ್ದರು. ನೋಟಿಸ್​ಗೆ ಉತ್ತರ ನೀಡಲು ನಲಪಾಡ್ ಹಾಜರಾಗಿದ್ದರು.
ಘಟನೆ ವೇಳೆ ನಲಪಾಡ್ ಕಾರು ಚಲಾಯಿಸಿಲ್ಲ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಕಾರು ಡ್ರೖೆವಿಂಗ್ ಮಾಡಿದ್ದಾರೆ ಎಂದು ಹೇಳಲು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಬಿ.ಆರ್. ರವಿಕಾಂತೇಗೌಡ ತನಿಖಾಧಿಕಾರಿಯಲ್ಲ. ನಲಪಾಡ್ ವಿರುದ್ಧ ಸಂಚು ನಡೆದಿದೆ ಎಂದು ಉಸ್ಮಾನ್ ಆರೋಪಿಸಿದರು.
ಕಾರಿನ ಬಣ್ಣ, ನಂಬರ್ ಪ್ಲೇಟ್ ಬದಲಾಯಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ.
| ಡಾ.ಬಿ.ಆರ್. ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತ(ಸಂಚಾರ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eleven =
Remember me
