ಮುಂಬಯಿ:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಮಾದರಿ ನೀತಿ ಸಂಹಿತೆ ಮತ್ತು ಬಂಗಾರದ ಬೆಲೆ ಏರಿಕೆಯಿಂದಾಗಿ ಈ ಬಾರಿ ಅಕ್ಷಯ ತೃತೀಯಾ ದಿನದಂದು ದೇಶಾದ್ಯಂತ ನಿರೀಕ್ಷಿಸಿದಷ್ಟು ಚಿನ್ನದ ಮಾರಾಟ ನಡೆದಿಲ್ಲ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.
ಧನ್​ತೇರಸ್ ಬಳಿಕ ಅಕ್ಷಯ ತೃತೀಯಾ ದಂದೇ ಚಿನ್ನ ಮತ್ತು ಬೆಳ್ಳಿಯನ್ನು ಜನ ದೊಡ್ಡ ಸಂಖ್ಯೆಯಲ್ಲಿ ಕೊಂಡುಕೊಳ್ಳುತ್ತಾರೆ. ಆದರೆ ಈ ವರ್ಷ ಮಾರುಕಟ್ಟೆಯಲ್ಲಿ ಅಕ್ಷಯತೃತೀಯಾದಂದು ಚಿನ್ನ-ಬೆಳ್ಳಿಗೆ ನಿರೀಕ್ಷಿಸಿದಷ್ಟು ಬೇಡಿಕೆ ಇರಲಿಲ್ಲ. ಇದಕ್ಕೆ ಚಿನ್ನದ ಬೆಲೆಯಲ್ಲಿ ಆಗಿರುವ ತೀವ್ರ ಏರಿಕೆ ಮತ್ತು ಜನರ ಹಣಕಾಸಿನ ವ್ಯವಹಾರದ ಮೇಲೆ ಚುನಾವಣಾ ನೀತಿಸಂಹಿತೆ ಪ್ರಕಾರ ವಿಧಿಸಿರುವ ನಿರ್ಬಂಧಗಳು ಕಾರಣ ಎಂದು ಸಿಎಐಟಿ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಖಾದ್ಯತೈಲ ವ್ಯಾಪಾರಿಗಳ ಫೆಡರೇಷನ್ ಅಧ್ಯಕ್ಷ ಶಂಕರ್ ಠಕ್ಕರ್ ತಿಳಿಸಿದ್ದಾರೆ.
ಕಳೆದ ವರ್ಷ ಈ ವೇಳೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 60 ಸಾವಿರ ರೂ. ಇತ್ತು. ಈ ವರ್ಷ ಅದು 72 ಸಾವಿರ ರೂ.ಗೆ ಏರಿದೆ. ಇದು ಶೇ. 20ರಷ್ಟು ಏರಿಕೆ. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟು ಮಾತ್ರ ಚಿನ್ನ ಮಾರಾಟವಾಗಿರುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ಜ್ಯುವೆಲರ್ಸ್ ಮತ್ತು ಅಕ್ಕಸಾಲಿಗರ ಒಕ್ಕೂಟದ (ಎಐಜೆಜಿಎಫ್) ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಆರೋರಾ ಹೇಳಿದ್ದಾರೆ.
ಬೆಲೆ ಜಾಸ್ತಿ ಇರುವುದರಿಂದ ಜನರು ಕಡಿಮೆ ತೂಕದ ಆಭರಣಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಈ ಬಾರಿ ನಾಣ್ಯಗಳು ಮತ್ತು ಆಭರಣಗಳೆಲ್ಲವೂ ಸೇರಿ ದೇಶಾದ್ಯಂತ ಒಟ್ಟು 5 ಟನ್ ಚಿನ್ನ ಮಾರಾಟವಾಗಿರುವ ನಿರೀಕ್ಷೆ ಇದೆ. ಅಂದಾಜು 3600 ಕೋಟಿ ರೂ. ವಹಿವಾಟು ಆಗಿರಬಹುದು. ಸುಮಾರು 1640 ಕೋಟಿ ರೂ. ಮೌಲ್ಯದ 200 ಟನ್ ಬೆಳ್ಳಿ ಮಾರಾಟ ನಡೆದಿರುವ ಸಾಧ್ಯತೆ ಇದೆ ಎಂದು ಆರೋರಾ ವಿವರಿಸಿದರು.
ಎಐಜೆಜಿಎಫ್ ಪ್ರಧಾನ ಕಾರ್ಯದರ್ಶಿ ನಿತಿನ್ ಕೆದಿಯಾ ಅವರ ಪ್ರಕಾರ, ಮುಂಬೈ ಒಂದರಲ್ಲೇ ಕಳೆದ ವರ್ಷ ಅಂದಾಜು 300 ಕೆಜಿ ಚಿನ್ನ (216 ಕೋಟಿ ರೂ. ಮೌಲ್ಯ), 1700 ಕೆಜಿ ಬೆಳ್ಳಿ (ಮೌಲ್ಯ 14 ಕೋಟಿ ರೂ.) ಮಾರಾಟವಾಗಿತ್ತು. ಕಳೆದ ವರ್ಷ ಬೆಳ್ಳಿಯ ಬೆಲೆ ಕೆಜಿಗೆ 75 ಸಾವಿರ ರೂ. ಇತ್ತು. ಅದೀಗ 83 ಸಾವಿರ ರೂ.ಗೆ ಏರಿದೆ. ‘‘ಜ್ಯೋತಿಷದ ಪ್ರಕಾರ, ಗುರು ಮತ್ತು ಶುಕ್ರ ಗ್ರಹಗಳ ಪ್ರತಿಕೂಲವಾದ ಸ್ಥಾನವು ಗ್ರಾಹಕರನ್ನು ವಿಶೇಷವಾಗಿ ಮದುವೆಯಂತಹ ಸಮಾರಂಭಗಳಿಗೆ ಚಿನ್ನ ಖರೀದಿಸದೇ ಇರುವಂತೆ ನಿರುತ್ಸಾಹಗೊಳಿಸಿರಬಹುದು. ಅದರಿಂದಾಗಿಯೂ ಚಿನ್ನ ಮಾರಾಟ ಕಡಿಮೆಯಾಗಿರಬಹುದು’ ಎಂದು ಕೆದಿಯಾ ಅಭಿಪ್ರಾಯಪಟ್ಟರು.
ನವದೆಹಲಿ:ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಚಿನ್ನದ ಆಮದು ಶೇ. 30ರಷ್ಟು ಜಾಸ್ತಿಯಾಗಿದೆ. 2022-23ರಲ್ಲಿ 35 ಶತಕೋಟಿ ಡಾಲರ್​ನಷ್ಟಿದ್ದ ಆಮದು 2023-24ರಲ್ಲಿ 45.54 ಶತಕೋಟಿ ಡಾಲರ್​ಗೆ ಏರಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಸ್ವಿಜರ್ಲೆಂಡ್​ನಿಂದ ಅತಿ ಹೆಚ್ಚು (ಶೇ. 40) ಚಿನ್ನ ಆಮದು ಆಗಿದೆ. ನಂತರದ ಸ್ಥಾನದಲ್ಲಿ ಯುಎಇ (ಶೇ. 16), ದಕ್ಷಿಣ ಆಫ್ರಿಕಾ (ಶೇ. 10) ಇವೆ. ಈ ವರ್ಷದ ಮಾರ್ಚ್​ನಲ್ಲಿ ಮಾತ್ರ ಚಿನ್ನದ ಆಮದು ಶೇ. 53.56ರಷ್ಟು (ಮೌಲ್ಯ 1.53 ಶತಕೋಟಿ ಡಾಲರ್) ಇಳಿಕೆ ಕಂಡಿದೆ. ಭಾರತವು ಇಡೀ ಜಗತ್ತಿನಲ್ಲೇ ಚಿನ್ನ ಆಮದು ಮಾಡಿಕೊಳ್ಳುವ 2ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ. ಬೆಳ್ಳಿಯ ಆಮದು 2023-24ರಲ್ಲಿ ಶೇ. 2.72ರಷ್ಟು (ಮೌಲ್ಯ 5.4 ಶತಕೋಟಿ ಡಾಲರ್) ಏರಿಕೆ ಕಂಡಿದೆ ಎಂದು ಸಚಿವಾಲಯ ಒದಗಿಸಿರುವ ಅಂಕಿಅಂಶಗಳು ತಿಳಿಸಿವೆ.
ಸಾಮಾನ್ಯವಾಗಿ ಮಹಿಳೆಯರು ಇಡೀ ವರ್ಷ ಹಣ ಉಳಿತಾಯ ಮಾಡಿ ಅಕ್ಷಯ ತೃತೀಯಾದಂದು ಚಿನ್ನ ಖರೀದಿಸುತ್ತಾರೆ. ಆದರೆ 50 ಸಾವಿರ ರೂ.ಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗುವುದನ್ನು ಲೋಕಸಭಾ ಚುನಾವಣೆ ಯ ಮಾದರಿ ನೀತಿ ಸಂಹಿತೆ ನಿರ್ಬಂಧಿಸುತ್ತದೆ. ಇಂತಹ ಸಂದರ್ಭದಲ್ಲಿ, ಜನರು ತಾವು ಉಳಿಸಿದ ಹಣವನ್ನೂ ಹೊರಗೆ ತರುವುದಕ್ಕೆ ಹೆದರುತ್ತಾರೆ. ಆನ್​ಲೈನ್​ನಲ್ಲಿ ವರ್ಗಾವಣೆ ಮಾಡಿದರೂ ನಂತರ ಪರಿಶೀಲನೆಗೆ ಒಳಪಡಬಹುದು ಎಂದು ಭಯಪಡುತ್ತಾರೆ. ಚಿನ್ನದ ಈಗಿನ ಬೆಲೆ ನೋಡಿದರೆ, 50 ಸಾವಿರ ರೂ.ಗೆ 7 ಗ್ರಾಂ ಚಿನ್ನ ಕೂಡ ಬರುವುದಿಲ್ಲ.
| ಶಂಕರ್ ಠಕ್ಕರ್ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), ಮಹಾರಾಷ್ಟ್ರ ಘಟಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
