ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯ ಸರ್ಕಾರದ ಸೇವೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಿ, ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸರ್ಕಾರ ಖಾಲಿ ಹುದ್ದೆಗಳ ಭರ್ತಿಯತ್ತ ಗಮನ ಹರಿಸಿದ್ದು, ಸುಮಾರು 30 ಸಾವಿರ ಹುದ್ದೆಗಳ ನೇಮಕಕ್ಕೆ ಹಸಿರು ನಿಶಾನೆ ತೋರಿಸಿದೆ. ರಾಜ್ಯದಲ್ಲಿ ಸುಮಾರು 2.58 ಲಕ್ಷ ಹುದ್ದೆಗಳು ಖಾಲಿ ಇವೆ. ನೌಕರರ ಮೇಲಿನ ಕಾರ್ಯದೊತ್ತಡ ಕಡಿಮೆಯಾಗಬೇಕು ಎಂಬ ಕಾರಣಕ್ಕಾಗಿ ನೌಕರರ ಸಂಘಟನೆಗಳು ಪದೇಪದೆ ಖಾಲಿ ಹುದ್ದೆಗಳ ಭರ್ತಿಗೆ ಒತ್ತಡ ತರುತ್ತಲೇ ಇವೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ನೇಮಕಾತಿಗಳೇ ನಡೆದಿರಲಿಲ್ಲ. ಆದ್ದರಿಂದ ಸರ್ಕಾರ ಗ್ಯಾರಂಟಿಯ ಆರ್ಥಿಕ ಒತ್ತಡದ ನಡುವೆಯೂ ನೇಮಕಾತಿಗೂ ಆದ್ಯತೆ ನೀಡುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಸರ್ಕಾರದ ಹುದ್ದೆಗಳ ನೇಮಕ ಆರ್ಥಿಕ ಹೊರೆ ಎಂಬುದು ಆಡಳಿತ ಸುಧಾರಣೆಯ ನೆಪದಲ್ಲಿ ಹೇಳುವ ಮಾತು. ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಖಾಸಗಿ ವಲಯವೇ ಪರಿಹಾರವೆಂಬ ಅಭಿಪ್ರಾಯವೂ ಇದೆ. ಆದರೂ ಸರ್ಕಾರದ ಕಾರ್ಯಾಂಗಕ್ಕೆ ಹೊಸರಕ್ತ ಬರಬೇಕೆಂಬ ಕಾರಣಕ್ಕೆ ನೇಮಕಾತಿಯೂ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗುತ್ತಿಗೆ ಹಾಗೂ ಹೊರ ಗುತ್ತಿಗೆಯಲ್ಲಿ ಸುಮಾರು 1.50 ಲಕ್ಷ ಜನ ದುಡಿಯುತ್ತಿದ್ದಾರೆ. ಈ ನೌಕರರಿಗೆ ಯಾವುದೇ ಉತ್ತರದಾಯಿತ್ವ ಇರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಸಮಯ ಇವರನ್ನು ನಂಬಿ ಸರ್ಕಾರ ನಡೆಸಲು ಸಾಧ್ಯವಿಲ್ಲವೆಂಬ ಅಭಿಪ್ರಾಯವಿದೆ. ಆದ್ದರಿಂದ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದೆ.
ಆಡಳಿತ ಸುಧಾರಣಾ ಆಯೋಗ ಹುದ್ದೆಗಳ ಸಂಖ್ಯೆ ಕಡಿಮೆ ಮಾಡುವಂತೆ ತನ್ನ ಶಿಫಾರಸು ನೀಡಿದೆ. ಆದರೆ ಹುದ್ದೆಗಳನ್ನು ಕಡಿತಗೊಳಿಸಿದರೆ ನೌಕರರಿಗೆ ಇನ್ನಷ್ಟು ಕಾರ್ಯದೊತ್ತಡವಾಗಲಿದೆ. ಉತ್ತಮ ಫಲಿತಾಂಶವೂ ಬರುವುದಿಲ್ಲ. ಸಾಧ್ಯವಾದಷ್ಟು ಹುದ್ದೆಗಳನ್ನು ಭರ್ತಿ ಮಾಡಿ ಒತ್ತಡ ಕಡಿಮೆ ಮಾಡುವ ಕಡೆ ಸರ್ಕಾರ ಗಮನ ಕೇಂದ್ರೀಕರಿಸಿದೆ ಎಂದು ಹೇಳಲಾಗುತ್ತಿದೆ.
ಬಜೆಟ್​ನಲ್ಲಿಯೂ ಪ್ರಸ್ತಾಪ?:ಕೃಷಿ, ಪಶು ಸಂಗೋಪನೆ, ಜಲ ಸಂಪನ್ಮೂಲ, ಆರೋಗ್ಯದಂತಹ ಕೆಲವು ಇಲಾಖೆಗಳಲ್ಲಿ ತಾಂತ್ರಿಕ ಹುದ್ದೆಗಳನ್ನು ನೇಮಕ ಮಾಡಬೇಕಾಗಿದ್ದು, ಅದರ ಬಗ್ಗೆ ಬಜೆಟ್​ನಲ್ಲಿಯೂ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ.
ಪರೀಕ್ಷೆಗಳು ಎಲ್ಲಿಂದ:ನೇಮಕಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಮೂಲಕ ಪರೀಕ್ಷೆ ನಡೆಸಿ ನೇಮಕ ಮಾಡಲಾಗುತ್ತದೆ. ಇದರ ಜತೆಗೆ ಇಲಾಖೆಗಳು ನೇರವಾಗಿ ಪರೀಕ್ಷೆ ನಡೆಸಿ ಹುದ್ದೆಗಳ ಭರ್ತಿ ಮಾಡಲಿವೆ ಎಂದು ಹೇಳಲಾಗುತ್ತದೆ.
ಹುದ್ದೆಗಳ ಹೆಚ್ಚಳಕ್ಕೆ ಒತ್ತಾಯ:ರಾಜ್ಯದ ಜನಸಂಖ್ಯೆ 3 ಕೋಟಿ ಇದ್ದಾಗ 7.69 ಲಕ್ಷ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಜನಸಂಖ್ಯೆ ಈಗ 7 ಕೋಟಿ ತಲುಪಿದ್ದರು ಹುದ್ದೆಗಳ ಸಂಖ್ಯೆ ಹೆಚ್ಚಾಗಿಲ್ಲ. ಈಗ 2.58 ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ಸರಿಸುಮಾರು 15 ಸಾವಿರ ನೌಕರರು ನಿವೃತ್ತರಾಗುತ್ತಿದ್ದಾರೆ. ರಾಜ್ಯದ ಜನತೆಗೆ ಸರ್ಕಾರದ ಸೇವೆಯನ್ನು ಸರಿಯಾಗಿ ನೀಡಲಾಗುತ್ತಿಲ್ಲ. ಆದ್ದರಿಂದ ಹುದ್ದೆಗಳನ್ನು ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಬೇಕೆಂಬ ಬೇಡಿಕೆಯೂ ಇದೆ. ಅಂದರೆ ಕನಿಷ್ಠ 15 ಲಕ್ಷ ಹುದ್ದೆಗಳು ಸರ್ಕಾರದಲ್ಲಿ ಸೃಷ್ಠಿಯಾಗಬೇಕೆಂಬ ಒತ್ತಾಯ ನಿರುದ್ಯೋಗಿ ಯುವಕರಿಂದ ಕೇಳಿ ಬರುತ್ತಿದೆ.
ವೇತನಕ್ಕೆ ವೆಚ್ಚ:ನೌಕರರ ವೇತನ ಮಾತ್ರ ಪ್ರತಿ ವರ್ಷ ಹೆಚ್ಚಳವಾಗುತ್ತಲೆ ಇದೆ. 2024-25ರ ಹಣಕಾಸು ವರ್ಷದಲ್ಲಿ 80297 ಕೋಟಿ ರೂ. ವೇತನಕ್ಕೆ ಹಾಗೂ 29813 ಕೋಟಿ ರೂ. ಪಿಂಚಣಿಗೆ ಬೇಕಾಗುತ್ತದೆ ಎಂಬ ಅಂದಾಜಿದೆ. ಪ್ರತಿ ವರ್ಷ ವೇತನಕ್ಕೆ ಬಜೆಟ್​ನಲ್ಲಿ ಮೀಸಲಿಡಲಾಗುತ್ತದೆ. ಬಳಕೆ ಆಗದಿರುವ ಮೊತ್ತ ಬೇರೆ ಉದ್ದೇಶಕ್ಕೆ ವಿನಿಯೋಗಿಸಲಾಗುತ್ತದೆ.
ಎಲ್ಲೆಲ್ಲಿ ಎಷ್ಟು ಹುದ್ದೆಗಳ ಭರ್ತಿ:ಕೃಷಿ 34, ಪಶು ಸಂಗೋಪನೆ 30, ಹಣಕಾಸು 195, ಡಿಪಿಎಆರ್ 92, ಗೃಹ 292, ಆರೋಗ್ಯ 262, ಕಾನೂನು 301, ಲೋಕೋಪಯೋಗಿ 512, ಕಂದಾಯ 106, ಗ್ರಾಮೀಣಾಭಿವೃದ್ಧಿ 129, ಮಹಿಳಾ ಮತ್ತು ಮಕ್ಕಳ ಕಲ್ಯಾಣ 33, ಸಾರಿಗೆ ನಿಗಮಗಳಲ್ಲಿ 1650, 20 ಸಾವಿರ ಶಿಕ್ಷಕರು, 1250 ಪ್ರಾಧ್ಯಾಪಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 225 ಗೆಜೆಟೆಡ್ ಪ್ರೊಬೇಷನರ್​ಗಳ ನೇಮಕಕ್ಕೆ ಆದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ನೇಮಕಾತಿ ಮಾಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
