ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಂಡು ಲೋಕಾಯುಕ್ತ ಮರುಸ್ಥಾಪನೆಯಾದ ನಂತರ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿರುವುದಂತೂ ನಿಜ. ಸರ್ಕಾರಿ ಅಧಿಕಾರಿ-ಸಿಬ್ಬಂದಿ ವಿರುದ್ಧ ಟ್ರಾ್ಯಪ್, ದಾಳಿಗಳ ಜತೆಗೆ ಸರ್ಕಾರಿ ಕಚೇರಿಗಳಲ್ಲಿ ಜನರಿಗೆ ಸರಿಯಾದ ಸೇವೆ ಒದಗಿಸುವ ವ್ಯವಸ್ಥೆ ತರಲೂ ಲೋಕಾಯುಕ್ತರು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಲೋಕಾಯುಕ್ತ ಸಂಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ? ಸರ್ಕಾರದಿಂದ ಏನಾಗಬೇಕು? ಏನೆಲ್ಲ ಸೌಲಭ್ಯ ಬೇಕು? ಸಾರ್ವಜನಿಕ ಸಹಕಾರ ಹೇಗಿರಬೇಕು? ಎಂಬೆಲ್ಲ ವಿಚಾರಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ವಿಜಯವಾಣಿ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು:ಕಡ್ಡಾಯವಿದ್ದರೂ ಆಸ್ತಿ ವಿವರ ಸಲ್ಲಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಜನಪ್ರತಿನಿಧಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡುವ ಸಮಯ ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಮಂಗಳವಾರ ಸಂವಾದದಲ್ಲಿ ಪಾಲ್ಗೊಂಡ ಅವರು, ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಒಂದೂಮುಕ್ಕಾಲು ವರ್ಷದಲ್ಲಿ ಸಾಂವಿಧಾನಿಕ ಸಂಸ್ಥೆ ಕಂಡಿರುವ ಸುಧಾರಣೆ, ಬದಲಾವಣೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 22ರ ಪ್ರಕಾರ ಪ್ರತಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಪ್ರತಿವರ್ಷ ಜೂ.30ರ ಒಳಗಾಗಿ ಸಲ್ಲಿಸಬೇಕು. ಆದರೆ, ಈ ನಿಯಮವನ್ನು ಹೆಚ್ಚಿನ ಜನಪ್ರತಿನಿಧಿಗಳು ಪಾಲಿಸುತ್ತಿಲ್ಲ. ನಿಯಮ ಪಾಲನೆ ಮಾಡದೆ ಇರುವವರಿಗೆ ನೋಟಿಸ್ ನೀಡಲಾಗುವುದು. ಆಗಲೂ ಪಾಲನೆ ಮಾಡದೆ ಇದ್ದರೆ ಕನ್ನಡ ಮತ್ತು ಆಂಗ್ಲ್ಲ ಪತ್ರಿಕೆಗಳಲ್ಲಿ ಅಂತಹವರ ಹೆಸರುಗಳನ್ನು ಪ್ರಕಟಿಸುತ್ತೇವೆ. ಅದಕ್ಕೂ ಗೌರವ ಕೊಡದಿದ್ದಲ್ಲಿ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರಿಗೆ ಮುಂದಿನ ಕ್ರಮಕ್ಕಾಗಿ ಶಿಫಾರಸು ಮಾಡುತ್ತೇವೆ. ಆದರೂ, ಕೆಲವರು ಸಲ್ಲಿಸಿದರೆ ಆಯಿತು ಎಂದು ತಿರಸ್ಕಾರದ ಮನೋಭಾವನೆ ಹೊಂದಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸಂಸ್ಥೆಗೆ ಅವಕಾಶ ಇಲ್ಲ ಎಂದರು.
ಹೆಚ್ಚಿನ ಅಧಿಕಾರಕ್ಕಿಂತ ತಕ್ಷಣ ಕ್ರಮ ಕೈಗೊಳ್ಳಿ:ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ಬೇಕು ಎಂದು ಕೇಳಲ್ಲ. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಲಂಚ ಪಡೆಯುವಾಗ ಟ್ರಾ್ಯಪ್, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮತ್ತು ಸ್ವಯಂ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿ ಶಿಸ್ತುಕ್ರಮಕ್ಕೆ ಮತ್ತು ವಿಚಾರಣೆಗೆ ಅನುಮತಿ ಕೋರಿ ವರದಿ ಸಲ್ಲಿಸಿದಾಗ ಪರಿಶೀಲನೆ ನಡೆಸಿ ಸರಿ ಇದ್ದರೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಸಂಸ್ಥೆಗೆ ವಾಪಸ್ ಕಳುಹಿಸಿ ಮರು ಪರಿಶೀಲನೆಗೆ ಅವಕಾಶ ಕೊಟ್ಟರೆ ಸಾಕು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಿ ಆರೋಪಿ ವಿರುದ್ಧದ ಕ್ರಿಮಿನಲ್ ಕೇಸ್​ನಲ್ಲಿ ನಿರಪರಾಧಿ ಎಂದು ಸಾಬೀತಾಗಿದೆ ಎನ್ನುವ ಕಾರಣಕ್ಕೆ ವರದಿಯನ್ನೇ ತಿರಸ್ಕಾರ ಮಾಡುವುದು ಸರಿಯಲ್ಲ. ಲೋಕಾಯುಕ್ತ ಎಂಬ ದೊಡ್ಡ ಸಂಸ್ಥೆ ಸ್ಥಾಪನೆ ಮಾಡಿ ಅದಕ್ಕೆ ನೂರಾರು ಸಿಬ್ಬಂದಿ, ಕೋಟ್ಯಂತರ ರೂ. ವ್ಯಯ ಮಾಡಿ ಸಲ್ಲಿಸುವ ವರದಿಯನ್ನೇ ತಿರಸ್ಕಾರ ಮಾಡುವುದು ಎಷ್ಟು ಸರಿ? ಎಂದು ಬಿ.ಎಸ್. ಪಾಟೀಲ್ ಪ್ರಶ್ನಿಸಿದರು.
ಸಾಬೀತಾದರೆ ಸಣ್ಣ ಪ್ರಮಾಣದ ದಂಡ ವಿಧಿಸಲು ಮಾತ್ರ ಕೋರ್ಟ್​ಗೆ ಅಧಿಕಾರವಿದೆ. ಆದ್ದರಿಂದ ಕಠಿಣ ಕ್ರಮ ಆಗುವುದಿಲ್ಲ. ಹಾಗಾಗಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಅದನ್ನು ಕೇಳುವಂತಹ ಸಮಯ ಕೂಡ ಈಗ ಬಂದಿದೆ ಎಂದು ಪಾಟೀಲ್ ಸೂಚ್ಯವಾಗಿ ತಿಳಿಸಿದರು. ತಾಂತ್ರಿಕ ಸಮಸ್ಯೆಯಿಂದ ಕ್ರಿಮಿನಲ್ ಕೇಸ್​ನಿಂದ ಆರೋಪಿ ಪರವಾಗಬಹುದು. ಆದರೆ, ಟ್ರಾ್ಯಪ್, ದಾಳಿ ಸೇರಿ ಸಾಂರ್ದಭಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಜತೆಗೆ ವಿಚಾರಣೆಗೆ ಅನುಮತಿ ಕೋರಿದಾಗ ಸರ್ಕಾರ ನಿಗದಿತ ಸಮಯದಲ್ಲಿ ಒಪ್ಪಿಗೆ ಸೂಚಿಸಿದರೆ ಸಂಸ್ಥೆಗೆ ಅನುಕೂಲವಾಗಲಿದೆ ಎಂದರು.
ಸಾರ್ವಜನಿಕರಿಗೆ ಲೋಕಾ ಪಾಠ:ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸುಖಾಸುಮ್ಮನೆ ಆರೋಪ ಮಾಡಬೇಡಿ. ಸಾಕ್ಷ್ಯಾಧಾರ ಇಲ್ಲದೆ ದೂರು ಕೊಟ್ಟು ಕೈತೊಳೆದುಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ನ್ಯಾ. ಬಿ.ಎಸ್. ಪಾಟೀಲ್ ಸಲಹೆ ನೀಡಿದರು. ಭ್ರಷ್ಟಾಚಾರ ಅಥವಾ ಸರ್ಕಾರಿ ಕೆಲಸ ಮಾಡಿಕೊಡಲು ವಿಳಂಬ ಮಾಡಿದಾಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ. ಅದಕ್ಕೆ ಬೇಕಾದ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಮರು ದಿನವೇ ಸಂಬಂಧಪಟ್ಟ ಸರ್ಕಾರಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬಹುದು. ಕೆಲವರು ದೂರು ಕೊಟ್ಟು ಸುಮ್ಮನಾಗುತ್ತಾರೆ. ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದೆ ನಾಳೆ ಬರುವೆ ಎಂದು ವಾಪಸಾಗುತ್ತಾರೆ. ಇದು ಸರಿಯಾದ ನಡೆಯಲ್ಲ. ದೂರು ಕೊಡಲು ಅನುಕೂಲ ಆಗಲೆಂದು ಮಾದರಿ ಪ್ರತಿಗಳು ಸಂಸ್ಥೆಯ ವೆಬ್​ಸೈಟ್​ನಲ್ಲಿ ಸಿಗಲಿವೆ. ಆ ಮಾದರಿಯಲ್ಲೇ ದೂರು ಕೊಡುವಂತೆ ನಾಗರಿಕರಿಗೆ ಲೋಕಾಯುಕ್ತರು ಮನವಿ ಮಾಡಿದರು.
ದೂರುದಾರನಿಗೆ ಜ್ಞಾನೋದಯ!:ಕೋರ್ಟ್​ಗಳಲ್ಲಿ ಲೋಕಾಯುಕ್ತ ಕೇಸ್​ಗಳು ವಜಾ ಆಗುತ್ತಿವೆ. ಆರೋಪಿಗಳಿಗೆ ಶಿಕ್ಷೆಯೇ ಆಗುವುದಿಲ್ಲ ಎಂಬ ಆರೋಪಗಳಿವೆ. ಇದಕ್ಕೆ ಕೇವಲ ಲೋಕಾಯುಕ್ತ ಮಾತ್ರ ಕಾರಣವಲ್ಲ. ದೂರುದಾರ, ಸಾಕ್ಷ್ಯ ನುಡಿಯುವವರು ಸೇರಿ ಸಾಕಷ್ಟು ಕಾರಣಗಳು ಇವೆ ಎಂದು ನ್ಯಾ. ಬಿ.ಎಸ್. ಪಾಟೀಲ್ ತಿಳಿಸಿದರು.
ಮಾಡಾಳ್ ವಿರುದ್ಧ ಮೇಲ್ಮನವಿ:ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮತ್ತು ಕಚೇರಿ ಮೇಲೆ ದಾಳಿ ವೇಳೆ ನಡೆಸಿದಾಗ 6 ಕೋಟಿ ರೂ. ಪತ್ತೆಯಾದ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ. ಈ ಪ್ರಕರಣವು ಶೀಘ್ರದಲ್ಲಿಯೇ ವಿಚಾರಣೆಗೆ ಬರಲಿದೆ ಎಂದು ಲೋಕಾಯುಕ್ತರು ಮಾಹಿತಿ ನೀಡಿದರು.
ದೊಡ್ಡವರ ಮೇಲೂ ದಾಳಿ ತಯಾರಿ!:ಗುಮಾಸ್ತ, ಪ್ರಥಮ ದರ್ಜೆ ನೌಕರ, ದ್ವಿತೀಯ ದರ್ಜೆ ಸಹಾಯಕ ಸೇರಿ ಕೆಳಹಂತದ ಅಧಿಕಾರಿ, ಸಿಬ್ಬಂದಿ ಮಾತ್ರ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿ ವರ್ಗ, ರಾಜಕಾರಣಿಗಳು ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಸಂಸ್ಥೆ ತಯಾರಿ ನಡೆಸುತ್ತಿದೆ. ಸಾಕ್ಷ್ಯಾಧಾರ ಆಧರಿಸಿ ಸೂಕ್ತ ಸಮಯದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಲೋಕಾಯುಕ್ತರು ಎಚ್ಚರಿಸಿದರು.
ಲೋಕಾ ಖಾಕಿಗೆ ಶಕ್ತಿ ತುಂಬಲು ಶಿಫಾರಸು:ಲೋಕಾಯುಕ್ತ ಪೊಲೀಸರಿಗೆ ಕೇಂದ್ರೀಕೃತ ವ್ಯವಸ್ಥೆ ಮತ್ತು ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಪೊಲೀಸ್ ತನಿಖೆಗೆ ಬೇಕಾದ ತಾಂತ್ರಿಕ ಸವಲತ್ತು ಕಲ್ಪಿಸಬೇಕಾಗಿದೆ. ಅಲ್ಲದೆ, ಇನ್​ಸ್ಪೆಕ್ಟರ್​ಗಳಿಂದ ಎಸ್​ಪಿ ಹಂತದವರೆಗೂ ಸಹಾಯಕರು, ವಾಹನ ಚಾಲಕರು ಇಲ್ಲ. ಸಂಸ್ಥೆಯಲ್ಲಿ ಅಂದಾಜು 700 ಹುದ್ದೆಗಳು ಖಾಲಿ ಉಳಿದಿವೆ. ಸದ್ಯ ಇರುವ ಅಧಿಕಾರಿ, ಸಿಬ್ಬಂದಿಗೆ ಕೂರಲು ಜಾಗ ಇಲ್ಲ. ಈ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ನ್ಯಾ. ಬಿ.ಎಸ್.ಪಾಟೀಲ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
