ಬೆಂಗಳೂರು/ಬೆಳಗಾವಿ:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಪ್ತ ನದಿಗಳ ಬೀಡು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಭಾವದಿಂದಾಗಿ ಜಲ ಸಂಕಷ್ಟ ಎದುರಾಗಿದ್ದು, 800 ಹಳ್ಳಿಗಳ ಜನರಿಗೆ ಕೊಳವೆಬಾವಿಗಳೇ ಆಸರೆಯಾಗಿವೆ. ಜೂನ್ ಮುಗಿಯುತ್ತ ಬಂದರೂ ಮುಂಗಾರು ಸುರಿಯದೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ 1,275 ಗ್ರಾಮ ಗಳ ಜನರು ಕುಡಿಯುವ ನೀರಿಗಾಗಿ ಘಟಪ್ರಭಾ, ಮಲಪ್ರಭಾ, ರಕ್ಕಸಕೊಪ್ಪ ನದಿಗಳು, ಕೊಳವೆಬಾವಿ, ತೆರೆದ ಬಾವಿ ಅವಲಂಬಿಸಿದ್ದಾರೆ. ಅದರಲ್ಲಿ 800ಕ್ಕೂ ಅಧಿಕ ಹಳ್ಳಿಗಳ ಜನರಿಗೆ ಕುಡಿಯುವ ನೀರಿಗೆ ಕೊಳವೆಬಾವಿಗಳೇ ಆಸರೆ. ಮತ್ತೊಂದೆಡೆ ನದಿಗಳು, ಕೆರೆಗಳು ಬತ್ತಿದ್ದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅವಲಂಬಿತ 500 ಹಳ್ಳಿಗಳು ಜಲ ಸಂಕಷ್ಟಕ್ಕೆ ತುತ್ತಾಗಿವೆ. ವಾರದಲ್ಲಿ ಮಳೆಯಾಗದಿದ್ದರೆ 150ಕ್ಕೂ ಅಧಿಕ ಹಳ್ಳಿಗಳಲ್ಲಿ ಸಮಸ್ಯೆ ತೀವ್ರವಾಗಲಿದೆ. ಜಿಲ್ಲೆಯ ವಿವಿಧೆಡೆ 145 ಕೊಳವೆಬಾವಿ ಕೊರೆಸಲು ಪ್ರಸ್ತಾವನೆ ಬಂದಿದೆ. ಖಾನಾಪುರದಲ್ಲಿ 1,000 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. 50ಕ್ಕೂ ಅಧಿಕ ಕೊಳವೆಬಾವಿ ಕೊರೆಯಿಸಲಾಗಿದ್ದರೂ ಹಲವೆಡೆ ನೀರಿನ ಪಸೆಯೇ ಇಲ್ಲ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್​ಗಳು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 13 ಹಳ್ಳಿಗಳಲ್ಲಿ ಬರ:ವಿಜಯಪುರ ಜಿಲ್ಲೆಯ 13 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ ಬಾರದಿದ್ದರೆ ನಗರ ಪ್ರದೇಶಗಳಿಗೂ ನೀರಿನ ಸಮಸ್ಯೆ ವಿಸ್ತರಿಸಲಿದ್ದು, ಕುಡಿವ ನೀರು ಪೂರೈಕೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಿಂಧೆ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ 120 ಹಳ್ಳಿಗಳಲ್ಲಿ ಸಮಸ್ಯೆ:ಬಾಗಲಕೋಟೆ ಜಿಲ್ಲೆಯ 120 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಮೂರು ನದಿಗಳು ಬತ್ತಿ ಶಾಶ್ವತ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿವೆ. ಬೋರ್​ವೆಲ್, ತೆರೆದ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರ, ಪಟ್ಟಣಗಳಲ್ಲಿ ನೀರು ಪೂರೈಕೆ ಅವಧಿ ಬದಲಿಸಿ ಸಮಸ್ಯೆ ಉಲ್ಬಣಿಸಿದಂತೆ ನೋಡಿಕೊಳ್ಳಲಾಗಿದೆ. ಮಳೆ ವಿಳಂಬವಾದಷ್ಟು ಸಮಸ್ಯೆ ತೀವ್ರಗೊಳ್ಳಲಿದೆ. ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ಹೀಗಾಗಿ ಸ್ವಲ್ಪಮಟ್ಟಿಗೆ ಸಮಸ್ಯೆ ತಗ್ಗಿದೆ. ಇಲ್ಲಿಯವರೆಗೆ ಟ್ಯಾಂಕರ್ ಮೂಲಕ ಹಳ್ಳಿಗೆ ನೀರು ಪೂರೈಸಿದ ವರದಿಯಾಗಿಲ್ಲ.
ಬಳ್ಳಾರಿ ಜಿಲ್ಲೆಯಲ್ಲಿ 24 ಹಳ್ಳಿಗಳಲ್ಲಿ ಬರ:ಜಿಲ್ಲೆಯ 24ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಬಳ್ಳಾರಿ ತಾಲೂಕಿನ ವೇಣಿ ವೀರಾಪುರ, ಶಂಕರ ಬಂಡೆ, ತಿರುಮಲ ಕ್ಯಾಂಪ್, ವಿಘ್ನೕಶ್ವರ ಕ್ಯಾಂಪ್ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ನೀರಿಗಾಗಿ ಖಾಸಗಿ ಟ್ಯಾಂಕರ್ ಮೊರೆ ಅನಿವಾರ್ಯವಾಗಿದೆ. ಪ್ರತಿ ಕೊಡ ನೀರಿಗೆ 5 ರೂ. ನಿಂದ 10 ರೂ. ವರೆಗೆ ನೀಡಬೇಕಿದೆ. ಶಂಕರ್ ಬಂಡೆಯಿಂದ ರೂಪನಗುಡಿಗೆ 10 ಕಿ.ಮೀ. ದೂರ ಕ್ರಮಿಸಿ ಬೈಕ್​ನಲ್ಲಿ ಕುಡಿಯುವ ನೀರು ತರುವಂತಾಗಿದೆ. ತುಂಗಭದ್ರಾ ಜಲಾಶಯದ ಒಡಲು ಖಾಲಿಯಾಗಿದ್ದು, ಕಾಲುವೆಗೆ ನೀರು ಹರಿದಿಲ್ಲ. ಕಾಲುವೆಗೆ ನೀರು ಹರಿಯುವವರೆಗೆ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಕಾಡಲಿದೆ.
ಕೊಪ್ಪಳ ಜಿಲ್ಲೆಯಲ್ಲಿ 15 ಹಳ್ಳಿಗಳಲ್ಲಿ ಬರ:ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದು, ಕೊಪ್ಪಳ, ಗಂಗಾವತಿ ನಗರ ಸೇರಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಒಳಪಡುವ ಗ್ರಾಮಗಳ ಸ್ಥಿತಿ ಬಿಗಡಾಯಿಸಲಿದೆ. ಗಂಗಾವತಿ ತಾಲೂಕಿನಲ್ಲಿ 3, ಕನಕಗಿರಿ 4, ಕೊಪ್ಪಳ 6, ಕುಷ್ಟಗಿ 2 ಸೇರಿ ಒಟ್ಟು 15 ಹಳ್ಳಿಗಳಿಗೆ 19 ಖಾಸಗಿ ಬೋರ್​ವೆಲ್​ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 9 ಗ್ರಾಮಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕುಷ್ಟಗಿ ತಾಲೂಕಿನ ಬಿಳೇಬಾವಿ, ಗುಡ್ಡದ ದೇವಲಾಪುರ ಕೆ.ಬೋದೂರಿನಲ್ಲಿ ನೀರಿನ ಬವಣೆ ಕಾಣಿಸಿಕೊಂಡಿದೆ. ಕುಕನೂರು ತಾಲೂಕಿನ ಯರೇ ಭಾಗದ ಗ್ರಾಮಗಳಲ್ಲಿ ಕುಡಿಯಲು ಕೆರೆ ನೀರನ್ನು ಆಶ್ರಯಿಸಿದ್ದು, ಮಳೆಯಾಗದಿದ್ದಲ್ಲಿ ಅಭಾವ ಉಂಟಾಗಲಿದೆ.
50 ಹಳ್ಳಿಗಳಲ್ಲಿ ತುಟಾಗ್ರತೆ:ಹಾವೇರಿ ಜಿಲ್ಲೆಯಲ್ಲಿ ಮಳೆ ವಿಳಂಬದಿಂದ 145 ಹಳ್ಳಿಗಳಲ್ಲಿ ಬರಗಾಲ ಉಂಟಾಗಬಹುದು ಎಂದು ಕೆಲವು ದಿನದ ಹಿಂದೆ ಅಂದಾಜಿಸಲಾಗಿತ್ತು. ಈಗ 50 ಹಳ್ಳಿಗಳಲ್ಲಿ ನೀರಿನ ತುಟಾಗ್ರತೆ ಉಂಟಾಗಿದೆ. ಇನ್ನೂ ಒಂದು ವಾರ ಮಳೆಯಾಗದೇ ಇದ್ದರೆ ಈ ಸಂಖ್ಯೆ ನೂರನ್ನು ದಾಟುವ ಅಪಾಯವಿದೆ. ಗದಗ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ತೀವ್ರ ಕೊರತೆ ಕಂಡುಬಂದಿದೆ.
ಮಳೆಯಾಗದ ಕಾರಣ ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಅವಶ್ಯವಿರುವ ಕಡೆಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಅನುದಾನ ಸಾಕಷ್ಟು ಪ್ರಮಾಣದಲ್ಲಿದೆ.
| ನಿತೇಶ ಪಾಟೀಲ, ಜಿಲ್ಲಾಧಿಕಾರಿ
16ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬರ:ಮುಂಗಾರು ಮಳೆ ವಿಳಂಬ ಹಾಗೂ ಅಂತರ್ಜಲ ಕುಸಿತದಿಂದ ವಿಜಯನಗರ ಜಿಲ್ಲೆಯ 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡಲಿದೆ. ಸದ್ಯ ಗ್ರಾಪಂಗಳು ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಸುತ್ತಿವೆ. ಹೊಸಪೇಟೆ ನಗರಸಭೆ ವ್ಯಾಪ್ತಿಯ ಸಿದ್ದಲಿಂಗಪ್ಪ ಚೌಕಿ, 88 ಮುದ್ಲಾಪುರ, ಮತ್ತಿತರೆಡೆ ಸಮಸ್ಯೆ ಇದೆ. ತಾಲೂಕಿನ ನಾಗೇನಹಳ್ಳಿಯಲ್ಲಿ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದಿದ್ದರೆ, ಸೀತಾರಾಮ ತಾಂಡಾದಲ್ಲಿ ಟ್ಯಾಂಕರ್​ನಿಂದ ನೀರು ಒದಗಿಸಲಾಗುತ್ತಿದೆ. ಹರಪನಹಳ್ಳಿ ತಾಲೂಕಿನ ಕೆರೆಗುಡಿಹಳ್ಳಿ, ಇಟ್ಟಿಗುಡಿ ಗ್ರಾಮದಲ್ಲಿ ಬಾಡಿಗೆ ಬೋರ್​ವೆಲ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹೂವಿನಹಡಗಲಿ, ಕೊಟ್ಟೂರು ತಾಲೂಕಿನ ಕೆಲವೆಡೆ ನೀರಿನ ಸಮಸ್ಯೆ ಎದುರಾಗಿದೆ. ಮಳೆಯಾಗದಿದ್ದಲ್ಲಿ ಹರಪನಹಳ್ಳಿ ತಾಲೂಕಿನ 59ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೀವಜಲಕ್ಕೆ ತತ್ವಾರ ಉಂಟಾಗಲಿದೆ.
* ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 12 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಿದ್ದರಿಂದ ಕೊಳವೆಬಾವಿ ಕೊರೆಸಲು ಸೂಚನೆ ನೀಡಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಮಳೆಯ ವಾತಾವರಣ ಮೂಡಿರುವುದು ಸಮಾಧಾನ ತರಿಸಿದೆ.
* ಗಡಿ ಜಿಲ್ಲೆ ಬೀದರ್​ನ ನಾಲ್ಕು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಕೆಲವು ಕಡೆ ಖಾಸಗಿ ಕೂಳವೆಬಾವಿ ಮೂಲಕ ನೀರು ಸರಬರಾಜು ನಡೆಯುತ್ತಿದೆ. ಮಳೆ ಬರದಿದ್ದರೆ 51 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವ ಸಾಧ್ಯತೆ ಇದೆ.
* ಯಾದಗಿರಿ ಜಿಲ್ಲೆಯ 20 ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇದೆ. ಒಂದು ತಿಂಗಳಲ್ಲಿ ಮಳೆಯಾಗದಿದ್ದರೆ 65ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲಕ್ಷಾಮ ಎದುರಾಗುವ ಭೀತಿ ಇದೆ. ಈಗಾಗಲೇ ಶಹಾಪುರ ಪಟ್ಟಣದಲ್ಲಿ ವಾರಕ್ಕೆ ಮೂರು ದಿನ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ.
ರಾಯಚೂರಿನ 140ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬರ:ಪ್ರಮುಖವಾಗಿ ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ ಅವಲಂಬಿತ ಹಳ್ಳಿಗಳಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದಿದೆ. ರಾಯಚೂರು ನಗರದ 10ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಕಳೆದ 15 ದಿನಗಳಿಂದ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಸಿಂಧನೂರು ನಗರದಲ್ಲಿ ವಾರಕ್ಕೊಮ್ಮೆ, ಮಾನ್ವಿಯಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಿಂದೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಹರಿಸಿ ತುಂಬಿಸಲಾಗಿದ್ದ ಕೆರೆಗಳು ಖಾಲಿಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಕೊಳವೆಬಾವಿಗಳು ಬತ್ತಿದ್ದು, ಲಿಂಗಸುಗೂರು, ದೇವದುರ್ಗ ತಾಲೂಕಿನ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪ್ರಸ್ತುತ ಕಾಲುವೆ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಮಳೆಯಾದಲ್ಲಿ ಸಮಸ್ಯೆ ಅಲ್ಪಮಟ್ಟಿಗೆ ಕಡಿಮೆಯಾಗಲಿದೆ.
ಸಮಸ್ಯೆ ಎದುರಿಸಲು ಸರ್ಕಾರ ಶಕ್ತ:ಕುಡಿಯುವ ನೀರು ಸೇರಿ ಎದುರಾಗುವ ಯಾವುದೇ ಸಮಸ್ಯೆಯನ್ನು ಪರಿಣಾಮಕಾರಿ ಯಾಗಿ ನಿಭಾಯಿ ಸಲು ಸರ್ಕಾರ ಶಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದನ್ನು ಸಮರ್ಥವಾಗಿ ಎದುರಿಸಲು ಎರಡು ಬಾರಿ ಜಿಲ್ಲಾಧಿಕಾರಿ ಹಾಗೂ ಜಿಪಂ. ಸಿಇಒಗಳ ಜತೆ ವಿಡಿಯೋ ಸಂವಾದ ನಡೆಸಿ ಅಗತ್ಯ ಸೂಚನೆ ನೀಡಲಾಗಿದೆ. ಮಳೆ ಈಗ ಪ್ರಾರಂಭವಾಗಿದ್ದು, ಇನ್ನಷ್ಟು ವ್ಯಾಪಕವಾಗಬೇಕಿದೆ. ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದೇವೆ ಎಂದರು.
77 ಅಡಿಗೆ ಕುಸಿದ ಕೆಆರ್​ಎಸ್ ನೀರು:ಕೆ.ಆರ್.ಸಾಗರ ಅಣೆಕಟ್ಟೆಯ ನೀರಿನ ಮಟ್ಟ ಶನಿವಾರ 77.05 ಅಡಿಗೆ ತಲುಪಿದೆ. 124.80 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ ಒಳಹರಿವು 514 ಕ್ಯೂಸೆಕ್, ಹೊರ ಹರಿವು 834 ಕ್ಯೂಸೆಕ್ ಇದ್ದು, 9.808 ಟಿಎಂಸಿ ನೀರಿನ ಸಂಗ್ರಹವಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದ ಕಾರಣ ಒಳಹರಿವಿನಲ್ಲಿ ಭಾರಿ ಇಳಿಮುಖವಾಗಿದ್ದು, 2017ರ ನಂತರ ಜೂನ್ 3ನೇ ವಾರದಲ್ಲಿ 77.05 ಅಡಿಗೆ ನೀರಿನ ಮಟ್ಟ ಕುಸಿತ ಕಂಡಿದೆ. 60 ಅಡಿ ಸಂಗ್ರಹ ತನಕ ಕುಡಿಯುವ ನೀರಿಗೆ ಬಳಸಬಹುದು. ಹೀಗಾಗಿ ಸದ್ಯಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ.
ತಲಾ 1 ಕೋಟಿ ರೂ. ಅನುದಾನ:ಕಲಬುರಗಿ ಜಿಲ್ಲೆಯಲ್ಲಿ ಅಂದಾಜು 248 ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, 10 ಹಳ್ಳಿಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. 319 ಸಮಸ್ಯಾತ್ಮಕ ಹಳ್ಳಿ ಗುರುತಿಸಿದ್ದು, ಪರಿಹಾರಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ತೀವ್ರ ತೊಂದರೆ ಕಂಡು ಬಂದ ಕಡೆ ಜಲಮೂಲ ಪತ್ತೆಗೆ ಜಿಲ್ಲಾಡಳಿತ ಸೂಚಿಸಿದೆ. ಈಗಾಗಲೇ ಸರ್ಕಾರ ಕಲಬುರಗಿ ಸೇರಿ ಎಲ್ಲ ಜಿಲ್ಲೆ ಗಳಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ತಂಗಿಗೆ ಮೆಸೇಜ್ ಮಾಡ್ಬೇಡ’ ಎಂದು ಬುದ್ಧಿಮಾತು ಹೇಳಿದ ಅಣ್ಣನ ಕೊಂದೇಬಿಟ್ರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twelve =
Remember me
