ಬೆಂಗಳೂರು:ಲಾಕ್​ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರವೀಗ ಷರತ್ತುಬದ್ಧ ಅನುಮತಿ ಕೊಟ್ಟಿದ್ದರೂ ಹಲವು ಇಲಾಖೆಗಳಲ್ಲಿ ಸಾಮಾನ್ಯ ವರ್ಗಾವಣೆಗಿಂತ ‘ಡೆಪ್ಯುಟೇಶನ್ ದಂಧೆ’ಯೇ (ನಿಯೋಜನೆ) ಜೋರಾಗಿದೆ. ಅದರಲ್ಲೂ ಸಾರಿಗೆ ಇಲಾಖೆಯ ಆರ್​ಟಿಒ ಕಚೇರಿಗಳಲ್ಲಂತೂ ಶೇ. 50 ಅಧಿಕಾರಿ ಮತ್ತು ನೌಕರರು ‘ನಿಯೋಜನೆ’ ಮೇಲೆ ಕಾರ್ಯಭಾರ ಮಾಡುತ್ತಿದ್ದಾರೆ. ಬೇಕೆಂದಾಗ ಎತ್ತಂಗಡಿ, ಬೇಡವೆಂದಾಗ ಮರು ನಿಯೋಜನೆ ವ್ಯವಸ್ಥೆ ರಾಜಾರೋಷವಾಗಿ ನಡೆಯುತ್ತಿದ್ದು, ಲಾಕ್​ಡೌನ್ ಸಂದರ್ಭದಲ್ಲೇ 232ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಯ ಸ್ಥಾನಪಲ್ಲಟವಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಸಾರಿಗೆ ಇಲಾಖೆ, ಲೋಕೋಪಯೋಗಿ, ಸಮಾಜ ಕಲ್ಯಾಣ, ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿ 10ಕ್ಕೂ ಹೆಚ್ಚು ಇಲಾಖೆಗಳಲ್ಲಿ ಬೇರೆ ಇಲಾಖೆಯಿಂದ ನಿಯೋಜನೆಗೆ ಬಂದು ಮಾತೃ ಇಲಾಖೆಗೆ ವಾಪಸ್ ಹೋಗದೆ ಅದೇ ಹುದ್ದೆಯಲ್ಲೇ ತಳವೂರಿದ್ದಾರೆ. ಆದರೆ, ಆರ್​ಟಿಒ ಕಚೇರಿಗಳಲ್ಲಿ ಮಾತ್ರ ಮೂಲ ಕಚೇರಿ ಬಿಟ್ಟು ಬೇರೆ ಬೇರೆ ಕಚೇರಿಗಳಿಗೆ ಡೆಪ್ಯುಟೇಶನ್ ಮಾಡಲಾಗುತ್ತಿದೆ. ಒಬ್ಬೊಬ್ಬ ಅಧಿಕಾರಿಗೆ ಎರಡು-ಮೂರು ಕಚೇರಿಗಳಲ್ಲಿ ಕರ್ತವ್ಯದ ಜವಾಬ್ದಾರಿ ಕೊಟ್ಟಿರುವ ಪರಿಣಾಮ ಎಲ್ಲೂ ಸರಿಯಾಗಿ ಜನರಿಗೆ ಸೇವೆ ಕೊಡಲಾಗದ ಪರಿಸ್ಥಿತಿ ಉದ್ಭವಿಸಿದೆ.
ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಾವಣೆ ನಡೆಸದಂತೆ ಸರ್ಕಾರ ಏಪ್ರಿಲ್​ನಲ್ಲೇ ನಿರ್ಬಂಧ ಆದೇಶ ಹೊರಡಿಸಿದ್ದರೂ 2020ರ ಸೆಪ್ಟೆಂಬರ್​ನಿಂದ 2021 ಜುಲೈ 22ರವರೆಗೂ ಆರ್​ಟಿಒಗಳಲ್ಲಿ ನಿರಂತರವಾಗಿ ಡೆಪ್ಯುಟೇಶನ್ ಹೆಸರಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಾವಣೆ ಮಾಡಿರುವುದಕ್ಕೆ ಪೂರಕ ಸಾಕ್ಷ್ಯಗಳಿವೆ. 232ಕ್ಕೂ ಅಧಿಕ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಡ್ತಿ ಹಾಗೂ ಡೆಪ್ಯುಟೇಶನ್ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ವರ್ಗಾವಣೆ ಮಾಡಿಲ್ಲ ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಡೆಪ್ಯುಟೇಶನ್ ಮೇಲೆ ನಿಯೋಜಿಸಲಾಗಿದೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಡೆಪ್ಯುಟೇಶನ್ ವ್ಯವಸ್ಥೆಗೆ 5 ವರ್ಷಗಳ ಹಿಂದೆಯೇ ಮಹಾಲೇಖಪಾಲರ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದರೂ ಈವರೆಗೂ ನಿಂತಿಲ್ಲ.
ಆರ್​ಟಿಒ ಹಿರಿಯ ಅಧಿಕಾರಿಗಳ ಪ್ರಕಾರ, ಮನೆ ಬಾಡಿಗೆ ಭತ್ಯೆ (ಎಚ್​ಆರ್​ಎ) ಅವ್ಯವಸ್ಥೆ ಯಿಂದಾಗಿ ಹಿಂದಿನ 10 ವರ್ಷದಲ್ಲಿ ಸರ್ಕಾರದ ಖಜಾನೆಗೆ 80ರಿಂದ 100 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಮೂಲ ವೇತನದ ಶೇ.24 ಎಚ್​ಆರ್​ಎ ಕೊಡಲಾಗುತ್ತದೆ. ಬೆಂಗಳೂರಿನ ಹೊರಗೆ ಕೆಲಸ ಮಾಡುವ ಅಧಿಕಾರಿ/ ಸಿಬ್ಬಂದಿಗೆ ಮೂಲ ವೇತನದ ಶೇ.8 ಎಚ್​ಆರ್​ಎ ಕೊಡಲಾಗುತ್ತದೆ. ಆದರೆ, ಬಹುತೇಕ ಅಧಿಕಾರಿಗಳು ದಾಖಲಾತಿ ಪ್ರಕಾರ ಬೆಂಗಳೂರಿನ ಕಚೇರಿಗೆ ವರ್ಗಾವಣೆಗೊಂಡು ಅಲ್ಲೇ ವೇತನ ಡ್ರಾ ಮಾಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಡೆಪ್ಯುಟೇಷನ್ ಮೇಲೆ ಬೇರೆ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಎಚ್​ಆರ್​ಎ ಮಾತ್ರ ಶೇ.24 ಪಡೆಯುತ್ತಿದ್ದಾರೆ.
ಆರ್​ಟಿಒಗಳಲ್ಲಿ ಡೆಪ್ಯುಟೇಷನ್ ಪದ್ಧತಿಯನ್ನು ಬೆದರಿಕೆ ಅಸ್ತ್ರವಾಗಿ ಬಳಸಿಕೊಳ್ಳುವ ಲೀಡರ್​ಶಿಪ್ ವ್ಯವಸ್ಥೆ ಜಾರಿಯಲ್ಲಿರುವ ಆರೋಪ ಕೇಳಿಬಂದಿದೆ. ನಿಗದಿಪಡಿಸಿದಷ್ಟು ಹಣ ಕೊಡದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೆಂಗಳೂರಿನಿಂದ ದೂರದ ಚಿತ್ರದುರ್ಗಕ್ಕೋ, ದಾವಣಗೆರೆಗೋ, ಬಳ್ಳಾರಿಗೋ ನಿಯೋಜನೆ ಮಾಡುವುದು. ಹಣ ಕೊಟ್ಟರೆ ಎತ್ತಂಗಡಿ ಆದೇಶ ಮಾರ್ಪಾಡುಗೊಳಿಸಿ, ಅವರು ಕೇಳಿದ ಜಾಗಕ್ಕೆ ಮರು ನಿಯೋಜಿಸುವ ವ್ಯವಸ್ಥೆ ಇದೆ ಎಂದು ಹಿರಿಯ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕರ್ನಾಟಕ ನಾಗರಿಕ ಸೇವೆಗಳ (ಕೆಸಿಎಸ್​ಆರ್) ನಿಯಮ 8(15)(ಜಿ) ಪ್ರಕಾರ ವರ್ಗಾವಣೆಯಾಗಿರುವ ಮೂಲ ಕಚೇರಿ ಯಿಂದ 1 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಸರ್ಕಾರಿ ನೌಕರರನ್ನು ಬೇರೆ ಕಚೇರಿಗೆ ನಿಯೋಜಿಸುವಂತಿಲ್ಲ. ಡೆಪ್ಯುಟೇಶನ್ ಮೇಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಹೆಚ್ಚುವರಿಯಾಗಿ ಪಾವತಿಸಿರುವ ಮನೆ ಬಾಡಿಗೆ ಭತ್ಯೆ ವ್ಯತ್ಯಾಸ ಮೊತ್ತವನ್ನು ವಸೂಲಿ ಮಾಡುವಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯ ದರ್ಶಿ, ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲ ಯಲ್ಲಿ (ಆರ್​ಜಿಯುಎಚ್​ಎಸ್) ನಿಯೋಜನೆ ಮೇರೆಗೆ ಒಟ್ಟು 32 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಆರೇಳು ಅಧಿಕಾರಿಗಳ ಅವಧಿ ಮುಗಿದಿದೆ. ನಿಯೋಜನೆ ಮೇರೆಗೆ ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ರಿಜಿಸ್ಟ್ರರ್ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅವಧಿ ಈಗಾಗಲೇ ಮುಗಿದಿದೆ. ಮಾತೃ ಹುದ್ದೆಗೆ ತೆರಳುವಂತೆ ಸರ್ಕಾರ ಆದೇಶಿಸಿದ್ದರೂ ಇನ್ನೂ ಹೋಗಿಲ್ಲ.
ಹತ್ತಾರೆ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಬಂದಿರುವ ವಲಸೆ ಅಧಿಕಾರಿಗಳ ದರ್ಬಾರ್ ನಡೆದಿದೆ. ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ನಿಯೋಜನೆ ಮೇರೆಗೆ 73 ವೈದ್ಯರು ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿ ಹುದ್ದೆಗಳಲ್ಲಿ ಕಾರ್ಯಭಾರ ಮಾಡುತ್ತಿದ್ದಾರೆ. ಸಿಆಂಡ್​ಆರ್ ಉಲ್ಲಂಘಿಸಿ ಅವಧಿ ಮುಗಿದರೂ ವೈದ್ಯರು ಈಗಲೂ ಆಯಕಟ್ಟಿನ ಹುದ್ದೆಯಲ್ಲಿ ಕುಳಿತಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳಾಗಿ ನೇಮಕ ಹೊಂದಿರುವವರ ಪೈಕಿ 30 ಪಶು ವೈದ್ಯಾಧಿಕಾರಿಗಳು, ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಶಿವಮೊಗ್ಗ, ಹಾಸನ, ಹೆಬ್ಬಾಳ ಮತ್ತು ಬೀದರ್​ನ ಪಶುವೈದ್ಯಕೀಯ ಕಾಲೇಜುಗಳಲ್ಲಿ 5 ವರ್ಷ ಗಳಿಗೂ ಮೀರಿ ನಿಯೋಜನೆಯಲ್ಲಿಯೇ ಮುಂದುವರಿದಿದ್ದಾರೆ. ಮಾತೃ ಇಲಾಖೆಗೆ ಮರಳಲು ಆದೇಶಿಸಿದ್ದರೂ ಪ್ರಭಾವ ಬಳಸಿ ಮುಂದುವರಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರಿ ನೌಕರರನ್ನು ಒಂದರಿಂದ ಇನ್ನೊಂದು ಇಲಾಖೆಗೆ ನಿಯೋಜನೆ ವೇಳೆ ಮಾತೃ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವೆಂದು ಸರ್ಕಾರವೇ ತಿಳಿಸಿದೆ. ಆದರೆ, ಇತ್ತೀಚಿನ ಹಲವು ಪ್ರಕರಣಗಳಲ್ಲಿ ನಿಯೋಜನೆ ಮೇರೆಗೆ ವರ್ಗಾಯಿಸುವ ಸಂದರ್ಭದಲ್ಲಿ ಮಾತೃ ಇಲಾಖೆಯು ನಿಯೋಜನೆ ಆದೇಶ ಆಗುವ ಮೊದಲೇ ಕರ್ತವ್ಯದಿಂದ ಬಿಡುಗಡೆಯಾಗುತ್ತಿದ್ದಾರೆ.
ಬಹುತೇಕ ಇಲಾಖೆಗಳಲ್ಲಿ ಅಗತ್ಯ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆ ಭರ್ತಿಯಾಗಿಲ್ಲ. ಹೀಗಾಗಿ ಡೆಪ್ಯುಟೇಶನ್ ವ್ಯವಸ್ಥೆ ಜಾರಿಗೆ ಸಿಬ್ಬಂದಿ ಕೊರತೆಯೂ ಒಂದು ಕಾರಣವಾಗಿದೆ. ಇದೇ ಕಾರಣಕ್ಕಾಗಿ ಒಬ್ಬ ಅಧಿಕಾರಿಗೆ 2-3 ಕಚೇರಿಗಳಲ್ಲಿ ಸೇವೆ ಸಲ್ಲಿಸುವ ಹೊಣೆ ನೀಡಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ತುಂಬಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸೇವೆಯಿಂದ ನಿವೃತ್ತಿ ಹೊಂದಲು 2 ವರ್ಷ ಬಾಕಿ ಇರುವ ಅಧಿಕಾರಿ/ ಸಿಬ್ಬಂದಿ ಈಗಿರುವ ಸ್ಥಳದಲ್ಲೇ ಮುಂದುವರಿಯಬಹುದು ಎಂದು ಸರ್ಕಾರ ವಿನಾಯಿತಿ ನೀಡಿದೆ. ಆದರೆ, ಕೆಲ ತಿಂಗಳಲ್ಲಿ ನಿವೃತ್ತಿಯಾಗುವ ಆರ್​ಟಿಒ ಅಧಿಕಾರಿಗಳನ್ನೂ ದೂರದ ಜಿಲ್ಲೆಗೆ ಎತ್ತಂಗಡಿ ಮಾಡುತ್ತಿರುವುದಕ್ಕೆ ಅಧಿಕಾರಿ ಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
