ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ಹಗರಣದ ಸಂಘರ್ಷ ನಿರ್ಣಾಯಕ ಘಟ್ಟ ತಲುಪಿರುವಂತೆಯೇ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ಜಿದ್ದಾಜಿದ್ದಿಯೂ ತಾರಕಕ್ಕೇರಿದೆ. ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಒಂದಾದ ಪರಿಣಾಮ ಬುಧವಾರ ವಿಧಾನಸಭೆ, ಪರಿಷತ್​ನಲ್ಲಿ ಕೋಲಾಹಲ ಉಂಟಾಯಿತು. ಮುಡಾ ವಿಚಾರದ ಚರ್ಚೆಗೆ ಅವಕಾಶ ಕೋರಿ ವಿಪಕ್ಷಗಳ ಸದಸ್ಯರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ.
ಬುಧವಾರ ಉಭಯ ಸದನಗಳಲ್ಲೂ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಮುಡಾ ಹಗರಣದ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಅವಕಾಶ ಕೋರಿದರು. ಆದರೆ ಚರ್ಚೆಗೆ ಸರ್ಕಾರ ನಿರಾಕರಿಸಿತು. ಚರ್ಚೆಗೆ ಏಕೆ ಅವಕಾಶ ಕೊಡಬೇಕೆಂದು ಬಿಜೆಪಿ ವಾದಿಸಿದರೆ, ಯಾವ ಕಾರಣಕ್ಕೆ ಚರ್ಚೆ ಅನಗತ್ಯ ಎಂದು ಆಡಳಿತ ಪಕ್ಷ ವಾದಿಸಿತು. ಅಂತಿಮವಾಗಿ ಪ್ರತಿಪಕ್ಷದ ಕೋರಿಕೆಯನ್ನು ಪರಿಷತ್​ನಲ್ಲಿ ಸಭಾಪತಿ, ಕೆಳಮನೆಯಲ್ಲಿ ಸ್ಪೀಕರ್ ತಿರಸ್ಕರಿಸಿದರು. ಬಳಿಕ ಪ್ರತಿಪಕ್ಷ ಅಹೋರಾತ್ರಿ ಧರಣಿ ಆರಂಭಿಸಿತು. ಗದ್ದಲ, ಕೋಲಾಹಲದ ಬಳಿಕ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು. ವಿಧಾನಸೌಧದ ಮೊಗಸಾಲೆಯಲ್ಲೇ ಉಳಿದಿರುವ ಬಿಜೆಪಿ, ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಧರಣಿ ಕುಳಿತಿದ್ದಾರೆ.
ಸರ್ಕಾರದ ವಾದವೇನು?:ಕಾನೂನು ಸಚಿವ ಎಚ್.ಕೆ. ಪಾಟೀಲ್ ಬೆಳಗ್ಗೆ ವಿಧಾನಸಭೆಯಲ್ಲಿ ಮಾತನಾಡಿದರು. ಮುಡಾ ಹಗರಣದ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಿದೆ. ಅದು ಅರೆ ನ್ಯಾಯಾಂಗ ವ್ಯವಸ್ಥೆ ಇರುವುದರಿಂದ ಇಲ್ಲಿ ಚರ್ಚೆ ಮಾಡುವುದು ತಪ್ಪಾಗುತ್ತದೆ ಎಂದು ವಾದಿಸಿದರು.
ತನಿಖಾ ತಂಡದ ಮೇಲೆ ಪ್ರಭಾವ ಬೀರದಂತೆ ಚರ್ಚೆಗೆ ಅವಕಾಶ ಕೊಡಬೇಕೆಂದು ಬಿಜೆಪಿಯ ಸುರೇಶ್​ಕುಮಾರ್ ಪ್ರತಿವಾದ ಮಾಡಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಭೋಜನ ವಿರಾಮದ ನಂತರ ಮತ್ತೆ ಸದನ ಸಮಾವೇಶಗೊಂಡಾಗ ಮುಡಾ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಪ್ಲೆಕಾರ್ಡ್ ಹಿಡಿದು ಧಿಕ್ಕಾರ ಕೂಗಿದರು. ಸ್ಪೀಕರ್ ವಿರುದ್ಧವೂ ಘೋಷಣೆ ಮೊಳಗಿಸಿದರು. ಸ್ಪೀಕರ್​ಗೆ ಕಾಣದಂತೆ ಹಾಗೂ ಸ್ಪೀಕರ್ ಪೀಠದ ಎದುರು ಇದ್ದ ನಾಮಫಲಕ ಕಾಣದಂತೆ ಪ್ಲೆಕಾರ್ಡ್ ಹಿಡಿದು ಅಡ್ಡಿ ಪಡಿಸಿದರು. ಒಂದೊಂದು ನಿಳುವಳಿ ಬಗ್ಗೆ ನೀವು ಒಂದೊಂದು ನಿಲುವು ತೆಗೆದುಕೊಳ್ಳುತ್ತೀರಿ. ಸ್ಪೀಕರ್ ನೀವು ಕೆಪಿಸಿಸಿ ಅಧ್ಯಕ್ಷರಾಗಲು ಲಾಯಕ್ಕಾಗಿದ್ದೀರಿ. ಡಿ.ಕೆ.ಶಿವಕುಮಾರ್ ಹೇಗೂ ರಾಜೀನಾಮೆ ಕೊಡುತ್ತಾರೆ ನೀವು ಆ ಕುರ್ಚಿಗೆ ಹೋಗಿ ಎಂದು ಏರು ದನಿಯಲ್ಲಿ ಕೂಗಿ ಕೋಲಾಹಲದ ವಾತಾವರಣ ಸೃಷ್ಟಿಸಿದರು.
ಸ್ಪೀಕರ್ ರೂಲಿಂಗ್:ನ್ಯಾಯಾಂಗ ತನಿಖೆ ನಡೆಯುತ್ತಿರುವುದರಿಂದ ನಿಲುವಳಿ ಸೂಚನೆ ಪ್ರಸ್ತಾವ ತಿರಸ್ಕರಿಸಿದ್ದೇನೆ. ನಿಯಮ 69ರಡಿಯೂ ಚರ್ಚೆಗೆ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಸ್ಪೀಕರ್ ರೂಲಿಂಗ್ ನೀಡಿದರು. ಭೋವಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅದನ್ನು ಮಾತ್ರ ಚರ್ಚೆಗೆ ಕೊಡುತ್ತೀರಿ. ಮುಡಾ ಹಗರಣದ ಬಗ್ಗೆ ಯಾಕೆ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ಪಕ್ಷಾಪಾತ ಮಾಡಬಾರದು ಎಂದು ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
ಕಲಾಪ ಮುಂದೂಡಿಕೆ:ಪ್ರತಿಪಕ್ಷದ ಧರಣಿಯ ಗದ್ದಲದ ನಡುವೆಯೇ ಕಾಂಗ್ರೆಸ್​ನ ಕೆಲವು ಸದಸ್ಯರ ಗಮನ ಸೆಳೆಯುವ ಸೂಚನೆಯ ಕಲಾಪವನ್ನು ಮುಗಿಸಿ, 4 ಮಸೂದೆ ಅಂಗೀಕರಿಸಿ, 6 ಮಸೂದೆ ಮಂಡನೆಗೆ ಅವಕಾಶ ನೀಡಿ ಸದನವನ್ನು ಬುಧವಾರಕ್ಕೆ ಮುಂದೂಡಿದರು. ಆಗ ಬಿಜೆಪಿ ಸದಸ್ಯರು ಅಹೋರಾತ್ರಿ ಧರಣಿ ನಿರ್ಧಾರ ಪ್ರಕಟಿಸಿದರು.
ಊಟ ತಿರಸ್ಕಾರ : ಅಹೋರಾತ್ರಿ ಧರಣಿ ಕೈಗೊಂಡಿರುವ ಪ್ರತಿಪಕ್ಷಗಳ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ವಿಧಾನಸಭೆ ಕಾರ್ಯದರ್ಶಿ ಎಂ.ವಿಶಾಲಾಕ್ಷಿ ಪ್ರತಿಪಕ್ಷ ನಾಯಕ ಆರ್. ಅಶೋಕ್​ಗೆ ತಿಳಿಸಿದರು. ಆಗ ಅಶೋಕ್, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣದ ಹಣದಿಂದ ನಮಗೆ ಊಟದ ವ್ಯವಸ್ಥೆ ಬೇಡ. ರಾತ್ರಿ ಊಟ ಹಾಗೂ ಹಾಸಿಗೆಯ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳುತ್ತೇವೆ. ಜನರ ತೆರಿಗೆ ಹಣದಲ್ಲಿ ನಮಗೆ ಊಟ, ಹಾಸಿಗೆ ವ್ಯವಸ್ಥೆ ಬೇಡ ಎಂದು ತಿರಸ್ಕರಿಸಿದರು.
ಸಚಿವರಿಂದ ಕಡತ ಪ್ರದರ್ಶನ:ಮುಡಾ ಸಂಬಂಧ ನನ್ನ ಬಳಿ ಬಂಡಿ ದಾಖಲೆ ಇದೆ. ಎಕರೆಗಟ್ಟಲೆ ಜಾಗ ಹೊಡೆದಿದ್ದೀರಿ, ನಿಮ್ಮ ಜಾತಕ ನನ್ನ ಕೈಯಲ್ಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಡತ ಪ್ರದರ್ಶಿಸಿ ಪ್ರತಿಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ನೀಡಲ್ ಆಫ್ ಸಸ್ಪೀಷನ್’:ಪ್ರತಿಪಕ್ಷಕ್ಕೆ ಚರ್ಚೆಗೆ ಏಕೆ ಅವಕಾಶ ಕೊಡಬೇಕೆಂದು ಸದನದಲ್ಲಿ ವಾದ ಮುಂದಿಟ್ಟ ಮಾಜಿ ಕಾನೂನು ಸಚಿವ, ಶಾಸಕ ಸುರೇಶ್ ಕುಮಾರ್ ಆಡಳಿತ ಪಕ್ಷವನ್ನು ಮಾತಿನ ಮೊನೆಯಲ್ಲಿ ಚುಚ್ಚಿ ಗಮನ ಸೆಳೆದರು. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ಬಹು ಕೋಟಿ ಬದಲಿ ನಿವೇಶನ ಹಗರಣ ‘ಟಾಕ್ ಆಫ್​ದ ಸ್ಟೇಟ್’ ಆಗಿಬಿಟ್ಟಿದೆ. ‘ನೀಡಲ್ ಆಫ್ ಸಸ್ಪೀಷನ್’ ಎಂಬ ಪದದಂತೆ ಸಂಶಯದ ಮುಳ್ಳು ರಾಜ್ಯದ ಮುಖ್ಯಮಂತ್ರಿಗಳ ಕಡೆ ತಿರುಗಿದೆ. ಇದೇ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಡಬೇಕೆಂದರು.
ಈ ಹಗರಣದಲ್ಲಿ ಮುಖ್ಯಮಂತ್ರಿಗಳ, ಕುಟುಂಬದವರ ಪಾತ್ರ ಏನೂ ಇರದಿದ್ದಲ್ಲಿ ಯಾವುದಾದರೂ ಸ್ವರೂಪದಲ್ಲಿ ಮುಕ್ತ ಚರ್ಚೆಗೆ ಅವಕಾಶ ನೀಡಲಿ ಚರ್ಚೆಗೆ ಅವಕಾಶ ಕೊಡದೆ ಸರ್ಕಾರ ಮತ್ತು ಮುಖ್ಯಮಂತ್ರಿಯವರು ಏನೋ ಮುಚ್ಚಿಟ್ಟುಕೊಳ್ಳುತ್ತಿದ್ದಾರೆ ಎಂಬ ಭಾವನೆ ಬರುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ ಸರ್ಕಾರದ ಇಂದಿನ ನಡೆ ಎಂದು ಪ್ರತಿಪಾದಿಸಿದರು.
2006ರಿಂದ ಅನ್ವಯವಾಗುವಂತೆ ತನಿಖೆ:ತನಿಖಾ ಆಯೋಗ ರಚಿಸಿದ ಬಳಿಕ ಯಾವೆಲ್ಲ ಆಯಾಮದಲ್ಲಿ ತನಿಖೆ ನಡೆಸಬೇಕೆಂದು ಸರ್ಕಾರ ನಿಬಂಧನೆಗಳನ್ನು ಸಿದ್ಧಪಡಿಸಿದೆ. 2006ರಿಂದ ಅನ್ವಯವಾಗುವಂತೆ, ಭೂಸ್ವಾಧೀನ, ಭೂಸ್ವಾಧೀನ ಕೈಬಿಟ್ಟ ಪ್ರಕರಣ, ಪರಿಹಾರ ವಿಧಾನ, ಬದಲಿ ನಿವೇಶನ, ಅಕ್ರಮ ಸೇರಿದಂತೆ ವಿವಿಧ ಆಯಾಮದಲ್ಲಿ ನಿಬಂಧನೆ ರೂಪಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸದನಕ್ಕೆ ವಿವರಿಸಿದರು.
ಪ್ರತಿಪಕ್ಷದ ಪ್ರತಿವಾದವೇನು?:85 ಸಾವಿರ ಜನ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದರೂ ಮುಖ್ಯಮಂತ್ರಿ ಗಳ ಪತ್ನಿಗೆ 14 ನಿವೇಶನ ಕೊಡಲಾಗಿದೆ. ಸರ್ಕಾರ ಈ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ಸರ್ಕಾರದ ಬಳಿ ಏನೆಲ್ಲ ದಾಖಲೆ ಇದೆಯೋ ಅದೆಲ್ಲವನ್ನೂ ಬಹಿರಂಗಪಡಿಸಲಿ. ಇಡೀ ವ್ಯವಸ್ಥೆ ಸ್ವಚ್ಛವಾಗಲಿ ಎಂದು ಆರ್.ಅಶೋಕ್, ಸುನಿಲ್ ಕುಮಾರ್, ಅರವಿಂದ ಬೆಲ್ಲದ ವಾದಿಸಿದರು.
ತೋಳು ತಟ್ಟಿದ ನಾಯಕರು: ಸದನದಲ್ಲಿ ತೋಳು ತಟ್ಟಿದ ಪ್ರಸಂಗವೂ ನಡೆಯಿತು. ಕಾಂಗ್ರೆಸ್​ನ ಕೋನರೆಡ್ಡಿ ಬಿಜೆಪಿ ಸದಸ್ಯರ ವಿರುದ್ಧ ತೋಳು ತಟ್ಟಿದರು. ಆಗ ಬಿಜೆಪಿ ಸದಸ್ಯರು ಕಮಾನ್ ಕೋನರೆಡ್ಡಿ ಕಮಾನ್, ಕಮಾನ್ ಸುರೇಶ್ ಕಮಾನ್ ಎಂದು ಲೇವಡಿ ಮಾಡಿದರು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಸ್ಪೀಕರ್ ವಿಧೇಯಕ ಮಂಡನೆ, ಅಂಗೀಕಾರ, ಪರ್ಯಾಲೋಚನೆ ಪ್ರಕ್ರಿಯೆ ಪೂರೈಸಿದರು.
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರೊಂದಿಗೆ ವಿವಿಧ ಮಸೂದೆ ಸಂಬಂಧ ಚರ್ಚೆ ನಡೆಸಿದರು. ಮುಡಾ ಹಗರಣ ವಿಚಾರವಾಗಿ ರಾಜ್ಯಪಾಲರು ಮಾಹಿತಿ ಕೊಡುವಂತೆ ಸಿಎಸ್​ಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ರಾಜಭವನಕ್ಕೆ ಭೇಟಿ ಕೊಟ್ಟಿದ್ದಾರೆ ಎಂಬ ಚರ್ಚೆ ನಡೆದಿದೆ.

ಆದರೆ, ಈ ಅಧಿವೇಶನದಲ್ಲಿ ವಿವಿಧ ವಿಧೇಯಕಗಳು ಶಾಸನ ಸಭೆಯಿಂದ ಅನುಮೋದನೆಗೊಂಡಿದ್ದು, ಮತ್ತಷ್ಟು ವಿಧೇಯಕಗಳು ಗುರುವಾರ ಅನುಮೋದನೆಗೊಳ್ಳಲಿದೆ. ಹೀಗಾಗಿ ಈ ಬಾರಿ ರಾಜಭವನದ ಒಪ್ಪಿಗೆಗೆ ಬರುವ ವಿಧೇಯಕಗಳ ಕುರಿತು ಮುಖ್ಯಮಂತ್ರಿಯವರು ರಾಜ್ಯಪಾಲ ಥಾವರ್​ಚಂದ್ ಗೆಹಲೋಟ್​ಗೆ ವಿವರಣೆ ನೀಡಿದರು. ವಾಲ್ಮೀಕಿ ನಿಗಮದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ. ಎಂಎಲ್​ಸಿ ಗೋವಿಂದ ರಾಜು ಜತೆಗಿದ್ದರು.
ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
