– ವಿನೋದ್ ಕೆ. ಪಾಲ್, ನೀತಿ ಆಯೋಗದ ಸದಸ್ಯರು
ಆರೋಗ್ಯ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸೆದುಕೊಂಡಿವೆ- ಆರೋಗ್ಯವಂತ ನಾಗರಿಕರು ಮಾತ್ರ ರಾಷ್ಟ್ರದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸರಕಾರ ಈ ಆದರ್ಶಕ್ಕೆ ಬದ್ಧವಾಗಿದೆ ಹಾಗೂ ಭಾರತದ ಆರೋಗ್ಯ ವ್ಯವಸ್ಥೆಯನ್ನು ಭವಿಷ್ಯಕ್ಕೆ ಸನ್ನದ್ಧಗೊಳಿಸಲು ಅವಿರತವಾಗಿ ಶ್ರಮಿಸಿದೆ. ಪ್ರಧಾನಮಂತ್ರಿಯವರು ನಮ್ಮ ಜನರ ಆರೋಗ್ಯವನ್ನು ನಿರಂತರವಾಗಿ ಸುಧಾರಿಸಲು ಸದಾ ಹೆಚ್ಚಿನ ಒತ್ತು ನೀಡುತ್ತಾರೆ. ಜೊತೆಗೆ ಅವರು ಭಾರತದ ಆರೋಗ್ಯ ಸೇವೆಗಳನ್ನು ಸುಧಾರಿಸಲು ಆದ್ಯತೆಯೊಂದಿಗೆ ಕ್ರಮಗಳನ್ನು ಖಾತರಿಪಡಿಸಿದ್ದಾರೆ. ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಸರಕಾರವು ಆಳವಾದ ರಚನಾತ್ಮಕ ಮತ್ತು ಸುಸ್ಥಿರ ಸುಧಾರಣೆಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ರಾಷ್ಟ್ರವ್ಯಾಪಿ ಸಂತೃಪ್ತಿಯ ಮಟ್ಟವನ್ನು ಸಾಧಿಸಲು ಅನುವು ಮಾಡುವಂತಹ ಕಾರ್ಯತಂತ್ರಗಳನ್ನು ಜಾರಿಗೆ ತರಲಾಗಿದೆ.
ಸರಕಾರದ ಸಕ್ರಿಯ ಕಾರ್ಯವಿಧಾನವು ಆರೋಗ್ಯ ಕ್ಷೇತ್ರದಲ್ಲಿ ಒಂದು ಮಾದರಿಯಂತಹ ಬದಲಾವಣೆಗೆ ಕಾರಣವಾಗಿದೆ. ಇಂದು, ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಆರೋಗ್ಯ ಮತ್ತು ಯೋಗಕ್ಷೇಮ ಎರಡರ ಮೇಲೂ ಗಮನ ಹರಿಸಲಾಗುತ್ತಿದೆ. ಭಾರತದ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ʻಆಯುಷ್ಮಾನ್ ಭಾರತ್ʼ (ಎಬಿ-ಪಿಎಂಜೆಎವೈ), ʻಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ʼ(ಪಿಎಂ-ಎಬಿಎಚ್ಐಎಂ), ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ(ಎಬಿ-ಡಿಎಂ), ಬಲಪಡಿಸಿದ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ), ʻಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನʼ(ಪಿಎಂ-ಎಸ್ಎಂಎ), ʻಇ-ಸಂಜೀವನಿ ಒಪಿಡಿʼ ಮತ್ತು ʻಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆʼ(ಪಿಎಂ-ಬಿಜೆಪಿ) ಆರೋಗ್ಯ ಕ್ಷೇತ್ರದಲ್ಲಿ ಸರ್ವಾಂಗೀಣ ಪರಿವರ್ತನೆಯನ್ನು ಖಾತರಿಪಡಿಸಲು ಸರಕಾರ ಕೈಗೊಂಡ ಕೆಲವು ಉಪಕ್ರಮಗಳಾಗಿವೆ.
2014ರಿಂದ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ 69% ಹೆಚ್ಚಳ ಕಂಡುಬಂದಿದೆ (387 ರಿಂದ 655ಕ್ಕೆ). ಪ್ರಸ್ತಾವಿತ 22 ಹೊಸ ʻಏಮ್ಸ್ʼಗಳಲ್ಲಿ 19 ಕಾರ್ಯನಿರ್ವಹಿಸುತ್ತಿವೆ. 35 ಕೋಟಿಗೂ ಹೆಚ್ಚು ನಾಗರಿಕರ ʻಡಿಜಿಟಲ್ ಆರೋಗ್ಯ ಖಾತೆʼಯನ್ನು(ಎಬಿಎಚ್ಎ) ತೆರೆಯಲಾಗಿದೆ.  ʻಇ-ಸಂಜೀವಿನಿʼ ಅಡಿಯಲ್ಲಿ ಇಲ್ಲಿಯವರೆಗೆ 11 ಕೋಟಿ ರೋಗಿಗಳಿಗೆ ʻಟೆಲಿಮೆಡಿಸಿನ್ʼ ಸೇವೆ ಒದಗಿಸಲಾಗಿದೆ. ʻಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರʼ (ಎಚ್ಡಬ್ಲ್ಯೂಸಿ) ಉಪಕ್ರಮದ ಅಡಿಯಲ್ಲಿ, 156,000 ಉಪ ಕೇಂದ್ರಗಳು (ʻಎಸ್ಸಿʼ) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್ಸಿ) ಪರಿವರ್ತನೆಗೆ ಒಳಗಾಗಿವೆ. ಹೊಸ ಹುದ್ದೆಯನ್ನು ಸೃಷ್ಟಿಸಿ, ಮಧ್ಯಮ ಮಟ್ಟದ ಆರೋಗ್ಯ ವೃತ್ತಿಪರರಾದ ʻಸಮುದಾಯ ಆರೋಗ್ಯ ಅಧಿಕಾರಿʼಯನ್ನು ನಿಯೋಜಿಸಲಾಗಿದೆ.  ಉಪ ಕೇಂದ್ರಗಳಲ್ಲಿನ ʻಎಚ್ಡಬ್ಲ್ಯೂಸಿʼಗಳು 105 ಔಷಧಗಳು ಮತ್ತು 14 ರೋಗನಿರ್ಣಯ ಪರೀಕ್ಷೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ, ಜೊತೆಗೆ, ʻಪಿಎಚ್ಸಿʼಗಳು 172 ಉಚಿತ ಔಷಧಿಗಳು ಮತ್ತು 63 ಉಚಿತ ರೋಗನಿರ್ಣಯ ಪರೀಕ್ಷೆಗಳನ್ನು ಒದಗಿಸುತ್ತವೆ.
ಎಲ್ಲಾ ಸರಕಾರಿ ಯೋಜನೆಗಳ ಮೌಲ್ಯವನ್ನು, ಅವು ಸಮಾಜದ ಕಟ್ಟ ಕಡೆಯಲ್ಲಿರುವ ಜನರನ್ನು ತಲುಪುವುದರ ಆಧಾರದ ಮೇಲೆ ಮಾತ್ರ  ತಿಳಿಯಬಹುದಾಗಿದೆ. ಇದಕ್ಕೆ ಜನರಲ್ಲಿ ಸಕ್ರಿಯ ಮಾಲೀಕತ್ವ ಮತ್ತು ಜನರ ಭಾಗವಹಿಸುವಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ, ಪ್ರಧಾನ ಮಂತ್ರಿಯವರು ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ಜನಸಾಮಾನ್ಯರನ್ನು ತಲುಪುವ ಮತ್ತು ತೊಡಗಿಸಿಕೊಳ್ಳುವ ಸಾಧನವಾಗಿ ರೇಡಿಯೋ ಹೊಂದಿರುವ ಸಾಮರ್ಥ್ಯವನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ, ಇದು ವರ್ಷಗಳಿಂದ ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರಿ ಪರಿಣಾಮ ಬೀರಿದೆ.
ಈ ಕಾರ್ಯಕ್ರಮದ ಮೂಲಕ, ಅವರು ಜನರಲ್ಲಿ ಉತ್ತಮ ಆರೋಗ್ಯದ ಕಲ್ಪನೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದ್ದಾರೆ. “ಆರೋಗ್ಯ ಎಂದರೆ ಕೇವಲ ರೋಗಗಳಿಂದ ಮುಕ್ತಿ ಪಡೆಯುವುದು ಎಂದರ್ಥವಲ್ಲ. ಆರೋಗ್ಯಕರ ಜೀವನವು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಸರಕಾರದ ವಿವಿಧ ಆರೋಗ್ಯ ಯೋಜನೆಗಳ ಬಗ್ಗೆ ದೇಶಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋಟ್ಯಂತರ ಜನರಿಗೆ ಅವು ಪ್ರಯೋಜನವಾಗಿವೆ ಎಂಬುದನ್ನು ಮನದಟ್ಟು ಮಾಡಿಸಲು ಪ್ರಧಾನಿಯವರು ‘ಮನ್ ಕಿ ಬಾತ್’ ಅನ್ನು ವ್ಯಾಪಕವಾಗಿ ಬಳಸಿದ್ದಾರೆ.
ʻಆಯುಷ್ಮಾನ್ ಭಾರತ್ʼ ಫಲಾನುಭವಿಗಳೊಂದಿಗೆ ‘ಮನ್ ಕಿ ಬಾತ್’ ನಲ್ಲಿ ಪ್ರಧಾನಮಂತ್ರಿಯವರು ಸಂವಾದ ನಡೆಸಿದ್ದು ನನಗೆ ನೆನಪಿದೆ, ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡಿದ್ದಕ್ಕಾಗಿ ಫಲಾನುಭವಿಗಳು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು. ಇಂತಹ ಸಂವಾದಗಳು ಕಲ್ಯಾಣ ಯೋಜನೆಯ ಪ್ರಯೋಜನಗಳನ್ನು ಪಡೆಯುವಲ್ಲಿ ಸಂಭಾವ್ಯ ಫಲಾನುಭವಿಗಳ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ʻಸಾರ್ವತ್ರಿಕ ಆರೋಗ್ಯ ಸಂರಕ್ಷಣೆʼ(ಯುಎಚ್ಸಿ) ಸಾಧಿಸುವ ಭಾರತದ ಕನಸನ್ನು ಮುನ್ನಡೆಸುತ್ತವೆ. ʻಸ್ಟೆಂಟ್ʼ ಅಳವಡಿಕೆ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಸುಮಾರು 10 ಕೋಟಿ ಕುಟುಂಬಗಳಿಗೆ ಚಿಕಿತ್ಸೆಗಾಗಿ 5 ಲಕ್ಷ ರೂ.ಗಳ ವಿಮೆಯನ್ನು ಒದಗಿಸುವ ಪ್ರಧಾನಿಯವರ ಘೋಷಣೆ ಎಲ್ಲೆಡೆ ಕೇಳಿಬರುತ್ತಿದೆ. ಇಂದು, ʻಆಯುಷ್ಮಾನ್ ಭಾರತ್ʼ ಯೋಜನೆಯು 4.8 ಕೋಟಿಗೂ ಹೆಚ್ಚು ವ್ಯಕ್ತಿಗಳಿಗೆ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸಿದೆ.
ಕೇಂದ್ರ ಸರಕಾರವು 2018ರಲ್ಲಿ ‘ಪೋಷಣ್ ಅಭಿಯಾನ’ವನ್ನು ಪ್ರಾರಂಭಿಸಿದಾಗ, ಮಕ್ಕಳು ಮತ್ತು ತಾಯಂದಿರಲ್ಲಿ ಪೌಷ್ಠಿಕಾಂಶ ಸುಧಾರಿಸಲು ಜನಾಂದೋಲನಕ್ಕೆ ಪ್ರಧಾನಿ ಕರೆ ನೀಡಿದರು. ಅಂದಿನಿಂದ, ಅನೇಕ ಸ್ವಸಹಾಯ ಗುಂಪುಗಳು ಮತ್ತು ಅಂಗನವಾಡಿ ಕೇಂದ್ರಗಳು ರಾಷ್ಟ್ರದ ಮಕ್ಕಳನ್ನು ಅಪೌಷ್ಟಿಕತೆ ಮತ್ತು ಕುಂಠಿತ ಬೆಳವಣಿಗೆಯಿಂದ ಮುಕ್ತಗೊಳಿಸಲು ಅನನ್ಯ ಮತ್ತು ಉದ್ದೇಶಿತ ಪರಿಹಾರಗಳನ್ನು ಕಂಡುಕೊಂಡಿವೆ. ಅಸ್ಸಾಂನ ‘ಪ್ರಾಜೆಕ್ಟ್ ಸಂಪೂರ್ಣ’ ಮತ್ತು ಮಧ್ಯಪ್ರದೇಶದ ‘ಪೋಷಣ್ ಮಟ್ಕಾ’ದಂತಹ ಉಪಕ್ರಮಗಳು ‘ಮನ್ ಕಿ ಬಾತ್’ ನಲ್ಲಿ ಪ್ರಸ್ತಾಪವಾಗಿದ ಬಳಿಕ ಇತರ ಅನೇಕ ರಾಜ್ಯ ಸಂಸ್ಥೆಗಳು ತಮ್ಮ ಪ್ರದೇಶದಲ್ಲಿ ಇದೇ ರೀತಿಯ ಮಾದರಿಗಳನ್ನು ಪುನರಾವರ್ತಿಸಿದವು. ಅಷ್ಟೇ ಅಲ್ಲ, ಅಂತಹ ಗುರುತಿಸುವಿಕೆಯು ಅಸ್ತಿತ್ವದಲ್ಲಿರುವ ಆಂದೋಲನಗಳತ್ತ ಹೆಚ್ಚಿನ ಜನರನ್ನು ಕರೆತಂದಿತು ಮತ್ತು ಜನರಲ್ಲಿ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತು.
ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ, ಸಾಂಪ್ರದಾಯಿಕ ಔಷಧದ ಸುದೀರ್ಘ ಇತಿಹಾಸವನ್ನು ಹೊಂದಿದೆ. ತಡೆಗಟ್ಟುವಿಕೆ, ಸ್ವಾಸ್ಥ್ಯ ಮತ್ತು ಚಿಕಿತ್ಸೆಯಲ್ಲಿ ʻಆಯುಷ್ʼ ವ್ಯವಸ್ಥೆಗಳ ಬಳಕೆಯನ್ನು ಉತ್ತೇಜಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಧಾನ ಮಂತ್ರಿಯವರ ‘ಮನ್ ಕಿ ಬಾತ್’ ಸಂಭಾಷಣೆಗಳು ನಮ್ಮ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳ ಬಗ್ಗೆ ದೇಶವಾಸಿಗಳಲ್ಲಿ ಅಸಾಧಾರಣ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದು ಸಮಗ್ರ ಆರೋಗ್ಯ ಸಂರಕ್ಷಣೆಗೆ ಬೇಡಿಕೆಯನ್ನು ಹೆಚ್ಚಿಸಲು ಮತ್ತು ʻಆಯುಷ್ʼ ಉತ್ಪನ್ನಗಳ ಬಳಕೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ. ಆರೋಗ್ಯಕರ ಜೀವನದ ದೊಡ್ಡ ಉದ್ದೇಶಕ್ಕಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ವ್ಯವಸ್ಥೆಗಳನ್ನು ಸರಿಹೊಂದಿಸುವ ಕೂಗು ಈಗ ಹೆಚ್ಚುತ್ತಿದೆ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ‘ಮನ್ ಕಿ ಬಾತ್’ನ ಅತ್ಯಂತ ಸಶಕ್ತ ರಾಷ್ಟ್ರವ್ಯಾಪಿ ಪರಿಣಾಮವು ಗಮನ ಸೆಳೆಯಿತು. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನರ ಸಹಕಾರವನ್ನು ಪಡೆಯುವುದರಿಂದ ಹಿಡಿದು, ಮುಂಚೂಣಿ ಕಾರ್ಯಕರ್ತರ ಪ್ರಯತ್ನಗಳನ್ನು ಗುರುತಿಸುವುದರಿಂದ ಹಿಡಿದು ಲಸಿಕೆ ಪಡೆಯಲು ಜನರನ್ನು ಉತ್ತೇಜಿಸುವವರೆಗೆ, ‘ಮನ್ ಕಿ ಬಾತ್’ ಒಂದು ಮಾಧ್ಯಮವಾಗಿ ಜನರಲ್ಲಿ ಭರವಸೆ, ಸಂಕಲ್ಪ ಮತ್ತು ವಿಶ್ವಾಸದ ಮೂಡಿಸಿತು. ಇದರಿಂದ ಈ ವೇದಿಕೆಯ ಸಾಮರ್ಥ್ಯ ಏನೆಂಬುದು ಸಾಬೀತಾಯಿತು. ಕೋವಿಡ್-19 ಸಾಂಕ್ರಾಮಿಕದ ವೇಳೆ ಒಂದು ರಾಷ್ಟ್ರವು ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಸ್ಪಷ್ಟ ಮಾರ್ಗದರ್ಶನದೊಂದಿಗೆ ಪ್ರಧಾನಿಯವರು ಬಲವಾದ ಮತ್ತು ನಿರ್ಣಾಯಕ ನಾಯಕತ್ವವನ್ನು ಒದಗಿಸಿದರು. ಆ ಕಷ್ಟದ ಸಮಯದಲ್ಲಿ ಕುಟುಂಬದ ಬಗ್ಗೆ ಕಾಳಜಿ ವಹಿಸುವ ಒಬ್ಬ ಹಿರಿಯನಾಗಿ ಜನರೊಂದಿಗೆ ವೈಯಕ್ತಿಕವಾಗಿ ಸಂಪರ್ಕ ಸಾಧಿಸಲು ಅವರು ‘ಮನ್ ಕಿ ಬಾತ್’ ವೇದಿಕೆಯನ್ನು ಬಳಸಿದರು.
ಆರೋಗ್ಯಕರ ಭಾರತಕ್ಕಾಗಿ ರಾಷ್ಟ್ರೀಯ ಒಗ್ಗಟ್ಟನ್ನು ನಿರ್ಮಿಸಲು ‘ಮನ್ ಕಿ ಬಾತ್’ ಪ್ರಬಲ ಸಾಧನವಾಗಿದೆ.  ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ʻನಿ-ಕ್ಷಯ್ ಮಿತ್ರʼಬಗ್ಗೆ ಕೇಳಿದ ಪ್ರಿಯಾಂಕಾ ಪ್ರಿಯದರ್ಶಿನಿ ಅವರು, ಕ್ಷಯ ರೋಗಿಗಳ ಚೇತರಿಕೆಗೆ ನೆರವಾಗಲು ಐವರು ರೋಗಿಗಳನ್ನು ದತ್ತು ಪಡೆದರು!
‘ಮನ್ ಕಿ ಬಾತ್’ನಲ್ಲಿ ಕ್ಷಯರೋಗದಿಂದ ಕಾಲರಾವರೆಗೆ ಮತ್ತು ಸ್ವಚ್ಛತೆಯಿಂದ ಸಮಗ್ರ ಆರೋಗ್ಯದವರೆಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ನಿರ್ದಿಷ್ಟ ವಿಷಯಗಳನ್ನು ಪ್ರಧಾನಿ ಸ್ಪರ್ಶಿಸಿದ್ದಾರೆ.  ಅವರು ಮಾನಸಿಕ ಆರೋಗ್ಯದ ಸೂಕ್ಷ್ಮ ವಿಷಯದ ಬಗ್ಗೆಯೂ ಮಾತನಾಡಿದ್ದಾರೆ. ಪ್ರಧಾನಮಂತ್ರಿಯವರು ಸಮಾಜದಲ್ಲಿ ‘ನಿಷೇಧಿತ’ ಹಣೆಪಟ್ಟಿ ಕಟ್ಟಲಾದ ಈ ವಿಷಯದ ಬಗ್ಗೆ ಚರ್ಚಿಸಿದ್ದಲ್ಲದೆ, ಈ ಬಗ್ಗೆ ಮುಕ್ತ ಸಂವಾದ ನಡೆಸಲು ಮತ್ತು ಕಷ್ಟಕರ ಮಾನಸಿಕ ಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಲು ಜನರನ್ನು ಪ್ರೋತ್ಸಾಹಿಸಿದರು.
‘ಮನ್ ಕಿ ಬಾತ್’ನ ಇತ್ತೀಚಿನ ಸಂಚಿಕೆಯಲ್ಲಿ. ಪ್ರಧಾನಮಂತ್ರಿಯವರು ಅಂಗಾಂಗ ಕಸಿ ಬಗ್ಗೆ ಮಾತನಾಡಿದರು. ಅಂಗಾಂಗ ಕಸಿಯನ್ನು ಉತ್ತೇಜಿಸಲು ಮತ್ತಷ್ಟು ಕೆಲಸ ಮಾಡುವಂತೆ ಅವರು ನಾಗರಿಕರನ್ನು ಪ್ರೇರೇಪಿಸಿದರು. ಇತರರಿಗೆ ಜೀವ ನೀಡಲು ಅಂಗಾಂಗಗಳನ್ನು ದಾನ ಮಾಡಿದ ಎರಡು ಕುಟುಂಬಗಳೊಂದಿಗೆ ಅವರ ಹೃದಯಸ್ಪರ್ಶಿ ಸಂಭಾಷಣೆಯು ನನ್ನ ಕಣ್ಣುಗಳಲ್ಲಿ ನೀರು ತಂದಿತು.
ಜನರು ಪ್ರಧಾನಿಯಲ್ಲಿ ಒಬ್ಬ ಸ್ನೇಹಿತ ಮತ್ತು ಮಾರ್ಗದರ್ಶಕ ಧ್ವನಿಯನ್ನು ಕಂಡುಕೊಂಡಿದ್ದಾರೆ. ‘ಮನ್ ಕಿ ಬಾತ್’ ಮೂಲಕ ಪ್ರಧಾನಿಯವರು ಆರೋಗ್ಯದ ಜಾಗೃತಿಗೆ ಮತ್ತು ಆರೈಕೆಗೆ ಕರೆ ನೀಡಿದಾಗ, ರಾಷ್ಟ್ರವು ನಿಜವಾಗಿಯೂ ಅದಕ್ಕೆ ಕಿವಿಗೊಡುತ್ತದೆ ಮತ್ತು ಕಾರ್ಯಪ್ರವೃತ್ತವಾಗುತ್ತದೆ.
(ಲೇಖಕರ ಅಭಿಪ್ರಾಯಗಳು ವೈಯಕ್ತಿಕವಾದವು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
