| ಮೌಲಾನಾ ಶಾಫಿ ಸಅದಿಖಲೀಫಾ ಉಮರ್ (ರ) ಕಾಲದಲ್ಲಿ ಹಿಜ್ರಾ ಕ್ಯಾಲೆಂಡರ್ ಅಧಿಕೃತವಾಗಿ ಚಾಲ್ತಿಗೆ ಬರುತ್ತದೆ. ಹಿಜರಿ ಇಸ್ಲಾಮಿನ ಕ್ಯಾಲೆಂಡರ್ ಆಗುವುದರ ಹಿಂದೆ ಹಲವಾರು ರಹಸ್ಯಗಳು ಮತ್ತು ಚರಿತ್ರೆಗಳಿವೆ.(ಸೂರ: ತೌಬಾ 108 ಹಾಗೂ ಫತ್ಹುಲ್ ಬಾರಿ 7/342 ನೋಡಿ.)
ಈ ಹಿಜರಿ ಶಕೆಯ ಪ್ರಥಮ ಮಾಸವಾಗಿದೆ ಮುಹರ›ಮ್ ತಿಂಗಳು. ಅಂದರೆ ಜಗತ್ತಿನ ನೂರಾರು ಕೋಟಿ ಮುಸಲ್ಮಾನರಿಗೆ ನವ ವರುಷದ ಸಂಭ್ರಮ. ಇಸ್ಲಾಮಿನ ಹಿಜರಿ ಪ್ರಕಾರ ಈ ವರ್ಷ ಹಿಜರಿ ಶಕೆ 1444. ಪ್ರವಾದಿ ಮುಹಮ್ಮದ್ (ಸ) ಮಕ್ಕಾದಿಂದ ಮದೀನಾಗೆ ವಲಸೆ ಹೋದ ಐತಿಹಾಸಿಕ ಕ್ಷಣವನ್ನು ಹಿಜ್ರಾ ಎಂದು ಕರೆಯುತ್ತಾರೆ.
ಜನರನ್ನು ಸನ್ಮಾರ್ಗದತ್ತ ಕೈಹಿಡಿಯಲು ಅಲ್ಲಾಹನು 124000 ಪ್ರವಾದಿಗಳನ್ನು ಈ ಜಗತ್ತಿಗೆ ನಿಯುಕ್ತಿಗೊಳಿಸಿದನು. ಪ್ರವಾದಿ ಆರಂಭದಿಂದ ಪ್ರವಾದಿ ಮುಹಮ್ಮದರತನಕ ಇರುವ ಬಹುತೇಕ ಪ್ರವಾದಿಗಳಿಗೆ ಮತ್ತು ಅವರ ಅನುಯಾಯಿಗಳಿಗೆ ಮುಹರ›ಮ್ ಮಹತ್ವದ ತಿಂಗಳು.
ಮುಸ್ಲಿಮರ ಯಾವುದೇ ಹಬ್ಬವಿದ್ದರೂ ಅಲ್ಲಿ ವ್ರತ ಆಚರಿಸುವ ಸಂಪ್ರದಾಯವಿದೆ. ರಂಜಾನ್ ಹಬ್ಬಆಚರಿಸುವುದಕ್ಕಿಂತ ಮೊದಲು ಒಂದು ತಿಂಗಳ ಕಡ್ಡಾಯ ಉಪವಾಸವಿದೆ. ಬಕ್ರೀದ್ ಹಬ್ಬಕ್ಕಿಂತ ಮುಂಚೆ 2 ದಿವಸಗಳ ಐಚ್ಛಿಕ ಮಹತ್ವದ ವ್ರತಾನುಷ್ಠಾನವಿದೆ. ಬಡವನ ಹಸಿವಿನ ಅನುಭವ ಅಗರ್ಭ ಶ್ರೀಮಂತನಿಗೂ ಮಾಡಿಸಿಕೊಡುವ ಉಪವಾಸ ಈ ಮುಹರ›ಮ್ಲ್ಲೂ ಇದೆ. ಈ ತಿಂಗಳ 9 ಮತ್ತು 10ನೇ ದಿನಗಳಲ್ಲಿ ಉಪವಾಸ ಆಚರಿಸುತ್ತಾರೆ. ತಾಸೂಆ ಹಾಗೂ ಆಶೂರಾಹ್ ಎಂದೇ ಕರೆಯಲ್ಪಡುವ ಈ ಎರಡು ದಿನಗಳು ಜಾಗತಿಕ ಮುಸ್ಲಿಮರಿಗೆ ಅತ್ಯಂತ ಪ್ರಮುಖ ಹಾಗೂ ಮಹತ್ವದ ದಿನಗಳು. ಅಂದರೆ ಮುಹರ›ಮ್ ಹಬ್ಬ.
ಮದೀನಾದಲ್ಲಿ ಹಿಜ್ರಾ ಹೋದ ಪ್ರವಾದಿ ಮುಹಮ್ಮದರಿಗೆ ಅಲ್ಲಿ ಯಹೂದಿ ಗೋತ್ರದ ಜನರು ಪ್ರವಾದಿ ಮೂಸಾ (ಮೋಸಸ್) ಅವರ ಮೇಲಿನ ಪ್ರೀತಿಯಿಂದ ಉಪವಾಸ ಆಚರಿಸುವುದನ್ನು ಕಾಣುತ್ತಾರೆ. ಪರೋವನನಿಂದ ಮೂಸಾ ಅವರನ್ನು ರಕ್ಷಿಸಿದ ಕಾರಣಕ್ಕೆ ಯಹೂದಿಗಳು ಮುಹರ›ಮ್ 10ಕ್ಕೆ ವ್ರತಾಚರಿಸುವ ಬಗ್ಗೆ ಮುಹಮ್ಮದರು ತಿಳಿದುಕೊಳ್ಳುತ್ತಾರೆ. ಆದರೆ, ಮೂಸಾ ಅವರ ವಿಚಾರದಲ್ಲಿ ಸಂಭ್ರಮಿಸಲು ಯಹೂದಿಯರಿಗಿಂತ ತಮಗೆ ಹೆಚ್ಚಿನ ಹಕ್ಕಿದೆ ಎನ್ನುವ ಮುಹಮ್ಮದರು, ಮುಂದಿನ ವರ್ಷ ತಾವು ಬದುಕುಳಿದರೆ 10ರ ಜತೆ 9ನೇ ದಿನವೂ ಉಪವಾಸ ಆಚರಿಸುವ ಸಂಕಲ್ಪ ಮಾಡುತ್ತಾರೆ. ಇದೇ ಕಾರಣಕ್ಕೆ ಮುಸ್ಲಿಮರು ಈ ಎರಡು 2 ದಿನ ಉಪವಾಸ ಆಚರಿಸುತ್ತಾರೆ.
ಪ್ರವಾದಿ ಮೂಸಾ ಮತ್ತು ಅವರ ಅನುಯಾಯಿಗಳನ್ನು ಅಲ್ಲಾಹನು ಈಜಿಪ್ಟ್ ಸರ್ವಾಧಿಕಾರಿ ಪರೋವನಿಂದ ರಕ್ಷಿಸಿದ ಪ್ರಮುಖ ಘಟನೆಯೂ ಈ ತಿಂಗಳ ಮಹತ್ವ ಸೂಚಿಸುತ್ತದೆ. ಮೂಸಾ ಅವರ ಬನೂ ಇಸ್ರಾಯೀಲ್ ಸಮುದಾಯವನ್ನು ಪರೋವ ತನ್ನ ಗುಲಾಮರಾಗಿಸಿಕೊಂಡಿದ್ದ. ಹೀಗಾಗಿ, ಮೂಸಾ ಅವರಿಗೆ ತನ್ನ ಸಮುದಾಯದ ಜನರನ್ನು ರಕ್ಷಿಸಲು, ಅವರಿಗೆ ನ್ಯಾಯ ಒದಗಿಸಲು ಸರ್ವಾಧಿಕಾರಿಯೊಂದಿಗೆ ಹೋರಾಡುವುದು ಅನಿವಾರ್ಯವಾಯಿತು. ದೀರ್ಘ ಕಾಲ ಹೋರಾಡಿದದರೂ ದಬ್ಬಾಳಿಕೆ ನಿಲ್ಲದಿದ್ದಾಗ ಪ್ರವಾದಿ ಮೂಸಾ ಈಜಿಪ್ಟ್ ತೊರೆಯಬೇಕಾಗುತ್ತದೆ. ಆದರೆ, ಪರೋವನ ಸೇನೆ ಅವರನ್ನು ಸಮುದ್ರ ತೀರದವರೆಗೆ ಬೆನ್ನಟ್ಟಿಕೊಂಡು ಬರುತ್ತದೆ. ಪ್ರವಾದಿ ಮೂಸಾ ಹಾಗೂ ಅನುಯಯಿಗಳು ಅದ್ಭುತ ರೀತಿಯಲ್ಲಿ ಕಡಲು ದಾಟಿದರೆ, ಪರೋವನ ಸೇನೆ ಸಮುದ್ರದಲ್ಲಿ ಜಲಸಮಾಧಿಯಾಗುತ್ತದೆ.
ಇಸ್​ರಾಈಲ್ ಸಂತತಿಯನ್ನು ನಾವು ಸಮುದ್ರ ದಾಟಿಸಿ ಕೊಂಡೊಯ್ದೆವು. ಅನಂತರ ಫಿರ್​ಔನನೂ ಅವನ ಸೇನೆಯೂ ಧಿಕ್ಕಾರ ಹಾಗೂ ಶತ್ರುತ್ವದಿಂದ ಅವರನ್ನು ಬೆನ್ನಟ್ಟಿದರು. ಕೊನೆಗೆ ಫಿರ್​ಔನನು ಮುಳುಗುತ್ತಿರುವಾಗ ಹೀಗೆಂದನು, ಇಸ್​ರಾಈಲ ಸಂತತಿಯು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು ನಾನು ವಿಶ್ವಾಸವಿರಿಸಿದ್ದೇನೆ. ಮತ್ತು ನಾನೂ ಶರಣಾಗತರಾದವರಲ್ಲಿ ಸೇರಿದ್ದೇನೆ. (ಕುರಾನ್ 10/90)
ಅಂದು ಜಲಸಮಾಧಿಯಾದ ಪರೋವನ ಶವ ಇಂದಿಗೂ ಈಜಿಪ್ಟಿನ ಕೈರೋದ ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾಗಿದೆ. ನೀನು (ಪರೋವ) ಮುಂದಿನ ತಲೆಮಾರುಗಳಿಗೆ ಒಂದು ದೃಷ್ಟಾಂತವಾಗಿರುವಂತೆ ಇಂದು ನಿನ್ನ ಶವವನ್ನು ಸುರಕ್ಷಿತವಾಗಿರಿಸುವೆವು. ನಿಜಕ್ಕೂ ಜನರಲ್ಲಿ ಹೆಚ್ಚಿನವರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷ್ಯರಾಗಿದ್ದಾರೆ ಎಂದು ಕುರ್​ಆನ್ 10/92 ರಲ್ಲಿ ಹೇಳುತ್ತದೆ.
ಪ್ರಥಮ ಪ್ರವಾದಿ ಆದಮ್ ಅವರ ಪಶ್ಚಾತ್ತಾಪವನ್ನು ಅಲ್ಲಾಹನು ಸ್ವಿಕರಿಸಿದ್ದ ತಿಂಗಳು ಕೂಡಾ ಮುಹರ›ಮ್ ಪ್ರವಾದಿ ನೂಹ್ ಅವರ ಹಡಗು ಭಾರೀ ಚಂಡಮಾರುತದಿಂದ ಪಾರಾಗಿ ಜೂದೀ ಬೆಟ್ಟದ ಮೇಲೆ ತಂಗಿ, ಅವರು ಮತ್ತು ಅವರ ಅನುಯಾಯಿಗಳು ರಕ್ಷಣೆ ಹೊಂದಿದ, ಪ್ರವಾದಿ ಯೂನುಸ್ ಮೀನಿನ ಹೊಟ್ಟೆಯಿಂದ ಹೊರಗೆ ಬಂದ ಚರಿತ್ರೆಯನ್ನೂ ಈ ಮುಹರ›ಮ್ ನೆನಪಿಸುತ್ತದೆ. ಅಲ್ಲದೆ, ಪ್ರವಾದಿ ಇಬ್ರಾಹಿಮ್ ಅವರು ನಮ್ರೂದನ ಬೆಂಕಿಯಿಂದ ಸುರಕ್ಷಿತವಾಗಿ ಪಾರಾಗಿ ಬಂದಿದ್ದು ಕೂಡಾ ಮುಹರ›ಮ್ ಹಾಗೂ ಇಸ್ಲಾಮಿನ ಚರಿತ್ರೆಯಲ್ಲಿ ದೊಡ್ಡದೊಂದು ಇತಿಹಾಸ.
ಮುಹರ›ಮ್ ತಿಂಗಳಲ್ಲಿ ನಡೆದ ಇನ್ನೊಂದು ಪ್ರಮುಖ ಘಟನೆ ಕರ್ಬಲಾ ಯುದ್ಧ. ಪ್ರವಾದಿ ಮುಹಮ್ಮದ್ ಅವರ ಮರಣದ ಬಳಿಕ ಅಬೂಬಕರ್, ಉಮರ್ ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಪಾನ್ ಹಾಗೂ ಅಲೀ ಬಿನ್ ಅಬೀತಾಲಿಬ್ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಾರೆ. ಖಲೀಫಾ ಆಡಳಿತ ಎಂದೇ ಖ್ಯಾತಿ ಗಳಿಸಿದ ಇವರ ಆಡಳಿತದ ಬಳಿಕ ಮುಆವಿಯಾ ಅಧಿಕಾರಕ್ಕೆ ಬರುತ್ತಾರೆ. ಪ್ರಜಾಸತ್ತಾತ್ಮಕ, ಸರ್ವಧರ್ಮಕ್ಕೂ ಸಮಾನತೆ ಸಾರುವ ಆಡಳಿತವನ್ನು ನಡೆಸಿ ಮಾದರಿಯಾಗುತ್ತಾರೆ. ಆದರೆ, ಮುಆವಿಯಾ ತನ್ನ ಅಧಿಕಾರಾವಧಿಯ ಬಳಿಕ ಮಗ ಯಝಿ್ದೕಗೆ ಪಟ್ಟ ಕಟ್ಟುತ್ತಾರೆ. ಅಲ್ಲಿವರೆಗೆ ಇದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬದಲಾಗಿ, ವಂಶಾಡಳಿತಕ್ಕೆ ಒತ್ತು ಕೊಡುತ್ತಾರೆ. ಆದರೆ, ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನ್ ಇದನ್ನು ವಿರೋಧಿಸುತ್ತಾರೆ. ಪ್ರವಾದಿ ಮತ್ತು ಖಲೀಫಾಗಳು ತೋರಿಸಿಕೊಟ್ಟ ಮಾದರಿ ಆಡಳಿತವು ವಂಶಾಡಳಿತದೆಡೆಗೆ ಹೋಗುವುದನ್ನು ವಿರೋಧಿಸಿ ಆಡಳಿತದ ವಿರುದ್ಧ ಬಂಡೇಳುತ್ತಾರೆ. ಇದರ ಹೊರತಾಗಿಯೂ ಯಝೀದ್​ಗೆ ಪಟ್ಟ ಕಟ್ಟಿದ್ದಕ್ಕೆ ಹುಸೈನ್​ರವರು ಯಝೀದ್ ವಿರುದ್ಧ ಸಮರ ಸಾರುತ್ತಾರೆ. ಆದರೆ, ಅನ್ಯಾಯದ ವಿರುದ್ಧ ಹೋರಾಡಿದ ಹುಸೈನ್ ಅವರು ಕರ್ಬಲಾ ಎಂಬಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾಗುತ್ತಾರೆ. ಈ ಘಟನೆಯೂ ಇಸ್ಲಾಮಿನ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಘಟನೆಯನ್ನೇ ನೆನಪಿಸಿಕೊಳ್ಳುವ ಶಿಯಾಗಳು ಮುಹರ›ಮ್ 10ಕ್ಕೆ ದುಃಖದ ದಿನವಾಗಿ ಆಚರಿಸುತ್ತಾರೆ. ಹೈದರಾಬಾದ್ ಕರ್ನಾಟಕದ ವಿಜಯಪುರ ಹಾಗೂ ಇತರ ಜಿಲ್ಲೆಗಳಲ್ಲಿ ಆಡಳಿತ ನಡೆಸಿದ ಬಹಮನಿ ಸುಲ್ತಾನರು ಮತ್ತು ಆದಿಲ್ ಶಾಹಿಗಳಿಗೆ ಇರಾನ್ ಜತೆ ಸಂಪರ್ಕ ಜಾಸ್ತಿ ಇದ್ದುದರಿಂದ ಅವರ ಕಾಲದಲ್ಲಿ ಮುಹರ›ಮ್ ಹಬ್ಬ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದು ಈಗಲೂ ಉತ್ತರ ಕರ್ನಾಟಕದಲ್ಲಿ ಕಾಣಲು ಸಾಧ್ಯ. ಕರ್ನಾಟಕದ ಮುಸ್ಲಿಮರಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಶಿಯಾಗಳು ಬೆಂಗಳೂರು ನಗರ, ಚಿಕಬಳ್ಳಾಪುರದ ಅಲೀಪುರ ಮತ್ತು ವಿಜಯಪುರದಲ್ಲಿ ನೆಲೆಸಿದ್ದಾರೆ.
(ಅಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಪ್ ಮಂಡಳಿ)
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + thirteen =
Remember me
